ಶುಕ್ರವಾರ, ಜನವರಿ 6, 2017

ಪ್ರಾದೇಶಿಕ ಸ್ಥಿರತೆಯ ನಿರೀಕ್ಷೆಯಲ್ಲಿ ಭಾರತ-ಜಪಾನ್ ಮೈತ್ರಿ

ಭಾರತ ಮತ್ತು ಜಪಾನ್ ಮೈತ್ರಿ ಈ ಎರಡು ದೇಶಗಳ ಭದ್ರತೆಯ ಪ್ರಶ್ನೆ ಮಾತ್ರವಲ್ಲ, ಏಷ್ಯಾದ ಸ್ಥಿರತೆ ಮತ್ತು ಭವಿಷ್ಯ ರೂಪಿಸುವಲ್ಲೂ ಈ ಮೈತ್ರಿ ಮುಖ್ಯಪಾತ್ರ ವಹಿಸಲಿದೆ. ಚದುರಂಗದಾಟದಲ್ಲಿ ತಾನು ನಡೆದಿದ್ದೇ ದಾರಿ ಎಂದುಕೊಂಡಿರುವ ಚೀನಾಗೆ ಚೆಕ್ ಮೇಟ್ ಇಡುವ ಪ್ರಯತ್ನವೊಂದು ಜಾರಿಯಲ್ಲಿದೆ.
-  ಕೀರ್ತಿರಾಜ್


ಮಿತ್ರ ರಾಷ್ಟ್ರಗಳಿಗೆ ಅಮೆರಿಕಾ ನೀಡುತ್ತಿದ್ದ ರಕ್ಷಣಾ ನೆರವಿನ ವಿರುದ್ಧ ಅಸಡ್ಡೆ ವ್ಯಕ್ತಪಡಿಸುತ್ತಿರುವ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗಳಲ್ಲಿ  ಜಯಗಳಿಸುತ್ತಿದ್ದಂತೆ, ಅಮೆರಿಕಾದ ಮಿತ್ರ ರಾಷ್ಟ್ರಗಳು ತಮ್ಮ ತಮ್ಮ ಭದ್ರತೆಯನ್ನು ಬಲ ಪಡಿಸಿಕೊಳ್ಳಲು ಅನ್ಯದಾರಿ ಹುಡುಕಿಕೊಳ್ಳುವಲ್ಲಿ ನಿರತವಾಗಿವೆ. ದಶಕಗಳಿಂದ ಅಮೆರಿಕಾದ ರಕ್ಷಣೆಯಲ್ಲಿದ್ದ ಜಪಾನ್ ಕೂಡ, ಸದ್ಯದ ವಿದ್ಯಮಾನಗಳಿಂದ ಎಚ್ಚೆತ್ತುಕೊಂಡು ತನ್ನ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚೀನಾ ಆಕ್ರಮಣಕಾರಿ ನಡೆಗಳಿಗೆ ತಕ್ಕ ಉತ್ತರ ನೀಡಿ ಪ್ರಾದೇಶಿಕ ಸ್ಥಿರತೆ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಜಪಾನ್, ಸಮಾನಮನಸ್ಕ ಮಿತೃರಿಗಾಗಿ ಹುಡುಕಾಟ ನಡೆಸಿದೆ. ಇವೆಲ್ಲವುಗಳ ಫಲಿತಾಂಶವೇ ಬೆಳೆಯುತ್ತಿರುವ ಭಾರತ- ಜಪಾನ್ ಬಾಂಧವ್ಯ. ನವೆಬರ್ 11ರಂದು ಪ್ರಧಾನಿ ಮೋದಿಯವರು ಜಪಾನ್ ಗೆ ನೀಡಿದ ಭೇಟಿ ಹಾಗೂ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಈ ಎರಡು ದೇಶಗಳ ರಾಜತಾಂತ್ರಿಕ ಬಾಂಧವ್ಯಕ್ಕೆ ಹೊಸ ತಿರುವು ನೀಡಿದ್ದಲ್ಲದೇ, ಅಣು ಸಹಕಾರ, ಭಯೋತ್ಪಾದನಾ ನಿಗ್ರಹ, ಪ್ರಾದೇಶಿಕ ಸ್ಥಿರತೆಯಲ್ಲಿ ಸಮನ್ವಯ ಮತ್ತು ರಕ್ಷಣಾ ವಲಯದ ಸಹಕಾರಗಳಲ್ಲಿ ಮಾರ್ಮಿಕ ಬದಲಾವಣೆಗಳನ್ನು ತರಲಿದೆ.

ಆರು ವರ್ಷಗಳ ಸುದೀರ್ಘ ಮಾತುಕತೆಗಳು ಮತ್ತು ಏರಿಳಿತಗಳ ನಂತರ ಭಾರತ ಮತ್ತು ಜಪಾನ್ ನಾಗರಿಕ ಅಣು ಒಪ್ಪಂದ ಒಂದು ಹಂತಕ್ಕೆ ತಲುಪಿದೆ. ಭಾರತದ ಹೊರತಾಗಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ಯಾವುದೇ ದೇಶದ ಜೊತೆಗೂ ಜಪಾನ್ ಈ ಮಟ್ಟದ ವಿಶ್ವಾಸ ತೋರಿಸಿಲ್ಲ ಎನ್ನುವುದು ಈ ಒಪ್ಪಂದದ ವಿಶೇಷತೆ. ಪ್ರಧಾನಿ ಮೋದಿಯವರ ಜಪಾನ್ ಭೇಟಿ ನಾಗರಿಕ ಅಣು ಒಪ್ಪಂದವಷ್ಟೇ ಅಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.  ನವೆಬರ್ 11ರಂದು 'ಅಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರದ ಒಪ್ಪಂದ' ಕೆಲವೊಂದು ಅಡೆತಡೆಗಳ ಹೊರತಾಗಿಯೂ ಅಂತರಾಷ್ಟ್ರೀಯ ರಾಜಕೀಯದಲ್ಲಿ ದಿಟ್ಟ ಹೆಜ್ಜೆಯೇ ಸರಿ. ಭಾರತದ ಎನ್.ಎಸ್.ಜಿ ಸದಸ್ಯತ್ವವನ್ನು ಚೀನಾ ಬಲವಾಗಿ ವಿರೋಧಿಸುತ್ತಿರಲು ಬೆಳೆಯುತ್ತಿರುವ ಭಾರತ ಜಪಾನ್ ಗಳ ಮಿತೃತ್ವವೂ ಕಾರಣ ಎಂಬುದನ್ನು ತಳ್ಳಿಹಾಕುವಂತಿಲ್ಲ. ಉರಿ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಮಿಲಿಟರಿ ಮತ್ತು ರಾಜತಾಂತ್ರಿಕವಾಗಿ ಹಲವಾರು ದಿಟ್ಟ ಕ್ರಮ ಕೈಗೊಂಡಿರುವ ಭಾರತ, ಭಯೋತ್ಪಾದನೆಯ ಬಗೆಗೂ ಸ್ಪಷ್ಟ ವಿದೇಶಾಂಗ ನೀತಿ ರೂಪಿಸಿ ವಿಶ್ವ ಶಕ್ತಿಗಳ ಬೆಂಬಲ ಗಳಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಬಹುತೇಕ ಯಶಸ್ವಿಯಾಗಿದೆ. ಈವರೆಗೆ ಭಾರತ ಮತ್ತು ಪಾಕಿಸ್ತಾನಗಳ ವಿಚಾರದಲ್ಲಿ ಸಮತೋಲನ ಕಾಯ್ದುಕೊಂಡಿದ್ದ ಜಪಾನ್ ಇದೀಗ ಸ್ಪಷ್ಟವಾಗಿ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದು ಭಾರತದ ಪಾಲಿಗೆ ಭಾರೀ ರಾಜತಾಂತ್ರಿಕ ಯಶಸ್ಸೇ ಸರಿ. ಜಂಟಿ ಹೇಳಿಕೆಯೊಂದರಲ್ಲಿ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನ ಮತ್ತು ಪಾಕ್ ಪ್ರಾಯೋಜಿತ ಭಯೋತ್ಪಾದಕರ ವಿರುದ್ದ ನೇರವಾಗಿ ಕಿಡಿ ಕಾರಿರುವ ಜಪಾನ್, ಭಯೋತ್ಪಾದನಾ ನಿಗ್ರಹದಲ್ಲಿ ಭಾರತದ ಪ್ರಯತ್ನಕ್ಕೆ ಹೆಗಲು ನೀಡುವ ಆಶಯ ವ್ಯಕ್ತಪಡಿಸಿದೆ.

Image may contain: 3 peopleಪ್ರಾದೇಶಿಕ ಮಟ್ಟದ ಭದ್ರತೆಯಲ್ಲೂ ಭಾರತ ಮತ್ತು ಜಪಾನ್ ಗಳೂ ಮುಖ್ಯ ಪಾತ್ರವಹಿಸುವಲ್ಲಿ ಎರಡೂ ದೇಶಗಳ ನಾಯಕರು ಉತ್ಸುಕರಾಗಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಭಾವಕ್ಕೆ ಪ್ರತ್ಯುತ್ತರ ನೀಡಿ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಜಪಾನ್ ಗಳು ಒಂದುಗೂಡಲಿವೆ. ದಕ್ಷಿಣ ಚೀನಾ ಸಮುದ್ರ ವಿವಾದಕ್ಕೂ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಏಷ್ಯಾದ ಈ ಎರಡು ರಾಷ್ಟ್ರಗಳ ಉಪಸ್ಥಿತಿ ಮತ್ತು ಪಾಲುದಾರಿಕೆ ಅವಶ್ಯಕ ಮತ್ತು ಇಂಥದ್ದೊಂದು ಪ್ರಕ್ರಿಯೆ ಜಾರಿಯಲ್ಲಿರುವುದು ಚೀನಾ ಬೆಚ್ಚಿ ಬೀಳುವಂತೆ ಮಾಡಿದೆ. ಜಪಾನ್ ಮತ್ತು ಭಾರತಗಳೆರಡೂ ಜಂಟಿಯಾಗಿ ನಿರ್ಮಿಸುತ್ತಿರುವ ಇರಾನ್ ನ ಚಬಾರ್ ಬಂದರು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗಳನ್ನು ಸಂಪರ್ಕಿಸಲು ಮಹತ್ವದ ಹೆಜ್ಜೆಯಾಗಲಿದೆ. ಚಬಾರ್ ಬಂದರು ಪ್ರಮುಖ ತೈಲ ಸಾಗಾಟದ ಮಾರ್ಗಗಳಿಗೆ ಹತ್ತಿರವಾಗಿದ್ದು ಆರ್ಥಿಕವಾಗಿಯೂ ಅನುಕೂಲಕರ ಸ್ಥಿತಿಯಲ್ಲಿದೆ. ಈಗಾಗಲೇ ಮಧ್ಯ ಏಷ್ಯಾದಲ್ಲಿ ಹಿಡಿತ ಬಿಗಿಗೊಳಿಸುತ್ತಿರುವ ಪಾಕ್-ಚೀನಾ ಜೋಡಿಗೆ ಪ್ರತ್ಯುತ್ತರ ನೀಡುವ ಜರೂರತ್ತಿನಲ್ಲಿದ್ದ ಭಾರತಕ್ಕೆ ಸಮರ್ಥ ಜೊತೆ ನೀಡಲು ಜಪಾನ್ ಮುಂದೆ ಬಂದಿರುವುದು ಈ ಪ್ರಾದೇಶಿಕ ಪೈಪೋಟಿಯನ್ನು ಮತ್ತಷ್ಟು ರೋಚಕವನ್ನಾಗಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಭಾರತದ ನೌಕಾದಳ ಮತ್ತು ಅಲ್ಲಿರುವ ವಾಯುನೆಲೆಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಜಪಾನ್ ಆರ್ಥಿಕ ಮತ್ತು ತಂತ್ರಜಾನದ ನೆರವು ನೀಡಲು ಸಿದ್ಧವಾಗಿದೆ. ಈ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಚೀನಾ ಜಲಾಂತರ್ಗಾಮಿ ನೌಕೆಗಳ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿಯೂ ಜಪಾನ್ ಮತ್ತು ಭಾರತಗಳ ಸಮರತಾಂತ್ರಿಕ ಜಾಲ ಕಾರ್ಯನಿರ್ವಹಿಸಲಿದೆಯಷ್ಟೇ ಅಲ್ಲದೇ ಈ ಸರಪಳಿ ಮುಂದುವರಿದು ಜಪಾನ್-ಅಮೆರಿಕಾಗಳ 'ಫಿಶ್ ಹಿಕ್' ಕಣ್ಗಾವಲು ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲಿದೆ! ಈ ಮೂಲಕ ಭಾರತ-ಅಮೆರಿಕಾ-ಜಪಾನ್ ಗಳನ್ನೊಳಗೊಂಡ ಬಲಿಷ್ಟ ಸಾಗರ ಸಮರ ಮೈತ್ರಿಯೊಂದು ಚೀನಾ ಆಕ್ರಮಣಕ್ಕೆ ತಡೆಯಾಗಿ ನಿಲ್ಲಬಲ್ಲುದು.

ವರ್ಷದ ಕೊನೆಯಲ್ಲಿ ಭಾರತ ಜಪಾನ್ ಮತ್ತು ಅಮೆರಿಕಾಗಳ ನೌಕಾಶಕ್ತಿಗಳು ಸೇರಿಕೊಂಡು ಮಲಬಾರ್ ಸಾಗರ ಸಮರಾಭ್ಯಾಸವೊಂದನ್ನು ನಡೆಸಿದ್ದು ಸ್ಪಷ್ಟವಾಗಿ ಚೀನಾದ ಆಕ್ರಮಣಕ್ಕೊಂದು ಎಚ್ಚರಿಕೆಯೇ ಸರಿ. ಈ ಬೃಹತ್ ಸಮರಾಭ್ಯಾಸದಲ್ಲಿ ಪಾಲ್ಗೊಂಡ ನೌಕಾಶಕ್ತಿಗಳು ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನೀ ಜಲಾಂತರ್ಗಾಮಿಗಳ ಆಟಾಟೋಪಗಳನ್ನು ನಿಯಂತ್ರಿಸಲಿದೆ. 1992ರಲ್ಲೇ ಭಾರತ ಮತ್ತು ಅಮೆರಿಕಾಗಳ ಜಂಟಿ ಸಮರಾಭ್ಯಾಸದ ರೂಪದಲ್ಲಿ ಮಲಬಾರ್ ಸಮರಾಭ್ಯಾಸ ಅಸ್ತಿತ್ವದಲ್ಲಿತ್ತು. 2007ರಲ್ಲಿ ಜಪಾನ್ ನೌಕಾದಳ ಸೇರಿಕೊಳ್ಳುವುದರೊಂದಿಗೆ ಇದೊಂದು ತ್ರಿವಳಿ ಶಕ್ತಿಗಳ ಸಂಗಮವಲ್ಲದೆ, ಹೆಚ್ಚಿನ ವ್ಯಾಪ್ತಿಯ ಸಾಗರ ಪ್ರದೇಶಗಳವರೆಗೆ ತನ್ನ ಪ್ರಭಾವ ವೃದ್ಧಿಸಿಕೊಂಡಿತ್ತು. ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಚಾಣಕ್ಯನೀತಿಯಂತೆ, ಅಮೆರಿಕಾ ಮತ್ತು ಜಪಾನ್ ಗಳ ಸ್ವಹಿತಾಸಕ್ತಿಗಳು ಏನೇ ಇದ್ದರೂ ಸಮರತಾಂತ್ರಿಕ ದೃಷ್ಟಿಯಿಂದ ಈ ಬೆಳವಣಿಗೆ ಭಾರತದ ಪರವಾಗಿಯೇ ಇದೆ. 

ರಕ್ಷಣಾ ವಲಯದಲ್ಲೂ ಭಾರತ ಮತ್ತು ಜಪಾನ್ ಗಳು ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಪ್ರವೃತ್ತವಾಗಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ತಂತ್ರಜಾನದ ಬೆಳವಣಿಗೆಯಲ್ಲಿ ಈ ಎರಡೂ ದೇಶಗಳ ಸಹಕಾರ ಮತ್ತು ಸಮನ್ವಯದ ಅವಶ್ಯಕತೆಯನ್ನೂ ಪುನರ್ ಪ್ರಸ್ತಾವಿಸಿದ್ದು ಇದರ ಮಹತ್ವಕ್ಕೆ ಸಾಕ್ಷಿ. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ರಕ್ಷಣೆ ಮತ್ತು ಅಂತರಿಕ್ಷಯಾನ ಜಪಾನ್ ತನ್ನನ್ನು ತಾನು ಧನಾತ್ಮಕವಾಗಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಈಗಾಗಲೇ US-2 ಯುದ್ಧವಿಮಾನಗಳ ವಿಚಾರದಲ್ಲಿ ಭಾರತ ಮತ್ತು ಜಪಾನ್ ಗಳ ಮಧ್ಯೆ ವಿಚಾರ ವಿನಿಮಯ ಧನಾತ್ಮಕ ಪರಿಣಾಮಗಳತ್ತ ಹೊರಳಿಕೊಳ್ಳುತ್ತಿದೆ. 2016ರ ವಾರ್ಷಿಕ ಶೃಂಗಸಭೆಯೂ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಜಪಾನ್ ಗಳು ಮಹತ್ತರ ಪಾತ್ರ ವಹಿಸಲಿದೆ ಎನ್ನುವುದನ್ನು ಮರುದೃಡಿಕರಿಸಿದೆ. ಪ್ರಾದೇಶಿಕ ಹಿತಾಸಕ್ತಿಗಳ ವಿಚಾರದಲ್ಲೂ ಈ ಎರಡೂ ದೇಶಗಳ ಆಶಯ ಆಸಕ್ತಿಗಳಲ್ಲಿ ಸಾಮ್ಯತೆಗಳಿದ್ದು, ಭಾರತ ಮತ್ತು ಜಪಾನ್ ಗಳ ಸಮರತಾಂತ್ರಿಕ ಹಾಗೂ ರಾಜತಾಂತ್ರಿಕ ಬಾಂಧವ್ಯ ಇನ್ನಷ್ಟು ವಿಸ್ತಾರಗೊಳ್ಳುವುದರಲ್ಲಿ ಅನುಮಾನವಿಲ್ಲ. ಎರಡು ರಾಷ್ಟ್ರಗಳ ವೈಯಕ್ತಿಕ ಭದ್ರತೆಗಳಷ್ಟೇ ಅಲ್ಲದೇ, ಏಷ್ಯಾ ಪ್ರಾದೇಶಿಕ ರಾಜಕೀಯಕ್ಕೊಂದು ನೈತಿಕ ಸ್ಥೈರ್ಯ ತುಂಬುವಲ್ಲೂ ಇಂಥದ್ದೊಂದು ಮೈತ್ರಿಯ ಅವಶ್ಯಕತೆಯಿದೆ. 


(This article was published in Hosa Digantha Newsapaper on 06 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ