ಶನಿವಾರ, ಡಿಸೆಂಬರ್ 17, 2016

ಮಧ್ಯ ಏಷ್ಯಾದಲ್ಲಿ ಭಾರತದ ರಾಜತಾಂತ್ರಿಕ ನಡೆ

ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗದೆ ಆಚರಣೆಗೆ ಬರುವಂತಾದರೆ, ಮಧ್ಯ ಏಷ್ಯಾದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೊಂದು ವೇಳೆ ಭಾರತ ಈ ಐತಿಹಾಸಿಕ ಬಂಧವನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದೇ ಆದಲ್ಲಿ ಈ ರಾಜತಾಂತ್ರಿಕ ನಡೆಗೆ ಏಷ್ಯಾ ರಾಜಕೀಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಮಧ್ಯ ಏಷ್ಯಾ ರಾಷ್ಟ್ರಗಳ ಜೊತೆಗಿನ ಭಾರತದ ರಾಜಕೀಯ ಸಂಬಂಧಗಳು ಇಂದು ನಿನ್ನೆಯದಲ್ಲ. ಸಹಸ್ರಾರು ವರ್ಷಗಳ ಹಿಂದಿನಿಂದಲೂ ಮಧ್ಯ ಏಷ್ಯಾದ ಚರಿತ್ರೆಯ ವಿವಿಧ ಆಯಾಮಗಳು ಭಾರತದ ಜೊತೆಗೂ ತಳುಕುಹಾಕಿಕೊಂಡಿದೆ. ಉದಾಹರಣೆಗೆ ಕುಶಾನರ ಸಾಮ್ರಾಜ್ಯ ಈ ಎರಡು ಪ್ರದೇಶಗಳನ್ನು ರಾಜಕೀಯವಾಗಿ ತುಂಬಾ ಹತ್ತಿರಕ್ಕೂ ತಂದಿತ್ತು. ಮುಂದೆ ಉತ್ತರ ಭಾರತಕ್ಕೆ ಲಗ್ಗೆ ಹಾಕಿದ ಅನೇಕ ಹೆಚ್ಚಿನ ಮುಸ್ಲಿಂ ದೊರೆಗಳ ಮೂಲವೂ ಮಧ್ಯ ಏಷ್ಯಾವೇ ಆಗಿತ್ತು. ಪ್ರಸಕ್ತ ಭಾರತದ ವಿದೇಶಾಂಗ ನೀತಿಯೂ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ 'ವಿಸ್ತ್ರತ ನೆರೆಹೊರೆ'ಯ (Extended Neighbourhood) ಸ್ಥಾನಮಾನ ನೀಡಿದೆ. ಈ ಪ್ರದೇಶದಲ್ಲಿರುವ ಕಜಕಿಸ್ತಾನ್, ಕಿರ್ಗಿಸ್ತಾನ್, ತಾಜಿಕಿಸ್ತಾನ್, ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳು ಸೊವಿಯೆತ್ ಒಕ್ಕೂಟದ ಭಾಗಗಳಾಗಿದ್ದು, ಸೊವಿಯೆತ್ ಒಕ್ಕೂಟ ಹೊಡೆದುಹೋದಾಗ 1991ರಲ್ಲಿ ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳಾದವು. ಸೊವಿಯೆತ್ ಒಕ್ಕೂಟದ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದ ಭಾರತಕ್ಕೆ ಸಹಜವಾಗಿಯೇ ಮಧ್ಯ ಏಷ್ಯಾದ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಲುಗೆ ಬೆಳೆದಿತ್ತು.

ಸೊವಿಯೆತ್ ಒಕ್ಕೂಟದ ಪತನದೊಂದಿಗೆ ಬದಲಾದ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ತರಾತುರಿಯಲ್ಲಿದ್ದ ಭಾರತ ಭಾರತದ ಮಧ್ಯ ಏಷ್ಯಾದ ಕಡೆಗೆ ಅಷ್ಟೊಂದು ಗಮನ ನೀಡಲಾಗಲಿಲ್ಲ. ಸೊವಿಯೆತ್ ಒಕ್ಕೂಟದ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ರಷ್ಯಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಶೀತಲ ಸಮರೋತ್ತರ ಕಾಲದಲ್ಲಿ ಭಾರತಕ್ಕೆ ತನ್ನ ದ್ವಿಪಕ್ಷೀಯ ಒಪ್ಪಂದಗಳ ಪುನರ್ ವಿಮರ್ಶೆಯ ಅನಿವಾರ್ಯತೆಯೂ ಬಹಳಷ್ಟಿತ್ತು. ಈ ಎಲ್ಲಾ ಒತ್ತಡಗಳು ಮಧ್ಯ ಏಷ್ಯಾ ರಾಷ್ಟ್ರಗಳನ್ನು ಮುಂದಿನ ಸುಮಾರು ಒಂದು ದಶಕದವರೆಗೆ ಭಾರತದ ವಿದೇಶಾಂಗ ನೀತಿಯ ಆದ್ಯತೆಗಳ ಪಟ್ಟಿಯಿಂದ ಹೊರಗುಳಿಯುವಂತೆ ಮಾಡಿತ್ತು. ಆದರೆ ಕಳೆದೊಂದು ದಶಕ ಜಾಗತಿಕ ರಾಜಕೀಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಮಧ್ಯ ಏಷ್ಯಾ ನೈಸರ್ಗಿಕ ಸಂಪನ್ಮೂಲಗಳ ಕಾರಣಕ್ಕಾಗಿ ವಿಶ್ವಶಕ್ತಿಗಳ ಮಧ್ಯೆ ಪೈಪೋಟಿಗೆ ಕಾರಣವಾಗಿದೆ. ಇದೇ ವೇಳೆ ಭಾರತ ನಿಧಾನವಾಗಿ ಎಚ್ಚೆತ್ತುಕೊಂಡು ವಿಶ್ವದ ಆರ್ಥಿಕ ಶಕ್ತಿಯಾಗಿ ಮತ್ತು ಏಷ್ಯಾದ ಪ್ರಾದೇಶಿಕ ಶಕ್ತಿಯಾಗಿಯೂ ಗುರುತಿಸಿಕೊಂಡಿದೆ. ಭಾರತದ ಪ್ರಾದೇಶಿಕ ಪ್ರಭಾವಕ್ಕೆ ಏಟು ನೀಡಲು ತನ್ನ ಸಾಮರ್ಥ್ಯ ಮೀರಿದ ಪ್ರಯತ್ನಗಳನ್ನು ಮಾಡುತ್ತಿರುವ ಚೀನಾ ಭಾರತದ ನೆರೆಹೊರೆಯ ರಾಷ್ಟ್ರಗಳನ್ನು ತನ್ನ ಪ್ರಭಾವದ ತೆಕ್ಕೆಗೆ ಎಳೆದುಕೊಂಡಿದೆ. ತನ್ನೆಲ್ಲಾ ನೆರೆಹೊರೆಯ ರಾಷ್ಟ್ರಗಳಲ್ಲಿ ಚೀನಾ ಪ್ರಭಾವವಿರುವುದು ಸಮರತಾಂತ್ರಿಕ ದೃಷ್ಟಿಯಿಂದ ಭಾರತದ ಪಾಲಿಗೆ ಕಳವಳಕಾರಿ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಭಾರತ ತನ್ನ ಪ್ರಾದೇಶಿಕ ಪ್ರಭಾವ ಉಳಿಸಿಕೊಳ್ಳಬೇಕಾದಲ್ಲಿ ಮಧ್ಯ ಏಷ್ಯಾದಲ್ಲಿ ಭಾರತಕ್ಕಿರುವ ಐತಿಹಾಸಿಕ ಬಾಂಧವ್ಯವನ್ನು ಮರು ದೃಢಪಡಿಸಿಕೊಳ್ಳುವುದು ಅನಿವಾರ್ಯ.

ಮಧ್ಯ ಏಷ್ಯಾ ಕುರಿತಾದ ಭಾರತದ ವಿದೇಶಾಂಗ ನೀತಿಯ ಪ್ರಮುಖ ಮೈಲಿಗಲ್ಲು 2012ರ ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ. ಈ ಯೋಜನೆಯ ಮುಖ್ಯ ಗುರಿ ಹಳಿ ತಪ್ಪಿರುವ ಭಾರತ-ಪೂರ್ವ ಏಷ್ಯಾ ರಾಜಕೀಯ ಸಂಪರ್ಕವನ್ನು ಪುನರ್ ಸ್ಥಾಪಿಸುವುದು. ರಾಜಕೀಯ, ಆರ್ಥಿಕ, ಸಮರತಾಂತ್ರಿಕ, ತಂತ್ರಜ್ಞಾನ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಮನ್ವಯತೆಗಳಿಗೆ ಅವಕಾಶ ಕಲ್ಪಿಸುವುದರ ಜೊತೆಗೆ ಪ್ರಾದೇಶಿಕ ಸಂಪರ್ಕ ಮತ್ತು ಮಾಹಿತಿ ತಂತ್ರಜಾನದಲ್ಲೂ ಮಧ್ಯ ಏಷ್ಯಾ ದೇಶಗಳ ಜೊತೆಗೆ ತೊಡಗಿಸಿಕೊಳ್ಳುವ ಆಲೋಚನೆ ಭಾರತಕ್ಕಿದೆ. ಯುರೋಪ್ ಮತ್ತು ಏಷ್ಯಾಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಂತಿರುವ ಮಧ್ಯ ಏಷ್ಯಾ ಜಾಗತಿಕ ರಾಜಕಾರಣದಲ್ಲಿ ಆಯಕಟ್ಟಿನ ಪ್ರದೇಶವೂ ಹೌದು. ಕಚ್ಚಾತೈಲ, ನೈಸರ್ಗಿಕ ಅನಿಲ, ಹತ್ತಿ, ಬಂಗಾರ, ಅಲ್ಯೂಮಿನಿಯಂ, ಕಬ್ಬಿಣ ಮತ್ತಿತರ ನೈಸರ್ಗಿಕ ಸಂಪನ್ಪೂಲಗಳ ವಿಚಾರದಲ್ಲೂ ಮಧ್ಯ ಏಷ್ಯಾ ಶ್ರೀಮಂತ ಭೂಪ್ರದೇಶವೇ ಸರಿ. ಇವೆಲ್ಲವುಗಳ ಜೊತೆ, ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ ಮತ್ತು ಅಫಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸುವುದು ಭಾರತ ಮತ್ತು ಮಧ್ಯ ಏಷ್ಯಾಗಳ ತತ್ ಕ್ಷಣದ ಕಾಳಜಿಗಳಾಗಿದ್ದು ಈ ಸಾಮ್ಯತೆಗಳು ಭಾರತಕ್ಕೆ ಮಧ್ಯ ಏಷ್ಯಾ ರಾಷ್ಟ್ರಗಳನ್ನು ಇನ್ನಷ್ಟು ಹತ್ತಿರವಾಗಿಸಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಭಾರತ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳ ಮಧ್ಯೆ ಅನ್ಯೋನ್ಯ ಕೊಡುಕೊಳ್ಳುವಿಕೆಯಿದೆ. ಮಧ್ಯ ಏಷ್ಯಾದ ವಿಧ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ಭಾರತವನ್ನು ಆಶ್ರಯಿಸುತ್ತಿದ್ದಾರೆ. ಅಮೆರಿಕಾ, ಯುರೋಪ್ ಗಳಲ್ಲಿ ಶಿಕ್ಷಣದ ವೆಚ್ಚಗಳಿಗೆ ಹೋಲಿಸಿದಲ್ಲಿ ಭಾರತ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಮಿತವ್ಯಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಿದೆ. ಭಾರತದ ವಿದ್ಯಾರ್ಥಿಗಳೂ ಸಂಶೋಧನೆ ಮತ್ತಿನ್ನಿತರ ಕಾರಣಗಳಿಗೆ ಮಧ್ಯ ಏಷ್ಯಾ ಪ್ರವೇಶಿಸುತ್ತಿದ್ದಾರೆ.
Image may contain: 1 person
ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆಯಲ್ಲಿ ನಿರೀಕ್ಷೆಗಳು ಮತ್ತು ಉಜ್ವಲ ಅವಕಾಶಗಳಿದ್ದಂತೆ ಸಮಸ್ಯೆಗಳೂ ಬಹಳಷ್ಟಿವೆ. ಭಾರತ ಮತ್ತು ಪೂರ್ವ ಏಷ್ಯಾವನ್ನು ಸಂಪರ್ಕಿಸಲು ಅತ್ಯಂತ ಹತ್ತಿರದ ಹಾದಿಯೆಂದರೆ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳನ್ನು ಹಾದುಹೋಗುವುದು. ಅದರೆ ಪಾಕಿಸ್ತಾನ ಮತ್ತು ಭಾರತಗಳ ವೈರತ್ವ ಹಾಗೂ ಪಾಕಿಸ್ತಾನವನ್ನು ಎಲ್ಲಾ ರೀತಿಯಲ್ಲೂ ಅಂಕೆಯಲ್ಲಿಟ್ಟುಕೊಂಡಿರುವ ಚೀನಾಗಳಿಂದಾಗಿ ಇದು ಕಷ್ಟಸಾಧ್ಯ. ಇಷ್ಟಕ್ಕೂ ಒಂದು ವೇಳೆ ಪಾಕಿಸ್ತಾನದ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿದ್ದರೂ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿರುವ ಅಸ್ಥಿರತೆ ಗೊಂದಲಗಳಿಂದಾಗಿ, ವ್ಯಾಪಾರ ವಾಣಿಜ್ಯೋದ್ದೇಶಗಳಿಗೆ ಈ ಮಾರ್ಗ ಖಂಡಿತಾ ಒಳ್ಳೆಯ ಆಯ್ತ್ಕೆಯಂತೂ ಅಲ್ಲ. ಇದೇ ಕಾರಣಕ್ಕಾಗಿಯೇ 'ಟರ್ಕ್ ಮೆನಿಸ್ತಾನ್ ಅಫಘಾನಿಸ್ತಾನ್ ಪಾಕಿಸ್ತಾನ್ ಭಾರತ ಪೈಪ್ ಲೈನ್ ಯೋಜನೆ' (TAPI) ಇವತ್ತಿಗೂ ಕಾರ್ಯರೂಪಕ್ಕೆ ಬರದೆ ಯೋಜನೆಯಾಗಿಯೇ ಉಳಿದಿದೆ. ಇದರಿಂದಾಗಿಯೇ ಇಲ್ಲಿಯವರೆಗೆ ಮಧ್ಯ ಏಷ್ಯಾದಿಂದ ಒಂದು ತೊಟ್ಟು ತೈಲವೂ ಭಾರತಕ್ಕೆ ತಲುಪಿಲ್ಲ! ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ್, ಕಿರ್ಗಿಸ್ತಾನ್, ತಾಜಿಕಿಸ್ತಾನ್, ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳಿಗೆ ಭೇಟಿ ನೀಡಿದ್ದು ರಾಜತಾಂತ್ರಿಕ ಸಂಬಂಧಗಳೊಂದಿಗೆ, ಈ ಪ್ರದೇಶದಲ್ಲಿರುವ ಉಗ್ರ ಗುಂಪುಗಳನ್ನು ನಿಗ್ರಹಿಸುವ ಬಗೆಗೂ ಮಾತುಕತೆಗಳಾಗಿವೆ. ಇಸ್ಲಾಮಿಕ್ ಮೂವಮೆಂಟ್ ಆಫ್ ಉಜ್ಬೇಕಿಸ್ತಾನ್ ಮತ್ತು ಜುಂಡ್-ಅಲ್- ಖಿಲಾಫಾಹ್ ಈ ಪ್ರದೇಶದ ಎರಡು ಪ್ರಮುಖ ಉಗ್ರ ಸಂಘಟನೆಗಳಾಗಿದ್ದು ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್-ಖೈದಾ ಸ್ಪರ್ಧೆಯೂ ಈ ಪ್ರದೇಶದಲ್ಲಿ ಅಸ್ಥಿರತೆ ಮೂಡಿಸುತ್ತಿವೆ. 

ಮಧ್ಯ ಏಷ್ಯಾ ಕಡೆಗಿನ ರಾಜತಾಂತ್ರಿಕ ಪ್ರಯತ್ನಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಭಾರತದ ಸಾಂಸ್ಕ್ರತಿಕ ಹಿರಿಮೆ ಇನ್ನಷ್ಟು ಬಲ ತುಂಬಲಿದೆ. ಸೊವಿಯೆತ್ ಒಕ್ಕೂಟದ ಸಮಯದಿಂದಲೂ ಈ ಪ್ರದೇಶದಲ್ಲಿ ಭಾರತದ ಸಂಸ್ಕೃತಿಗೆ ಬಹಳಷ್ಟು ಜನಪ್ರಿಯತೆ ಪಡೆದಿದೆ. ಇಲ್ಲಿನ ಜನರು ಹಿಂದಿ ಗೀತೆಗಳನ್ನು ಆಲಿಸುತ್ತಾರಷ್ಟೇ ಅಲ್ಲದೇ ಬಾಲಿವುಡ್ ಸಿನಿಮಾಗಳನ್ನು ಬಹಳಷ್ಟು ಇಷ್ಟ ಪಡುತ್ತಾರೆ. ಈ ಅಂಶಗಳು ಭಾರತಕ್ಕೆ ಮಧ್ಯ ಏಷ್ಯಾದಲ್ಲಿ ವಿಶಿಷ್ಟ ಅವಕಾಶಗಳನ್ನು ತೆರೆದಿಟ್ಟಿವೆ. ಭಾರತ ಈ ಪ್ರದೇಶದಲ್ಲಿ ತನ್ನ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತನ್ನ ನೈತಿಕ ಶಕ್ತಿಯನ್ನು ಬಳಸಿಕೊಳ್ಳುವುದು ಜಾಣತನದ ಹೆಜ್ಜೆ. ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗದೆ ಆಚರಣೆಗೆ ಬರುವಂತಾದರೆ, ಮಧ್ಯ ಏಷ್ಯಾದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೊಂದು ವೇಳೆ ಭಾರತ ಈ ಐತಿಹಾಸಿಕ ಬಂಧವನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದೇ ಆದಲ್ಲಿ ಈ ರಾಜತಾಂತ್ರಿಕ ನಡೆಗೆ ಏಷ್ಯಾ ರಾಜಕೀಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.

(This article was published in Hosa Digantha newspaper on 6 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ