ಶುಕ್ರವಾರ, ಜನವರಿ 6, 2017

ಗಣತಂತ್ರದತ್ತ ಸಾಗುತ್ತಿದೆ ಆಸ್ಟ್ರೇಲಿಯಾ ರಾಜಕೀಯ ವ್ಯವಸ್ಥೆ

ಎಲ್ಲೋ ಇರುವ ರಾಷ್ಟ್ರವೊಂದರ ರಾಣಿ ತಮ್ಮ ರಾಜಕೀಯ ವ್ಯವಸ್ಥೆಯ ಮುಖ್ಯಸ್ಥರಾಗಿರುವುದು ಆಸ್ಟ್ರೇಲಿಯನ್ನರಿಗೆ ಅಹಿತ ಎನಿಸುತ್ತಿದೆ. ದಿನೇ ದಿನೇ ಆಸ್ಟ್ರೇಲಿಯಾ ಬ್ರಿಟನ್ ರಾಜಪ್ರಭುತ್ವವನ್ನು ಮೂಲೆಗೆಸೆದು ಗಣರಾಜ್ಯವಾಗುತ್ತ ಹೆಚ್ಚು ಒಲವು ತೋರಿಸುತ್ತಿದೆ.
-  ಕೀರ್ತಿರಾಜ್


ಶತಮಾನಗಳವರೆಗೆ ತನ್ನ ಪ್ರಪಂಚದ ಮೂಲೆ ಮೂಲೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ರಾಷ್ಟ್ರ ಬ್ರಿಟನ್. ಸೂರ್ಯ ಮುಳುಗದ ಸಾಮ್ರಾಜ್ಯವೂ ಕೊನೆಗೊಂದು ಬಾರಿ ತನ್ನ ಸಾಮ್ರಾಜ್ಯಶಾಹಿ ಧೋರಣೆಯನ್ನು ಕೈಬಿಟ್ಟು, ವಸಾಹತುಗಳಿಗೆಲ್ಲಾ ಮುಕ್ತಿ ನೀಡಬೇಕಾಗುತ್ತದೆ. ಬಹಳಷ್ಟು ವರ್ಷಗಳ ಕಾಲ ಬ್ರಿಟನ್ ರಾಜ/ರಾಣಿಯ ಹೆಸರಿನಲ್ಲಿ ಆಳಲ್ಪಟ್ಟ ಬೇರೆ ಬೇರೆ ವಸಾಹತುಗಳು ಸ್ವತಂತ್ರ ದೇಶಗಳಾಗಿ ಉದ್ಭವಿಸಿದಾಗ, ಬ್ರಿಟನ್ ನ ಹಳೆಯ ವಸಾಹತುಗಳಿಗಾಗಿ ಒಂದು ಸಂಘದ ಅವಶ್ಯಕತೆಯ ಬಗೆಗೆ ಚರ್ಚೆಗಳಾಗುತ್ತವೆ. 1884ರಲ್ಲಿ ಲಾರ್ಡ್ ರೋಸ್ಬೆರಿ ಎಂಬ ಬ್ರಿಟಿಷ್ ರಾಜಕಾರಣಿ ಬದಲಾಗುತ್ತಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು "ಕಾಮನ್ ವೆಲ್ತ್ ರಾಷ್ಟ್ರಗಳು" (Commonwealth of Nations) ಎಂಬ ಹೆಸರಿನಿಂದ ಗುರುತಿಸುತ್ತಾರೆ. ಮುಂದೆ 1931ರ ವೆಸ್ಟ್ ಮಿನಿಸ್ಟರ್ ಕಾಯಿದೆಯ ಅಡಿಯಲ್ಲಿ 'ಬ್ರಿಟಿಷ್ ಕಾಮನ್ ವೆಲ್ತ್ ರಾಷ್ಟ್ರಗಳು' ಎಂಬ ಅಧಿಕೃತ ಸಂಸ್ಥೆಯೊಂದು ಸ್ಥಾಪಿಸಲ್ಪಟ್ಟಿತ್ತು. 1946ರಲ್ಲಿ ಸಂಸ್ಥೆಯ ಹೆಸರಲ್ಲಿ 'ಬ್ರಿಟಿಷ್' ಎಂಬ ಪದವನ್ನು ಕೈ ಬಿಟ್ಟು, 'ಕಾಮನ್ ವೆಲ್ತ್ ರಾಷ್ಟ್ರಗಳು' ಎಂದಾಗುತ್ತದೆ. ಬ್ರಿಟನ್, ಕೆನಡ, ಐರ್ಲ್ಯಾಂಡ್, ನ್ಯೂಫೌಂಡ್ ಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದ ಒಕ್ಕೂಟಗಳು ಈ ಸಂಘದ ಆರಂಭಿಕ ಸದಸ್ಯತ್ವ ಪಡೆದುಕೊಂಡವು. ಇವುಗಳಲ್ಲಿ ಐರ್ಲ್ಯಾಂಡ್ 1949ರಲ್ಲಿ ಕಾಮನ್ ವೆಲ್ತ್ ಬಿಟ್ಟುಹೋದರೆ, ನ್ಯೂಫೌಂಡ್ ಲ್ಯಾಂಡ್ ಕೆನಡದ ಭಾಗವಾಯ್ತು. ದಕ್ಷಿಣ ಆಫ್ರಿಕಾ 1961ರಲ್ಲಿ ಕಾಮನ್ ವೆಲ್ತ್ ನಿಂದ ಹೊರಬಿದ್ದು, 1994 ರಲ್ಲಿ ಮತ್ತೆ ಕಾಮನ್ ವೆಲ್ತ್ ನ ಸದಸ್ಯತ್ವ ಪಡೆದುಕೊಂಡಿತ್ತು.

ಆಸ್ಟ್ರೇಲಿಯಾ 1942ರಲ್ಲಿ ಮತ್ತು ನ್ಯೂಜಿಲೆಂಡ್ 1942ರಲ್ಲಿ ಸದಸ್ಯರಾದರೆ, ಭಾರತದ ಸ್ವಾತಂತ್ರ್ಯದೊಂದಿಗೆ ಭಾರತವೂ ಕಾಮನ್ ವೆಲ್ತ್ ನ ಭಾಗವಾಗಿರಲು ಬಯಸಿತ್ತು. ಕಾಮನ್ ವೆಲ್ತ್ ಸದಸ್ಯರೆಲ್ಲರೂ ಬ್ರಿಟನ್ ನ ರಾಜ ಅಥವಾ ರಾಣಿಯನ್ನು ತಮ್ಮ ರಾಷ್ಟ್ರದ ಮುಖ್ಯಸ್ಥ ಎಂದು ಒಪ್ಪಿಕೊಳ್ಳಬೇಕಾಗಿತ್ತು. ಆದರೆ ಭಾರತ ಬ್ರಿಟನ್ ನ ರಾಜ/ರಾಣಿಯನ್ನು ರಾಷ್ಟ್ರದ ಮುಖ್ಯಸ್ಥರನ್ನಾಗಿ ಒಪ್ಪಿಕೊಳ್ಳದೆ, ಕಾಮನ್ ವೆಲ್ತ್ ಸದಸ್ಯತ್ವ ಪಡೆದುಕೊಂಡಿತ್ತು. ಹೀಗೆ ಕಾಮನ್ ವೆಲ್ತ್ ಸದಸ್ಯನಾದರೂ ಗಣರಾಜ್ಯವಾಗಿಯೇ ಉಳಿದುಕೊಂಡಿದ್ದು ಭಾರತದ ವಿಶೇಷತೆ. ಇದೇ ವಿಷಯವಾಗಿ 1949ರ ಲಂಡನ್ ಘೋಷಣೆಯೊಂದಿಗೆ, ಬ್ರಿಟನ್ ರಾಜನನ್ನು ತಮ್ಮ ರಾಷ್ಟ್ರದ ನಾಯಕನನ್ನಾಗಿ ಒಪ್ಪಿಕೊಳ್ಳಲೇ ಬೇಕು ಎಂಬ ಷರತ್ತನ್ನು ಸಡಿಲಿಸಿ ಇದನ್ನು ಆಯಾ ರಾಷ್ಟ್ರಗಳ ನಿರ್ಧಾರಕ್ಕೆ ಬಿಡಲಾಯಿತು, ಬ್ರಿಟನ್ ರಾಜ/ರಾಣಿ ಕಾಮನ್ ವೆಲ್ತ್ ನಾಯಕರು ಎಂದಷ್ಟೇ ಗುರುತಿಸಲಾಯಿತು. ಈ ಹೊಸ ಬದಲಾವಣೆಯೊಂದಿಗೆ ಕಾಮನ್ ವೆಲ್ತ್ ಸದಸ್ಯತ್ವದಲ್ಲಿ ಧನಾತ್ಮಕ ಬದಲಾವಣೆಗಳಾಯ್ತು. ಇವತ್ತಿಗೆ ಕಾಮನ್ ವೆಲ್ತ್ ನಲ್ಲಿ 54 ಸದಸ್ಯ ರಾಷ್ಟ್ರಗಳಿದ್ದು, ಇದರಲ್ಲಿ 33 ಗಣರಾಜ್ಯಗಳು, ಐದು ದೇಶೀಯ ರಾಜಪ್ರಭುತ್ವಗಳಾದರೆ, ಇನ್ನುಳಿದ 16 ರಾಷ್ಟ್ರಗಳು ಬ್ರಿಟನ್ ರಾಜಪ್ರಭುತ್ವವನ್ನು ಒಪ್ಪಿಕೊಂಡು ಸಾಂವಿಧಾನಿಕ ರಾಜಪ್ರಭುತ್ವಗಳಾಗಿವೆ. (constitutional monarchy)

Image may contain: 1 person, textಆಸ್ಟ್ರೇಲಿಯಾ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರ ಮಾತ್ರವಲ್ಲದೆ, ಬ್ರಿಟನ್ ರಾಜ/ ರಾಣಿಯನ್ನು ತಮ್ಮ ರಾಷ್ಟ್ರದ ಮುಖ್ಯಸ್ಥರೆಂದು ಒಪ್ಪಿಕೊಂಡ ಸಾಂವಿಧಾನಿಕ ರಾಜಪ್ರಭುತ್ವ ರಾಜಕೀಯ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆಸ್ಟೇಲಿಯಾದಲ್ಲಿ ಭಾರತದಂತೆ ಚುನಾಯಿತ ರಾಷ್ಟ್ರಾಧ್ಯಕ್ಷರಿಲ್ಲ, ಬ್ರುನೈ ದೇಶದಂತೆ ತಮ್ಮದೇ ಆದ ರಾಜವಂಶವೂ ರಾಷ್ಟ್ರದ ಮುಖ್ಯಸ್ಥರಲ್ಲ, ಈ ಗೌರವದ ಹುದ್ದೆಯನ್ನು ಬ್ರಿಟನ್ ರಾಜಪ್ರಭುತ್ವಕ್ಕೆ ಮೀಸಲಿಟ್ಟಿದ್ದಾರೆ ಆಸ್ಟ್ರೇಲಿಯಾ ಕೆನಡ ಮತ್ತಿತರ ರಾಷ್ಟ್ರಗಳು. ಆದರೆ ಆಸ್ಟ್ರೇಲಿಯಾ ಈ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಿ ಗಣರಾಜ್ಯವಾಗುವತ್ತ ಸ್ಪಷ್ಟ ಹೆಜ್ಜೆಗಳನ್ನಿಡುತ್ತಿದೆ. ಕಾಮನ್ ವೆಲ್ತ್ ನ ಹಳೆಯ ಮತ್ತು ಬ್ರಿಟನ್ ರಾಜಪ್ರಭುತ್ವದ ವಿಶ್ವಾಸಿ ಸದಸ್ಯರಾಷ್ಟ್ರವೊಂದು ತನ್ನ ಭವಿಷ್ಯತ್ತನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಳ್ಳುವತ್ತ ಉತ್ಸುಕವಾಗಿದೆ. ಬ್ರಿಟನ್ ನ ರಾಣಿಯಾಗಿರುವ ಎರಡನೇ ಎಲಿಜಬೆತ್ ರನ್ನು ಬ್ರಿಟನ್ ನಲ್ಲಿ ಮಾತ್ರವಲ್ಲದೆ, ಕೆನಡ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಿಗೂ ರಾಣಿಯೆಂದು ಪರಿಗಣಿಸಲಾಗುತ್ತದೆ. ಆದರೆ ಆಸ್ಟ್ರೇಲಿಯಾ ಮಾತ್ರ ಈ ರಾಜಕೀಯ ಸ್ಥಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಲೇ ಇದೆ. ಎಲ್ಲೋ ಇರುವ ರಾಷ್ಟ್ರವೊಂದರ ರಾಣಿ ತಮ್ಮ ರಾಜಕೀಯ ವ್ಯವಸ್ಥೆಯ ಮುಖ್ಯಸ್ಥರಾಗಿರುವುದು ಆಸ್ಟ್ರೇಲಿಯನ್ನರಿಗೆ ಅಹಿತ ಎನಿಸುತ್ತಿದೆ. ದಿನೇ ದಿನೇ ಆಸ್ಟ್ರೇಲಿಯಾ ಬ್ರಿಟನ್ ರಾಜಪ್ರಭುತ್ವವನ್ನು ಮೂಲೆಗೆಸೆದು ಗಣರಾಜ್ಯವಾಗುತ್ತ ಹೆಚ್ಚು ಒಲವು ತೋರಿಸುತ್ತಿದೆ. ಇತ್ತೀಚೆಗೆ ಬಿಬಿಸಿಯಲ್ಲಿ ಪ್ರಸಾರವಾದ ಸುದ್ಧಿಯೊಂದರಲ್ಲಿ ಆಸ್ಟ್ರೇಲಿಯಾದ ರಿಪಬ್ಲಿಕನ್ ಪರ ಚಳುವಳಿ ಪ್ರಖರವಾಗಿದ್ದು, 150ರಲ್ಲಿ 81 ಸಂಸದರು ಮತ್ತು 76ರಲ್ಲಿ 40 ಸೆನೆಟರ್ ಗಳು ಆಸ್ಟ್ರೇಲಿಯಾ ಗಣರಾಜ್ಯವಾಗುವತ್ತ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ ಬುಲ್ ರ ಎಲ್.ಪಿ.ಎ ಪಕ್ಷ ಸತತವಾಗಿ ರಾಜಪ್ರಭುತ್ವವನ್ನು ಬೆಂಬಲಿಸಿಕೊಂಡು ಪಕ್ಷವೇ ಆದರೂ ಟರ್ನ್ ಬುಲ್ ಸ್ವತಃ ಓರ್ವ ಕಟ್ಟಾ ಗಣರಾಜ್ಯದ ಬೆಂಬಲಿಗ! ಇಷ್ಟೇ ಅಲ್ಲದೇ ಆಸ್ಟ್ರೇಲಿಯಾದ ಹಲವು ಸಾಂಪ್ರದಾಯಿಕ ರಾಜಕಾರಣಿಗಳು ಇದೀಗ ಗಣರಾಜ್ಯದತ್ತ ಒಲವು ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಪ್ರಮುಖ ರಾಜಕೀಯ ಪಕ್ಷಗಳಾದ ಲೇಬರ್ ಮತ್ತು ಗ್ರೀನ್ ಪಕ್ಷಗಳೂ ಗಣರಾಜ್ಯದ ಪರವಾಗಿಯೇ ಇವೆ.

ಈಗಿನ ಪ್ರಧಾನಿ ಟರ್ನ್ ಬುಲ್ ಹಿಂದೊಂದು ಬಾರಿ 1999ರಲ್ಲಿ ಗಣರಾಜ್ಯದ ಪರವಾಗಿ ಜನಮತಗಣನೆಯೊಂದನ್ನು ನಡೆಸಲು ಪ್ರಯತ್ನಿಸಿದ್ದರೂ, ಆ ಪ್ರಯತ್ನ ವಿಫಲವಾಗಿತ್ತು. ತೀರಾ ಇತ್ತೀಚೆಗೆ ತನ್ನ ಭಾಷಣವೊಂದರಲ್ಲಿ ಟರ್ನ್ ಬುಲ್ ಅವರೇ ಹೇಳಿಕೊಂಡಿರುವಂತೆ, ಗಣರಾಜ್ಯದಲ್ಲಿ ತನಗಿರುವ ಆಸಕ್ತಿಗೆ ಸ್ವದೇಶ ಪ್ರೇಮದ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ ಈಗಿನ ರಾಣಿ ಎರಡನೇ ಎಲಿಜಬೆತ್ ಅಧಿಕಾರಾವಧಿ ಮುಗಿದ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗುವುದೆಂಬ ಭರವಸೆಯನ್ನೂ ಟರ್ನ್ ಬುಲ್ ನೀಡಿದ್ದಾರೆ. ಗಣರಾಜ್ಯದ ಪರವಾಗಿರುವವರ ಧ್ವನಿಗೆ ಬಲ ನೀಡುವಂತೆ ಆಸ್ಟ್ರೇಲಿಯಾ ಮತ್ತು ಬ್ರಿಟನ್ ರಾಜತಾಂತ್ರಿಕ ಸಂಬಂಧಗಳಲ್ಲೂ ಕಾಲಾಂತರದಲ್ಲಿ ಬಿರುಕುಗಳು ಮೂಡಿವೆ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಏಷಿಯಾ-ಪೆಸಿಫಿಕ್ ಪ್ರದೇಶದಲ್ಲಿ ಜಪಾನ್ ಆಕ್ರಮಣ ತಡೆಯಲಾಗದೆ ಬ್ರಿಟನ್ ತತ್ತರಿಸಿದಾಗ, ಆಸ್ಟ್ರೇಲಿಯಾ ತನ್ನ ಭದ್ರತೆಗಾಗಿ ಬ್ರಿಟನ್ ಆಶ್ರಯಿಸುವಂತಿಲ್ಲ ಎನ್ನುವ ಸತ್ಯ ಅರಿಯತೊಡಗಿತ್ತು. ದ್ವಿತೀಯ ಮಹಾಯುದ್ಧದ ಬಳಿಕ ಸೃಷ್ಟಿಯಾದ ಹೊಸ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಅಮೆರಿಕಾ ಮತ್ತು ಸೊವಿಯೆತ್ ಗಳು ಶಕ್ತಿ ಕೇಂದ್ರಗಳಾದಾಗ ಬ್ರಿಟನ್ ಮೂಲೆಗುಂಪಾಗಿತ್ತು. ವಾಸ್ತವ ರಾಜಕಾರಣದಲ್ಲಿ ಬ್ರಿಟನ್ ಹೆಸರಿನಲ್ಲಿ ಬದುಕುವುದು ಕಷ್ಟ ಸಾಧ್ಯ ಎಂಬ ವಿಚಾರ ಆಸ್ಟ್ರೇಲಿಯಾ ಅನುಭವಕ್ಕೂ ಬಂದಿತ್ತು! ಇವೆಲ್ಲದರ ಜೊತೆಗೆ, ಚೀನಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ಬೆಳೆದ ವ್ಯಾಪಾರ ಸಂಬಂಧಗಳು ನಿಧಾನವಾಗಿ ಬ್ರಿಟನ್ ಜೊತೆಗಿನ ಬಾಂಧವ್ಯವನ್ನು ಮಸುಕುಗೊಳಿಸಿಬಿಟ್ಟವು. ಹೀಗಾಗಿ 2020ರೊಳಗೆ ಆಸ್ಟ್ರೇಲಿಯಾವನ್ನು ಗಣರಾಜ್ಯವನ್ನಾಗಿಸಲು, ಜನಮತಗಣನೆಯೊಂದರ ನಿರೀಕ್ಷೆಯಲ್ಲಿದ್ದಾರೆ ಆಸ್ಟ್ರೇಲಿಯಾದ ರಿಪಬ್ಲಿಕನ್ನರು!

ಬ್ರಿಟನ್ನಿನ ರಾಜಪ್ರಭುತ್ವವೇ ಹಿತವಾಗಿದೆ ಎನ್ನುವ ಒಂದು ಸಣ್ಣ ಗುಂಪೂ ಆಸ್ಟ್ರೇಲಿಯಾದಲ್ಲಿದೆ. ರಾಜಪ್ರಭುತ್ವವನ್ನು ಕಿತ್ತುಹಾಕಿ ಆಸ್ಟ್ರೇಲಿಯಾ ಸಾಧಿಸುವುದಾದರೂ ಏನು? ಎನ್ನುವುದು ಇವರ ಪ್ರಶ್ನೆ. ಈ ಗುಂಪಿನ ವಾದದ ಪ್ರಕಾರ, ಭಾರತಕ್ಕಾದರೂ ಬ್ರಿಟಿಷರ ದಬ್ಬಾಳಿಕೆಯನ್ನು ಸಂಪೂರ್ಣ ಮಾಸುವಂತೆ ಮಾಡಲು ಗಣರಾಜ್ಯವೊಂದರ ಅವಶ್ಯಕತೆಯಿತ್ತು. ಆದರೆ ಆಸ್ಟ್ರೇಲಿಯಾಗೆ ಬ್ರಿಟನ್ ಜೊತೆಗೆ ಈ ರೀತಿಯ ಯಾವುದೇ ಕಹಿ ಅನುಭವಗಳಿಲ್ಲ ಮತ್ತು ರಾಜಪ್ರಭುತ್ವದ ಜೊತೆಗೂ ತಕರಾರುಗಳಿಲ್ಲದೇ ಇರುವುದರಿಂದ ಗಣರಾಜ್ಯದ ಅವಶ್ಯಕತೆ ಇಲ್ಲ. ರಾಜಪ್ರಭುತ್ವವನ್ನು ಬೆಂಬಲಿಸುವ ಗುಂಪಿನ ಮುಖ್ಯಸ್ಥ ಫಿಲಿಪ್ ಬೆನ್ವೆಲ್ ಹೇಳುವಂತೆ,  "ಆಸ್ಟ್ರೇಲಿಯಾದ ಯುವಜನತೆಗೆ ಗಣರಾಜ್ಯ ಬೇಕಾಗಿಲ್ಲ. 20ರಿಂದ 30 ವರ್ಷದೊಳಗಿನ ಯುವಕರಿಗೆ ರಾಜಕಾರಣಿಗಳ ಬಗ್ಗೆ ವಿಶ್ವಾಸವಿಲ್ಲ. ರಾಜಕಾರಣಿಗಳಿಂದ ಸ್ಥಾಪಿಸಲ್ಪಡುವ ಗಣರಾಜ್ಯದ ಬಗೆಗೂ ಅವರಿಗೆ ವಿಶ್ವಾಸವಿಲ್ಲ." ಈ ರೀತಿಯಾಗಿ ಬ್ರಿಟನ್ ರಾಜಪ್ರಭುತ್ವದ ಪರಂಪರೆಯನ್ನು ಉಳಿಸುವತ್ತ ಒಂದು ಸಣ್ಣ ಪ್ರಯತ್ನ ಮಾಡುತ್ತಿದೆ ಈ ಗುಂಪು. ಪರ ವಿರೋಧ ಚರ್ಚೆಗಳೇನೇ ಇದ್ದರೂ ಆಸ್ಟ್ರೇಲಿಯಾದ ಸದ್ಯದ ರಾಜಕೀಯ ಪರಿಸ್ಥಿತಿ ರಾಜಪ್ರಭುತ್ವವನ್ನು ಬದಿಗೊತ್ತಿ, ಗಣರಾಜ್ಯವೊಂದನ್ನು ಸ್ಥಾಪಿಸುವತ್ತ ಉತ್ಸುಕವಾಗಿದೆ. ಪ್ರಧಾನಿ ಟರ್ನ್ ಬುಲ್ ಭರವಸೆಯಂತೆ, ಎರಡನೇ ಎಲಿಜಬೆತ್ ಆಳ್ವಿಕೆಯ ಅಂತ್ಯದೊಂದಿಗೆ ಆಸ್ಟ್ರೇಲಿಯಾದಲ್ಲಿ ಸಾಂವಿಧಾನಿಕ ರಾಜಪ್ರಭುತ್ವವೂ ಕೊನೆಗೊಂಡು ವಿಶ್ವ ಸಮುದಾಯದಲ್ಲೊಂದು ಹೊಸ ಗಣತಂತ್ರದ ಸೇರ್ಪಡೆಯಾಗಲಿದೆ.

(This article was published in Vishwavani Newsapaper on 4 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ