ಶನಿವಾರ, ಡಿಸೆಂಬರ್ 17, 2016

ಕಮ್ಯುನಿಸ್ಟ್ ಕನಸಿನ ಗೋಪುರ ಕೆಡವಿದವರ್ಯಾರು?

ಕಾರ್ಲ್ ಮಾರ್ಕ್ಸ್ ಬರೆದಿಟ್ಟಿದ್ದ ಕ್ರಾಂತಿಯನ್ನು ಪ್ರಪಂಚದ ಮುಂದೆ ತೆರೆದಿಟ್ಟಿದ್ದು ಸೊವಿಯೆತ್ ಮಾದರಿ. 'ಇಸಂ' ಗಳ ತಾಕಲಾಟದಲ್ಲಿ, ವಿಶ್ವ ಶಕ್ತಿಯಾಗುವ ಕಾತರದಲ್ಲಿ ಅತ್ತ ಕಡೆ ಮಾರ್ಕ್ ನನ್ನೂ ಇತ್ತ ಕಡೆ ನೈತಿಕತೆಯನ್ನೂ ಕಳೆದುಕೊಂಡ ಸೊವಿಯೆತ್ ಹಿಂತಿರುಗಿ ನೋಡುವಷ್ಟರಲ್ಲಿ ಚೂರುಗಳಾಗಿ ಒಡೆದುಹೋಗಿತ್ತು!!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಕಾರ್ಲ್ ಮಾರ್ಕ್ಸ್ ಕಂಡ ಕ್ರಾಂತಿಯ ಕನಸು ಅವನ ಜೀವಿತಾವಧಿಯಲ್ಲಿ ನನಸಾಗದೇ ಹೋದರೂ ಮುಂದೊಂದು ದಿನ ರಷ್ಯಾದಲ್ಲಿ ಲೆನಿನ್ ನಾಯಕತ್ವದಲ್ಲಿ ನಿಜವಾಗುತ್ತದೆ. ಮಾರ್ಕ್ಸ್ ಹೇಳಿದ್ದಕ್ಕೂ ರಷ್ಯಾದಲ್ಲಿ ನಡೆದ ಕ್ರಾಂತಿಗೂ ಅಜಗಜಾಂತರ ವ್ಯತ್ಯಾಸಗಳಿದ್ದರೂ ಕ್ರಾಂತಿಯೊಂದು ನಡೆದುಹೋಯಿತು. ಮುಂದೆ ಸ್ಟಾಲಿನ್ ಬಂದ ಮೇಲಂತೂ ಕಮ್ಯುನಿಸ್ಟರಿಗೆ ಕಾರ್ಲ್ ಮಾರ್ಕ್ಸ್ ಅಕ್ಷರಶಃ ಮರೆತು ಹೋಗುವಂತಾಗಿದ್ದು ವಿಪರ್ಯಾಸ. ಇವೆಲ್ಲದರ ಮಧ್ಯೆ ಮಾರ್ಕ್ಸ್ ವಿಚಾರಧಾರೆಯ ಹೆಸರಿನಲ್ಲಿ ಸೊವಿಯೆತ್ ಒಕ್ಕೂಟದ ನಿರ್ಮಾಣವಾಗಿ, ಅದೊಂದು ಸೂಪರ್ ಪವರ್ ಆಗಿ ಬದಲಾಗಿ ವಿಶ್ವವನ್ನೇ ನಡುಗಿಸುತ್ತದೆ. ಅಮೆರಿಕಾಗೆ ಸಡ್ಡು ಹೊಡೆದು ಶೀತಲ ಸಮರದಲ್ಲಿ ದ್ವಿತೀಯ ಜಗತ್ತಿನ ನಾಯಕತ್ವ ವಹಿಸಿಕೊಳ್ಳುತ್ತದೆ. ಅಮೆರಿಕಾ ಇಟ್ಟ ಪ್ರತಿ ಹೆಜ್ಜೆಗೂ ಸವಾಲು ಹಾಕುತ್ತಾ ಅಣ್ವಸ್ತ್ರಗಳಿಂದ ಸ್ಟಾರ್ ವಾರ್ ಗಳ ತನಕವೂ ತನ್ನ ಜಿದ್ದು ಸಾಧಿಸಿದ ಸೊವಿಯೆತ್ ಒಕ್ಕೂಟ 1991ರಲ್ಲಿ ಸಿಡಿದು ಛಿಧ್ರವಾಗಿತ್ತು. ಯಾರೂ ಊಹೆಗೂ ನಿಲುಕದ ರೀತಿಯಲ್ಲಿ ಸೊವಿಯೆತ್ ಒಕ್ಕೂಟದಲ್ಲಿ ಹಠಾತ್ ಬದಲಾವಣೆಗಳು ಸೊವಿಯೆತ್ ಒಕ್ಕೂಟವೆಂಬ ಶಕ್ತಿ ಕೇಂದ್ರ ಕಮ್ಯುನಿಸಂನ ಕೆಂಪು ಬಣ್ಣದೊಳಗೂ ಬಣ್ಣ ಬಣ್ಣದ ಕಥೆಗಳೊಂದಿಗೆ ಇತಿಹಾಸದ ಪುಟ ಸೇರುವಂತೆ ಮಾಡಿತ್ತು.  ಚರಿತ್ರೆ ಸೊವಿಯೆತ್ ಒಕ್ಕೂಟದ್ದಾಯಿತು. ಮಿಕಾಯಿಲ್ ಗೊರ್ಬಚೆವ್ ಮಾರ್ಚ್ 1985ರಲ್ಲಿ ಕಮ್ಯುನಿಸ್ಟ್ ಪಕ್ಷದ ಜನರಲ್ ಸೆಕ್ರೆಟರಿಯಾದಾಗ, ಸೊವಿಯೆತ್ ಒಕ್ಕೂಟದ ಉದ್ದಗಲಕ್ಕೂ ಸಮಸ್ಯೆಗಳಿದ್ದುದು ನಿಜವೇ ಆಗಿದ್ದರೂ, ಸೊವಿಯೆತ್ ಅಂತ್ಯವನ್ನೂ ಯಾರೊಬ್ಬರೂ ಕನಸಿನಲ್ಲೂ ಊಹಿಸರಿರಲಿಲ್ಲ! 
Image may contain: 1 person
ಶೀತಲ ಸಮರದಲ್ಲಿ ಅಮೆರಿಕಾ ಸಮರತಂತ್ರಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಜಾರ್ಜ್ ಕೆನನ್ ಮತ್ತು ರಷ್ಯಾ ಇತಿಹಾಸದ ಆಳವಾದ ಅಧ್ಯಯನ ನಡೆಸಿದ ಅಮೆರಿಕನ್ ಇತಿಹಾಸಕಾರ ರಿಚರ್ಡ್ ಪೈಪ್ ನಂಥ ಅತಿರಥ ಮಹಾರಥರೂ ಸೊವಿಯೆತ್ ಪತನವನ್ನು ಅನಿರೀಕ್ಷಿತ ಮತ್ತು ಚರಿತ್ರೆಯ ಊಹಿಸಲಾಗದ ತಿರುವು ಎಂದು ಅಭಿಪ್ರಾಯಪಡುತ್ತಾರೆ. ಈ ಘಟನೆ ಅದೆಷ್ಟು ಅನಿರೀಕ್ಷಿತ ಎನ್ನುವುದಕ್ಕೆ ನ್ಯಾಶನಲ್ ಇಂಟರೆಸ್ಟ್ ನ ೧೯೯೩ರ ವಿಶೇಷ ಸಂಚಿಕೆ 'ಸೊವಿಯೆತ್ ಕಮ್ಯುನಿಸ್ಂನ ವಿಚಿತ್ರ ಸಾವು' (The Strange Death of Soviet Communism) ಎಂಬ ಶೀರ್ಷಿಕೆಯೊಂದಿಗೆ ಹೊರಬಂದಿದ್ದೇ ಸಾಕ್ಷಿ. ಈ ಘಟನೆ ನಡೆದು ಕಾಲು ಶತಮಾನ ಕಳೆದರೂ ಇವತ್ತಿಗೂ ನಾವು ಸೊವಿಯೆತ್ ಒಕ್ಕೂಟ ಒಡೆದುಹೋಗಲು ನೀಡುತ್ತಿರುವ ಸಾಮಾನ್ಯ ಕಾರಣಗಳು ಈ ಐತಿಹಾಸಿಕ ಘಟನೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ. ಸೊವಿಯೆತ್ ಒಕ್ಕೂಟ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿದ್ದುದು ನಿಜವೇ ಆದರೂ 1985ರಲ್ಲಿ ಸೊವಿಯೆತ್ ನೈಸರ್ಗಿಕ ಸಂಪನ್ಮೂಲಗಳ ಪ್ರಮಾಣಕ್ಕೂ ಮತ್ತು ಹತ್ತು ವರ್ಷಗಳ ಹಿಂದಿನ ಸೊವಿಯೆತ್ ಸ್ಥಿತಿಗೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಜೀವನ ಮಟ್ಟ ಕುಸಿದಿತ್ತು. ಆಹಾರದ ಕೊರತೆ, ದಿನನಿತ್ಯದ ಬಳಕೆಯ ಸಾಮಗ್ರಿಗಳಿಗಾಗಿ ಮಾರುದ್ದ ಸಾಲುಗಳು, ಅತಿಯಾದ ಬಡತನ ಇವೆಲ್ಲವುಗಳೂ ಸೊವಿಯೆತ್ ಎಂಬ ದೈತ್ಯನನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಆದರೆ ಇಂಥ ಎಲ್ಲಾ ಸಮಸ್ಯೆಗಳು ದಶಕಗಳಿಂದ ಕಾಡುತ್ತಿದ್ದರೂ ಸೊವಿಯೆತ್ ದೈತ್ಯರು ಯಾವತ್ತೂ ಸಮಾಜ, ರಾಜಕೀಯ ಮತ್ತು ಆರ್ಥಿಕತೆಯ ಮೇಲಿನ ತಮ್ಮ ಹಿಡಿತ ಬಿಟ್ಟು ಕೊಟ್ಟಿರಲಿಲ್ಲ. 1985ಕ್ಕಿಂತ ಮುಂಚೆ ಸೊವಿಯೆತ್ ತರೆಹೇವಾರಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸೊವಿಯೆತ್ ತನ್ನನ್ನು ತಾನು ವಿಭಜಿಸಿಕೊಳ್ಳುವ ಯೋಚನೆಯನ್ನೂ ಮಾಡಿರಲಿಲ್ಲ. 1986ರಲ್ಲಿ ಜಾಗತಿಕ ತೈಲ ಬೆಲೆಗಳು ಒಂದು ಬ್ಯಾರಲ್ ಗೆ $66ರಿಂದ  $20ಕ್ಕೆ ಇಳಿದಿದ್ದು ಸೊವಿಯೆತ್ ಪಾಲಿಗೆ ದೊಡ್ಡ ಹೊಡೆತವೇ ಆಗಿದ್ದರೂ ಸೊವಿಯೆತ್ ಈ ಹೊಡೆತವನ್ನು ತಾಳಿಕೊಳ್ಳುವ ಪರಿಸ್ಥಿತಿಯಲ್ಲಿತ್ತು ಎನ್ನುವುದನ್ನು ಅರ್ಥಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಾರೆ.

ಇನ್ನು ರಾಜಕೀಯವಾಗಿ ಸೊವಿಯೆತ್ ಪತನಕ್ಕೆ ಬಲವಾದ ಕಾರಣಗಳೇನಾದರೂ ಇವೆಯೇ? ಎಂದು ಯೋಚಿಸಿದಲ್ಲಿ ಮತ್ತೊಮ್ಮೆ ಉತ್ತರ ಇಲ್ಲ ಎನ್ನುತ್ತದೆ. ಕಮ್ಯುನಿಸ್ಟ್ ಸೊವಿಯೆತ್ ನಾಯಕರು ತಮ್ಮ ವಿರೋಧಿಗಳನ್ನೆಲ್ಲಾ ವ್ಯವಸ್ಥಿತವಾಗಿ ಮಟ್ಟ ಹಾಕಿದ್ದರು. ಕ್ಯಾಂಪ್ ಮತ್ತು ಜೈಲುಗಳಲ್ಲಿ ವ್ಯವಸ್ಥೆಯ ವಿರೋಧಿಗಳನ್ನು ಕೊಲೆ ಮಾಡಲಾಯಿತು ಇನ್ನುಳಿದವರು ದೇಶ ಬಿಟ್ಟು ತಲೆ ಮರೆಸಿಕೊಂಡಿದ್ದರಿಂದ ಸೊವಿಯೆತ್ ನಾಯಕತ್ವಕ್ಕೆ ಹೇಳಿಕೊಳ್ಳುವಂಥ ಪ್ರಭಾವಿ ಮಟ್ಟದ ರಾಜಕೀಯ ವಿರೋಧಿಗಳಿರಲಿಲ್ಲ. ಸೊವಿಯೆತ್ ಒಕ್ಕೂಟದ ಸೇನೆ ಅಫಘಾನಿಸ್ತಾನ ಪ್ರವೇಶಿಸಿ ಅಲ್ಲಿನ ಕಲಹದಲ್ಲಿ ಪಾಲ್ಗೊಂಡು ಬೃಹತ್ ಕಷ್ಟ ನಷ್ಟಗಳನ್ನು ಭರಿಸಬೇಕಾಯ್ತಾದರೂ, ಸುಮಾರು 5 ಮಿಲಿಯನ್ ಸಂಖ್ಯಾಬಲವಿದ್ದ ಬಲಿಷ್ಠ ಸೊವಿಯೆತ್ ಮಿಲಿಟರಿಗೆ ಇದು ತಡೆದುಕೊಳ್ಳಲಾಗದ ಸಂಕಟವಂತೂ ಆಗಿರಲಿಲ್ಲ. ಸೊವಿಯೆತ್ ವಿನಾಶಕ್ಕೆಂದೇ ಕಾಯುತ್ತಿದ್ದ ಅಮೆರಿಕಾ ಕೂಡ ಸೊವಿಯೆತ್ ಪತನಕ್ಕೆ ವಿಶೇಷ ಪ್ರಯತ್ನಪಟ್ಟಿರಲಿಲ್ಲ ಎನ್ನುವುದು ಇಲ್ಲಿ ವಿಶೇಷ. ಆ ಕಾಲಕ್ಕಾಗಲೇ 'ರೇಗನ್ ಡಾಕ್ಟ್ರಿನ್' ಅನ್ನು ತನ್ನ ವಿದೇಶಾಂಗ ನೀತಿಯನ್ನಾಗಿ ಮಾಡಿಕೊಂಡಿದ್ದ ಅಮೆರಿಕಾ ತೃತಿಯ ಜಗತ್ತಿನ ರಾಷ್ಟ್ರಗಳಾದ ಅಫಘಾನಿಸ್ತಾನ್, ಅಂಗೋಲ, ನಿಕರಾಗುವ ಮತ್ತು ಇಥಿಯೋಪಿಯಾಗಳಲ್ಲಿ ಕಮ್ಯುನಿಸಂ ವ್ಯಾಪಿಸದಂತೆ ತಡೆಯುವ ಪ್ರಯತ್ನ ಮಾಡಿತ್ತಷ್ಟೇ. ಇದರ ಹೊರತಾಗಿ ಸೊವಿಯೆತ್ ಛಿದ್ರವಾಗುವ ಯೋಚನೆಯೂ ಅಮೆರಿಕಾಗೆ ಇರಲಿಲ್ಲ! ಈ ಹಿನ್ನೆಲೆಯಲ್ಲಿ ಸೊವಿಯೆತ್ ಒಕ್ಕೂಟ ಒಂದು ಸೂಪರ್ ಪವರ್ ಗೆ ಸರ್ವೇ ಸಾಮಾನ್ಯವಾದ ಕೆಲ ಸಹಜ ರಾಜಕೀಯ ಸಮಸ್ಯೆಗಳನ್ನು ಎದುರಿಸುತ್ತಿತ್ತೆನ್ನುವುದನ್ನು ಬಿಟ್ಟರೆ, ತನ್ನ ಜಾಗತಿಕ ಶಕ್ತಿ ವಲಯ ಮತ್ತು ಪ್ರಭಾವದ ವಿಚಾರದಲ್ಲಿ 1980ರಲ್ಲೂ ಅಮೆರಿಕಾಕ್ಕೆ ಸಡ್ಡು ಹೊಡೆಯುವ ಮಟ್ಟದಲ್ಲಿತ್ತು! ಇತಿಹಾಸಕಾರ ಆಡಂ ಉಲಂ ಹೇಳುವಂತೆ, 1985ರಲ್ಲಿ ಪ್ರಪಚದ ಯಾವುದೇ ಪ್ರಮುಖ ರಾಷ್ಟ್ರ ಸೊವಿಯೆತ್ ನಷ್ಟು ದೃಢವಾಗಿರಲಿಲ್ಲ ಮತ್ತು ಯಾವುದೇ ರಾಷ್ಟ್ರದ ಯೋಜನೆಗಳು ಸೊವಿಯೆತ್ ಯೋಜನೆಗಳಷ್ಟು ಸ್ಪಷ್ಟವಾಗಿರಲಿಲ್ಲ!

ಸೊವಿಯೆತ್ ಪತನದಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಂಶಗಳ ಪಾತ್ರವನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗದಿದ್ದರೂ, ದಶಕಗಳಿಂದ ಕಾಡುತ್ತಿದ್ದ ಈ ಸಮಸ್ಯೆಗಳಿಗೆ ಇನ್ನಷ್ಟು ಬಲತುಂಬಿ ಸೊವಿಯೆತ್ ನಲ್ಲಿ ಪ್ರತಿಕ್ರಾಂತಿಯೊಂದನ್ನು ಪ್ರಚೋದಿಸಿ ಮುನ್ನಡೆಸಿದ್ದು ನೈತಿಕ ಅಧಃಪತನ! ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕಮ್ಯುನಿಸ್ಟ್ ವ್ಯವಸ್ಥೆ ಸೃಷ್ಟಿಸಿದ್ದ ನೈತಿಕ ಆಧಃಪತನದ ವಿರುದ್ದ ಜನಮಾನಸದಲ್ಲಿ ಜಾಗೃತಿ ಮೂಡಿಸಿದ ನೈತಿಕ ಪುನರುಜ್ಜೀವನ! ಸುಮಾರು ಏಳು ದಶಕಗಳ ಕಾಲ ಕಮ್ಯುನಿಸ್ಟ್ ನಿರಂಕುಶ ಆಡಳಿತ ಮತ್ತು ನಿರಂತರ ಅಪನಂಬಿಕೆಯಿಂದ ಬಳಲಿದ್ದ ಸೊವಿಯೆತ್ ಸಮಾಜಕ್ಕೆ ನೈತಿಕ ಪುನರುಜ್ಜೀವನ ನೀಡಿದ್ದು ಅನೇಕ ಲೇಖಕರು, ಪತ್ರಕರ್ತರು ಮತ್ತು ಕಲಾವಿದರರು. ರಾಜಕೀಯ ತತ್ವಜಾನಿಗಳಾದ ಇಗೊರ್ ಕ್ಲ್ಯಾಮ್ಕಿನ್, ಅಲೆಕ್ಸಾಂಡರ್ ಟಿ, ಪತ್ರಕರ್ತರಾದ ಯೆಗೊರ್ ಯಾಕೊವ್ಲೆವ್ ಮುಂತಾದವರು ಸೊವಿಯೆತ್ ನಲ್ಲಿ ಪ್ರತಿಕ್ರಾಂತಿಗೆ ದಾರಿ ಮಾಡಿಕೊಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. 1980ರ ದಶಕದಲ್ಲಿ ಸೊವಿಯೆತ್ ಸಮಾಜದಲ್ಲಿ ಮೂಡಿದ ನೈತಿಕ ಪ್ರಜ್ಞೆ ಸ್ಟಾಲಿನಿಸಂ, ಭ್ರಷ್ಟಾಚಾರಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಅಸ್ತ್ರವಾಗಿ ಮಾರ್ಪಡುತ್ತದೆ.

1985ರಲ್ಲಿ ಸೊವಿಯೆತ್ ಅನ್ಯುನ್ನತ ನಾಯಕನಾಗಿದ್ದ ಗೊರ್ಬಚೆವ್ ಅನೇಕ ಸುಧಾರಣೆಗಳನ್ನು ತರುತ್ತಾನೆ. ಅವುಗಳಲ್ಲಿ ಮುಖ್ಯವಾದುದು 'ಪೆರೆಸ್ಟ್ರಾಯಿಕಾ' ಮತ್ತು 'ಗ್ಲಾಸ್ ನಾಸ್ಟ್'. ಈ ಎಲ್ಲಾ ಯೋಜನೆಗಳು ಮೇಲ್ನೋಟಕ್ಕೆ ಆರ್ಥಿಕ ಸುಧಾರಣೆಗಳಂತೆ ಕಂಡರೂ ಇವುಗಳ ಮೂಲ ಉದ್ದೇಶ ಸ್ಟಾಲಿನ್ ಮತ್ತು ತದನಂತರದ ರಾಜಕೀಯದಿಂದ ಸಮಾಜ ಕಳೆದುಕೊಂಡ ನೈತಿಕತೆಯನ್ನು ಸೊವಿಯೆತ್ ಗೆ ಹಿಂದಿರುಗಿಸುವುದೇ ಆಗಿತ್ತು! ಸೊವಿಯೆತ್ ಒಕ್ಕೂಟ ಕ್ರಾಂತಿಯ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾಗಿದೆ ಎಂಬ ಸತ್ಯ ಗೊರ್ಬಚೆವ್ ಗೆ ಅರಿವಾಗಿತ್ತು. ಸೊವಿಯೆತ್ ಪತನವಾದ ಕೆಲ ವರ್ಷಗಳ ನಂತರ ಸಂದರ್ಶನವೊಂದರಲ್ಲಿ ಗೊರ್ಬಚೆವ್ ಹೇಳಿದ ಮಾತು ಹೀಗಿದೆ, "ಸೊವಿಯೆತ್ ಮಾದರಿ ಆರ್ಥಿಕ ಮತ್ತು ಸಾಮಾಜಿಕ ಹಂತಗಳಲ್ಲಿ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಸೋತುಹೊಗಿದೆ. ಜನ ಸಂಸ್ಕೃತಿಯ ಕಾರಣಗಳಿಂದಾಗಿ ಸೊವಿಯೆತ್ ಮಾದರಿಯನ್ನು ತಿರಸ್ಕರಿಸಿದ್ದಾರೆ. ಏಕೆಂದರೆ ಈ ಮಾದರಿ ಮನುಷ್ಯನನ್ನು ಗೌರವಿಸುವುದಿಲ್ಲ ಮತ್ತವನನ್ನು ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಶೋಷಿಸುತ್ತದೆ." 1980ರಲ್ಲಿ  ಗೊರ್ಬಚೆವ್ ನನ್ನು ಇನ್ನಿತರ ಎಲ್ಲಾ ಕಾರಣಗಳಿಗಿಂತಲೂ ಹೆಚ್ಚಾಗಿ ಕಾಡಿದ್ದು ಈ ನೈತಿಕ ಅಧಃಪತನ. ಈ ಸೊವಿಯೆತ್ ನಾಯಕ ಮನಸ್ಸು ಮಾಡಿದ್ದರೆ ಸ್ಟಾಲಿನ್ ಮಾದರಿಯಲ್ಲಿ ಎಲ್ಲಾ ದಂಗೆಗಳನ್ನು ಬಗ್ಗು ಬಡಿದು ಸೊವಿಯೆತ್ ಒಕ್ಕೂಟವನ್ನು ಉಳಿಸಿಕೊಳ್ಳುವುದು ಸಾಧ್ಯವಿತ್ತು. ಆದರೆ ಆ ಕಾಲಕ್ಕಾಗಲೇ ಸೊವಿಯೆತ್ ಸಮಾಜದಲ್ಲಿ ಮೂಡಿದ್ದ ನೈತಿಕ ಪ್ರಜ್ಞೆ ಈ ಮಾರ್ಗವನ್ನು ಅನುಸರಿಸುವುದರಿಂದ ಗೊರ್ಬಚೆವ್ ನನ್ನು ತಡೆದಿತ್ತಲ್ಲದೇ ಈ ನಡೆ ಸ್ವತ್ಃ ಗೊರ್ಬಚೆವ್ ಆದರ್ಶವಾದಿ ವ್ಯಕ್ತಿತ್ವಕ್ಕೆ ವಿರೋಧಾಭಾಸವಾಗಿತ್ತು. "ಆರಂಭದಿಂದಲೂ ನಮಗೆ ಮುಷ್ಟಿಯಿಂದ ಮೇಜನ್ನು ಗುದ್ದಿ ಮಾತನಾಡುವುದನ್ನು ಕಲಿಸಲಾಗಿದೆ. ಹಾಗೆ ಮಾಡುವುದು ಸಾಧ್ಯವಿದೆ ಆದರೆ ಅಂಥ ಭಾವನೆ ಇರಬಾರದು" ಗೊರ್ಬಚೆವ್ ರವರ ಈ ಮಾತುಗಳು ಆಗಿನ ಸೊವಿಯೆತ್ ಪರಿಸ್ಥಿತಿ ಮತ್ತು ಗೊರ್ಬಚೆವ್ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪರಿಚಯಿಸುತ್ತವೆ. 

ಕಾರ್ಲ್ ಮಾರ್ಕ್ಸ್ ಬರೆದಿಟ್ಟಿದ್ದ ಕಮ್ಯುನಿಸ್ಟ್ ಸ್ವರ್ಗವನ್ನು ತನ್ನದೇ ರೀತಿಯಲ್ಲಿ ತೆರೆದಿಟ್ಟ ಸೊವಿಯೆತ್ ಒಕ್ಕೂಟ ಇತಿಹಾಸದ ಪುಟ ಸೇರಿ ಕಾಲು ಶತಮಾನವೇ ಕಳೆದುಹೋಗಿದೆ. ಪ್ರತಿಯೊಂದು ಕ್ರಾಂತಿಗೂ ಎದುರಾಗಿ ಪ್ರತಿಕ್ರಾಂತಿಯೊಂದಿರುತ್ತದೆ. ಮಾರ್ಕ್ಸ್ ಮತ್ತು ಕ್ರಾಂತಿಯ ಹೆಸರಲ್ಲಿ ವಿಶ್ವದ ಸೂಪರ್ ಪವರ್ ಆಗಿದ್ದ ಕಮ್ಯುನಿಸ್ಟ್ ದೈತ್ಯನಿಗೆ ಕ್ರಾಂತಿಯ ಪ್ರಶ್ನೆಗಳು ಕೊನೆಗೂ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿತ್ತು. ಸೊವಿಯೆತ್ ಮಾದರಿಯಲ್ಲಿ ಅನೇಕ ಕಮ್ಯುನಿಸ್ಟ್ ರಾಷ್ಟ್ರಗಳು ಹುಟ್ಟಿಕೊಂಡವಾದರೂ, ದಿನೇ ದಿನೇ ಕಮ್ಯುನಿಸಂ ಮಾರ್ಕ್ಸ್ ನಿಂದ ದೂರ ಹೋಗತೊಡಗಿದ್ದು ಸತ್ಯ. ನೈತಿಕತೆ ಮತ್ತು ಮಾನವೀಯತೆಗಳ ಬಂಧ ಸಡಿಲಿಸಿಕೊಂಡ ಯಾವುದೇ 'ಇಸಂ'ಗಳು ಯಶಸ್ವಿಯಾದ ಉದಾಹರಣೆ ಇತಿಹಾಸದಲ್ಲೆಲ್ಲೂ ಇಲ್ಲ. ಇವೆಲ್ಲವನ್ನೂ ನೋಡಿದ ಮೇಲೆ ಇರಬೇಕು ಮಾರ್ಕ್ಸ್ ನಂಥ ಮಾರ್ಕ್ಸ್ ಮಹಾಶಯನೇ, "ನಾನು ಮಾರ್ಕ್ಸಿಸ್ಟ್ ಅಲ್ಲ" ಎಂದಿದ್ದು!

(This article was published in Vishwavani newspaper on 16 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ