ಶುಕ್ರವಾರ, ಫೆಬ್ರವರಿ 10, 2017

ಗಣರಾಜ್ಯೋತ್ಸವದ ಜೊತೆಗೊಂದು ರಾಜತಾಂತ್ರಿಕ ನಡೆ

ಭಾರತದ 68ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅಬುಧಾಬಿಯ ರಾಜಕುಮಾರ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರವರು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ತಮ್ಮ ರಾಜತಾಂತ್ರಿಕ ಚತುರತೆ ಮೆರೆದಿದ್ದಾರೆ. 2016ರಲ್ಲಿ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಮುಖ್ಯ ಅತಿಥಿಯ ಗೌರವ ನೀಡಿ ಫ್ರಾನ್ಸ್ ಮತ್ತು ಭಾರತಗಳ ಬಾಂಧವ್ಯದಲ್ಲಿ ಹೊಸ ಅವಕಾಶಗಳನ್ನು ತೆರೆದಿದ್ದ ಮೋದಿ, ಈ ಬಾರಿ ಅರಬ್ ಸಂಯುಕ್ತ ರಾಷ್ಟ್ರಗಳ (UAE) ಜೊತೆಗಿನ ಸ್ನೇಹಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. ಈ ಬಾರಿ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಅಬುಧಾಬಿಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಅರಬ್ ಸಂಯುಕ್ತ ರಾಷ್ಟ್ರಗಳ ಸಶಸ್ತ್ರ ಪಡೆಗಳ  ಉಪ ಮಹಾ ದಂಡನಾಯಕನೂ ಆಗಿದ್ದು, ಇದೇ ಮೊದಲಬಾರಿಗೆ ಜನವರಿ 26ರಂದು ಅರಬ್ ಸೈನಿಕರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಹೆಜ್ಜೆ ಹಾಕಲಿದ್ದಾರೆ. ಶೇಕ್ ಮೊಹಮ್ಮದ್ ವರ ಈ ಭೇಟಿ ಯುಎಇ ಜೊತೆಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು 'ಪ್ರಮುಖ ಪಾಲುದಾರ' ಮಟ್ಟಕ್ಕೆ ಏರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ.

ಆಗಸ್ಟ್ 2015ರಲ್ಲಿ ಮೋದಿಯವರು ಅಬುಧಾಬಿಗೆ ಭೇಟಿ ನೀಡಿದ ಬಳಿಕ, ಭಾರತ-ಯುಎಇ ಗಳ ದ್ವಿಪಕ್ಷೀಯ ಸಂಬಂಧಗಳು ನವೋತ್ಸಾಹ ಪಡೆದುಕೊಂಡಿತ್ತು. 34 ವರ್ಷಗಳ ಹಿಂದಿನ ಇಂದಿರಾ ಗಾಂಧಿ ಭೇಟಿಯ ನಂತರದ ಸುದೀರ್ಘ ಕಾಲಾವಧಿಯಲ್ಲಿ ಜಡ್ಡುಗಟ್ಟಿದ್ದ ಸ್ನೇಹಕ್ಕೆ ಹೊಸ ಶಕ್ತಿ ತುಂಬಿತ್ತು ಈ ಭೇಟಿ. ವಿದೇಶೀ ಬಂಡವಾಳ ಹೂಡಿಕೆಗೆ ಭಾರತ ತೆರೆದುಕೊಂಡ ರೀತಿ ಮತ್ತು ಯುಎಇನಲ್ಲಿ ಹೊಸ ಆರ್ಥಿಕ ಮೂಲಗಳ ಹಿನ್ನೆಲೆಯಲ್ಲಿ ಉಧ್ಬವಿಸಿದ 'ನವ ತೈಲ ರಾಜತಂತ್ರ' ಈ ಎರಡು ದೇಶಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿತ್ತು. ತ್ವರಿತಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ಇನ್ನಿತರ ಸನ್ನಿವೇಶಗಳು, ಭಾರತ ಮತ್ತು ಯುಎಇ ಗಳ ನಡುವೆ ಆಯಕಟ್ಟಿನ ದ್ವಿಪಕ್ಷೀಯ ಸಹಕಾರ ಒಪ್ಪಂದವೊಂದರ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತವೆ.

ಜಾಗತಿಕ ತೈಲ ಬೆಲೆಗಳ ಕುಸಿತದ ಹಿನ್ನೆಲೆಯಲ್ಲಿ ಅಬು ಧಾಬಿ ತೈಲೇತರ ವಲಯಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ತೈಲದಿಂದ ದೊರೆಯುತ್ತಿರುವ ಆದಾಯ ಕಡಿಮೆಯಾಗುತ್ತಿರುವುದಷ್ಟೇ ಅಲ್ಲದೇ ಭವಿಷ್ಯದ ದೃಷ್ಟಿಯಿಂದ ತೈಲದಿಂದ ಸಿಗುವ ಆದಾಯದ ಅನಿಶ್ಚಿತತೆ ಅರಬ್ ನಾಯಕರನ್ನು ಇನ್ನಿತರ ಆದಾಯದ ಮೂಲಗಳನ್ನು ಹುಡುಕುವಂತೆ ಮಾಡಿದೆ. ಹೊಸ ಆದಾಯ ಮೂಲಗಳು ಮತ್ತು ಆರ್ಥಿಕ ವಲಯಗಳ ಹುಡುಕಾಟದಲ್ಲಿರುವ ಯುಎಇ ಗೆ ಭಾರತದ ನೆರವಿನ ಅವಶ್ಯಕತೆಯಿದೆ. ಆರ್ಥಿಕ ಕಾರಣಗಳನ್ನು ಒತ್ತಟ್ಟಿಗಿರಿಸಿದರೂ, ರಾಜಕೀಯ ಪರಿಸ್ಥಿತಿಗಳು, ಯುಎಇ ತನ್ನ ಹಳೆಯ ಸಂಬಂಧಗಳನ್ನು ಪುನರ್ ವಿಮರ್ಶಿಸುವ ಸಮಯ ಬಂದಿದೆ. ಬ್ರೆಕ್ಸಿಟ್, ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆ, ಜರ್ಮನಿಯಲ್ಲಿ ಮುಂಬರಲಿರುವ ಚುನಾವಣೆಗಳು, ಇದೇ ಮೇ ತಿಂಗಳಲ್ಲಿ ನಡೆಯಲಿರುವ ಇರಾನಿನ ಅಧ್ಯಕ್ಷೀಯ ಚುನಾವಣೆ ಮತ್ತಿನ್ನಿತರ ಜಾಗತಿಕ ರಾಜಕೀಯ ತಿರುವುಗಳು ಯುಎಇ ವಿದೇಶಾಂಗ ನೀತಿಯ ನಿರ್ಧಾರಗಳಿಗೆ ಸವಾಲಾಗಲಿವೆ.
Image may contain: 4 people
ಯುಎಇ  ತನ್ನ ಆರ್ಥಿಕತೆಯನ್ನು ಅರಬ್ ಜಗತ್ತಿನೊಂದಿಗೆ ವಿಲೀನಗೊಳಿಸಿಕೊಂಡಿರುವುದು ಇವತ್ತಿಗೆ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಪ್ರತಿನಿತ್ಯ ಯಾವುದಾದರೊಂದು ಸಂಘರ್ಷ ಅಥವಾ ಗದ್ದಲಗಳಲ್ಲಿ ಕಾಲ ನೂಕುತ್ತಿರುವ ಸಿರಿಯಾ, ಇರಾಕ್, ಲಿಬಿಯಾ ಮತ್ತು ಯೆಮೆನ್ ನಂಥಾ ಅರಬ್ ರಾಷ್ಟ್ರಗಳ ದೆಸೆಯಿಂದಾಗಿ, ಏಕೀಕೃತ ಅರಬ್ ಆರ್ಥಿಕ ಪ್ರಗತಿಯ ಕನಸು ನನಸಾಗುವ ಯಾವುದೇ ಲಕ್ಷಣಗಳಿಲ್ಲ. ಇಂಥ ಒಂದು ರೋಗಗ್ರಸ್ತ ಆರ್ಥಿಕ ವ್ಯವಸ್ಥೆಯ ಜೊತೆ ತನ್ನ ಆರ್ಥಿಕತೆಯನ್ನು ತಳುಕುಹಾಕಿ ಕೊಂಡ ಅವಿವೇಕಕ್ಕೆ ಯುಎಇ ತನ್ನನ್ನು ತಾನೇ ಶಪಿಸಿಕೊಳ್ಳುವಂತಾಗಿದೆ. ನಿರುದ್ಯೋಗಿ ಯುವಕರು ಹಿಂಡು ಹಿಂಡಾಗಿ ಭಯೋತ್ಪಾದನೆಯತ್ತ ಮುಖ ಮಾಡಿರುವುದೂ ಇನ್ನಷ್ಟು ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ. ಯುರೋಪಿಯನ್ ಒಕ್ಕೂಟದ ಮಾದರಿಯಲ್ಲಿ ಗಲ್ಫ್ ರಾಷ್ಟ್ರಗಳು ಜಿ.ಸಿ.ಸಿ (Gulf Cooperation Council) ಸ್ವಲ್ಪ ಮಟ್ಟಿಗೆ ಭರವಸೆ ತುಂಬಿದ್ದರೂ, ಅದರ ಧ್ಯೇಯೋದ್ದೇಶಗಳು ಪೂರ್ಣ ಫಲ ಕಾಣಲು ವರ್ಷಗಳೇ ಬೇಕಾಗಬಹುದು. ಈ ಎಲ್ಲಾ ಸಂದಿಗ್ಧತೆಗಳಿಂದ ಹೊರ ಬೀಳುವ ತವಕದಲ್ಲಿರುವ ಯುಎಇ ಭಾರತದತ್ತ ಸ್ನೇಹ ಹಸ್ತ ಚಾಚಿದ್ದು ಅಸಹಜವೇನಲ್ಲ.
ಭಾರತದ ಅವಶ್ಯಕತೆಗಳಿಗೂ, ಯುಎಇ ಸ್ನೇಹ ಪೂರಕವಾಗಿಯೇ ಕೆಲಸ ಮಾಡಬಲ್ಲುದು. ತೈಲ ಮತ್ತಿನ್ನಿತರ ಶಕ್ತಿಮೂಲಗಳ ಪೂರೈಕೆ ಹಾಗೂ ದೇಶದೊಳಗಡೆ ಹೊಸ ಬಂಡವಾಳ ಹೂಡಿಕೆಗೆ ಈ ದ್ವಿಪಕ್ಷೀಯ ಮಾತುಕತೆಗಳು ಸದೃಢ ಅಡಿಪಾಯ ಹಾಕುತ್ತದೆ. ಈಗಾಗಲೇ ಭಾರತ ಮತ್ತು ಯುಎಇಗಳ ನಡುವೆ ಉತ್ತಮ ಆರ್ಥಿಕ ಸಂಬಂಧಗಳಿವೆ. 2015ರಲ್ಲಿ ಭಾರತ-ಯುಎಇಗಳ ವ್ಯಾಪಾರ ವಹಿವಾಟು ಸುಮಾರು 60 ಬಿಲಿಯನ್ ಡಾಲರ್ ಗಳಷ್ತಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಇದನ್ನು 60 ಪ್ರತಿಶತ ಹೆಚ್ಚಿಸುವ ತವಕದಲ್ಲಿರುವ ಎರಡೂ ರಾಷ್ಟ್ರಗಳು 2020ರಲ್ಲಿ 100 ಬಿಲಿಯನ್ ಡಾಲರ್ ಗಳಷ್ಟು ವ್ಯಾಪಾರ ವಹಿವಾಟು ನಡೆಸುವ ಗುರಿ ಇಟ್ಟುಕೊಂಡಿವೆ. ಭಾರತದ ಮೂಲಸೌಕರ್ಯಗಳನ್ನು ಸುಧಾರಿಸಲು 75 ಬಿಲಿಯನ್ ಡಾಲರ್ ಗಳ ಅನುದಾನ ನಿಗದಿಯಾಗಿದ್ದು, ಬಂಡವಾಳ ಆಕರ್ಷಣೆಗೆ ಹೊಸ ತಂಡವೊಂದನ್ನು ರಚಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ತೈಲ ಬೆಲೆಗಳ ಅನಿಶ್ಚಿತತೆಯಿಂದಾಗಿ, ಯುಎಇ ನ ಎಮಿರೇಟ್ ಗಳಾದ ದುಬೈ ಮತ್ತು ಅಬು ದಾಬಿಗಳು ತಮ್ಮ ಆದಾಯ ಮೂಲಗಳಲ್ಲಿ ವೈವಿಧ್ಯತೆ ಹುಡುಕಲಾರಂಬಿಸಿವೆ. ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳುವ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿವೆ. 2008ರ Abu Dhabi Economic Vision 2030 ಯೋಜನೆ ತೈಲೇತರ ವಲಯಗಳ ಸುಧಾರಣೆ ಮತ್ತು ಪ್ರಚಾರಕ್ಕೆ ಒತ್ತು ನೀಡುತ್ತಿದೆ. ಯುಇನ ಅತ್ಯಂತ ಶ್ರೀಮಂತ ಎಮಿರೇಟ್ ಆಗಿರುವ ಅಬು ದಾಬಿಯೂ ಇತ್ತೀಚೆಗೆ ತನ್ನ ಆರ್ಥಿಕ ವಲಯಗಳನ್ನು ತೈಲ ಪೂರೈಕೆಗೆ ಮಾತ್ರ ಸೀಮಿತಗೊಳಿಸದೆ, ಅದರಾಚೆಗೂ ಬೇರೆ ವಲಯಗಳಿಗೆ ತನ್ನನ್ನು ತಾನು ವಿಸ್ತರಿಸಿಕೊಳ್ಳಲು ಪ್ರಯತ್ನಪಡುತ್ತಿರುವುದು ಗಮನಾರ್ಹ. ಯುಎಇ ತನ್ನ ಯುವಜನಾಂಗಕ್ಕೆ ಪುನಶ್ಚೇತನ ನೀಡುಲು, 'UAE Vision 2021'ನಂತಾ ಅಲ್ಪಾವಧಿ ಯೋಜನೆಗಳನ್ನೂ ಜಾರಿಗೊಳಿಸಿದೆ. ಇತ್ತೀಚೆಗೆ ಸಂತೋಷ, ಸಹಿಷ್ಣುತೆ ಮತ್ತು ಭವಿಷ್ಯಕ್ಕೋಸ್ಕರ ಹೊಸ ಸಚಿವಾಲಯವನ್ನು (Ministry of Happiness, Tolerance, and the Future) ತೆರೆದಿರುವ ಯುಎಇ, ಯುವಕರು ಮತಾಂಧರಾಗುವುದನ್ನು ತಡೆದು ಅವರಲ್ಲಿನ ಪ್ರತಿಭೆಯನ್ನು ಉಪಯೋಗಿಸಿಕೊಳ್ಳಲು ಮುಂದಾಗಿದೆ. ಯುಎಇನ ಈ ಧನಾತ್ಮಕ ಬೆಳವಣಿಗೆಗಳಲ್ಲಿ ಪಾಲುದಾರನಾಗುವ ಅವಕಾಶವೊಂದು ಭಾರತಕ್ಕಿದೆ.

ಯುಎಇನಲ್ಲಿ ನೆಲೆಯಾಗಿರುವ ವಿದೇಶೀಯರಲ್ಲಿ ಅತೀ ಹೆಚ್ಚಿನ ವಲಸಿಗರು ಭಾರತೀಯರು ಎನ್ನುವ ಅಂಶವೂ ಗಮನಾರ್ಹ. ಯುಎಇನಲ್ಲಿ ಸುಮಾರು 2.6 ಮಿಲಿಯನ್ ನಷ್ಟು ಭಾರತೀಯರಿದ್ದು, ಇದು ಯುಎಇನ ಜನಸಂಖ್ಯೆಯ 30 ಪ್ರತಿಶತ! ಶಿಕ್ಷಣ, ತಂತ್ರಜ್ಞಾನ ಮತ್ತು ಇನ್ನಿತರ ವಲಯಗಳಲ್ಲಿ ಸವಾಲುಗಳನ್ನು ಎದುರಿಸಿ ಯಶಸ್ವಿಯಾದ ಭಾರತದ ಅನುಭವವನ್ನು ಬಳಸಿಕೊಳ್ಳಲು ಯುಎಇ ಎದುರುನೋಡುತ್ತಿದ್ದರೆ, ಮಧ್ಯಪ್ರಾಚ್ಯದಲ್ಲಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಂಡು ತೈಲ ಇನ್ನಿತರ ಶಕ್ತಿಮೂಲಗಳ ಕೊರತೆ ನೀಗಿಸಿಕೊಳ್ಳುವತ್ತ ಗಮನಹರಿಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಾರತ ತೈಲ ವ್ಯಾಪಾರಕ್ಕೆ ಸೀಮಿತವಾಗದೆ ಪ್ರಾದೇಶಿಕ ಸ್ಥಿರತೆ ಮತ್ತು ಚೀನಾ ಪ್ರಭಾವಕ್ಕೆ ಕಡಿವಾಣ ಹಾಕುವತ್ತಲೂ ಕಾರ್ಯಪ್ರವೃತ್ತವಾಗಲಿದೆ.  ಅಬು ದಾಬಿಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಬಾರಿಯ ಭಾರತ ಭೇಟಿ, ಯುಎಇ ಮತ್ತು ಭಾರತಗಳೆರ ಪರಸ್ಪರ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ, ಮಧ್ಯಪ್ರಾಚ್ಯ ಕುರಿತಾದ ಭಾರತದ ವಿದೇಶಾಂಗ ನೀತಿಯ ಹೆಬ್ಬಾಗಿಲಾಗಿ ಪರಿಣಮಿಸಲಿದೆ.


(This article was published in Hosa Digantha Newsapaper on 24 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ