ಗುರುವಾರ, ಫೆಬ್ರವರಿ 23, 2017

ರಾಜಕೀಯ ಹಸ್ತಕ್ಷೇಪ: ಅಮೆರಿಕನ್ನರು ಮರೆತ ಚರಿತ್ರೆ!




ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹದ ಹೊರತಾಗಿಯೂ, ಇವತ್ತಿಗೆ ಅಮೆರಿಕಾದ ಪ್ರಭಾವಿ ವಲಯದಲ್ಲಿ ರಷ್ಯಾ ವ್ಯಾಪಕವಾಗಿ ಟೀಕೆಗೊಳಗಾಗುತ್ತಿದೆ.   ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯನ್ನರು ಹಸ್ತಕ್ಷೇಪ ಮಾಡಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲಾಗದೆ, ಅಮೆರಿಕಾದಲ್ಲಿರುವ ರಷ್ಯಾ ದ್ವೇಷಿ ಪ್ರಭಾವಿ ವ್ಯಕ್ತಿತ್ವಗಳು ರಷ್ಯಾಗೆ ಬಲವಾದ ತಿರುಗೇಟು ನೀಡುವಂತೆ ಅಧ್ಯಕ್ಷ ಟ್ರಂಪ್ ರ ಕಿವಿಯೂದುತ್ತಿದ್ದಾರೆ. ಸೆನೆಟರ್ ಜೀನ್ ಶಹೀನ್ , ರಷ್ಯಾ ನಮ್ಮ ಚುನಾವಣೆಗಳಲ್ಲಿ ಮಾಡಿದ ಹಸ್ತಕ್ಷೇಪಕ್ಕೆ ಪ್ರತಿಯಾಗಿ ಅಮೆರಿಕಾ ಉಗ್ರ ಪ್ರತ್ಯುತ್ತರ ನೀಡಬೇಕು ಎಂದಿದ್ದರೆ ಸೆನೆಟರ್ ಜಾನ್ ಮೆಕೈನ್,  ಅಮೆರಿಕಾದ ಪ್ರಜಾಪ್ರಭುತ್ವದ ಮೇಲೆ ರಷ್ಯಾ ಮಾಡಿದ ದಾಳಿ ಪ್ರತಿ ಅಮೆರಿಕನ್ನನೂ ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ. ತಮ್ಮ ಪ್ರಜಾಪ್ರಭುತ್ವದ ಮೇಲಿನ ರಷ್ಯನ್ ದಾಳಿಯನ್ನು ವೀರಾವೇಶದಿಂದ ಖಂಡಿಸುತ್ತಿರುವ ಅಮೆರಿಕನ್ನರು, ಅಮೆರಿಕಾವೂ ಹಿಂದೆ ಬಹಳಷ್ಟು ಬಾರಿ ಇಂಥ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ಮಾಡಿದೆ ಎನ್ನುವುದನ್ನು ಮರೆತಂತಿದೆ. ಅಮೆರಿಕಾದ ರಾಜಕೀಯ ಪಕ್ಷವೊಂದರ ಇಮೇಲ್ ಖಾತೆಗಳನ್ನು ರಷ್ಯಾ ಹ್ಯಾಕ್ ಮಾಡಿ, ಚುನಾವಣೆಯ ಮೇಲೆ ಪ್ರಭಾವ ಬೀರುವಂತೆ ಮಾಡದ್ದು ಅಕ್ಷಮ್ಯ ಅಪರಾಧವೇ ಸರಿ. ಒಂದು ದೇಶದ ಆಂತರಿಕ ವಿಷಯಗಳು ಅದರಲ್ಲೂ ಚುನಾವಣೆಯಂತಾ ಪ್ರಕ್ರಿಯೆಗಳಲ್ಲಿ ಮೂಗು ತೂರಿಸುವುದು ಆ ದೇಶದ ಸಾರ್ವಭೌಮತ್ವವನ್ನೇ ಪ್ರಶ್ನೆ ಮಾಡಿದಂತೆ. ಈ ಬಾರಿ ರಷ್ಯಾ ಮಾಡಿದ್ದೂ ತಪ್ಪು, ಆದರೆ ಇಂತಾ ತಪ್ಪುಗಳನ್ನು ಅಮೆರಿಕಾ ದಶಕಗಳಿಂದ ಮಾಡಿಕೊಂಡು ಬಂದಿದೆ. ರಷ್ಯಾವನ್ನು ಪ್ರಶ್ನಿಸುವ ಅಮೆರಿಕಾದ ನೈತಿಕತೆಗೆ ಮರುಪ್ರಶ್ನೆ ಹಾಕುವಂಥಾ ಕೆಲ ಘಟನೆಗಳು ಚರಿತ್ರೆಯ ಪುಟಗಳಲ್ಲಿವೆ.
Image may contain: 1 person
ಜೆಕೋಬೊ ಅರ್ಬೆನ್ಸ್ ಗ್ವಾಟೆಮಾಲಾದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಅಧ್ಯಕ್ಷ. ಭೂಮಾಲಿಕರು ಮತ್ತು ರೈತರ ನಡುವಿನ ಆರ್ಥಿಕ ಅಂತರವನ್ನು ಕಡಿಮೆ ಮಾಡಿ ರೈತರ ಕ್ಷೇಮ ಕಾಪಾಡುತ್ತೇನೆ ಎಂಬ ನಿಲುವನ್ನು ಚುನಾವಣಾ ಪ್ರಚಾರದುದ್ದಕ್ಕೂ ಬಳಸಿಕೊಂಡ ಅರ್ಬೆನ್ಸ್ ಜನರಿಂದ ಆಯ್ಕೆಯಾಗಿ ಗ್ವಾಟೆಮಾಲಾದ ಅಧ್ಯಕ್ಷನಾಗುತ್ತಾರೆ. ಆದರೆ ಅಮೆರಿಕಾ ತನ್ನ ಪ್ರಭಾವಕ್ಕೆ ಮತ್ತು ಮುನ್ರೋ ಸಿದ್ಧಾಂತಕ್ಕೆ ಅರ್ಬೆನ್ಸ್ ಸಂಭವನೀಯ ಶತ್ರುವಾಗಿ ಬದಲಾಗಬಲ್ಲ ಎಂಬ ಲೆಕ್ಕಾಚಾರದಲ್ಲಿತ್ತು.  1952-54ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾದ ಹ್ಯಾರಿ ಟ್ರೂಮನ್ ಮತ್ತು ಡ್ವೈಟ್ ಐಸೆನ್ ಹೋವರ್, ತಮ್ಮ ಗುಪ್ತಚರ ಸಂಸ್ಥೆ ಸಿ.ಐ.ಎ ಯನ್ನು ಛೂ ಬಿಟ್ಟು ಅರ್ಬೆನ್ಸ್ ಆಡಳಿತ ಕೊನೆಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದರು. ಸಿ.ಐ.ಎ ಗ್ವಾಟೆಮಾಲಾದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಗಳಿಂದ, ಅರ್ಬೆನ್ಸ್ ವಿರೋಧಿಗಳು ದಿನೇ ದಿನೇ ಪ್ರಭಾವಶಾಲಿಗಳಾಗತೊಡಗಿದರು. ಕೊನೆಗೊಂದು ದಿನ ಅರ್ಬೆನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೇಶ ಬಿಟ್ಟು ಓಡಿಹೋಗುವಂತಾಯ್ತು! ಅರ್ಬೆನ್ಸ್ ಸರಕಾರ ಉರುಳಿಸಿ, ಅಮೆರಿಕಾ ವಿರೋಧಿ ನಾಯಕರನ್ನೆಲ್ಲಾ ಇನ್ನಿಲ್ಲವಾಗಿಸಿದ ಗ್ವಾಟೆಮಾಲದಲ್ಲಿನ ಈ ವಿಶೇಷ ಕಾರ್ಯಾಚರಣೆಗಾಗಿ ಐಸೆನ್ ಹೋವರ್ ಬಿಡುಗಡೆ ಮಾಡಿದ ಬಜೆಟ್ ಸುಮಾರು 2.7 ಮಿಲಿಯನ್ ಅಮೆರಿಕನ್ ಡಾಲರ್ ಗಳು!

ಚಿಲಿ ದೇಶದ ರಾಜಕಾರಣಿ ಸಾಲ್ವಡೊರ್ ಅಲೆಂಡೆ 1970ರ ದಶಕದಲ್ಲಿ ಚಿಲಿ ದೇಶದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ ರಾಜಕಾರಣಿ. ಚಿಲಿಯ ಜನರಿಗೆ ಅಲೆಂಡೆಯನ್ನು ಆರ್ಥಿಕ ಸುಧಾರಣೆಗಳ ಹರಿಕಾರನಂತೆ ಕಂಡರೆ, ಅಮೆರಿಕಾಕ್ಕೆ ದಕ್ಷಿಣ ಅಮೆರಿಕಾದಲ್ಲಿ ಹುಟ್ಟಿಕೊಂಡ ಹೊಸ ಶತ್ರುವಿನಂತೆ ಕಂಡಿದ್ದ! ನಿಕ್ಸನ್ ಆಡಳಿತಕ್ಕೆ ಅಲೆಂಡೆ ಸೊವಿಯೆತ್ ಒಕ್ಕೂಟದ ಸ್ನೇಹದೊಂದಿಗೆ ದಕ್ಷಿಣ ಅಮೆರಿಕಾದಲ್ಲಿ ಸೊವಿಯೆತ್ ಪ್ರಭಾವಕ್ಕೆ ಕಾರಣನಾಗುತ್ತಾನೆ ಎಂಬ ಭೀತಿಯಿತ್ತು. 1970ರ ಚುನಾವಣೆಯಲ್ಲಿ ಅಲೆಂಡೆ ಗೆಲ್ಲುವ ಸೂಚನೆಗಳು ಕಂಡುಬಂದಾಗ, ಸಿ.ಐ.ಎ ಅಲೆಂಡೆಯ ವಿರೋಧಿ ಗುಂಪುಗಳಿಗೆ ಶಸ್ತ್ರಾಸ್ತ್ರ ಇನ್ನಿತರ ನೆರವು ನೀಡಿ ಚುನಾವಣೆಯನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳಲು ಪ್ರಯತ್ನಪಟ್ಟಿದ್ದರು. ಹೀಗಿದ್ದಾಗ್ಯೂ ಅಲೆಂಡೆ ಸಂಪೂರ್ಣ ಬಹುಮತದೊಂದಿಗೆ ಗೆದ್ದುಬರುತ್ತಾರೆ. ಸೊವಿಯೆತ್ ಒಕ್ಕೂಟದ ಈ ಸಂಭವನೀಯ ಮಿತ್ರನನ್ನು ಹೇಗಾದರೂ ಕೊನೆಗೊಳಿಸಬೇಕು ಎನ್ನುತ್ತಿದ್ದ ನಿಕ್ಸನ್ ಸರಕಾರ, ಕೊನೆ ಪಕ್ಷ ಚಿಲಿಯ ಆರ್ಥಿಕತೆಯನ್ನಾದರೂ ಬುಡಮೇಲು ಮಾಡಬೇಕೆಂದು ತಾಕೀತು ಮಾಡಿದ್ದು ಇತ್ತೀಚೆಗೆ ವಿವರ್ಗೀಕರಿತವಾದ ರಹಸ್ಯ ಕಡತಗಳಿಂದ ಬಹಿರಂಗಗೊಂಡ ಸತ್ಯ. ಚಿಲಿಯ ಮಿಲಿಟರಿ ದಂಗೆಗೂ ಪರೋಕ್ಷವಾಗಿ ಬೆಂಬಲ ನೀಡಿತ್ತು ಅಮೆರಿಕಾ. ಅಂತಿಮವಾಗಿ 1973ರಲ್ಲಿ ಚಿಲಿಯ ಮಿಲಿಟರಿ ಪಡೆಗಳು ಸುತ್ತುವರಿದಾಗ, ಅಲೆಂಡೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯ್ತು.

1951ರಲ್ಲಿ ಇರಾನಿನ ಪ್ರಧಾನಿಯಾಗಿ ಆಯ್ಕೆಯಾದ ಮಹಮ್ಮದ್ ಮೊಸಾಡೆಗ್, ಇರಾನಿನ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸುತ್ತಾರೆ. ಸುಮಾರು ದಶಕಗಳಿಂದ ಇರಾನಿನ ತೈಲ ಸಂಪನ್ಮೂಲಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಬ್ರಿಟನ್, ಮೊಸಾಡೆಗ್ ವಿರುದ್ಧ ಕಿಡಿಕಾರಿದ್ದಷ್ಟೇ ಅಲ್ಲದೇ, ಮೊಸಾಡೆಗ್ ಸರಕಾರವನ್ನು ಉರುಳಿಸಲು ಅಮೆರಿಕಾ ನೆರವು ಕೇಳಿತ್ತು. ಬ್ರಿಟಿಷರಿಗೆ ಮೊಸಾಡೆಗ್ ಸರಕಾರ ತೈಲದಿಂದ ಬರುವ ಆದಾಯದ ಪ್ರಶ್ನೆಯಾಗಿದ್ದರೆ, ಅಮೆರಿಕಾಗೆ ಮೊಸಾಡೆಗ್ ಯಾವತ್ತಿದ್ದರೂ ಸೊವಿಯೆತ್ ಪರ ವಾಲಿಕೊಂಡು, ಇರಾನ್ ನಲ್ಲಿ ಸೊವಿಯೆತ್ ಪ್ರಭಾವಕ್ಕೆ ಅನುವು ಮಾಡಿಕೊಡುತ್ತಾನೆ ಎಂಬ ಸಂಶಯವಿತ್ತು. ಈ ಎಲ್ಲಾ ಕಾರಣಗಳು ಸೇರಿ ಅಮೆರಿಕಾ ಆಗಿನ ಸಿ.ಐ.ಎ ನಿರ್ದೇಶಕ ಅಲೆನ್ ಡ್ಯೂಲೆಸ್ ನೇತೃತ್ವದಲ್ಲಿ ಮೊಸಾಡೆಗ್ ಸರಕಾರದ ಅಂತ್ಯಕ್ಕೆ ಯೋಜನೆ ರೂಪಿಸಿ, ಅಧಿಕೃತ ಹಣಕಾಸಿನ ನೆರವನ್ನೂ ನೀಡಿತ್ತು. ಇರಾನಿನ ಮಾಧ್ಯಮಗಳಲ್ಲಿ ಮೊಸಾಡೆಗ್ ವಿರುದ್ಧದ ಪ್ರಚಾರ ಸುದ್ಧಿಗಳನ್ನು ವ್ಯಾಪಕವಾಗಿ ಹರಡಲಾಗುತ್ತದೆ. ಈ ವ್ಯವಸ್ಥಿತ ಅಪಪ್ರಚಾರದಿಂದಾಗಿ ಇರಾನ್ ಸೇನೆಯ ಬಹುಪಾಲು ಸೈನಿಕರು ಮೊಸಾಡೆಗ್ ವಿರೋಧಿಗಳಾಗಿ ಬದಲಾಗಿದ್ದರು. ಕೊನೆಗೆ ಮೊಸಾಡೆಗ್ ನನ್ನು ಪದಚ್ಯುತಗೊಳಿಸಿ ಅಮೆರಿಕಾ ಪರವಾಗಿದ್ದ ಮಹಮ್ಮದ್ ರೆಜಾ ಶಾ ತನ್ನ ಅಧಿಕಾರ ಸ್ಥಾಪಿಸುತ್ತಾನೆ. ಆದರೆ ಐಸೆನ್ ಹೋವರ್ ಸರಕಾರದ ಈ ನಡೆ ಮುಂದಕ್ಕೆ ಅಮೆರಿಕಾಗೆ ಬಹಳಷ್ಟು ದುಬಾರಿಯಾಗಿ ಪರಿಣಮಿಸುತ್ತದೆ. ಅಯತೊಲ್ಲಾಹ್ ಆಲಿ ಖೊಮೈನಿ ಇರಾನಿನಾದ್ಯಂತ ತನ್ನ ಭಾಷಣಗಳಲ್ಲಿ ಮೊಸಾಡೆಗ್ ಪದಚ್ಯುತಿಯ ವಿಚಾರದಲ್ಲಿ ಅಮೆರಿಕಾ ಕೈವಾಡವನ್ನು ಟೀಕಿಸುತ್ತಾ, ಮುಂದೊಂದು ದಿನ ಇರಾನಿನ ಪ್ರಶ್ನಾತೀತ ನಾಯಕನಾಗಿ ಬದಲಾಗುತ್ತಾನೆ. ಇರಾನ್ ಮತ್ತು ಅಮೆರಿಕಾಗಳ ಮಧ್ಯೆ ಬಹುದೊಡ್ಡ ಬಿರುಕು ಮೂಡಲು ಮೊಸಾಡೆಗ್ ಪದಚ್ಯುತಿಯೇ ಕಾರಣವಾಗುತ್ತದೆ.

ಅಮೆರಿಕಾ ಬಹಳಷ್ಟು ದೇಶಗಳ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದರೂ, ಕ್ಯೂಬಾದಲ್ಲಿ ಅಮೆರಿಕಾ ಪಟ್ಟ ಪಾಡು ಈ ಚರ್ಚೆಯಲ್ಲಿ ಸಿಂಹಪಾಲು ಪಡೆಯುತ್ತದೆ. ದೈತ್ಯ ಅಮೆರಿಕಾದ ಪಕ್ಕದಲ್ಲೇ ಇದ್ದ ಸಣ್ಣ ರಾಷ್ಟ್ರದ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಮೆರಿಕಾವನ್ನು ಕಾಡಿದ ರೀತಿ ಅಸಾಮಾನ್ಯ. ಅಮೆರಿಕಾದ ಗುಲಾಮನಾಗಿದ್ದ ಕ್ಯೂಬಾದ ಸರ್ವಾಧಿಕಾರಿ ಬಾಟಿಸ್ಟಾನನ್ನು ಅಧಿಕಾರದಿಂದ ಕಿತ್ತೊಗೆದು ಮುಂದಕ್ಕೆ ತಾನೇ ಸರ್ವಾಧಿಕಾರಿಯಾಗಿ ಬದಲಾದ ಕ್ಯಾಸ್ಟ್ರೋ ಸುಮಾರು ಆರು ದಶಕಗಳ ಕಾಲ ಅಮೆರಿಕಾವನ್ನು ಬಿಟ್ಟೂ ಬಿಡದೆ ಕಾಡಿದ. ಚರ್ಚ್ ಕಮಿಟಿ ತನಿಖೆಯ ಪ್ರಕಾರ ಸಿ.ಐ.ಎ ಸುಮಾರು ಆರು ಬಾರಿ ಕ್ಯಾಸ್ಟ್ರೋ ಹತ್ಯೆಗೆ ಪ್ರಯತ್ನಿಸಿತ್ತು. ತನಿಖೆಯ ವರದಿಯಲ್ಲಿರುವಂತೆ, ಹತ್ಯೆಗೆ ಬಳಸಿದ ಉಪಕರಣಗಳು, ಅತ್ಯಾಧುನಿಕ ರೈಫಲ್ ಗಳು, ವಿಷದ ಗುಳಿಗೆಗಳು, ವಿಷಯುಕ್ತ ಪೆನ್, ಮಾರಣಾಂತಿಕ ಬ್ಯಾಕ್ಟೀರಿಯಾ ಪೌಡರ್ ಗಳಷ್ಟೇ ಅಲ್ಲದೇ ಕಲ್ಪನೆಯನ್ನೇ ಸುಸ್ತಾಗಿಸುವ ಇನ್ನೂ ಅನೇಕ ಮಾರ್ಗಗಳನ್ನು ಸಿ.ಐ.ಎ ಬಳಸಿತ್ತು. ಸಿ.ಐ.ಎಯಿಂದ ಪ್ರೇರಿತವಾಗಿ, 1961ರಲ್ಲಿ ಬೇ ಆಫ್ ಪಿಗ್ಸ್ ಮತ್ತು 1962ರಲ್ಲಿ ಮಂಗೂಸ್ ಕಾರ್ಯಾಚರಣೆಗಳು ನಡೆದರೂ, ಕ್ಯಾಸ್ಟ್ರೋ ಗುಲಗಂಜಿಯಷ್ಟೂ ಅಲುಗಾಡದೆ ಸುಮಾರು ಅರ್ಧ ಶತಮಾನ ಕ್ಯೂಬಾದಲ್ಲೇ ಇದ್ದು ಅಮೆರಿಕಾಗೆ ಸಡ್ಡುಹೊಡೆದಿದ್ದ. 

ರಷ್ಯಾ ತನ್ನ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದೆ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಅಮೆರಿಕನ್ನರು ತಮ್ಮ ಇತಿಹಾಸವನ್ನು ಬಹಳಷ್ಟು ಜಾಣ್ಮೆಯಿಂದ ಮರೆಯುವ ಪ್ರಯತ್ನದಲ್ಲಿದ್ದಾರೆ. ಗ್ವಾಟೆಮಾಲಾ, ಚಿಲಿ, ಇರಾನ್ ಮತ್ತು ಕ್ಯೂಬಾಗಳಷ್ಟೇ ಅಲ್ಲದೇ, ಅಮೆರಿಕಾ ಇತರ ದೇಶಗಳಲ್ಲಿ ಮಾಡಿದ ಅನೈತಿಕ ಹಸ್ತಕ್ಷೇಪಗಳಿಗೆ ಇನ್ನೂ ಹಲವಾರು ನಿದರ್ಶನಗಳಿವೆ. 2003ರಲ್ಲಿ ಇರಾಕ್ ಮತ್ತು 2011ರಲ್ಲಿ ಲಿಬಿಯಾಗಳ ಚರಿತ್ರೆಯ ಸೂಕ್ಷ್ಮ ಅವಲೋಕನ ಅಮೆರಿಕಾದ ಅಗೋಚರ ಅಜೆಂಡಾಗಳನ್ನು ಸ್ಪಷ್ಟಪಡಿಸುತ್ತವೆ. ಅಮೆರಿಕಾ ಅಥವಾ ರಷ್ಯಾಗಳ ಖಾತೆಗಳಲ್ಲಿ ಇಂಥಾ ಹತ್ತು ಹಲವು ನಿದರ್ಶನಗಳು ಧಾರಾಳವಾಗಿ ಕಾಣಸಿಗುತ್ತವೆ. ಇನ್ನೊಂದು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವುದು ನೈತಿಕವಾಗಿ ಸಾಧುವಲ್ಲ ಎನ್ನುವುದು ನಿಜವೇ ಆದರೂ, ವಾಸ್ತವದ ಶಕ್ತಿ ರಾಜಕೀಯದಲ್ಲಿ ಸರಿ ತಪ್ಪುಗಳಿಗಿಂತಾ ರಾಷ್ಟ್ರೀಯ ಹಿತಾಸಕ್ತಿಗಳು ಪ್ರಮುಖವಾಗುತ್ತವೆ. "ಇತಿಹಾಸ ಮರುಕಳಿಸುವಿಕೆ ಮೊದಲ ಬಾರಿ ದುರಂತವಾಗಿರುತ್ತದೆ ಹಾಗೂ ಎರಡನೇ ಬಾರಿ ಅಪಹಾಸ್ಯದಂತಿರುತ್ತದೆ" ಮಾರ್ಕ್ಸ್ ಹೇಳಿದ ಈ ಮಾತುಗಳು ಸದ್ಯದ ಅಮೆರಿಕನ್ನರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.


(This article was published in Hosa Digantha Newsapaper on 14 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ