ಶುಕ್ರವಾರ, ಫೆಬ್ರವರಿ 10, 2017

ಚೀನಾ-ಪಾಕ್ ಸರ್ವಋತು ಸ್ನೇಹದಲ್ಲೊಂದು ಅಪಸ್ವರ!

" ಪಾಕಿಸ್ತಾನ-ಚೀನಾಗಳ ಸ್ನೇಹ ಪರ್ವತಗಳಿಗಿಂತ ಎತ್ತರ, ಸಮುದ್ರಗಳಿಗಿಂತ ಆಳ, ಜೇನಿಗಿಂತ ಸಿಹಿ ಮತ್ತು ಉಕ್ಕಿಗಿಂತಲೂ ಶಕ್ತಿಶಾಲಿ" ಈ ಮಾತುಗಳನ್ನು ಪಾಕಿಸ್ತಾನದ ನಾಯಕರು ತಮ್ಮ ಭಾಷಣಗಳಲ್ಲಿ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ.  ಕಮ್ಯುನಿಸ್ಟ್ ಚೀನಾ ಕೂಡ ಪಾಕಿಸ್ತಾನಕ್ಕೆ ಅತ್ಯಾಪ್ತ ರಾಷ್ಟ್ರದ ಸ್ಥಾನ ನೀಡಿ ಪೋಷಿಸಿಕೊಂಡು ಬಂದಿದೆ. ಇಂಥದ್ದೊಂದು ಸ್ನೇಹಕ್ಕೆ ಈ ಎರಡೂ ರಾಷ್ಟ್ರಗಳ ಭಾರತ ದ್ವೇಷೀ ಮನೋಭಾವವೂ ಒಂದಷ್ಟು ಕೊಡುಗೆ ನೀಡಿದೆ. ಭಾರತ ಜಾಗತಿಕ ರಾಜಕೀಯದಲ್ಲಿಡುತ್ತಿರುವ ಆತ್ಮವಿಶ್ವಾಸದ ಹೆಜ್ಜೆಗಳಿಂದಾಗಿ ಪಾಕಿಸ್ತಾನ ಮೈಪರಚಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಚೀನಾ ಆಕ್ರಮಣಶೀಲತೆಗೆ ತಡೆಯಾಗಿ ನಿಲ್ಲುವ ಪ್ರಭಾವಿ ಶಕ್ತಿಯೊಂದು ತನ್ನ ಮಗ್ಗುಲಲ್ಲೇ ಬೆಳೆಯುತ್ತಿರುವುದು ಚೀನಿ ಕಮ್ಯುನಿಸ್ಟ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಚೀನಾ ತನ್ನ ಕೀಳರಿಮೆಯನ್ನು ಕಡಿಮೆ ಮಾಡಿಕೊಳ್ಳಲು ಭಾರತದ ವಿರುದ್ಧ ಪಾಕಿಸ್ತಾನವನ್ನು ಛೂ ಬಿಡುತ್ತಿರುವುದು ಇವತ್ತಿಗೆ ಗುಟ್ಟಾಗಿ ಉಳಿದಿಲ್ಲ. ಪಾಕಿಸ್ತಾನ ಭಾರತದ ವಿರುದ್ಧ ಮಾಡಿದ ಎಲ್ಲಾ ಮಸಲತ್ತುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚೀನಾ ಕೈವಾಡ ಇದ್ದೇ ಇತ್ತು. ಕಾರಣಗಳೇನೆ ಇರಲಿ ಚೀನಾ ಮತ್ತು ಪಾಕಿಸ್ತಾನಗಳ ನಡುವೆ ವಿಚಿತ್ರ ಎನಿಸಿದರೂ ಸರ್ವಋತು ಸ್ನೇಹ ಬೆಳೆದಿರುವುದಂತೂ ನಿಜ!

ಈ ಎರಡು ರಾಷ್ಟ್ರಗಳ ಸ್ನೇಹದ ಕುರುಹಾಗಿ ಚೀನಾ ನೇತೃತ್ವದಲ್ಲಿ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ'ಯೊಂದು ( China­Pakistan Economic Corridor-CPEC) ಜಾರಿಯಲ್ಲಿದೆ. ಈ ಯೋಜನೆಯೊಂದಿಗೆ ಪಾಕಿಸ್ತಾನ ಮತ್ತು ಚೀನಾಗಳ ತಮ್ಮ ಸರ್ವಋತು ಗೆಳೆತನದ ಇತಿಮಿತಿಗಳು ಎರಡೂ ದೇಶಗಳಿಗೆ ಅರಿವಾಗತೊಡಗಿದೆ. ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ರಾಜತಾಂತ್ರಿಕ ಮತ್ತು ಮಿಲಿಟರಿ ವಲಯದಲ್ಲಿ ಯಶಸ್ಸು ಕಂಡಿತ್ತಾದರೂ, ಸಾರ್ವಜನಿಕ ವಲಯದಲ್ಲಿ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್' ಪಾಕಿಸ್ತಾನದೊಳಗಡೆ ಅನೇಕ ಬಿಕ್ಕಟ್ಟುಗಳಿಗೆ ಸಾಕ್ಷಿಯಾಗಿದೆ. ಪಾಕಿಸ್ತಾನದಲ್ಲಿ ಚೀನಾಗಿಂತ ಭಿನ್ನ ರಾಜಕೀಯ ವ್ಯವಸ್ಥೆ, ವಿಭಿನ್ನ ಸಾಂಸ್ಕೃತಿಕ ಅಸ್ಮಿತೆಗಳಿರುವುದು ಮತ್ತು ಮುಖ್ಯವಾಗಿ ಈ ಎರಡು ರಾಷ್ಟ್ರಗಳ ಸಂಬಂಧಗಳ ಮೇಲೆ ಇದು ಬೀರುವ ಪರಿಣಾಮಗಳು ಚೀನಾಗೆ ಅರಿವಾಗಿದ್ದು ಈ ಹೊಸ ಯೋಜನೆ ಕಾರ್ಯರೂಪಕ್ಕಿಳಿದಾಗಲೇ! ಎರಡು ದೇಶಗಳ ರಾಜತಂತ್ರಜ್ಞರು ಮತ್ತು ಮಿಲಿಟರಿಗಳ ನಡುವಿನ ಬಾಂಧವ್ಯ ಮಾತ್ರವಲ್ಲದೇ ಇಂಥಾ ಯೋಜನೆಗಳ ಅನುಷ್ಠಾನಗಳಿಗೆ ಆ ದೇಶಗಳ ಸಾಂಸ್ಕೃತಿಕ ಮತ್ತು ಸಾರ್ವಜನಿಕ ವಲಯಗಳ ಪರಿಚಯವೂ ಅತ್ಯವಶ್ಯಕ. ಈಗಾಗಲೇ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್  ಗೆ ಪಾಕಿಸ್ತಾನದೊಳಗಡೆ ಚೀನಾಗೆ ಭದ್ರತೆಯ ಕುರಿತಾಗಿ ಅನುಮಾನಗಳಿವೆ. ಇದರ ಮೇಲೆ ಪಾಕಿಸ್ತಾನದ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಈ ಮಲ್ಟಿ-ಬಿಲಿಯನ್ ಯೋಜನೆಯನ್ನು ನಿರ್ವಹಿಸಿದ ರೀತಿಯಲ್ಲಿ ಚೀನಾಗೆ ಅಸಮಧಾನವಿರುವುದು ಈ ಎರಡು ದೇಶಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸಿದೆ. ಈ ಬಿನ್ನಾಭಿಪ್ರಾಯದಿಂದ ಭಾರತವೂ ಸೇರಿದಂತೆ ವಿಶ್ವದ ಹಲವು ಶಕ್ತಿಗಳಿಗೆ ಪರೋಕ್ಷವಾಗಿ ಲಾಭವೇ ಆಗಲಿದೆ ಎನ್ನುವುದು ವಿಶೇಷ!

ಚೀನಾದಲ್ಲಿ ಏಕ ಪಕ್ಷ ವ್ಯವಸ್ಥೆಯಿದ್ದು, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ಕೇಂದ್ರೀಕೃತವಾಗಿದೆ. ಚೀನಾದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೆಳಹಂತದ ಪ್ರಾಂತೀಯ ಸರಕಾರಗಳಿಗೆ, ಕೇಂದ್ರದ ನಿರ್ಧಾರಗಳನ್ನು ತಮ್ಮ ವಿವೇಚನೆಗೆ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ನಿರ್ವಹಿಸುವ ಅಧಿಕಾರವಿದ್ದರೂ, ರಾಷ್ಟ್ರೀಯ ಹಿತಾಸಕ್ತಿ ಅಥವಾ ವಿದೇಶಾಂಗ ನೀತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರಗಳು ಅಂತಿಮವಾಗಿದ್ದು, ಚೀನಾದ ಕೇಂದ್ರ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಪ್ರಾಂತೀಯ ಸರಕಾರಗಳ ಸಂಕೀರ್ಣ ವ್ಯವಸ್ಥೆಯಿಂದ ಮಾಧ್ಯಮ ಕ್ಷೇತ್ರದವರೆಗೆ ಚೀನಾದ ಎಲ್ಲಾ ಸಂಸ್ಥೆಗಳು ಕೇಂದ್ರ ಸರಕಾರದ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತವೆ ಮತ್ತು ಚಾಚೂ ತಪ್ಪದೆ ಪಾಲಿಸುತ್ತವೆ. Belt and Road Initiative (BRI)ನಂಥಾ ಹಿಂದಿನ ಕೆಲ ಯೋಜನೆಗಳಲ್ಲಿ ಚೀನಾದ ತಳಹಂತದ ರಾಜಕೀಯ ವ್ಯವಸ್ಥೆ ಮತ್ತು ಮಾಧ್ಯಮಗಳು ಕಾರ್ಯನಿರ್ವಹಿಸಿದ ರೀತಿ, ಚೀನಾದ ಕೇಂದ್ರೀಕೃತ ನಿರ್ಧಾರಗಳ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಒಟ್ಟಿನಲ್ಲಿ ಚೀನಾದ ಕೇಂದ್ರ ಕಮ್ಯುನಿಸ್ಟ್ ಪಕ್ಷದ ನಿರ್ಧಾರಗಳು ಚೀನಾದ ಮೂಲೆ ಮೂಲೆಯಲ್ಲೂ ಪ್ರಶ್ನಾತೀತವಾಗಿ ಪಾಲಿಸಲ್ಪಡುತ್ತವೆ.

Image may contain: 2 peopleಚೀನಾ ವ್ಯವಸ್ಥೆಗೆ ತದ್ವಿರುದ್ಧವಾಗಿ, ಪಾಕಿಸ್ತಾನ ಕಳೆದ ಹತ್ತು ವರ್ಷಗಳ ಪ್ರಜಾಪ್ರಭುತ್ವ, ವಿಕೇಂದ್ರೀಕರಣಕ್ಕೆ ಪ್ರಾಮುಖ್ಯತೆ ನೀಡಿದೆ. ಪಾಕಿಸ್ತಾನದ ಸಂವಿಧಾನಕ್ಕೆ ಹದಿನೆಂಟನೇ ತಿದ್ದುಪಡಿಯಾದ ಮೇಲಂತೂ ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆ ಇನ್ನಷ್ಟು ಗಟ್ಟಿಯಾಗಿದೆ. ಕೇಂದ್ರ ಮತ್ತು ಪ್ರಾಂತೀಯ ಸರಕಾರಗಳೆರಡೂ ಜನರಿಂದಲೇ ಆಯ್ಕೆಯಾಗಿದ್ದು ಕೇಂದ್ರ ಏಕಪಕ್ಷೀಯವಾಗಿ ವರ್ತಿಸುವಂತಿಲ್ಲ. ಪ್ರಾಂತೀಯ ಸರಕಾರಗಳಿಗೆ ಸಂವಿಧಾನಬದ್ಧವಾದ ಅಧಿಕಾರಗಳಿರುವುದರ ಜೊತೆ, ಆಳ್ವಿಕೆಗೆ ಒಳಪಡುವ ವಿಷಯಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಇದಷ್ಟೇ ಅಲ್ಲದೆ, ಭಿನ್ನಾಭಿಪ್ರಾಯಗಳು ಉದ್ಭವವಾದಾಗ ಕೇಂದ್ರ ಸರಕಾರದ ನೀತಿಗಳನ್ನು ಸಾರಾಸಗಟಾಗಿ ವಿರೋಧಿಸುವ ಅಧಿಕಾರ ಪ್ರಾಂತೀಯ ಸರಕಾರಗಳಿಗಿದೆ. ಪಾಕಿಸ್ತಾನದ ಪ್ರಾಂತ್ಯಗಳ ನಡುವೆ ಇರುವ ಜನಾಂಗೀಯ ವ್ಯತ್ಯಾಸಗಳು ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಇನ್ನು ಪಾಕಿಸ್ತಾನದ ಮಾಧ್ಯಮಗಳು, ಚೀನಾ ಮಾಧ್ಯಮ ವ್ಯವಸ್ಥೆಯಂತಿಲ್ಲದೆ, ತಮ್ಮ ಸರಕಾರವನ್ನು ಮತ್ತದರ ನಿರ್ಧಾರಗಳನ್ನು ಖಂಡಿಸುವಷ್ಟು ಮುಕ್ತವಾಗಿವೆ. ಮುಖ್ಯವಾದ ಮತ್ತು ಅತ್ಯಂತ ಸೂಕ್ಷ್ಮ ವಿಚಾರಗಳಲ್ಲೂ ಪಾಕಿಸ್ತಾನ ಕೇಂದ್ರ ಸರಕಾರದ ವಿರುದ್ಧ ಅಸಮ್ಮತಿಯ ಧ್ವನಿಗಳು ಕೇಳಿಬರುವುದರಿಂದ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಗೂ ಈಗಾಗಲೇ ಅಪಸ್ವರಗಳೆದ್ದಿವೆ. ಇತ್ತೀಚೆಗಂತೂ ಪಾಕಿಸ್ತಾನದ ಪ್ರಾಂತ್ಯಗಳಲ್ಲಿ ಪ್ರಾದೇಶಿಕತೆಯ ಕೂಗು ಹೆಚ್ಚಾಗುತ್ತಿರುವುದು, ಪಾಕಿಸ್ತಾನದ ಕೇಂದ್ರ ಸರಕಾರಕ್ಕೆ ಪರ್ಯಾಯ ಶಕ್ತಿ ಕೇಂದ್ರಗಳು ಪ್ರಾಂತ್ಯಗಳಲ್ಲೂ ಹುಟ್ಟಿಕೊಳ್ಳುತ್ತಿವೆ. ಈ ಎಲ್ಲಾ ಗಡಿಬಿಡಿಗಳ ಮಧ್ಯೆ 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆ' ಚೀನಾಗೆ ಅತ್ತ ನುಂಗಲೂ ಆಗದೆ, ಇತ್ತ ಉಗುಳಲೂ ಮನಸ್ಸಿಲ್ಲದ ಬಿಸಿತುಪ್ಪದಂತಾಗಿದೆ.

ಪಾಕಿಸ್ತಾನದ ರಾಜಕಾರಣಿಗಳು ಈ ವಿಷಯವಾಗಿ ವಿಭಿನ್ನ ನಿಲುವುಗಳನ್ನು ತಳೆದಿದ್ದು, ಅವರದ್ದೇ ಆದ ಲೆಕ್ಕಾಚಾರದೊಂದಿಗೆ ಚೀನಾದ ಹೊಸ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮಾಧ್ಯಮಗಳು, ಈ ಯೋಜನೆಯ ಅಪಾರದರ್ಶಕತೆಯ ಕುರಿತು ಅಸಮಧಾನ ವ್ಯಕ್ತಪಡಿಸಿ, ಆರ್ಥಿಕ ಮತ್ತು ಪರಿಸರದ ಮೇಲಿನ ಪ್ರಭಾವಗಳ ಬಗ್ಗೆ ಪ್ರಶ್ನೆ ಮಾಡುತ್ತಿವೆ. 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್', ಪಾಕಿಸ್ತಾನಕ್ಕೆ ಇನ್ನೊಂದು ' ಈಸ್ಟ್ ಇಂಡಿಯಾ ಕಂಪೆನಿ' ಯಾಗಿ, ಪಾಕಿಸ್ತಾನದ ಸಾರ್ವಭೌಮತ್ವ ಕಸಿದುಕೊಂಡು ಚೀನಾದ ಪರೋಕ್ಷ ವಸಾಹತುವನ್ನಾಗಿ ಪರಿವರ್ತಿಸಲಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಯೋಜನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಇತರ ಪ್ರಾಂತ್ಯಗಳಿಗೆ ಮೋಸ ಮಾಡಲಿದೆ ಎಂಬ ಪ್ರಾದೇಶಿಕತೆಯ ಧ್ವನಿಯೂ ಚೀನಾ ಯೋಜನೆಗೆ ದೊಡ್ಡ ತಲೆನೋವು. ಪ್ರಜಾಪ್ರಭುತ್ವ ಮತ್ತು ಸಂಯುಕ್ತ ವ್ಯವಸ್ಥೆಯ ಸಂಕೀರ್ಣತೆಗಳು ಚೀನಾದ ಏಕಿಕೃತ ವ್ಯವಸ್ಥೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಸತ್ಯ ಚೀನಾದ ಯೋಜನೆಯನ್ನು ದಿಕ್ಕೆಡಿಸಿದೆ. ಚೀನಾ ನಾಯಕರು ಪಾಕಿಸ್ತಾನಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನಗಳು ಜಾರಿಯಲ್ಲಿದ್ದರೂ, ಫಲಿತಾಂಶ ಅಷ್ಟಕಷ್ಟೇ ಎನ್ನುವಂತಿದೆ.

ರಾಜತಾಂತ್ರಿಕತೆಯ ವಿಷಯಕ್ಕೆ ಬಂದಾಗ ಚೀನಾ ಎಂಥಾ ಬಿಕ್ಕಟ್ಟಿನ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿರುವುದು ದಶಕಗಳಿಂದ ನಡೆದುಬಂದ ರೀತಿ.  ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಿಂದಾಗಿ ಪಾಕಿಸ್ತಾನದ ವಿಚಾರದಲ್ಲಿ ಚೀನಾ ತಾಳ್ಮೆ ಕಳೆದುಕೊಳ್ಳುತ್ತಿದೆ ಮತ್ತು ಚೀನಾ ತನ್ನ ಹತಾಶೆಯನ್ನು ಗುಟ್ಟಾಗಿಡುವ ಪ್ರಯತ್ನವನ್ನೂ ಮಾಡಿಲ್ಲ. ಪಾಕಿಸ್ತಾನದಲ್ಲಿ ತಮ್ಮ ಯೋಜನೆಯ ವಿರುದ್ಧ ಧ್ವನಿ ಎತ್ತಿದವರನ್ನು ' ಪಾಕಿಸ್ತಾನದ ಶತ್ರುಗಳು', 'ಅಪಪ್ರಚಾರಕರು' ಎಂದು ಜರೆಯುವ ಮೂಲಕ ವಿರೋಧಿಗಳನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಚೀನಾ ಕಮ್ಯುನಿಸ್ಟ್ ವ್ಯವಸ್ಥೆ! ಇವಿಷ್ಟು ಸಮಸ್ಯೆಗಳ ಮಧ್ಯೆ ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳ ಹುಚ್ಚು ಆಲೋಚನೆಗಳು ತಮ್ಮ ಯೋಜನೆಗೆ ಕೊಡಲಿ ಪೆಟ್ಟಾಗಬಹುದು ಎಂಬ ಅಭದ್ರತೆಯ ಭಾವನೆ ಚೀನೀಯರಲ್ಲಿದೆ. ಪಾಕಿಸ್ಥಾನದ ರಾಜಕೀಯ ವ್ಯವಸ್ಥೆಯ ಅಸ್ಥಿರತೆ ಮತ್ತು ಯಾವ ಕ್ಷಣದಲ್ಲಾದರೂ ಬದಲಾಗಬಲ್ಲ ವಿಚಿತ್ರ ಲಕ್ಷಣ, ಇನ್ನಿತರ ಹತ್ತು ಹಲವು ಅವ್ಯವಸ್ಥೆಗಳ ನೆರಳಲ್ಲಿವೆ ಚೀನಾ ಪ್ರಯತ್ನಗಳು. ಈ ಎರಡು ರಾಷ್ಟ್ರಗಳ ಸ್ನೇಹದ ಉದ್ದೇಶ ವಿಶ್ವ ಶಾಂತಿಗೆ ಧಕ್ಕೆ ತರುವುದೇ ಆಗಿರುವುದರಿಂದ, 'ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್' ಕಾರಣಕ್ಕಾಗಿ ಈ ದುಷ್ಟ ಕೂಟದಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿ, ಈ ದೇಶಗಳು ದೂರವಾದರೂ ಸಂಕಟಪಡುವವರ್ಯಾರೂ ಇಲ್ಲ ಎನ್ನುವುದು ಖಂಡಿತ.


(This article was published in Vishwavani Newsapaper on 19 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ