ಶುಕ್ರವಾರ, ಫೆಬ್ರವರಿ 10, 2017

'ರಾ' ಹದ್ದಿನ ಕಣ್ಣಲ್ಲಿ ಪಾಕ್ ಅಣ್ವಸ್ತ್ರ ಯೋಜನೆ


ರಾಷ್ಟ್ರಗಳ ನಡುವಿನ ಶಕ್ತಿ ರಾಜಕೀಯದಲ್ಲಿ ಸ್ವಂತ ಶಕ್ತಿ ಎಷ್ಟು ಪ್ರಮುಖವೋ, ಶತ್ರುವಿನ ಬಲಾಬಲಗಳ ಪರಿಚಯ ಅಷ್ಟೇ ಮುಖ್ಯ. ಇದೇ ಕಾರಣಕ್ಕಾಗಿ, ಪ್ರತೀ ದೇಶದಲ್ಲೂ ಅವರದ್ದೇ ಆದ ಆದ ಗುಪ್ತಚರ ದಳಗಳಿವೆ. ಒಂದು ರೀತಿಯಲ್ಲಿ ಎಲ್ಲಾ ರಾಷ್ಟ್ರಗಳೂ ತಮ್ಮ ವೈರಿಗಳು ಮಾತ್ರವಲ್ಲದೇ ಮಿತ್ರರ ಮೇಲೂ ಒಂದು ರೀತಿಯ ಛಾಯಾ ಯುದ್ಧದಲ್ಲಿ ತೊಡಗಿರುತ್ತವೆ. ಇತರ ದೇಶಗಳ ಸಣ್ಣ ಪುಟ್ಟ ರಹಸ್ಯಗಳನ್ನೂ ತಮ್ಮ ದೇಶದ ಪರವಾಗಿ ಬಳಸಿಕೊಳ್ಳುವ ಗುಪ್ತಚರ ಸಂಸ್ಥೆಗಳ ಉದಾಹರಣೆಗಳಿದ್ದಂತೆ, ಈ ಸಂಸ್ಥೆಗಳ ಒಂದು ಕ್ಷಣದ ಮೈಮರೆವು ದೇಶಕ್ಕೆ ಗಂಡಾಂತರ ತಂದ ನಿದರ್ಶನಗಳೂ ಇವೆ. ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಕುರಿತಾಗಿಯೂ ಭಾರತದ ಗುಪ್ತಚರ ದಳ 'ರಾ' ಹದ್ದಿನ ಕಣ್ಣಿಟ್ಟಿತ್ತು. ಈ ಬಗ್ಗೆ ದಶಕಗಳಿಂದ ರಹಸ್ಯವಾಗಿದ್ದ ಕಡತಗಳು ಮತ್ತು ದಾಖಲೆಗಳು ವಿವರ್ಗೀಕರಿಸಲ್ಪಟ್ಟು, ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ 'ರಾ' ಸಂಗ್ರಹಿಸಿದ್ದ ಮಾಹಿತಿಗಳು ಹೊರಬಿದ್ದಿವೆ. 1970ಕ್ಕೂ ಹಿಂದಿನಿಂದಲೇ 'ರಾ' ಅಧಿಕಾರಿಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಬಗೆಗೆ ಹಂತ ಹಂತವಾಗಿ ಮಾಹಿತಿ ಕಲೆ ಹಾಕಿದ್ದರು!

1970ರ ದಶಕದಲ್ಲಿ ಪಾಕಿಸ್ತಾನದ ಸಂಸ್ಕರಣ ಸಾಮರ್ಥ್ಯ ಮತ್ತು 1980ರ ದಶಕದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ತಯಾರಿಸುವ ಸಾಮರ್ಥ್ಯದ ಕುರಿತಾಗಿ ವಿಶೇಷ ಮಾಹಿತಿಗಳನ್ನು ಭಾರತ ಸಂಗ್ರಹಿಸಿತ್ತು. 1990ರ ದಶಕದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಕ್ಷಿಪಣಿ ಕಾರ್ಯಕ್ರಮಕ್ಕೆ ಚೀನಾದ ಬೆಂಬಲ ಮತ್ತು ಈ ಕ್ಷಿಪಣಿ ಯೋಜನೆಯನ್ನು ಉತ್ತರ ಕೊರಿಯಾಗೆ ಹೊರಗುತ್ತಿಗೆ ನೀಡುವ ಚೀನಾ ಷಡ್ಯಂತ್ರಗಳೆಲ್ಲವನ್ನೂ ಭಾರತೀಯ ಗುಪ್ತಚರ ಸಂಸ್ಥೆ ತಿಳಿದುಕೊಂಡಿತ್ತು. 2004ರಲ್ಲಿ ಪಾಕಿಸ್ತಾನ ಪರೀಕ್ಷಿಸಿದ ಶಹೀನ್-II ಖಂಡಾಂತರ ಕ್ಷಿಪಣಿಯ ಕುರಿತಾಗಿ ನಾಲ್ಕು ವರ್ಷಗಳ ಹಿಂದೆಯೇ 'ರಾ' ಮಾಹಿತಿ ಕಲೆಹಾಕಿತ್ತು. ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳ ಬಗ್ಗೆ ಬಹಳಷ್ಟು ಮಾಹಿತಿ ಕಲೆಹಾಕಿದ್ದರೂ, ಈ ಮಾಹಿತಿಗಳೆಲ್ಲವನ್ನೂ ರಹಸ್ಯವಾಗಿಡಲಾಗಿತ್ತು. ಇತ್ತೀಚೆಗೆ ಬಹಿರಂಗಗೊಳಿಸಲಾದ ಕಡತಗಳಲ್ಲಿ ಭಾರತದ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ್ದ ಕೆಲವೊಂದು ಮಾಹಿತಿಗಳು ಹೀಗಿವೆ.

ಅಣ್ವಸ್ತ್ರಗಳನ್ನು ಉತ್ಪಾದಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ವಿಶ್ಲೇಷಿಸಿ 1975ರ ಮಾರ್ಚ್ ನಲ್ಲಿ ಭಾರತದ ಜಂಟಿ ಗುಪ್ತಚರ ಮಂಡಳಿ (JIC - Joint Intelligence Committee Report) ದಾಖಲೆ ಪತ್ರವೊಂದನ್ನು ಸಿದ್ಧಪಡಿಸಿತ್ತು ಮತ್ತು ಫೆಬ್ರವರಿ 1976ರಲ್ಲಿ ಕೆಲ ಬದಲಾವಣೆಗಳೊಂದಿಗೆ ಈ ದಾಖಲೆ ಪತ್ರವನ್ನು ಪುನರ್ ವಿಮರ್ಶಿಸಲಾಗಿತ್ತು. ಈ ದಾಖಲೆಗಳ ಪ್ರಕಾರ, ಆ ಸಮಯದಲ್ಲೇ ಭಾರತದ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದ ಅಣ್ವಸ್ತ್ರ ಶಕ್ತಿಯ ಸಂಭವನೀಯತೆಗಳನ್ನು ಮನಗಂಡಿದ್ದರು. ಪ್ಲುಟೋನಿಯಂ-239 ಅಥವಾ ಯುರೇನಿಯಂ-235ಗಳ ಕೊರೆತೆಯಿರುವ ಕಾರಣ ಮುಂದಿನ ನಾಲ್ಕು ವರ್ಷಗಳವರೆಗೆ ಅಣ್ವಸ್ತ್ರ ಉತ್ಪಾದಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದನ್ನು 1975ರ ದಾಖಲೆ ಪತ್ರಗಳು ಸ್ಪಷ್ಟಪಡಿಸುತ್ತವೆ. ಜಂಟಿ ಗುಪ್ತಚರ ಮಂಡಳಿಯ ವರದಿಯ ಪ್ರಕಾರ, ಪಾಕಿಸ್ತಾನ ಮಹತ್ವಾಕಾಂಕ್ಷೆಯೊಂದಿಗೆ ಕರಾಚಿಯಲ್ಲಿ ಸ್ಥಾಪಿಸಿದ್ದ ಅಣ್ವಸ್ತ್ರ ಸ್ಥಾವರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದವು. ಬಾಯ್ಲರ್ ಗಳಲ್ಲಿ ಸೋರಿಕೆಯಿಂದಾಗಿ ರಿಯಾಕ್ಟರ್ ಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು. 1975ರಲ್ಲೇ ಈ ಅಣುಕೇಂದ್ರವನ್ನು ಆರು ಬಾರಿ ಮುಚ್ಚಬೇಕಾಗಿ ಬಂತು. ಒಂದು ಬಾರಿ ಈ ಸಮಸ್ಯೆ ವಿಕೋಪಕ್ಕೆ ತಿರುಗಿಕೊಂಡು, ಕೆನಡಾ ತಂತ್ರಜ್ಞರು ಬಂದು ಸರಿ ಪಡಿಸಬೇಕಾಯ್ತು ಎಂಬ ರಹಸ್ಯ ಮಾಹಿತಿಗಳು ಭಾರತಕ್ಕೂ ತಿಳಿದಿತ್ತು!
Image may contain: 1 person
1976ರಲ್ಲಿ ಕೆನಡಾದ ರಾಜಧಾನಿ ಒಟ್ಟಾವದಲ್ಲಿದ್ದ ಭಾರತೀಯ ದೂತಾವಾಸದಿಂದ ಭಾರತಕ್ಕೆ ಕಳುಹಿಸಿದ ರಹಸ್ಯ ರಾಜತಾಂತ್ರಿಕ ಸಂದೇಶಗಳನ್ನು ಗಮನಿಸಿದಾಗ, ಬಹಳಷ್ಟು ಹಿಂದೆಯೇ, ಪಾಕಿಸ್ತಾನದಲ್ಲಿ ಚೀನೀ ವಿಜ್ಞಾನಿಗಳು ಕಾರ್ಯನಿರತವಾಗಿರುವ ಮಾಹಿತಿ ಭಾರತದ ಬಳಿಯಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಕರಾಚಿಯಲ್ಲಿದ್ದ ಅಣ್ವಸ್ತ್ರ ಸ್ಥಾವರ, ಅಂತರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (IAEA) ಅಧೀನದಲ್ಲಿದ್ದರೂ, ಕೆನಡಾದ ಅಣ್ವಸ್ತ್ರ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನು ಬಳಸಲು ಚೀನೀ ವಿಜ್ಞಾನಿಗಳಿಗೆ ಅನುವು ಮಾಡಿಕೊಟ್ಟಿತ್ತು ಪಾಕಿಸ್ತಾನ! ಈ ರಹಸ್ಯವನ್ನು ಹಂಗೇರಿಯ ರಾಜತಂತ್ರಜ್ಞನೊಬ್ಬ ಒಟ್ಟಾವದಲ್ಲಿದ್ದ ಭಾರತದ ರಾಯಭಾರಿಗೆ ತಿಳಿಸಿದ್ದ. ಚೀನಾದ ಮಿಲಿಟರಿ ಪೂರೈಕೆಗಳಿಗೆ ಪ್ರತಿಯಾಗಿ ಪಾಕಿಸ್ತಾನ ತನ್ನ ಬಳಿಯಿದ್ದ ಕೆನಡಾದ ತಂತ್ರಜ್ಞಾನವನ್ನು ಚೀನಾದೊಂದಿಗೆ ಹಂಚಿಕೊಂಡಿತ್ತು. 1981ರಲ್ಲಿ ಇಸ್ಲಾಮಾಬಾದ್ ನಲ್ಲಿದ್ದ ಭಾರತೀಯ ದೂತಾವಾಸ ಕಳುಹಿಸಿದ 'ತಿಂಗಳ ವರದಿ'ಯಲ್ಲಿ, ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮ ಯಶಸ್ವಿಯಾಗಲಿದೆ ಮತ್ತು ಪಾಕಿಸ್ತಾನ ಜಿಯಾ ಇದೇ ವರ್ಷ ಅಣ್ವಸ್ತ್ರ ಪರೀಕ್ಷಿಸುವ ಹುಮ್ಮಸ್ಸಿನಲ್ಲಿದ್ದಾರೆ ಎಂದಿತ್ತು. ಇದೇ ವರ್ಷ ಜೆ. ಎನ್ ದೀಕ್ಷಿತ್ ರವರ ( ಮುಂದೆ 2004-2005ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು)  ಅಧ್ಯಯನ ವರದಿ, ಪಾಕಿಸ್ತಾನದ ಕಹುಟಾ, ಇಸ್ಲಾಮಾಬಾದ್ ಮತ್ತು ಸಿಹಾಲಗಳಲ್ಲಿ ತ್ರಿಕೋನ ಅಣ್ವಸ್ತ್ರ ಯೋಜನೆಗಳು ಮತ್ತು ಯುರೇನಿಯಂ ಹೆಕ್ಸಾಫ್ಲುರೈಡ್ ತಯಾರಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಎಚ್ಚರಿಸಿದ್ದರು.

ಪಾಕಿಸ್ತಾನ ಸಿಂಧ್, ಬಲೂಚಿಸ್ತಾನ್ ಅಥವಾ ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ (ಖೈಬರ್ ಪಕ್ತೂನ್ಕಾವ) ಭೂಮಿಯ ಅಡಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮಾಹಿತಿ ಭಾರತಕ್ಕೆ ತಿಳಿದಿತ್ತು. ಇದೇ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟದ ಉಪಗ್ರಹಗಳು ರಾಸ್ ಕೊಹ್ ಪ್ರದೇಶದಲ್ಲಿ ಪಾಕಿಸ್ತಾನ ನಿರ್ಮಿಸಿದ್ದ ಸುರಂಗಗಳನ್ನು ಪತ್ತೆಹಚ್ಚಿತ್ತು. ಪಾಕ್ ಅಣ್ವಸ್ತ್ರ ಯೋಜನೆಗೆ ಲಿಬಿಯಾ ಜೊತೆಯಲ್ಲೂ ಕೊಂಡಿಗಳಿವೆ ಎಂವ ವಿಚಾರವೂ ಭಾರತದ ಗಮನಕ್ಕೆ ಬಂದಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕಾ ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧಗಳನ್ನು ಉನ್ನತ ಮಟ್ಟಕ್ಕೇರಿಸಿ, 3 ಬಿಲಿಯನ್ ಅಮೆರಿಕನ್ ಡಾಲರ್ಗಳ ನೆರವು ನೀಡಿದ್ದಷ್ಟೇ ಅಲ್ಲದೇ  F-16 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಒದಗಿಸಿದಾಗ ಭಾರತ ಅಸಮಧಾನ ವ್ಯಕ್ತಪಡಿಸಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ರೇಗನ್ ಮತ್ತಿತರ ಅಧಿಕಾರಿಗಳು ಭಾರತವನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದರು. ಈ ಹೊತ್ತಿನಲ್ಲಿಯೇ ಜಿಯಾ, ಭಾರತ ಮತ್ತು ಪಾಕಿಸ್ತಾನಗಳ ಅಣ್ವಸ್ತ್ರ ಕೇಂದ್ರಗಳ ಪರಸ್ಪರ ತಪಾಸಣೆಗೊಳಪಡಿಸುವ ತನ್ನ ಇಚ್ಛೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು. ಆದರೆ ಈ ಪ್ರಯತ್ನಗಳು ಭಾರತವನ್ನು ಓಲೈಸುವಲ್ಲಿ ವಿಫಲವಾಗುತ್ತವೆ.

ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಕುರಿತಾಗಿ ಅಗಾಧ ಮಾಹಿತಿ ಸಂಗ್ರಹಿಸಿದ್ದರೂ, ಅದನ್ನು ತಡೆಗಟ್ಟಲು ಭಾರತ ಯಾವುದೇ ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಲಿಲ್ಲ. ಆದರೆ ಪಾಕಿಸ್ತಾನದ ರಿಯಾಕ್ಟರ್ ಗಳನ್ನು ನಾಶಪಡಿಸಲು ಇಸ್ರೇಲ್ ಮುಂದೆ ಬಂದಿತ್ತು. ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಭಾರತದ ಸಹಕಾರವನ್ನು ನಿರೀಕ್ಷಿಸಿತ್ತಾದರೂ, ಕಾರಣಾಂತರಗಳಿಂದ ಭಾರತ ಇಸ್ರೇಲ್ ಪ್ರಸ್ತಾವನೆಯನ್ನು ನಿರಾಕರಿಸುತ್ತದೆ. ಕೊನೆಗೂ  ಭಾರತ ಮತ್ತು ಪಾಕಿಸ್ತಾನಗಳೆರಡೂ ಅಣ್ವಸ್ತ್ರ ಶಕ್ತಿಗಳಾಗಿ ಬದಲಾಗಿವೆಯಷ್ಟೇ ಅಲ್ಲದೆ ಜಾಗತಿಕ ಅಣ್ವಸ್ತ್ರ ಸಂಘರ್ಷಗಳ ಬಗೆಗಿನ ಯಾವುದೇ ಚರ್ಚೆ ದಕ್ಷಿಣ ಏಷ್ಯಾದ ಅಣ್ವಸ್ತ್ರ ತಿಕ್ಕಾಟವನ್ನು ಪ್ರಸ್ತಾಪಿಸದೆ ಕೊನೆಗೊಳ್ಳುವುದಿಲ್ಲ. ಇತ್ತೀಚಿನ ಗುಪ್ತಚರ ಕಡತಗಳು ಮತ್ತು ದಾಖಲೆ ಪತ್ರಗಳ ವಿವರ್ಗೀಕರಣ ಇವೆಲ್ಲವುಗಳನ್ನು ನೆನಪಿಸುವಂತಿತ್ತು.

(This article was published in Vishwavani Newsapaper on 8 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ