ಗುರುವಾರ, ಫೆಬ್ರವರಿ 23, 2017

ಭಾರತ ಮ್ಯಾನ್ಮಾರ್ ಗಡಿಯಲ್ಲೊಂದು ತ್ರಿಶಂಕು ಸ್ವರ್ಗ!


1935ರಲ್ಲಿ ಮ್ಯಾನ್ಮಾರ್ ಪ್ರತ್ಯೇಕ ರಾಷ್ಟ್ರ ಮತ್ತು 1947ರಲ್ಲಿ ಭಾರತ ವಸಾಹತುಶಾಹಿ ಆಡಳಿತದಿಂದ ಮುಕ್ತವಾಗುವುದರ ಜೊತೆಗೆ ಈ ಎರಡೂ ರಾಷ್ಟ್ರಗಳ ಗಡಿಭಾಗದಲ್ಲಿ ವಾಸವಾಗಿದ್ದ ಜನರು ಹರಿಹಂಚಾಗಿ ಹೋದರು. ಕೊನ್ಯಾಕ್, ಖೈಯಮ್ನಿಯುಂಗನ್ ಮತ್ತು ಯಿಮ್ಚುಂಗರ್ ನಾಗಾ ಬುಡಕಟ್ಟುಗಳ ಜನರಲ್ಲಿ ಒಂದು ಭಾಗ ಭಾರತದ ಪೂರ್ವ ನಾಗಾಲ್ಯಾಂಡ್ ನಲ್ಲೂ, ಇನ್ನುಳಿದ ಭಾಗ ಮ್ಯಾನ್ಮಾರಿನ ನಾಗಾ ಸ್ವ ಆಡಳಿತ ವಲಯದಲ್ಲೂ  (Naga Self Administered Zone - SAZ) ವಾಸಿಸುವ ಅನಿವಾರ್ಯತೆ ಬಂದೊದಗಿತು. ಹೊಸ ರಾಜಕೀಯ ವ್ಯವಸ್ಥೆ ಒಂದಾಗಿದ್ದ ಸಮುದಾಯವನ್ನು ಪ್ರತ್ಯೇಕಿಸಿ ಎರಡು ವಿಭಿನ್ನ ರಾಷ್ಟ್ರಗಳಲ್ಲಿ ವಿಭಜಿಸಲ್ಪಟ್ಟಿದ್ದು,  ಈ ಸಮುದಾಯಗಳಲ್ಲಿ ವಿಶೇಷವಾಗಿ ನಾಗಾ ಜನರಲ್ಲಿ ತೀವ್ರ ಅಸಮಧಾನ ಸೃಷ್ಟಿಸಿತ್ತು. ಈ ಸಮುದಾಯಗಳು ಭಾರತ ಮತ್ತು ಮ್ಯಾನ್ಮಾರ್ ಗಳಲ್ಲಿ ಜನಾಂಗೀಯ ಅಲ್ಪಸಂಖ್ಯಾತರಾಗಿಬಿಟ್ಟ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳಲ್ಲಿ ಅಸುರಕ್ಷತಾ ಭಾವನೆಯನ್ನು ಬೆಳೆಸಿಕೊಂಡಿದ್ದು ಸಹಜವೇ ಆಗಿತ್ತು. ಜನರ ಕಳವಳಗಳಿಗೆ ಸ್ಪಂದಿಸುವ ಸಲುವಾಗಿ ಎರಡೂ ರಾಷ್ಟ್ರಗಳ ಸರಕಾರಗಳು ಮುಕ್ತ ಚಲನೆಯ ಆಡಳಿತ  Free Movement Regime (FMR) ಯೊಂದನ್ನು ಜಾರಿಗೊಳಿಸಿ, ನಾಗಾಗಳು ಎರಡೂ ಕಡೆಯ ರಾಷ್ಟ್ರಗಳ ಗಡಿ ದಾಟಿ 16 ಕಿಲೋಮೀಟರ್ ಗಳ ವರೆಗೆ ಯಾವುದೇ ವೀಸಾ ನಿರ್ಬಂಧಗಳಿಲ್ಲದೇ ಮುಕ್ತ ಸಂಚಾರ ಮಾಡುವ ಅವಕಾಶ ಕಲ್ಪಿಸಲಾಯಿತು.

ಪೂರ್ವ ನಾಗಾಲ್ಯಾಂಡ್ ಮತ್ತು ಮ್ಯಾನ್ಮಾರಿನ NSAZ ಪ್ರದೇಶದಲ್ಲಿ ವಾಸಿಸುತ್ತಿರುವ ಎರಡೂ ಕಡೆಯ ಗಡಿಭಾಗದ ಜನರಲ್ಲಿ ಪರಸ್ಪರ ಕೌಟುಂಬಿಕ, ಸಾಂಸ್ಕೃತಿಕ ಸಂಬಂಧಗಳಿರುವುದಷ್ಟೇ ಅಲ್ಲದೇ ಆರ್ಥಿಕ ಕಾರಣಗಳಿಗಾಗಿಯೂ ಗಡಿಭಾಗದ ಎರಡೂ ಕಡೆಯ ಜನ ಒಬ್ಬರನ್ನೊಬ್ಬರು ಅತಿಯಾಗಿ ಅವಲಂಬಿಸಬೇಕಾಗುತ್ತದೆ. ಗಡಿಭಾಗದ ಜನರು, ಅದರಲ್ಲೂ ಮುಖ್ಯವಾಗಿ ಭಾರತದ ಗಡಿಯೊಳಗಿರುವ ಜನರ ಆಸ್ತಿ, ಹೊಲ ಮತ್ತು ಅರಣ್ಯಗಳು ಗಡಿ ರೇಖೆಯಿಂದಾಗಿ ಎರಡೂ ದೇಶಗಳ ಮಧ್ಯೆ ಹರಿಹಂಚಾಗಿ ಹೋಗಿದೆ. ಕೆಲವರ ಮನೆ, ಭೂಮಿ ಮತ್ತಿತರ ಸ್ಥಿರ ಆಸ್ತಿಗಳು ಅರ್ಧ ಭಾರತಲ್ಲೂ ಇನ್ನರ್ಧ ಗಡಿಯಾಚೆಗಿನ ಮ್ಯಾನ್ಮಾರಿನಲ್ಲಿರುವ ಪರಿಸ್ಥಿತಿ ನಿರ್ಮಾಣವಾಯ್ತು! ಒಂದು ರೀತಿಯಲ್ಲಿ ಎರಡೂ ಕಡೆ ಸಲ್ಲುವ ಇನ್ನೊಂದು ರೀತಿಯಲ್ಲಿ ಎಲ್ಲೂ ಸಲ್ಲದ ತ್ರಿಶಂಕು ಸ್ವರ್ಗವಾಗಿ ಮಾರ್ಪಾಡಾಯ್ತು ಭಾರತ-ಮ್ಯಾನ್ಮಾರ್ ಗಡಿ.  ಮ್ಯಾನ್ಮಾರ್ ಗಡಿಯೊಳಗಿರುವ ಗ್ರಾಮಗಳ ಜನ ತಮ್ಮ ದಿನನಿತ್ಯದ ಸಾಮಗ್ರಿಗಳನ್ನು ಖರೀದಿಸಲು ಭಾರತದ ಗಡಿ ದಾಟಲೇ ಬೇಕು. FMR ಲಾಭ ಪಡೆದುಕೊಂಡು ಮ್ಯಾನ್ಮಾರಿನ NSAZ ವಲಯದ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸವನ್ನೂ ಪಡೆಯುತ್ತಿದ್ದಾರೆ. 

Image may contain: 1 personದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುವ ಹಾಗೆ ಗಡಿಭಾಗದಲ್ಲಿ ವಾಸಿಸುವ ಕಲ್ಪನೆ ಸೊಗಸಾಗಿ ಕಂಡರೂ ಗಡಿಭಾಗದ ಜನರು ಪಡುವ ವ್ಯಥೆ ಅನುಭವಿಸಿದವರಿಗೇ ಗೊತ್ತು. ಒಂದೇ ಸಂಸ್ಕೃತಿ, ಭಾಷೆ, ಸಂಪ್ರದಾಯಗಳಷ್ಟೇ ಏಕೆ ತೀರಾ ಹತ್ತಿರದ ಸಂಬಂಧಿಕರಾಗಿದ್ದರೂ ಕೂಡ ಎರಡು ರಾಷ್ಟ್ರೀಯ ಗಡಿಗಳು ಇವರನ್ನೆಲ್ಲಾ ಪ್ರತ್ಯೇಕಿಸಿಬಿಟ್ಟಿದೆ. ಪೂರ್ವ ನಾಗಾಲ್ಯಾಂಡಿನ ಭೂ ಲಕ್ಷಣ ಮತ್ತು ಜನಸಾಂದ್ರತೆ ಹಂಚಿಹೋಗಿರುವ ರೀತಿ ತಿಳಿದ ಮೇಲಷ್ಟೇ ಈ ವಿಚಿತ್ರ ಗಡಿ ಸಮಸ್ಯೆಯ ಕುರಿತಾಗಿ ಕನಿಷ್ಟಪಕ್ಷ ಅಲ್ಪ ಸ್ವಲ್ಪವಾದರೂ ಅರ್ಥೈಸಿಕೊಳ್ಳಲು ಸಾಧ್ಯ. ಪೂರ್ವ ನಾಗಾಲ್ಯಾಂಡ್ ಗಡಿಭಾಗದಲ್ಲಿರುವ ನಾಲ್ಕು ಜಿಲ್ಲೆಗಳು: ಮಾನ್, ಟ್ಯೂಯೆನ್ಸಾಂಗ್, ಕಿಫಿರೆ ಮತ್ತು ಲಾಂಗ್ಲೆಂಗ್ ಗಳು ಮುಖ್ಯವಾಹಿನಿಯಿಂದ ಬಹಳಷ್ಟು ದೂರ ಮತ್ತು ವಿಪರೀತ ಹಿಂದುಳಿದಿರುವ ಜಿಲ್ಲೆಗಳು. ರಾಜ್ಯ ಸರಕಾರಗಳ ಅವಗಣನೆ ಮತ್ತು ಪ್ರಗತಿಯ ನೆರಳು ಕಾಣದ ಪ್ರದೇಶಗಳಿವು. ಮಾನ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊನ್ಯಾಕ್ ಬುಡಕಟ್ಟು ಜನರ ವಾಸಸ್ಥಾನವಾಗಿದ್ದು, ಈ ಕೊನ್ಯಾಕ್ ಜನಾಂಗ ನಾಗಾಲ್ಯಾಂಡ್ ಮತ್ತು NSAZ ಪ್ರದೇಶದಲ್ಲೂ ಗಣನೀಯ ಪ್ರಮಾಣದಲ್ಲಿದ್ದಾರೆ. ಮೂರನೇ ನಾಲ್ಕು ಭಾಗದಷ್ಟು ಖೈಯಮ್ನಿಯುಂಗನ್ ಬುಡಕಟ್ಟು ಜನರು NSAZ ಪ್ರದೇಶದಲ್ಲಿದ್ದು, ಮಿಕ್ಕವರು ನಾಗಾಲ್ಯಾಂಡಿನ ಟ್ಯೂಯೆನ್ಸಾಂಗ್ ಜಿಲ್ಲೆಯಲ್ಲಿದ್ದಾರೆ. ಯಿಮ್ಚುಂಗರ್ ಜನಾಂಗ ಟ್ಯೂಯೆನ್ಸಾಂಗ್ ಮತ್ತು ಕಿಫಿರೆ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. 

ಗಡಿಯುದ್ದಕ್ಕೂ  ಬೇಲಿ ಹಾಕಿಸುವ ಮ್ಯಾನ್ಮಾರ್ ಸರಕಾರದ ನಿರ್ಧಾರಕ್ಕೆ ಭಾರತದ ಬೆಂಬಲವೂ ಇದೆ ಎಂದುಕೊಂಡಿರುವ ಭಾರತ-ಮ್ಯಾನ್ಮಾರ್ ಗಡಿಭಾಗದ ಜನರು ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಹೊಸದಾಗಿ ಮ್ಯಾನ್ಮಾರ್ ಸರಕಾರ ನಿರ್ಮಿಸುತ್ತಿರುವ ಗಡಿ ಬೇಲಿ ಕಾಡು ಮತ್ತು ಭೂಸಂಪನ್ಮೂಲಗಳಿಂದ ಗಡಿ ಭಾಗದ ಜನರನ್ನು ವಂಚಿತರನ್ನಾಗಿಸುತ್ತಾರೆ ಎಂಬ ಭಯ ಎರಡೂ ಕಡೆಯ ಜನರನ್ನು ಕಾಡುತ್ತಿದೆ. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಸಮಾಜದ್ರೋಹಿ ಶಕ್ತಿಗಳು ಸ್ಥಳೀಯ ನಾಗಾ ಬುಡಕಟ್ಟುಗಳನ್ನು ರೊಚ್ಚಿಗೆಬ್ಬಿಸಿ ಸರಕಾರದ ವಿರುದ್ಧ ಎತ್ತಿಕಟ್ಟುವ ಸಾಧ್ಯತೆಗಳಿದ್ದೇ ಇವೆ. ತಣ್ಣಗಾಗುತ್ತಿರುವ ನಾಗಾ ಬಂಡಾಯಕ್ಕೆ ಬೆಂಕಿ ಹಚ್ಚುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದರೂ ಅಚ್ಚರಿಯೇನಿಲ್ಲ. ನಾಗಾ ಬಂಡುಕೋರ ಗುಂಪುಗಳೊಂದಿಗೆ ಭಾರತ ಸರಕಾರ ಶಾಂತಿ ಮಾತುಕತೆಯಲ್ಲಿರುವ ಈ ಸಂದರ್ಭದಲ್ಲಿ ನಾಗಾ ಬುಡಕಟ್ಟು ಜನರ ವಿಶ್ವಾಸ ಕಳೆದುಕೊಳ್ಳಲು ಭಾರತ ಸಿದ್ಧವಿಲ್ಲ. ಈ ಪ್ರದೇಶ ಸೂಕ್ಷ್ಮತೆಯಿಂದಾಗಿ, ಯಾವುದೇ ಸಂದರ್ಭದಲ್ಲೂ ವಿಶ್ವಾಸ ಕಳೆದುಕೊಂಡ ಜನ ದಂಗೆಕೋರರು ಮತ್ತು ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡಬಹುದು. ಹಾಗೆಂದ ಮಾತ್ರಕ್ಕೆ ಭದ್ರತಾ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎನ್ನುವುದು ಸದ್ಯದ ವಿರೋಧಾಭಾಸ

ಈ ಪ್ರದೇಶದಲ್ಲಿ ಭಾರತ ಪ್ರಮುಖ ಮತ್ತು ಗಂಭೀರ ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ಗಡಿಭಾಗದ ಜನರ ಹಿತದೃಷ್ಟಿಯ ಉದ್ದೇಶದಿಂದ ಜಾರಿಗೊಳಿಸಲಾದ ಮುಕ್ತ ಗಡಿ ಸಂಚಾರದ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಸ್ಥಳೀಯರು ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ದುರದೃಷ್ಟಕರ. ಆಯುಧಗಳು ಮತ್ತಿತರ ವಸ್ತುಗಳನ್ನು ಸಾಗಿಸಲು ದಂಗೆಕೋರ ಗುಂಪುಗಳು ಮುಕ್ತ ಗಡಿ ಸಂಚಾರವನ್ನು ಬಳಸಿಕೊಳ್ಳುವುದು ಮಾಮೂಲಾಗಿದೆ. ಎನ್.ಎಸ್.ಸಿ.ಎನ್ ಕಪ್ಲಾಂಗ್ ಎಂಬ ದಂಗೆಕೋರ ಗುಂಪು ಮ್ಯಾನ್ಮಾರಿನ NSAZ ಪ್ರದೇಶದಲ್ಲಿ ತನ್ನ ತರಬೇತಿ ಶಿಬಿರಗಳನ್ನು ಸ್ಥಾಪಿಸಿಕೊಂಡು ಭಾರತವನ್ನು ಕಾಡುತ್ತಿದೆ. ಇಂಥ ಹತ್ತು ಹಲವು ಗುಂಪುಗಳು ಮುಕ್ತ ಗಡಿ ಸಂಚಾರದ ಲಾಭ ಪಡೆದುಕೊಂಡು ಭಾರತೀಯ ಭದ್ರತಾ ಪಡೆಗಳ ಮೇಲೆ ಕ್ಷಿಪ್ರ ಕಳ್ಳದಾಳಿ ನಡೆಸಿ ಮ್ಯಾನ್ಮಾರಿನೊಳಗೆ ಪರಾರಿಯಾಗಿಬಿಡುತ್ತಾರೆ! ಈ ಕಿಡಿಗೇಡಿಗಳ ಭಾರತ ವಿರೋಧಿ ಕೃತ್ಯಗಳಿಗೆ ಚೀನಾ ಸಂಪೂರ್ಣ ಬೆಂಬಲ ನೀಡುತ್ತಿರುವುದು ಇವತ್ತಿಗೆ ರಹಸ್ಯವಾಗಿ ಉಳಿದಿಲ್ಲ. ಭಾರತ ಮತ್ತು ಮ್ಯಾನ್ಮಾರ್ ಎರಡೂ ಕಡೆಯ ದಂಗೆಕೋರ ಗುಂಪುಗಳು ತಮ್ಮ ದೇಶದ್ರೋಹಿ ಕಾರ್ಯದಲ್ಲಿ ಪರಸ್ಪರ ಸಹಕರಿಸಿಕೊಳ್ಳುತ್ತವೆ. ದಟ್ಟ ಕಾಡಿನಿಂದ ಆವೃತವಾದ ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರೆಣೆಗಳೂ ಕಷ್ಟಸಾಧ್ಯವಾಗಿರುವುದು ದಂಗೆಕೋರರ ಅಟ್ಟಹಾಸ ಹೆಚ್ಚಿಸಿದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಿಕೊಳ್ಳುವ ಪ್ರಯತ್ನಗಳಿಗೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ. ಉದಾಹರಣೆಗೆ ಮಾರ್ಚ್ 2003 ರಲ್ಲಿ ಭಾರತ ಸರಕಾರ ಮಣಿಪುರದಲ್ಲಿ ಭಾರತ- ಮ್ಯಾನ್ಮಾರ್ ಗಳ ಮಧ್ಯೆ ಬೇಲಿಯೊಂದನ್ನು ರಚಿಸಲು ಮುಂದಾಗಿತ್ತಾದರೂ ತೀವ್ರ ಸಾರ್ವಜನಿಕ ವಿರೋಧದಿಂದಾಗಿ ಈ ಯೋಜನೆಯನ್ನು ಕೈಬಿಡಬೇಕಾಗಿತ್ತು.

ಭಾರತ ಮತ್ತು ಮ್ಯಾನ್ಮಾರ್ ದೇಶಗಳ ಗಡಿಭಾಗದ ಜನರ ಸಾಂಸ್ಕೃತಿಕ, ಕೌಟುಂಬಿಕ ಮತ್ತು ಭಾವನಾತ್ಮಕ ಬಂಧಗಳಿಗೆ ಬೆಲೆಕೊಟ್ಟು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪ್ರಜಾಸತ್ತಾತ್ಮಕವಾಗಿ ಮೆಚ್ಚತಕ್ಕಂತಾ ನಡೆಯೇ ಆದರೂ ರಾಜತಾಂತ್ರಿಕವಾಗಿ ಹಲವಾರು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಗಿದೆ. ಭದ್ರತಾ ಅವಶ್ಯಕತೆಗನುಸಾರವಾಗಿ ಗಡಿಯಲ್ಲಿ ಬೇಲಿಯೊಂದನ್ನು ನಿರ್ಮಿಸುವ ಹಠಾತ್ ನಿರ್ಧಾರ ನಾಗಾ ಬುಡಕಟ್ಟಿನ ತೀವ್ರ ವಿರೋಧಕ್ಕೆ ಕಾರಣವಾಗಬಹುದು. ಗಡಿಭಾಗದ ಜನರಿಗಷ್ಟೇ ಅಲ್ಲದೇ ಭಾರತ-ಮ್ಯಾನ್ಮಾರ್ ಸರಕಾರಗಳಿಗೂ ಈ ಗಡಿಪ್ರದೇಶ ತ್ರಿಶಂಕು ಸ್ವರ್ಗವೇ ಸರಿ. ಗಡಿಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಿತ ಗಡಿಗಳನ್ನು ರಚಿಸುವ ಅವಕಾಶವೂ ಸರಕಾರದ ಮುಂದಿದೆ. ಮುಕ್ತ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸದೆ ನಿಯಂತ್ರಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವುದರಿಂದ ಈ ತ್ರಿಶಂಕು ಸ್ವರ್ಗದ ನಿರ್ವಹಣೆಯೊಂದಿಗೆ, ರಾಜತಾಂತ್ರಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಏಕಕಾಲಕ್ಕೆ ಪಾಲಿಸಿದಂತಾಗುತ್ತದೆ.


(This article was published in Hosa Digantha Newsapaper on 21 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ