ಬುಧವಾರ, ಜನವರಿ 18, 2017

ರಷ್ಯಾ-ಚೀನಾ ಮೈತ್ರಿಗೆ ನಿಕ್ಸನ್-ಕಿಸಿಂಜರ್ ಪ್ರತಿತಂತ್ರ?

ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್

ಬದಲಾವಣೆಯ ಹೊರತಾಗಿ ಶಾಶ್ವತವಾದುದು ಬೇರಾವುದೂ ಇಲ್ಲ. ಪರಿವರ್ತನೆ ಜಗದ ನಿಯಮ ಎಂಬಂತೆ ಪ್ರಪಂಚ ಬದಲಾಗುತ್ತಲೇ ಇರುತ್ತದೆ. ಪ್ರಪಂಚವೆಂದರೆ ಯುರೋಪ್, ಯುರೋಪ್ ಎಂದರೆ ಬ್ರಿಟನ್, ಹೀಗಾಗಿ ಪ್ರಪಂಚವೆಂದರೆ ನಮ್ಮನ್ನು ಬಿಟ್ಟರೆ ಯಾರಿಲ್ಲ ಎಂಬಂತೆ ಮೆರೆಯುತ್ತಿದ್ದ ಬ್ರಿಟನ್ ಎರಡು ವಿಶ್ವಯುದ್ಧಗಳ ನಂತರ ಮಂಕಾಗಿ ಹೋಗಿತ್ತು. ವಿಶ್ವದ ಶಕ್ತಿಕೇಂದ್ರ ಯುರೋಪಿನ ಬ್ರಿಟನ್ ನಿಂದ, ಅಮೆರಿಕಾದ ಸಂಯುಕ್ತ ಸಂಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿತ್ತು. ಅಮೆರಿಕಾಕ್ಕೆ ಪ್ರತಿ ಶಕ್ತಿಯಾಗಿ ಸೊವಿಯೆತ್ ಒಕ್ಕೂಟವೆಂಬ ಕಮ್ಯುನಿಸ್ಟ್ ದೈತ್ಯನೂ ಹುಟ್ಟಿಕೊಂಡು ಹಲವು ದಶಕಗಳ ಶೀತಲ ಸಮರಕ್ಕೂ ಸಾಕ್ಷಿಯಾಯ್ತು. ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂದಿಗ್ಧತೆಗಳು ಕೇವಲ ಆ ಎರಡು ರಾಷ್ಟ್ರಗಳಿಗಷ್ಟೇ ಸಂಬಂಧಿಸದೆ, ಇಡೀ ವಿಶ್ವ ಸಮುದಾಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದನ್ನು ವಿಶದಪಡಿಸಿತ್ತು ಈ ಛಾಯಾ ಯುದ್ಧ! ಈ ಛಾಯಾ ಯುದ್ಧದ ನಿರ್ವಹಣೆಯಲ್ಲಿ ಅಮೆರಿಕಾ ತೋರಿದ ರಾಜತಾಂತ್ರಿಕ ಚಾಕಚಕ್ಯತೆಯಲ್ಲಿ ಅಗ್ರಸ್ಥಾನ ಅಲಂಕರಿಸುವುದು, ಸೊವಿಯೆತ್ ಮತ್ತು ಚೀನಾಗಳ ಗೆಳೆತನ ಮುರಿದು, ಶಕ್ತಿರಾಜಕೀಯದಲ್ಲಿ ಸಮತೋಲನ ಕಾಯ್ದುಕೊಂಡ ಅಮೆರಿಕಾದ ಜಾಣತನ.

ಶೀತಲ ಸಮರ ಅಮೆರಿಕಾ ಮತ್ತು ಸೊವಿಯೆತ್ ಒಕ್ಕೂಟಗಳ ಘರ್ಷನೆಯಾಗಿ ಬಿಂಬಿತವಾದರೂ, ಚೀನಾ ತನ್ನದೇ ಆದ ಪಾತ್ರ ನಿರ್ವಹಿಸಿತ್ತು. ಶೀತಲ ಸಮರದ ಆರಂಭದ ದಿನಗಳಲ್ಲಿ ಚೀನಾ ಕಮ್ಯುನಿಸ್ಟ್ ಎಂಬ ಕಾರಣಕ್ಕಾಗಿ, ಸೊವಿಯೆತ್ ಒಕ್ಕೂಟದ ಬೆಂಬಲಕ್ಕೆ ನಿಂತಿತ್ತು. ವಿಶ್ವದ ಈ ಎರಡು ಕಮ್ಯುನಿಸ್ಟ್ ದೈತ್ಯರನ್ನು ಒಟ್ಟಾಗಿರುವಾಗ ಎದುರಿಸುವುದು ಕಷ್ಟಸಾಧ್ಯ ಎನ್ನುವುದು ಅಮೆರಿಕಾಗೆ ತಿಳಿಯದ ವಿಷಯವೇನಾಗಿರಲಿಲ್ಲ. ಇಬ್ಬರು ಬಲಿಷ್ಟ ಎದುರಾಳಿಗಳು ಒಂದಾದಾಗ ಚಾಣಕ್ಯನ ಭೇದ ನೀತಿಯನ್ನು ಅನುಸರಿಸುವುದು ಅಮೆರಿಕಾಗೆ ಅನಿವಾರ್ಯವಾಗಿತ್ತು. ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕಿಳಿಸಿದ ಕೀರ್ತಿ ನಿಕ್ಸನ್-ಕಿಸಿಂಜರ್ ಜೋಡಿಗೆ ಸಲ್ಲುತ್ತದೆ. ಭೇದ ನೀತಿಯ ಯಶಸ್ಸಿನ ಕುರುಹಾಗಿ ಸೊವಿಯೆತ್ ಒಕ್ಕೂಟದಿಂದ ಚೀನಾ ದೂರವಾಗುತ್ತದೆ ಮತ್ತು ಅಮೆರಿಕಾಗೆ ಹತ್ತಿರವಾಗಿ ಸೊವಿಯೆತ್ ಒಕ್ಕೂಟದ ಬಲ ಕುಗ್ಗುವಂತೆ ಮಾಡುತ್ತದೆ.

1945ರಲ್ಲಿ ಜಪಾನ್ ಶರಣಾಗತಿಯೊಂದಿಗೆ, ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವವೊಂದರ ನಿರ್ಮಾಣ ಮಾವೊ ನೇತೃತ್ವದಲ್ಲಿ ಭರದಿಂದ ಸಾಗುತ್ತದೆ. ಚೀನಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಸ್ಥಾಪಿಸಲು ಮಾವೊ ಮತ್ತು ಆತನ ಕಮ್ಯುನಿಸ್ಟ್ ಸಹವರ್ತಿಗಳಿಗೆ ಬೆಂಬಲ ನೀಡಿದ್ದು ಸೊವಿಯೆತ್ ಒಕ್ಕೂಟದ ಜೊಸೆಫ್ ಸ್ಟಾಲಿನ್! ಸ್ಟಾಲಿನ್ ಬೆಂಬಲ ದೊರೆಯದಿದ್ದರೆ ಮಾವೊ ಚೀನಾದಲ್ಲೊಂದು ಕಮ್ಯುನಿಸ್ಟ್ ವ್ಯವಸ್ಥೆಯನ್ನು ನಿರ್ಮಿಸುತ್ತಲೂ ಇರಲಿಲ್ಲ, ಮಾನವ ಜನಾಂಗದ ಇತಿಹಾಸದಲ್ಲಿ ಬೃಹತ್ ಹತ್ಯಾಕಾಂಡ ನಡೆಸಿದವರ ಸಾಲಿನಲ್ಲಿ ಮಾವೊ ಹೆಸರು ಸೇರಿಕೊಳ್ಳುತಲೂ ಇರಲಿಲ್ಲ. ಅದೇನೆ ಇದ್ದರೂ 1949ರಲ್ಲಿ ಚೀನಾ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬ ಹೆಸರಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಸೊವಿಯೆತ್ ಒಕ್ಕೂಟ ಮತ್ತು ಚೀನಾಗಳ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ ಸ್ಟಾಲಿನ್ ನ ನಾಯಕತ್ವವನ್ನು ಮಾವೊ ಒಪ್ಪಿಕೊಂಡಿದ್ದ ಮತ್ತು ಆರಂಭಿಕ ಹಂತದಲ್ಲಿ ಸೊವಿಯೆತ್ ಕಮ್ಯುನಿಸ್ಟ್ ಜಗತ್ತಿನ ನಾಯಕ ಎನ್ನುವುದನ್ನು ಒಲ್ಲದ ಮನಸ್ಸಿನಿಂದಲೇ ಚೀನಾ ಒಪ್ಪಿಕೊಳ್ಳಬೇಕಾಯ್ತು.

Image may contain: 1 person1953ರಲ್ಲಿ ಸ್ಟಾಲಿನ್ ಸಾವಿನೊಂದಿಗೆ ಚೀನಾ ಮತ್ತು ಸೊವಿಯೆತ್ ಗಳ ಸಂಬಂಧಗಳೂ ವ್ಯತಿರಿಕ್ತ ದಿಕ್ಕಿನಲ್ಲಿ ಸಾಗಲಾರಂಬಿಸುತ್ತವೆ. ಸ್ಟಾಲಿನ್ ನಂತರ ಸೊವಿಯೆತ್ ಅಧಿಕಾರದ ಚುಕ್ಕಾಣಿ ಹಿಡಿದ ನಿಕಿತಾ ಕ್ರುಶ್ಚೆವ್ ಸರಕಾರ, ಮಾರ್ಕ್ಸಿಸ್ಟ್-ಲೆನಿನಿಸಂ ತತ್ವದ ಪರಿಶುದ್ಧ ಆಚರಣೆಗೆ ಹೆಚ್ಚಿನ ಒತ್ತು ನೀಡುತ್ತದೆ. ಸ್ಟಾಲಿನ್ ಜಾರಿಗೆ ತಂದಿದ್ದ ಹಲವು ವಿಚಾರಗಳನ್ನು ಮೂಲೆಗೆ ತಳ್ಳುವ ಪ್ರಕ್ರಿಯೆ (De-Stalinization) ಹೊಸ ಸರಕಾರದಿಂದಾಗುತ್ತದೆ. ಈ ಎಲ್ಲಾ ಬೆಳವಣಿಗಗಳು ಸೊವಿಯೆತ್ ಮತ್ತು ಚೀನಾಗಳ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯಗಳ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಸೊವಿಯೆತ್ ನಾಯಕ ಕ್ರುಶ್ಚೆವ್ ಪಶ್ಚಿಮದ ರಾಷ್ಟ್ರಗಳೊಂದಿಗೆ 'ಶಾಂತಿಯುತ ಸಹಬಾಳ್ವೆ'ಯನ್ನು (peaceful coexistence) ಒಪ್ಪಿಕೊಂಡಿದ್ದನ್ನು ಮಾವೊ ಮುಕ್ತವಾಗಿಯೇ ವಿರೋಧಿಸುತ್ತಾರೆ. ಈ ಎರಡು ದೈತ್ಯ ರಾಷ್ಟ್ರಗಳು ಕಮ್ಯುನಿಸ್ಟ್ ಜಗತ್ತಿನ ನಾಯಕತ್ವಕ್ಕಾಗಿ ಸ್ಪರ್ಧಿಸತೊಡಗುತ್ತವೆ. ಕೆಲ ಕಮ್ಯುನಿಸ್ಟ್ ರಾಷ್ಟ್ರಗಳು ಸೊವಿಯೆತ್ ಬಣದಲ್ಲಿ ಗುರುತಿಸಿಕೊಂಡರೆ, ಕೆಲ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಚೀನಾ ಪ್ರಭಾವ ವಿಸ್ತರಿಸಿಕೊಳ್ಳುತ್ತದೆ. ಈ ಪೈಪೋಟಿಯಲ್ಲಿ ಸೊವಿಯೆತ್ ಒಕ್ಕೂಟ ಭಾರತದ ಸ್ನೇಹ ಸಂಪಾದಿಸಿ, ಚೀನಾ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನೂ ಮಾಡಿತ್ತು! ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಸೊವಿಯೆತ್ ರಾಜಿ ಮಾಡಿಕೊಂಡಿದ್ದನ್ನೂ ಚೀನಾ ಕಟುವಾಗಿ ಟೀಕಿಸಿತ್ತು. 1969ರಲ್ಲಿ ಗಡಿವಿವಾದಗಳು ಸೊವಿಯೆತ್ ಮತ್ತು ಚೀನಾ ಮಿಲಿಟರಿ ಹಣಾಹಣಿಯ ಮಟ್ಟಕ್ಕೆ ತಲುಪಿದ್ದು, ಈ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ನಡುವಿನ ವೈಷಮ್ಯಕ್ಕೆ ಸಾಕ್ಷಿ.

ಈ ಎರಡು ಕಮ್ಯುನಿಸ್ಟ್ ದೇಶಗಳ ಪ್ರಭಾವ ವಿಸ್ತರಿಸಿದ ಕಡೆಯೆಲ್ಲಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯ್ತು. ಆಫ್ರಿಕಾ ಖಂಡದಲ್ಲಿ ನಡೆದ ದಂಗೆ, ಘರ್ಷಣೆಗಳಲ್ಲಿ ಚೀನಾ ಒಂದು ಗುಂಪಿಗೆ ಬೆಂಬಲ ವ್ಯಕ್ತಪಡಿಸಿದರೆ, ಸೊವಿಯೆತ್ ಇನ್ನೊಂದು ಗುಂಪು ಸೇರಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ವಿಯೆಟ್ನಾಮ್, ಅಫ್ಘಾನಿಸ್ತಾನ್ ಮತ್ತಿತರ ಪ್ರದೇಶಗಳಲ್ಲಿ ಸೊವಿಯೆತ್ ಮತ್ತು  ಚೀನಾಗಳು ಪರಸ್ಪರ ಮುಸುಕಿನ ಗುದ್ದಾಟ ನಡೆಸಿಕೊಂಡವು. ನಂತರದ ವರ್ಷಗಳಲ್ಲಿ ಈ ವೈಷಮ್ಯ ಸ್ವಲ್ಪ ಮಟ್ಟಿಗೆ ತಗ್ಗಿತಾದರೂ, ಮಾವೊ-ಕ್ರುಶ್ಚೇವ್ ಸಮಯದಲ್ಲಿ ಈ ಎರಡು ರಾಷ್ಟ್ರಗಳು ಸೃಷ್ಟಿಸಿಕೊಂಡ ಸಮಸ್ಯೆಗಳು, ಏಕೀಕೃತ ಕಮ್ಯುನಿಸ್ಟ್ ಬಣದ ಕಲ್ಪನೆಯನ್ನು ರಿಪೇರಿ ಮಾಡಲಾಗದಷ್ಟು ಕೆಡಿಸಿಬಿಟ್ಟಿತ್ತು! ಚೀನಾ ಮತ್ತು ಸೋವಿಯೆತ್ ಗಳು ಪರಸ್ಪರ ಮಿಲಿಟರಿ ಸಂಘರ್ಷದ ಹಂತಕ್ಕೆ ಬಂದ ಮೇಲಂತೂ ಮಾವೊ ಆಲೋಚನಾ ಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿತ್ತು. ಶತ್ರುಗಳಿಬ್ಬರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ಅಮೆರಿಕಾ ಪಾಲಿಗೆ ಬಯಸದೇ ಬಂದ ಭಾಗ್ಯದಂತಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಆಗಿನ ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾ ಜೊತೆ ನಡೆಸಿದ ರಾಜತಾಂತ್ರಿಕ ಮಾತುಕತೆ ಧನಾತ್ಮಕ ಫಲ ನೀಡಿತ್ತು. 1969ರಲ್ಲಿ ಚೀನಾದ ಮೇಲೆ ವಿಧಿಸಿದ್ದ ವ್ಯಾಪಾರ ಮತ್ತು ಪ್ರಯಾಣದ ನಿರ್ಬಂಧಗಳನ್ನು ಅಮೆರಿಕಾ ಸಡಿಲಿಸಿತ್ತು! ಪಾಕಿಸ್ತಾನವನ್ನು ರಾಜತಾಂತ್ರಿಕ ಮಧ್ಯವರ್ತಿಯಾಗಿ ಸಮರ್ಪಕವಾಗಿ ಬಳಸಿಕೊಂಡ ನಿಕ್ಸನ್ ಚಾಣಾಕ್ಷತೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಎರಡು ಕಮ್ಯುನಿಸ್ಟ್ ರಾಷ್ಟ್ರಗಳ ಸ್ನೇಹವನ್ನು ಮುರಿದುಬಿಡುತ್ತದೆ.

1971ರಲ್ಲಿ ಅಮೆರಿಕಾದ ಟೇಬಲ್ ಟೆನ್ನಿಸ್ ತಂಡವೊಂದು ಚೀನಾಗೆ ಭೇಟಿ ನೀಡುವುದರೊಂದಿಗೆ, ಎರಡು ದೇಶಗಳ ಮಧ್ಯೆ ನಡೆದ ರಾಜತಾಂತ್ರಿಕ ನಡೆಗಳು 'ಪಿಂಗ್-ಪಾಂಗ್ ರಾಜತಾಂತ್ರಿಕತೆ' (ping-pong diplomacy) ಎಂದೇ ಪ್ರಸಿದ್ಧ. ನಿಕ್ಸನ್ ನ ಪರಮಾಪ್ತ ಮತ್ತು ಅಮೆರಿಕಾದ ಸಾರ್ವಕಾಲಿಕ ರಾಜತಾಂತ್ರ ನಿಪುಣ ಹೆನ್ರಿ ಕಿಸಿಂಜರ್ 1971 ಜುಲೈನಲ್ಲಿ ಪಾಕಿಸ್ತಾನ ಪ್ರವಾಸದ ನೆಪದಲ್ಲಿ, ರಹಸ್ಯವಾಗಿ ಬೀಜಿಂಗ್ ಗೂ ಭೇಟಿ ನೀಡುತ್ತಾನೆ. ಅದೇ ವರ್ಷ ಅಕ್ಟೋಬರ್ ನಲ್ಲಿ ಚೀನಾಗೆ ಭೇಟಿ ನೀಡುವ ಕಿಸಿಂಜರ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗೆ ವಿಶ್ವಸಂಸ್ಥೆಯ ಸದಸ್ಯನಾಗಿಸಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿಸುವ ಪ್ರಕ್ರಿಯೆಗೆ ಅಮೆರಿಕಾದ ಬೆಂಬಲವಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಫೆಬ್ರವರಿ 1972ರಂದು ನಿಕ್ಸನ್ ಮೊದಲ ಬಾರಿ ಚೀನಾಗೆ ಭೇಟಿ ನೀಡುತ್ತಾರೆ. ಇಷ್ಟಾದರೂ ನಿಕ್ಸನ್ ಕಾಲದಲ್ಲಿ ಅಮೆರಿಕಾ ಚೀನಾದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸಲಾಗಲಿಲ್ಲ. ಮುಂದೆ 1979ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್, ರಿಪಬ್ಲಿಕ್ ಆಫ್ ಚೀನಾದೊಂದಿಗೆ(ತೈವಾನ್) ಸಂಬಂಧಗಳನ್ನು ಅಂತ್ಯಗೊಳಿಸಿದಾಗಲೇ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಕಮ್ಯುನಿಸ್ಟ್ ಚೀನಾ) ಅಮೆರಿಕಾ ಜೊತೆಗಿನ ರಾಜತಾಂತ್ರಿಕ ವ್ಯವಹಾರಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು. ಈ ಪ್ರಕ್ರಿಯೆಗಳು ಅಮೆರಿಕಾ ಮತ್ತು ಚೀನಾಗಳನ್ನು ಆಪ್ತ ರಾಷ್ಟ್ರಗಳನ್ನಾಗಿಸದೇ ಹೋದರೂ, ಇಂಥಾ ಸಂದರ್ಭವನ್ನು ನಾಜೂಕಾಗಿ ನಿರ್ವಹಿಸಿ ಅಮೆರಿಕಾ ವಿರುದ್ಧದ ಸೊವಿಯೆತ್-ಚೀನಾ ಸಂಭವನೀಯ ಮೈತ್ರಿಯೊಂದನ್ನು ತಡೆದ ಹೆಗ್ಗಳಿಕೆ ನಿಕ್ಸನ್-ಕಿಸಿಂಜರ್ ರಾಜತಾಂತ್ರಿಕ ಪ್ರಯತ್ನಗಳಿಗೆ ಸಲ್ಲುತ್ತದೆ.

ಆಧುನಿಕ ವಿಶ್ವರಾಜಕೀಯ ಮತ್ತೆ ನವ ಶೀತಲ ಸಮರದತ್ತ ಸಾಗುತ್ತಿದೆ. ಸೊವಿಯೆತ್ ಒಕ್ಕೂಟದ ಆಕ್ರಮಣಶೀಲತೆಯನ್ನು ರಷ್ಯಾ ಮತ್ತೆ ನೆನಪಿಸುತ್ತಿದೆಯಷ್ಟೇ ಅಲ್ಲದೇ, ರಷ್ಯಾ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು ಚೀನಾ ಕಡೆಗೆ ವಾಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚೀನಾದ ಉದ್ದೇಶಗಳು ಮತ್ತು ಜಾಗತಿಕ ಅಜೆಂಡಾಗಳು ಚೀನಾ ಮತ್ತು ರಷ್ಯಾದ ಮಿಲಿಟರಿ ಮೈತ್ರಿಯೊಂದಕ್ಕೆ ದಾರಿ ಮಾಡಿಕೊಟ್ಟಿರುವುದೂ ಸುಳ್ಳಲ್ಲ. ಒಬಾಮ ಆಡಳಿತದಲ್ಲಿ ಅಮೆರಿಕಾ ಚೀನಾ ಮತ್ತು ರಷ್ಯಾಗಳೆರಡನ್ನೂ ನಿಯಂತ್ರಿಸುವ ಪ್ರಯತ್ನದಲ್ಲಿ ಈ ಎರಡು ದೇಶಗಳ ವಿರೋಧ ಕಟ್ಟಿಕೊಂಡಿರುವುದಷ್ಟೇ ಅಲ್ಲದೆ, ರಷ್ಯಾ-ಚೀನಾಗಳು ಇನ್ನಷ್ಟು ಹತ್ತಿರವಾಗಲು ಪರೋಕ್ಷವಾಗಿ ಸಹಕರಿಸಿದಂತಾಗಿದೆ. ಇವತ್ತಿಗೆ ಅಮೆರಿಕಾ ಎದುರಿಸಬೇಕಾಗಿರುವ ಸವಾಲುಗಳು ಹಿಂದೆಂದಿಗಿಂತಲೂ ವಿಭಿನ್ನ. ಚೀನಾ, ರಷ್ಯಾ, ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಜುವೆಲಾ, ಇಸ್ಲಾಮಿಕ್ ಸ್ಟೇಟ್ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಏಕಕಾಲಕ್ಕೆ ಎದುರಿಸಬೇಕಾದ ಸವಾಲು ಅಮೆರಿಕಾ ಮುಂದಿದೆ. ಜೈವಿಕ, ರಾಸಾಯನಿಕ ಮತ್ತು ಅಣ್ವಸ್ತ್ರಗಳ ಅಸ್ತಿತ್ವದೊಂದಿಗೆ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಸಣ್ಣ ಘರ್ಷಣೆ ಈಡೀ ವಿಶ್ವದ ಅಳಿವು-ಉಳಿವಿನ ಪ್ರಶ್ನೆಯಾಗುತ್ತದೆ! ರಷ್ಯಾ- ಚೀನಾ ಮೈತ್ರಿ ಒಡ್ಡಲಿರುವ ಸಂಭವನೀಯ ಬೆದರಿಕೆಗಳಿಗೆ ಮುನ್ನವೇ ನಿಕ್ಸನ್-ಕಿಸಿಂಜರ್ ತೋರಿದ ರಾಜತಾಂತ್ರಿಕ ನೈಪುಣ್ಯತೆಯನ್ನು ಅಮೆರಿಕಾ ಮರುಕಳಿಸುವ ಅನಿವಾರ್ಯತೆಯಿದೆ.

(This article was published in Vishwavani Newsapaper on 13 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ