ಬುಧವಾರ, ಜನವರಿ 18, 2017

ವಿಶ್ವ ರಾಜಕೀಯದ ದಿಕ್ಕು ಬದಲಿಸಲಿದೆಯೇ ರಷ್ಯಾ?

ಇತ್ತೀಚಿನ ವರ್ಷಗಳಲ್ಲಿ ಪುಟಿನ್ ಆಕ್ರಮಣಕಾರಿ ಅಧ್ಯಕ್ಷತೆಯಲ್ಲಿ ರಷ್ಯಾ ಕೆಲ ಜಾಗತಿಕ ಆಗುಹೋಗುಗಳಲ್ಲಿ ಸದ್ದು ಮಾಡಿತ್ತಾದರೂ, ಸೊವಿಯೆತ್ ಒಕ್ಕೂಟದ ಪ್ರಭಾವವನ್ನು ಸರಿಗಟ್ಟಲಾರದು ಎಂದೆನಿಸಿತ್ತು. ಆದರೆ ಇದೀಗ ರಷ್ಯಾ ಹೊಸ ವಿದೇಶಾಂಗ ನೀತಿಯ ಮೂಲಕ ತನ್ನ ಆಕ್ರಮಣಶೀಲ ಜಾಗತಿಕ ನಿಲುವಿಗೊಂದು ಅಧಿಕೃತ ಮುದ್ರೆಯೊತ್ತಿದೆ!
-  ಕೀರ್ತಿರಾಜ್


2016ರ ವರ್ಷಾಂತ್ಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಷ್ಯಾದ ಹೊಸ ವಿದೇಶಾಂಗ ನೀತಿಯ ಕರಡನ್ನು ಅಂಗೀಕರಿಸಿದ್ದಾರೆ. ಈ ಬೆಳವಣಿಗೆ ಕಳೆದೊಂದಷ್ಟು ವರ್ಷಗಳ ಕಾಲ ಪರಿಷ್ಕರಣೆಯಾಗದೇ ಇದ್ದ ರಷ್ಯಾ ನೀತಿಯಲ್ಲಿ ಕೆಲ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಈ ಹೊಸ ವಿದೇಶಾಂಗ ನೀತಿ! ರಷ್ಯಾದ ಹೊಸ ವಿದೇಶಾಂಗ ನೀತಿಯ ದಾಖಲೆ ಪತ್ರಗಳು ರಷ್ಯಾವನ್ನು ಮತ್ತೆ ವಿಶ್ವದ ಸೂಪರ್ ಪವರ್ ಸ್ಥಾನಕ್ಕೇರಿಸುವ ಪ್ರಯತ್ನದಲ್ಲಿವೆ. ಆಧುನಿಕ ಜಾಗತಿಕ ರಾಜಕೀಯದಲ್ಲಿ ರಷ್ಯಾ ಘನತೆಯನ್ನು ಸೊವಿಯೆತ್ ಒಕ್ಕೂಟದ ಗತವೈಭವಕ್ಕೆ ಮರಳಿಸುವ ಮಹತ್ವಾಕಾಂಕ್ಷೆ ರಷ್ಯನ್ ರಾಜತಂತ್ರಜ್ಞರ ನಡೆ ನುಡಿಗಳಲ್ಲಿ ವ್ಯಕ್ತವಾಗುತ್ತಿದೆ. ಇದಷ್ಟೇ ಅಲ್ಲದೇ ವಿಶ್ವದ ಯಾವುದೇ ಮೂಲೆಯ ರಾಜಕೀಯ ಸಮಸ್ಯೆಯಾದರೂ, ರಷ್ಯಾ ಹಸ್ತಕ್ಷೇಪ ಅನಿವಾರ್ಯ ಎನ್ನುವ ಸಂದೇಶವೊಂದನ್ನು ರವಾನಿಸಿದೆ ರಷ್ಯಾದ ಹೊಸ ವಿದೇಶಾಂಗ ನೀತಿಯ ಲಿಖಿತ ದಾಖಲೆಗಳು!

ವಿಶ್ವದಲ್ಲಿ ನಡೆಯುವ ಪ್ರತಿ ರಾಜಕೀಯ ಬದಲಾವಣೆಯಲ್ಲೂ ತನ್ನ ಛಾಪು ಮೂಡಿಸಲು ಅತ್ಯುತ್ಸಾಹದಿಂದಿರುವ ರಷ್ಯಾ, ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ರಷ್ಯಾ ರಾಜಧಾನಿ ಮಾಸ್ಕೋದಿಂದ ಹೊರಬರುವ ಪ್ರತಿ ನಿರ್ಧಾರಗಳು, ಅವುಗಳ ಹಿಂದಿನ ಕಾರಣಗಳು, ಸಮಜಾಯಿಷಿಗಳು ಕೇವಲ ರಷ್ಯನ್ನರನ್ನು ಮಾತ್ರವಲ್ಲದೇ ಇಡೀ ಜಾಗತಿಕ ಸಮುದಾಯಕ್ಕೆ ತಲುಪುತ್ತಿವೆ. ಇದಕ್ಕಾಗಿ ದೇಶ ವಿದೇಶಗಳ ಮಾಧ್ಯಮಗಳನ್ನು ದಕ್ಷವಾಗಿ ಬಳಸಿಕೊಳ್ಳುತ್ತಿದೆ ರಷ್ಯಾ. ರಷ್ಯನ್ ಅಜೆಂಡಾಗಳನ್ನು ವಿಶ್ವಾದ್ಯಂತ ತಲುಪಿಸಲು ತನ್ನದೇ ಅದ ರಷ್ಯಾ ಟುಡೆ (Russia Today) ಎಂಬ ಮಾಧ್ಯಮ ಜಾಲವನ್ನೂ ರಷ್ಯನ್ನರು ಸೃಷ್ಟಿಸಿಕೊಂಡಿದ್ದಾರೆ. ಆರ್. ಟಿ ಮಾಧ್ಯಮ ಜಾಲವೆಂದು ಗುರುತಿಸಿಕೊಂಡು, ವಿಭಿನ್ನ ಭಾಷೆಗಳನ್ನು ಬಳಸಿಕೊಂಡು ಇಡೀ ಪ್ರಪಂಚದ ಜನರನ್ನು ರಷ್ಯಾ ಪರವಾಗಿರಲು ಪ್ರಭಾವಿಸುತ್ತಿದೆ. 2017ರ ರಷ್ಯಾದ ಬಜೆಟ್ ಕರಡು, ಆರ್. ಟಿ ಮಾಧ್ಯಮ ಜಾಲಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ಅನುದಾನಗಳನ್ನು ನೀಡಲು ಸಿದ್ಧವಾಗಿದೆ. ಯುರೋಪಿನ ಮಾಧ್ಯಮಗಳು ರಷ್ಯಾದ ವಿರುದ್ಧ ಮಾಡುತ್ತಿರುವ ಅಪಪ್ರಚಾರಕ್ಕೆ ಪ್ರತ್ಯುತ್ತರವಾಗಿ, ಆರ್. ಟಿ ಯನ್ನು ಇನ್ನಷ್ಟು ಸಶಕ್ತಗೊಳಿಸಿ ರಷ್ಯಾ ನಿಲುವುಗಳನ್ನು ಸಮರ್ಥಿಸಿಕೊಳ್ಳುವುದು ರಷ್ಯಾದ ಉದ್ದೇಶ. ವಿಶೇಷವಾಗಿ ಉಕ್ರೇನ್ ಮತ್ತು ಸಿರಿಯಾಗಳಲ್ಲಿ ರಷ್ಯಾ ನಡೆಗಳ ಬಗ್ಗೆ ಜಾಗತಿಕ ಸಮುದಾಯಕ್ಕೊಂದು ಸಮಜಾಯಿಷಿ ನೀಡುವ ಪ್ರಯತ್ನಗಳನ್ನೂ ರಷ್ಯಾ ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಗೂ ರಷ್ಯಾ ಅಜೆಂಡಾಗಳನ್ನು ತಲುಪಿಸುವತ್ತ ರಷ್ಯಾ ಪರ ಮಾಧ್ಯಮಗಳನ್ನು ಬಳಸಿಕೊಳ್ಳುವತ್ತ ರಷ್ಯಾದ ಹೊಸ ವಿದೇಶಾಂಗ ನೀತಿಯನ್ನು ರೂಪಿಸಿದವರು ಗಂಭೀರ ಸಲಹೆಗಳನ್ನು ನೀಡಿದ್ದಾರೆ.

ಆಧುನಿಕ ಜಾಗತಿಕ ರಾಜಕೀಯದ ಜವಾಬ್ದಾರಿಯನ್ನು ರಷ್ಯಾ ವಹಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗೆಗೂ ಹೊಸ ವಿದೇಶಾಂಗ ನೀತಿ ತರ್ಕಬದ್ಧ ವಿವರಣೆ ನೀಡುವ ಪ್ರಯತ್ನವೊಂದನ್ನು ಮಾಡಿದೆ. ಪಶ್ಚಿಮದ ರಾಷ್ಟ್ರಗಳು ತಮ್ಮ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಇತರ ನಾಗರಿಕತೆಗಳ ಮೇಲೆ ಬಲವಂತವಾಗಿ ಹೇರುತ್ತಿದೆ ಮತ್ತು ಇದನ್ನು ತಡೆ ಯುವ ಜವಾಬ್ದಾರಿ ರಷ್ಯಾದ ಮೇಲಿದೆ ಎನ್ನುವ ಮನೋಭಾವ ರಷ್ಯಾದ ಹೊಸ ವಿದೇಶಾಂಗ ನೀತಿಯಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ಸುಮಾರು ಕಾಲು ಶತಮಾನದ ಹಿಂದೆ ಸ್ಯಾಮುವೆಲ್ ಹಂಟಿಂಗ್ಟನ್ ನೀಡಿದ್ದ 'ನಾಗರಿಕತೆಗಳ ಸಂಘರ್ಷ' ಪರಿಕಲ್ಪನೆಯನ್ನು ರಷ್ಯನ್ ವಿದೇಶಾಂಗ ನೀತಿ ತಜ್ಞರು ತಮ್ಮ ಪರವಾಗಿ ಬಳಸಿಕೊಂಡಂತಾಯಿತು. ಜಾಗತಿಕ ರಾಜಕೀಯವನ್ನು ನಿಯಂತ್ರಿಸುವಷ್ಟು ರಾಜಕೀಯ ಪ್ರಭಾವ ಮತ್ತು ಆರ್ಥಿಕ ಸಂಪನ್ಮೂಲಗಳು ಇವತ್ತಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿಲ್ಲ ಮತ್ತು ಸಂಪನ್ಮೂಲಗಳಿಗೋಸ್ಕರ ನಡೆಯುವ ಸ್ಪರ್ಧೆ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಅರಾಜಕತೆಗೆ ದೂಡಲಿದೆ ಎನ್ನುವುದು ರಷ್ಯನ್ನರ ವಾದ. ಇವೆಲ್ಲವುಗಳಿಗೆ ಕಾರಣ ಪಾಶ್ಚಾತ್ಯ ನಾಗರಿಕತೆ ಮತ್ತು ಇತರರ ಮೇಲೆ ಆ ಸಂಸ್ಕೃತಿಯ ಬಲವಂತದ ಹೇರಿಕೆ ಎಂದು ಗುರುತಿಸುವ ರಷ್ಯನ್ ರಾಜತಂತ್ರಜ್ಞರು, ಇವೆಲ್ಲವುಗಳಿಗೆ ಉತ್ತರ ನೀಡುವ ಹೊಣೆ ರಷ್ಯಾ ಮೇಲಿದೆ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಬದಲಾಗುತ್ತಿರುವ ಜಾಗತಿಕ ರಾಜಕಾರಣದಲ್ಲಿ ರಷ್ಯಾ ಮಹತ್ತರವಾದ ಪಾತ್ರ ವಹಿಸಬೇಕು ಮತ್ತು ವಿಶ್ವಾದ್ಯಂತ ತನ್ನ ಪ್ರಭಾವ ವಿಸ್ತರಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ರಷ್ಯಾದ ಹೊಸ ವಿದೇಶಾಂಗ ನೀತಿಯ ಪ್ರತಿ ಅಕ್ಷರವೂ ಪ್ರತಿಧ್ವನಿಸುವಂತೆ ಭಾಸವಾಗುತ್ತದೆ. ಸೊವಿಯೆತ್ ಒಕ್ಕೂಟದ ಪತನದ ನಂತರ ಇತರರ ಗೊಡವೆಗೆ ಹೋಗದೆ ತನ್ನ ಪಾಡಿಗೆ ತಾನಿದ್ದ ರಷ್ಯನ್ ದೈತ್ಯ ಮತ್ತೆ ಆಕ್ರಮಣಶೀಲತೆಯನ್ನು ಮೈಗೂಡಿಸಿಕೊಂಡಿತ್ತು ಮತ್ತು ಇದೀಗ ತನ್ನ ವಿದೇಶಾಂಗ ನೀತಿ ದಾಖಲೆಗಳಲ್ಲಿ ಇವೆಲ್ಲವುಗಳನ್ನು ಅಧಿಕೃತವಾಗಿ ದಾಖಲಿಸಿಕೊಂಡಿದೆ.

Image may contain: 1 personಶೀತಲ ಸಮರದ ಅಂತ್ಯದ ನಂತರವೂ ಅಮೆರಿಕಾ ಮತ್ತು ನ್ಯಾಟೊ ಮೈತ್ರಿಕೂಟಕ್ಕೆ ರಷ್ಯಾ ಶತ್ರುವಾಗಿಯೇ ಉಳಿದಿದೆ ಎನ್ನುವುದು ರಷ್ಯಾಗೂ ತಿಳಿದಿರುವ ಸತ್ಯ. ಇವತ್ತಿಗೂ ಅಮೆರಿಕಾದ ಆಕಾಂಕ್ಷೆಗಳು ಅಂತರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿದ್ದರೆ, ಅದನ್ನು ವಿರೋಧಿಸುವ ಸಾಮರ್ಥ್ಯ ರಷ್ಯಾಗೆ ಮಾತ್ರವಿದೆ ಎನ್ನುವುದು ರಷ್ಯನ್ನರ ನಂಬಿಕೆ. ರೊಮಾನಿಯದಲ್ಲಿ ಅಮೆರಿಕಾ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಿದಾಗ, ಪ್ರತ್ಯುತ್ತರವಾಗಿ ರಷ್ಯಾ ತನ್ನ ಖಂಡಾಂತರ ಕ್ಷಿಪಣಿಗಳನ್ನು ಕಲಿನಿನ್ ಗಾರ್ಡ್ ನಲ್ಲಿ ಸ್ಥಾಪಿಸಿ ನ್ಯಾಟೊ ಸದಸ್ಯರನ್ನು ಬೆದರಿಸಿದ್ದು ಇದಕ್ಕೊಂದು ಉದಾಹರಣೆ. ನ್ಯಾಟೊ ತನ್ನ ಪ್ರಭಾವವನ್ನು ಪೂರ್ವದ ಕಡೆ ವಿಸ್ತರಿಸುವುದನ್ನು ಎಲ್ಲಾ ರಿತಿಯಿಂದಲೂ ತಡೆಗಟ್ಟಲು ರಷ್ಯಾ ಸಿದ್ಧವಿದೆ ಎನ್ನುವುದನ್ನು ಈ ಉದಾಹರಣೆ ಸ್ಪಷ್ಟಪಡಿಸುತ್ತದೆ. ಯುರೋಪಿನ ಜೊತೆಗಿನ ತನ್ನ ಸಂಬಂಧಗಳ ಬಗ್ಗೆ ಆರು ಬೃಹತ್ ಅಧ್ಯಾಯಗಳನ್ನು ಮೀಸಲಿಟ್ಟಿರುವ ವಿದೇಶಾಂಗ ನೀತಿಯ ಲಿಖಿತ ದಾಖಲೆ, ಈ ಬಾರಿ ಯುರೋಪಿನ ಹೊಸ ರಾಷ್ಟ್ರಗಳನ್ನು ತಮ್ಮ ವಿದೇಶಾಂಗ ನೀತಿಯ ಆದ್ಯತೆಯನ್ನಾಗಿಸಿದ್ದಾರೆ. ಜರ್ಮನಿ, ಫ್ರಾನ್ಸ್ ಮತ್ತು ಇಟಲಿಗಳನ್ನು ಆಪ್ತ ರಾಷ್ಟ್ರಗಳೆಂದು ಗುರುತಿಸಿರುವ ಕಾನ್ಸೆಪ್ಟ್ ಹಿಂದೆ ಈ ಪಟ್ಟಿಯಲ್ಲಿದ್ದ ನೆದರ್ ಲ್ಯಾಂಡ್ಸ್ ಮತ್ತು ಬ್ರಿಟನ್ ಗಳನ್ನು ಹೊರಗಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ನ್ಯಾಟೊ ಸದಸ್ಯ ರಾಷ್ಟ್ರಗಳಲ್ಲೂ ಕೆಲ ಪ್ರಭಾವಿ ರಾಜಕಾರಣಿಗಳು, ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿ ಪೂರ್ಣ ಪ್ರಮಾಣದ ಬಾಂಧವ್ಯ ಬೆಳೆಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಮಧ್ಯಪ್ರಾಚ್ಯದ ರಾಜಕೀಯ ಪ್ರಕ್ಷುಬ್ಧತೆಗಳ ಬಗೆಗೂ ಗಮನ ಹರಿಸಿರುವ ರಷ್ಯಾದ ಹೊಸ ವಿದೇಶಾಂಗ ನೀತಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಳ ರೆಸಲ್ಯೂಶನ್ ಗಳ ಪ್ರಕಾರ ಸಮಸ್ಯೆಗಳ ಪರಿಹಾರಿಸುವತ್ತ ಬೆಂಬಲ ವ್ಯಕ್ತಪಡಿಸಿದೆ. ಅರಬ್ - ಇಸ್ರೇಲಿ ಸಂಘರ್ಷದ ಬಗೆಗೆ ತನ್ನ ನಿಲುವನ್ನು ಬದಲಿಸಿಕೊಂಡಿರುವ ರಷ್ಯಾ, ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣಕ್ಕೆ ನೀಡುತ್ತಿದ್ದ ಬೆಂಬಲವನ್ನು ಮೊದಲ ಬಾರಿಗೆ ಹಿಂತೆಗೆದುಕೊಂಡಿದೆ. ಭಯೋತ್ಪಾದನೆಯ ಬಗೆಗೂ ರಷ್ಯಾದ ಹೊಸ ವಿದೇಶಾಂಗ ನೀತಿ ತನ್ನದೇ ಕಾರ್ಯ ಯೊಜನೆಗಳನ್ನು ರೂಪಿಸಿಕೊಂಡಿದೆ. ಈ ಬಾರಿ ಭಯೋತ್ಪಾದನೆಯ ಕುರಿತಾಗಿ ವಿಭಿನ್ನ ದೃಷ್ಟಿಕೋನ ಹೊಂದಿರುವ ರಷ್ಯಾ, ಜಾಗತೀಕರಣ ಮತ್ತು ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯ ಆಧಾರದಲ್ಲಿ ಉಗ್ರ ನಿಗ್ರಹದತ್ತ ಗಮನಹರಿಸಿದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟಿನೊಂದಿಗೆ ಭಯೋತ್ಪಾದನೆಯಲ್ಲಿ ಹೊಸ ಪ್ರವೃತ್ತಿಗಳ ಬೆಳವಣಿಗೆಯನ್ನೂ ಗಮನದಲ್ಲಿಟ್ಟುಕೊಂಡು ಹೊಸದೊಂದು ಉಗ್ರ ನಿಗ್ರಹ ಮಿಲಿಟರಿ ಮೈತ್ರಿಕೂಟವನ್ನು ರಚಿಸುವ ಯೋಜನೆಗಳು ರಷ್ಯಾಗಿವೆ.

ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದತ್ತ ಗಮನಹರಿಸಿದರೆ ಸದ್ಯದ ರಷ್ಯಾ ಧೋರಣೆಗಳು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ. ಸೊವಿಯೆತ್ ಒಕ್ಕೂಟದ ಸಮಯದಿಂದಲೂ ಭಾರತ-ರಷ್ಯಾ ಸ್ನೇಹ ಏರುಗತಿಯಲ್ಲೇ ಇತ್ತಾದರೂ, ಇತ್ತೀಚೆಗೆ ರಷ್ಯಾ, ಚೀನಾ ಮತ್ತು ಪಾಕಿಸ್ತಾನಗಳ ಮೈತ್ರಿಯೊಂದಿಗೆ ರಷ್ಯಾ ಭಾರತ ಸಂಬಂಧಗಳಲ್ಲಿ ಏರುಪೇರಾಗಿರುವುದು ನಿಜ. ಅಂಕಿ ಅಂಶಗಳ ಪ್ರಕಾರವೂ ಭಾರತ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ರಷ್ಯಾಗಿಂತ ಅಮೆರಿಕಾದತ್ತ ಹೆಚ್ಚಿನ ಒಲವು ತೋರಿಸಿದೆಯಷ್ಟೇ ಅಲ್ಲದೆ ಅಮೆರಿಕಾದ ಜೊತೆ ಭಾರತದ ವ್ಯಾಪಾರ ವಹಿವಾಟುಗಳು ಹದಿನೈದು ಪಟ್ಟು ಹೆಚ್ಚಿದೆ. ಕಳೆದ ಸೆಪ್ಟೆಂಬರ್ ನಲ್ಲಿ ರಷ್ಯಾ ಮತ್ತು ಪಾಕಿಸ್ತಾನಗಳ ಮೊತ್ತ ಮೊದಲ ಜಂಟಿ ಸಮರಾಭ್ಯಾಸವೂ ಭಾರತಕ್ಕೆ ಎಚ್ಚರಿಕೆಯೆ ಘಂಟೆಯೇ ಸರಿ. ಇದೇ ವೇಳೆ ಸಮರತಾಂತ್ರಿಕ ಕಾರಣಗಳಿಂದ ಚೀನಾದ ಜೊತೆಗೂ ರಷ್ಯಾ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ರಷ್ಯಾ ಮತ್ತು ಚೀನಾ ಎಂಬೀ ಎರಡು ದೈತ್ಯ ಶಕ್ತಿಗಳು ವಿಶ್ವ ರಾಜಕೀಯವನ್ನು ಅಂಕೆಯಲ್ಲಿಟ್ಟುಕೊಳ್ಳುವ ಸಾಹಸದಲ್ಲಿ ಪರಸ್ಪರ ಸಹಕಾರ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಭಾರತದ ಮಟ್ಟಿಗೆ ಭವಿಷ್ಯದ ರಾಜಕೀಯ ನಡೆಗಳು ಹಲವಾರು ಸವಾಲುಗಳನ್ನು ಸೃಷ್ಟಿಸಲಿದೆ. ಎದುರಾಗಲಿರುವ ರಾಜಕೀಯ ಬಿಕ್ಕಟ್ಟು ಶೀತಲ ಸಮರಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಭಾರತ ತಟಸ್ಥವಾಗದೆ, ಇವುಗಳನ್ನು ಎದುರಿಸುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. 

ವಿಶ್ವಾದ್ಯಂತ ಚದುರಿ ಹೋಗಿರುವ ರಷ್ಯನ್ನರ ಜೊತೆ ಸಂಪರ್ಕ ಸಾಧಿಸಿ ಹೊಸ ಭಾವನಾತ್ಮಕ ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿರುವುದು, ಆರ್ಥಿಕ ನೆರವು ನೀಡಿ ರಷ್ಯನ್ ಪ್ರಭಾವವೊಂದನ್ನು ಸೃಷ್ಟಿ ಮಾಡಿಕೊಳ್ಳುತ್ತಿರುವುದನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದವರಿಗೆ ರಷ್ಯಾದ ಹೊಸ ವಿದೇಶಾಂಗ ನೀತಿಯ ಕಾನ್ಸೆಪ್ಟ್ ಸ್ಪಷ್ಟ ಉತ್ತರಗಳನ್ನು ನೀಡಿದೆ. ವಿಶ್ವದ ಮೂಲೆ ಮೂಲೆಗಳಿಗೂ ರಷ್ಯಾ ಕೈಗಳು ತಲುಪುವಂಥಾ ವಿದೇಶಾಂಗ ನೀತಿಯೊಂದು ಸಿದ್ಧವಾಗಿರುವುದರಿಂದ, ಮುಂದಿನ ರಷ್ಯಾ ವಿದೇಶಾಂಗ ನೀತಿ ಇನ್ನಷ್ಟು ಆಕ್ರಮಣಕಾರಿಯಾಗುವುದು ಖಚಿತ.

(This article was published in Hosa Digantha Newsapaper on 10 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ