ಬುಧವಾರ, ಜನವರಿ 18, 2017

ಪ್ರಜಾಪ್ರಭುತ್ವದ ಶಕ್ತಿಯಲ್ಲೂ ರೊಹಿಂಗ್ಯಾಗಳಿಗಿಲ್ಲ ಮುಕ್ತಿ

ಒಂದು ವರ್ಷದ ಹಿಂದೆ ಮ್ಯಾನ್ಮಾರ್ ಅಧಿಕಾರದ ಚುಕ್ಕಾಣಿ ಹಿಡಿದ ಸೂಕಿ ನೇತೃತ್ವದ ಪ್ರಜಾಪ್ರಭುತ್ವದ ಮೇಲಿದ್ದ ಆಶಾಗೋಪುರ ಕುಸಿದುಬಿದ್ದಿದೆ. ರೊಹಿಂಗ್ಯಾ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವಿಶ್ವ ಸಮುದಾಯವನ್ನು ಅಣಕಿಸುವಂತೆ ಆಡಳಿತ ನಡೆಸುತ್ತಿದೆ ಸೂಕಿ ಸರಕಾರ.

Image may contain: 5 people
-  ಕೀರ್ತಿರಾಜ್

ಒಂದು ವರ್ಷದ ಹಿಂದೆ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದವು. ಹಲವು ದಶಕಗಳ ನಿರಂಕುಶ ಆಡಳಿತಕ್ಕೆ ಕಳೆದ ವರ್ಷ ತೆರೆ ಎಳೆಯುವ ಪ್ರಯತ್ನವೊಂದರಲ್ಲಿ, ಚುನಾವಣೆಗಳು ನಡೆದು ಆಂಗ್ ಸಾನ್ ಸೂಕಿಯವರ ನೇತೃತ್ವದಲ್ಲಿ ಮ್ಯಾನ್ಮಾರ್ ಅರೆ ಪ್ರಜಾಪ್ರಭುತ್ವ ರಾಷ್ಟ್ರವಾಗಿತ್ತು! ಹೌದು, ಮ್ಯಾನ್ಮಾರ್ ಸಂಪೂರ್ಣ ಪ್ರಜಾಪ್ರಭುತ್ವವಾಗಿ ಬದಲಾಗಲಿಲ್ಲ. ಸಾಂವಿಧಾನಿಕವಾಗಿ ಗೃಹ, ರಕ್ಷಣಾ ಮತ್ತು ಗಡಿ ವ್ಯವಹಾರಗಳ ಖಾತೆಗಳು ಮಿಲಿಟರಿ ಅಧೀನದಲ್ಲಿತ್ತು. ಪಾರ್ಲಿಮೆಂಟಿನಲ್ಲೂ ಮಿಲಿಟರಿ ಅಧಿಕಾರಿಗಳು ಗಮನಾರ್ಹ ಪ್ರಮಾಣದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ. ಮ್ಯಾನ್ಮಾರ್ ಗಳಿಸಿದ್ದು ಅರೆ ಪ್ರಜಾಪ್ರಭುತ್ವವೇ ಆದರೂ, ತನ್ನ ಇತಿಹಾಸದಿಂದ ಬಿಡುಗಡೆಯಾಗಿ ವಿಬಿನ್ನವಾಗಿ ದೇಶವನ್ನು ಹೊಸ ಮನ್ವಂತರದ ಕಡೆಗೊಯ್ಯಲಿದೆ ಎಂದು ವಿಶ್ವ ನಂಬಿತ್ತು. ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿದ್ದ, ಮಹಾನ್ ಪ್ರಜಾಪ್ರಭುತ್ವವಾದಿ ಮಾನವೀಯತಾವಾದಿ ಎಂಬಿತ್ಯಾದಿ ವಿಶೇಷಣಗಳಿಂದ ಗುರುತಿಸಿಕೊಂಡಿದ್ದ  ಆಂಗ್ ಸಾನ್ ಸೂಕಿ ಈ ಎಲ್ಲಾ ಭರವಸೆಗಳಿಗೆ ಮೂಲ ಕಾರಣರಾಗಿದ್ದರು. ಸೂಕಿ ಸರಕಾರ ಆಡಳಿತದಲ್ಲಿ ದಿನ ಸವೆಸುತ್ತಿದ್ದಂತೆ ಈ ಭರವಸೆಯೂ ಸವೆಯತೊಡಗಿತ್ತು. ಮ್ಯಾನ್ಮಾರ್ ತಳಮಟ್ಟದ ಸಮಸ್ಯೆಗಳಲ್ಲಿ ಕಿಂಚಿತ್ತೂ ಬದಲಾವಣೆ ಬರಲಿಲ್ಲ. ಕೆಲ ಸಮಸ್ಯೆಗಳಂತೂ ವಿಪರೀತಕ್ಕೆ ತಿರುಗಿಕೊಂಡಿದ್ದವು. ಇದರಲ್ಲಿ ಪ್ರಮುಖವಾದುದು ರೊಹಿಂಗ್ಯಾ ಜನಾಂಗದ ಸಮಸ್ಯೆ.

ಪಶ್ಚಿಮ ಮ್ಯಾನ್ಮಾರ್ ನ ರಾಖೈನ್ ಪ್ರಾಂತ್ಯದಲ್ಲಿ ಮ್ಯಾನ್ಮಾರ್ ಸರಕಾರ ಮತ್ತು ಮುಖ್ಯವಾಹಿನಿ ಸಮಾಜದಿಂದ ತಿರಸ್ಕೃತವಾಗಿ ವಾಸಿಸುತ್ತಿರುವ ಒಂದು ಅಲ್ಪಸಂಖ್ಯಾತ ಮುಸ್ಲಿಂ ಜನಾಂಗವೇ ರೊಹಿಂಗ್ಯಾ. ಸುಮಾರು ಒಂದು ಮಿಲಿಯನ್ ನಷ್ಟು ಜನಸಂಖ್ಯೆಯಿರುವ ರೊಹಿಂಗ್ಯಾ ಜನಾಂಗ ರಾಷ್ಟ್ರದೊಳಗಡೆ ಇದ್ದರೂ ಇವರಿಗೊಂದು ರಾಷ್ಟ್ರೀಯ ಅಸ್ಮಿತೆಯಿಲ್ಲ. ರೊಹಿಂಗ್ಯಾಗಳು ಆರೋಗ್ಯ, ಶಿಕ್ಷಣ ಮತ್ತಿತರ ಹಕ್ಕುಗಳನ್ನು ಅನುಭವಿಸುವಂತಿಲ್ಲ, ಇವೆಲ್ಲವುಗಳ ವಿರುದ್ಧ ಪ್ರತಿಭಟಿಸುವ ಹಕ್ಕು ಕೂಡ ಈ ಜನಾಂಗಕ್ಕಿಲ್ಲ! ಅಕ್ಟೊಬರ್ ನಲ್ಲಿ ಈ ಅಲ್ಪಸಂಖ್ಯಾತ ಗುಂಪಿನಿಂದ ನಡೆದ ಸಶಸ್ತ್ರ ದಂಗೆಯೊಂದಿಗೆ, ಸರಕಾರ ರಾಖೈನ್ ಪ್ರದೇಶವನ್ನು 'ಮಿಲಿಟರಿ ಕಾರ್ಯಾಚರಣೆಯ ವಲಯ' ಎಂದು ಘೋಷಿಸಿದೆ. ರಾಖೈನ್ ಪ್ರಾಂತ್ಯದಲ್ಲಿ ಅತ್ಯಾಚಾರ, ಸುಲಿಗೆ, ಕೊಲೆ ಇನ್ನಿತರ ಸರಕಾರಿ ಪ್ರಾಯೋಜಿತ ಅಮಾನವೀಯ ಕೃತ್ಯಗಳು ನಿರ್ಭಯವಾಗಿ ನಡೆಯುತ್ತದೆ. ಸ್ವತಂತ್ರ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುವುದಿರಲಿ ಈ ಪ್ರದೇಶದೊಳಗಡೆ ಕಾಲಿಡುವಂತೆಯೂ ಇಲ್ಲ.

ವಿಶ್ವಸಂಸ್ಥೆ ದೃಢಪಡಿಸಿದ ವರದಿಗಳ ಪ್ರಕಾರ ಉತ್ತರ ರಾಖೈನ್ ಪ್ರದೇಶದ ಸುಮಾರು 3000 ಮಕ್ಕಳು ತೀವ್ರವಾದ ಅಪೌಷ್ಟಿಕತೆಯ ಖಾಯಿಲೆಯಿಂದ (Severe Acute Malnutrician - SAM) ನರಳುತ್ತಿದ್ದಾರೆ. ಸರಕಾರ ರಾಖೈನ್ ಪ್ರದೇಶವನ್ನು 'ಮಿಲಿಟರಿ ಕಾರ್ಯಾಚರಣೆಯ ವಲಯ' ಎಂದು ಘೋಷಿಸಿರುವುದರಿಂದ ಈ ಖಾಯಿಲೆಯಿಂದ ನರಳುತ್ತಿರುವ ಮಕ್ಕಳು ಚಿಕಿತ್ಸೆಯನ್ನೂ ಪಡೆಯಲಾಗುತ್ತಿಲ್ಲ. ಮಾನವ ಹಕ್ಕುಗಳನ್ನು ಗುತ್ತಿಗೆ ತೆಗೆದುಕೊಂಡಂತೆ ಭಾಷಣ ಮಾಡುತ್ತಿದ್ದ ಆಂಗ್ ಸಾನ್ ಸೂಕಿ ಈ ವಿಷಯಗಳ ಕುರಿತಾಗಿ ಬಾಯಿ ಬಿಡುತ್ತಿಲ್ಲ. ಸೂಕಿ ಸರಕಾರವಂತೂ ಸೇನೆಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದೆ. ಮ್ಯಾನ್ಮಾರ್ ಪಾರ್ಲಿಮೆಂಟ್ ನ ಸದಸ್ಯ ಆಂಗ್ ವಿನ್ ಬಿ.ಬಿ.ಸಿ ವಾಹಿನಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮಿಲಿಟರಿ ರೊಹಿಂಗ್ಯಾ ಮಹಿಳೆಯರ ಮೇಲೆಸಗುತ್ತಿದ್ದ ಅತ್ಯಾಚಾರಗಳನ್ನು ಅಲ್ಲಗೆಳೆಯುತ್ತಾ, ರೊಹಿಂಗ್ಯಾ ಮಹಿಳೆಯರನ್ನು ಯಾವ ಸೈನಿಕನೂ ಮುಟ್ಟಲಾರ ಏಕೆಂದರೆ ಅವರು ಅಷ್ಟೊಂದು ಗಲೀಜಾಗಿದ್ದಾರೆ ಎಂದು ಬಿಟ್ಟಿದ್ದ! ಓರ್ವ ಸಂಸದ ನೀಡಿದ ಈ ವಿಕೃತಿಯೇ ಮೈವೆತ್ತಂತಿರುವ ಹೇಳಿಕೆ ರೊಹಿಂಗ್ಯಾಗಳ ಕುರಿತಾಗಿ ಮ್ಯಾನ್ಮಾರ್ ನ ಮುಖ್ಯವಾಹಿನಿ ಸಮಾಜದ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ. 

ವಿಶ್ವದಲ್ಲಿ ನಡೆಯುವ ಸಂಚು ಪಿತೂರಿಗಳಲ್ಲಿ ರೊಹಿಂಗ್ಯಾಗಳ ಪಾತ್ರವಿರುತ್ತದೆ ಎಂಬ ಪೂರ್ವಾಗ್ರಹ ಮ್ಯಾನ್ಮಾರ್ ಜನತೆಯಲ್ಲಿ ಬೇರೂರುವಂತೆ ಮಾಡಲಾಗಿದೆ. ಮ್ಯಾನ್ಮಾರ್ ಉಳಿವಿಗಾಗಿ ರೊಹಿಂಗ್ಯಾಗಳ ನಾಶ ಅನಿವಾರ್ಯ ಎಂಬಂತೆ ಮಹಾಮಾನವೀಯತಾವಾದಿ ಸೂಕಿ ಸರಕಾರವೇ ವರ್ತಿಸುತ್ತಿರುವಾಗ, ರೊಹಿಂಗ್ಯಾಗಳನ್ನು ರಕ್ಷಿಸುವವರಾರು? ಸೂಕಿ ಸರಕಾರೀ ಪ್ರಾಯೋಜಿತ ಪತ್ರಿಕೆ The Global Light of Myanmar ರಾಖೈನ್ ನಲ್ಲಿ ನಡೆಯುತ್ತಿರುವ ಮಿಲಿಟರಿ ಅತ್ಯಾಚಾರ ಹಿಂಸೆಗಳನ್ನು ಸಮರ್ಥಿಸಿಕೊಳ್ಳುತ್ತಾ 'The thorn needs removing if it pierces' ಎಂಬ ಶೀರ್ಷಿಕೆಯೊಂದಿಗೆ ರೊಹಿಂಗ್ಯಾಗಳನ್ನು ಬೇರು ಸಮೇತ ಕಿತ್ತುಹಾಕುವುದು ಮ್ಯಾನ್ಮಾರ್ ಸರಕಾರದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬರ್ಥದ ಲೇಖನವೊಂದು ಪ್ರಕಟವಾಗಿತ್ತು. ವಿಶ್ವಸಂಸ್ಥೆಗೆ ರಾಖೈನ್ ಪ್ರಾಂತ್ಯದ ಬಗ್ಗೆ ವರದಿ ಒಪ್ಪಿಸುತ್ತಿರುವ ಅರಕನ್ ಪ್ರಾಜೆಕ್ಟ್ ನ ನಿರ್ದೇಶಕ ಕ್ರಿಸ್ ಲೆವಾ ಹೇಳುವಂತೆ, "ನೂರಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ, ನೂರಾರು ಜನರನ್ನು ಜೈಲಿಗಟ್ಟಲಾಗಿದೆ, ಕಣ್ಣಿಗೆ ಕಂಡವರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ ಮತ್ತು ರೊಹಿಂಗ್ಯಾಗಳನ್ನು ಅವರದ್ದೇ ಮನೆಗಳಲ್ಲಿ ಸುಟ್ಟು ಕೊಲ್ಲಲಾಗುತ್ತಿದೆ." ಹೀಗೆ ಸೂಕಿ ಆಡಳಿತದಲ್ಲೂ ನಿರಾತಂಕವಾಗಿ ಮುಂದುವರಿದಿದೆ ಜನಾಂಗೀಯ ವಿನಾಶ! (Ethnic Cleansing)

ರೊಹಿಂಗ್ಯಾ ಹಿಂಸೆಯಲ್ಲಿ ಸ್ವತಃ ಮ್ಯಾನ್ಮಾರ್ ಸರಕಾರವೇ ಒಳಗೊಂಡಿರುವುದರಿಂದಾಗಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಇಲ್ಲಿಯವೆರೆಗೆ ಸೂಕಿ ಸರಕಾರ ಈ ಕುರಿತಾಗಿ ಯಾವುದೇ ಅಂತರಾಷ್ಟ್ರಿಯ ತನಿಖೆಯನ್ನು ವಿರೋಧಿಸುತ್ತಲೇ ಬಂದಿದೆ. ಮ್ಯಾನ್ಮಾರ್ ಸರಕಾರ ರಚಿಸಿದ್ದ ಹೊಸ ತನಿಖಾ ತಂಡದ ನೇತೃತ್ವ ವಹಿಸಿದ್ದು ವಿಶ್ವಸಂಸ್ಥೆಯಿಂದ ಕಪ್ಪು ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದ ಮ್ಯಾನ್ಮಾರ್ ಮಾಜಿ ಸೇನಾಧಿಕಾರಿ. ಇದೇ ವ್ಯಕ್ತಿಗೆ 2007ರಲ್ಲಿ ನಡೆದ ದಂಗೆಗಳನ್ನು ಅಮಾನವೀಯವಾಗಿ ದಮನಿಸಿದ ಕುಖ್ಯಾತಿಯೂ ಇದೆ. ಇಂಥ ಪೂರ್ವನಿಯೋಜಿತ ಉದ್ದೇಶಗಳಿರುವ ಆಂತರಿಕ ತನಿಖೆಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವೇ ಸರಿ. ಅಂತರಾಷ್ಟ್ರೀಯ ಮಾಧ್ಯಮಗಳ ಜೊತೆಗಿನ ಸಂದರ್ಶನದಲ್ಲಿ ಸೂಕಿ, "ಜಾಗತಿಕ ಸಮುದಾಯ ಮ್ಯಾನ್ಮಾರ್ ನ ಋಣಾತ್ಮಕ ಅಂಶಗಳ ಕಡೆಗೆ ಮಾತ್ರ ಗಮನ ನೀಡುತ್ತಿದೆ" ಎಂದಿದ್ದ ಸೂಕಿ ವಿಶ್ವಸಂಸ್ಥೆ ರೊಹಿಂಗ್ಯಾ ಕುರಿತಾಗಿ ಕಾಳಜಿ ವ್ಯಕ್ತಪಡಿಸಿದಾಗ, "ಮಾನವ ಹಕ್ಕುಗಳು ಉಲ್ಲಂಘನೆಯಾಗದ ಯಾವುದಾದರೊಂದು ದೇಶವನ್ನು ನನಗೆ ತೋರಿಸಿ" ಎಂದು ಜವಾಬ್ದಾರಿಯಿಂದ ನಾಜೂಕಾಗಿ ಜಾರಿಕೊಂಡುಬಿಟ್ಟರು.

ಮಿಲಿಟರಿ ಆಡಳಿತಕ್ಕೆ ಸಡ್ಡು ಹೊಡೆದು ಆಂಗ್ ಸಾನ್ ಸೂಕಿ ಒಂದು ವರ್ಷದ ಹಿಂದೆ ಮ್ಯಾನ್ಮಾರ್ ಅಧಿಕಾರದ ಚುಕ್ಕಾಣಿ ಹಿಡಿದಾಗ, ಮ್ಯಾನ್ಮಾರ್ ಮಾತ್ರವಲ್ಲದೇ ವಿಶ್ವಾದ್ಯಂತ ಜನರ ಕಣ್ಣಲ್ಲಿ ಭರವಸೆಯ ಆಶಾಕಿರಣ ಕಂಡಿತ್ತು. ಸೂಕಿ ಆಡಳಿತದ ವೈಖರಿ ಬದಲಾಯಿಸುತ್ತಾರೆ ಎಂದು ಯೋಚಿಸಿದ್ದವರಿಗೆ ಆಡಳಿತವೇ ಸೂಕಿಯವರನ್ನು ಬದಲಾಯಿಸುತ್ತದೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ನೊಬೆಲ್ ಶಾಂತಿ ಪಾರಿತೋಷಕ ಪುರಸ್ಕೃತ ಸೂಕಿ ಆಡಳಿತದ ನೆರಳಲ್ಲೇ ರೊಹಿಂಗ್ಯಾಗಳ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆಗಳು ವಿಶ್ವರಾಜಕೀಯದ ವಿರೋಧಾಭಾಸಗಳಲ್ಲೊಂದು.  ವಿಶ್ವ ಕಂಡ ಮಹಾನ್ ದಾರ್ಶನಿಕರಲ್ಲೊಬ್ಬರಾದ ಪ್ಲೇಟೊ ಹೇಳುತ್ತಾರೆ, "ತತ್ವಜ್ಞಾನಿಗಳು ರಾಜರಾಗುವವರೆಗೆ ಅಥವಾ ಆಳುವವರು ನಿಜಕ್ಕೂ ತತ್ವಜ್ಞಾನಿಗಳಾಗುವವರೆಗೆ ರಾಜ್ಯ ಮತ್ತು ಮಾನವಕುಲದ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಇದಕ್ಕಾಗಿ ತತ್ವಜ್ಞಾನ ಮತ್ತು ರಾಜಕೀಯ ಶಕ್ತಿ ಒಂದೇ ಕೈ ಸೇರುವಂತಾಗಬೇಕು" ಆದರ್ಶವಾದಿ ಪ್ಲೇಟೊ ಮಾತುಗಳು ವಾಸ್ತವಿಕ ರಾಜಕೀಯದಲ್ಲಿ ಕಾರ್ಯಾಚರಣೆಗಿಳಿಸಲಾಗದೇ ಹೋದರೂ ಮುಂದಿನ ದಿನಗಳಲ್ಲಾದರೂ ಮ್ಯಾನ್ಮಾರ್ ನಾಗರಿಕ ಸರಕಾರ ಈ ಬಗೆಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಕೈಗೊಳ್ಳುವಂತಾಗಲಿ.

(This article was published in Varthabharathi Newsapaper on 10 January 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ