ಗುರುವಾರ, ಡಿಸೆಂಬರ್ 1, 2016

ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ಮತ್ತು ಕ್ಯಾಸ್ಟ್ರೊ

ಅಣ್ವಸ್ತ್ರ ಯುದ್ಧದ ವಿಧ್ವಂಸಕತೆಯ ಬಗ್ಗೆ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ಅರಿವು ಮೂಡಿಸಿದಷ್ಟು ಸ್ಪಷ್ಟವಾಗಿ ಯಾವ ಪ್ರವಾದಿಯೂ ವಿವರಿಸಲಾರ. ಇಂಥ ಒಂದು ಐತಿಹಾಸಿಕ ಬಿಕ್ಕಟ್ಟಿಗೆ ಇತ್ತೀಚಿನವರೆಗೂ ಜೀವಂತ ಸಾಕ್ಷಿಯಾಗಿ, ಆ ಬಿಕ್ಕಟ್ಟಿನ ಅವಿಭಾಜ್ಯ ಅಂಗವೇ ಆಗಿದ್ದ  ಫಿಡೆಲ್ ಕ್ಯಾಸ್ಟ್ರೊ ಮರಣ ಅಣ್ವಸ್ತ್ರ ಶಕ್ತಿಗಳು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟನ್ನು ನೆನಪಿಸಿಕೊಂಡು ತಮ್ಮ ನೈತಿಕ ಜವಾಬ್ದಾರಿಯನ್ನು ಪುನರ್ಮನನ ಮಾಡಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


ಸ್ಯಾಂಟಿಗೋ ಡಿ ಕ್ಯೂಬಾದಲ್ಲಿ ಮಿಲಿಟರಿ ದಂಗೆಯ ನೇತೃತ್ವ ವಹಿಸಿದ್ದಕ್ಕಾಗಿ 1953ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ಕ್ಯಾಸ್ಟ್ರೊ, "ನನ್ನನ್ನು ನಿಂದನೆ ಮತ್ತು ಖಂಡನೆಗೆ ಒಳಪಡಿಸಬಹುದು, ಆದರೆ ಇತಿಹಾಸ ನನ್ನನ್ನು ಬಿಡುಗಡೆಗೊಳಿಸುತ್ತದೆ' ಎಂದು ಮಾರ್ಮಿಕವಾಗಿ ಘೋಷಿಸಿದ್ದ. ಮುಂದೆ ಕ್ಯೂಬಾ ಮತ್ತು ವಿಶ್ವ ರಾಜಕೀಯದಲ್ಲಿ ಕ್ಯಾಸ್ಟ್ರೊ ಮೂಡಿಸಿದ ಛಾಪು ಯಾರೂ ಮರೆಯುವಂತಿರಲಿಲ್ಲ. ಸುಮಾರು ದಶಕಗಳ ಕಾಲ ಕ್ಯೂಬಾ ಇತಿಹಾಸ ಕ್ಯಾಸ್ಟ್ರೊ ಜೀವನಚರಿತ್ರೆಯೇ ಆಗಿಬಿಟ್ಟಿತು. ಇತ್ತೀಚೆಗೆ ತನ್ನ 90ನೇ ವಯಸ್ಸಿನಲ್ಲಿ ಮರಣ ಹೊಂದಿದ ಕ್ಯಾಸ್ಟ್ರೊ, ಕ್ಯೂಬಾ ಮತ್ತು ವಿಶ್ವ ಇತಿಹಾಸದಲ್ಲಿ ಬಿಟ್ಟುಹೋದ ನೆನಪುಗಳು ಅಗಾಧ. ಕ್ಯೂಬಾದಲ್ಲಿ ಯುವ ಕ್ರಾಂತಿಕಾರಿಯಾಗಿ, ವೈಯಕ್ತಿಕ ವರ್ಚಸ್ಸಿನ ನಾಯಕನಾಗಿ, ಸರ್ವಾಧಿಕಾರಿಯಾಗಿ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕಾದ ಬಗಲಲ್ಲೇ ಇದ್ದುಕೊಂಡು ಅಮೆರಿಕಾವನ್ನು ಅರ್ಧ ಶತಮಾನದವರೆಗೆ ಬಿಟ್ಟೂ ಬಿಡದೆ ಕಾಡಿದ ಫಿಡೆಲ್ ಕ್ಯಾಸ್ಟ್ರೊ, ಇನ್ನೊಂದೆಡೆ ತನ್ನ ಹಠಮಾರಿ ಸ್ವಭಾವ,  ತನ್ನ ಮೂಗಿನ ನೇರಕ್ಕೆ ತೆಗೆದುಕೊಂಡ ಕೆಲ ಮೂರ್ಖತನದ ನಿರ್ಧಾರಗಳಿಗೂ ಹೆಸರುವಾಸಿ. ಇವೆಲ್ಲವುಗಳ ಮಧ್ಯೆ ಕ್ಯಾಸ್ಟ್ರೊ ವಿಶ್ವ ಇತಿಹಾಸಕ್ಕೆ ನೆನಪಿಟ್ಟುಕೊಳ್ಳಲು ನೀಡಿದ ಕಾಣಿಕೆ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು.

ಅಮೆರಿಕಾದ ಸಂಯುಕ್ತ ಸಂಸ್ಥಾನದಿಂದ ಕೇವಲ 90 ಮೈಲಿ ದೂರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರ ಕ್ಯೂಬಾ. ದ್ವಿತೀಯ ವಿಶ್ವಯುದ್ಧದ ನಂತರ ವಿಶ್ವದೆಲ್ಲೆಡೆ ಪ್ರಭಾವ ಬೀರಿದ್ದ ದೊಡ್ಡಣ್ಣ ಅಮೆರಿಕಾದ ಪ್ರಭಾವದಿಂದ ಹೊರಗುಳಿಯುವುದು ಕ್ಯೂಬಾ ಎಂಬ ಪುಟ್ಟ ದ್ವೀಪ ರಾಷ್ಟ್ರಕ್ಕೂ ಸಾಧ್ಯವಿರಲಿಲ್ಲ. ಆ ಸಮಯಕ್ಕಾಗಲೇ  ಕ್ಯೂಬಾದಲ್ಲಿ ತನ್ನ ಅಧಿಕಾರ ಭದ್ರಪಡಿಸಿಕೊಳ್ಳಲು ಅಮೆರಿಕಾದ ಬೆಂಬಲವೊಂದೇ ಸಾಕು ಎಂದುಕೊಂಡಿದ್ದ ಅಮೆರಿಕಾ ಬೆಂಬಲಿತ ಸರ್ವಾಧಿಕಾರಿ ಫುಲ್ಗೆನ್ಸಿಯೊ ಬಾಟಿಸ್ಟಾ ಕ್ಯೂಬಾದ ಸುಧಾರಣೆಗಳತ್ತ ಕಿಂಚಿತ್ತು ಗಮನಹರಿಸಿರಲಿಲ್ಲ. ಬಡತನ, ಅನಾರೋಗ್ಯ, ಅನಕ್ಷರತೆಗಳೇ ಕ್ಯೂಬಾದ ರಾಷ್ಟ್ರೀಯ ಲಾಂಛನಗಳಾಗಿ ಹೋದವು. ಒಂದು ರೀತಿಯಲ್ಲಿ ಬಾಟಿಸ್ಟಾ ಆಡಳಿತದಲ್ಲಿ ಕ್ಯೂಬನ್ನರು ಬದುಕಿರುವುದೇ ಅಮೆರಿಕಾ ಸೇವೆಗೆ ಎಂಬಂತಾಗಿತ್ತು. ಕ್ಯೂಬಾ ಗ್ವಾಂಟಾನಮೊದಲ್ಲಿ ಅಮೆರಿಕಾಕ್ಕೆ ನೌಕಾ ನೆಲೆ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತ್ತಷ್ಟೇ ಅಲ್ಲದೆ ಕ್ಯೂಬಾದಲ್ಲಿನ ಹೆಚ್ಚಿನ ಕೃಷಿ ಮತ್ತು ಕಾರ್ಖಾನೆಗಳ ಮಾಲಿಕತ್ವ ಅಮೆರಿಕನ್ನರದೇ ಆಗಿತ್ತು. ಅತ್ಯಂತ ಕಡಿಮೆ ಬೆಲೆಗೆ ಕ್ಯೂಬಾದ ಕೆಲಸಗಾರರೂ ದೊರೆತಿದ್ದು ಅಮೆರಿಕನ್ನರ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ದೃಷ್ಟಿಯಲ್ಲೂ ಕ್ಯೂಬಾ ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸಿತು. ಕಾಲ ಕ್ರಮೇಣ ಕ್ಯೂಬಾ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯ ಒಂದು ಭಾಗವೇ ಆಗಿ ಹೋಗಿತ್ತು. ಈ ಎಲ್ಲಾ ಕಾರಣಗಳಿಗಾಗಿಯೇ ಅಮೆರಿಕಾ, ಜನ ಬೆಂಬಲವಿಲ್ಲದೇ ಹೋದರೂ ಬಾಟಿಸ್ಟಾ ಸರ್ವಾಧಿಕಾರಕ್ಕೆ ಬೇಷರತ್ ಬೆಂಬಲ ನೀಡುತ್ತಿತ್ತು. 

ಸರ್ವಾಧಿಕಾರಿ ಬಾಟಿಸ್ಟಾ ವಿರುದ್ಧ ಕ್ಯೂಬಾದ ಜನತೆಯ ಮನದಲ್ಲಿದ್ದ ಆಕ್ರೋಶ, ಉದ್ವೇಗಗಳಿಗೆ ಮೂರ್ತ ರೂಪ ಕೊಟ್ಟವನು ಫಿಡೆಲ್ ಕ್ಯಾಸ್ಟ್ರೊ. ಹಲವಾರು ಅಡೆತಡೆಗಳ ಬಳಿಕ ಫಿಡೆಲ್ ಕ್ಯಾಸ್ಟ್ರೊ ನೇತೃತ್ವದ ಗೆರಿಲ್ಲಾ ಸೈನ್ಯ ಜನವರಿ 1959ರಲ್ಲಿ ಕ್ಯೂಬಾದಲ್ಲಿ ಬಾಟಿಸ್ಟಾ ಸರ್ವಾಧಿಕಾರಕ್ಕೆ ಕೊನೆ ಹಾಡಿತ್ತು. ಕ್ಯೂಬಾದಲ್ಲಾದ ಈ ಕ್ಷಿಪ್ರ ಕ್ರಾಂತಿಗೆ ಆಗಿನ ಅಮೆರಿಕಾ ಅಧ್ಯಕ್ಷ ಐಸೆನ್ ಹೊವರ್ ಕೂಡ ಹೆಚ್ಚಿನ ವಿರೋಧ ವ್ಯಕ್ತಪಡಿಸುವುದಿಲ್ಲ. ಹಾಳುಬಿದ್ದಿದ್ದ ಕ್ಯೂಬಾವನ್ನು ಮತ್ತೆ ಶ್ರೇಷ್ಟತೆಯತ್ತ ಕೊಂಡೊಯ್ಯಲು, ಕ್ಯೂಬಾವನ್ನು ಅಮೆರಿಕಾದ ಪ್ರಭಾವದಿಂದ ಬೇರ್ಪಡಿಸುವುದು ಅತ್ಯಂತ ಜರೂರಾಗಿ ನಡೆಯಬೇಕಾದ ಕಾರ್ಯ ಎಂದುಕೊಂಡ ಕ್ಯಾಸ್ಟ್ರೊ ಕಾರ್ಯೋನ್ಮುಖನಾಗುತ್ತಾನೆ. ಹಂತ ಹಂತವಾಗಿ ಕ್ಯೂಬಾ ಅಮೆರಿಕನ್ ವಿರೋಧಿಯಾಗಿ ಬದಲಾಗುತ್ತದೆ. ಕ್ಯೂಬಾದಲ್ಲಿದ್ದ ಎಲ್ಲಾ ಅಮೆರಿಕನ್ ಆಸ್ಥಿಯನ್ನು ಮುಟ್ಟುಗೋಲು ಹಾಕಿಕೊಂಡು, ತನ್ನ ವಿರೋಧಿಗಳನ್ನು ನಿರ್ದಯವಾಗಿ ಹತ್ತಿಕ್ಕಲಾರಂಬಿಸಿದ ಫಿಡೆಲ್ ಕ್ಯಾಸ್ಟ್ರೊ. ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದಕ್ಕೋಸ್ಕರ ಚುನಾವಣೆಗಳು ಮುಂದೂಡುತ್ತಾನೆ. ಕ್ಯಾಸ್ಟ್ರೊ  ಅಮೆರಿಕನ್ ವಿರೋಧಿ ಮನೋಭಾವ ಕ್ಯೂಬಾ ಜನಮಾನಸದಲ್ಲಿ ಬೃಹತ್ ಮಟ್ಟದ ಬೆಂಬಲ ಪಡೆಯಿತು. ಕ್ಯೂಬನ್ ಜನತೆ ಕ್ಯಾಸ್ಟ್ರೊ ನನ್ನು ಆರಾಧಿಸುವಂತಾದಾಗ, ಎಚ್ಚೆತ್ತುಕೊಂಡಿದ್ದ ಅಮೆರಿಕಾದ ಅಧ್ಯಕ್ಷ ಐಸೆನ್ ಹೊವರ್, ಕ್ಯಾಸ್ಟ್ರೊ ಒಬ್ಬ ಕಮ್ಯುನಿಸ್ಟ್ ಎಂದು ಘೋಷಿಸಿದ್ದ. ಆದರೆ ಆ ಸಮಯದಲ್ಲಿನ್ನೂ ಕ್ಯಾಸ್ಟ್ರೊ ಕಮ್ಯುನಿಸ್ಟ್ ಆಗಿರಲಿಲ್ಲ!

ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕನಾಗಿದ್ದ ಕ್ಯಾಸ್ಟ್ರೊನನ್ನು ಕ್ಯೂಬಾದಿಂದ ತೊಲಗಿಸಲು ಅಮೆರಿಕಾ ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಸಾಲು ಸಾಲು ಆರ್ಥಿಕ ನಿರ್ಬಂಧಗಳು, ಇನ್ನಿತರ ಅಂತರಾಷ್ಟ್ರೀಯ ಒತ್ತಡಗಳಿಗೆ ಕ್ಯಾಸ್ಟ್ರೊ ಬಗ್ಗದಿದ್ದಾಗ, ಐಸೆನ್ ಹೊವರ್ ಮತ್ತು ಅಮೆರಿಕಾದ ಗುಪ್ತಚರ ದಳ ಸಿ.ಐ.ಎ ಭೂಗತ ಜಗತ್ತಿಗೆ, ಕ್ಯಾಸ್ಟ್ರೊ ಹತ್ಯೆ ಮಾಡಲು ಸುಪಾರಿಯನ್ನೂ ನೀಡಿತ್ತು! ಹಲವಾರು ಬಾರಿ ಕ್ಯಾಸ್ಟ್ರೊ ಮೇಲೆ ಹತ್ಯೆಯ ಪ್ರಯತ್ನಗಳಾದಾಗಲೂ ಅತ್ಯಂತ ಬುದ್ಧಿವಂತಿಕೆಯಿಂದ ಅವೆಲ್ಲವುಗಳನ್ನೂ ವಿಫಲಗೊಳಿಸಲಾಗಿತ್ತು. ವಿಶ್ವದ ಸೂಪರ್ ಪವರ್ ಎನಿಸಿಕೊಂಡಿದ್ದ ಅಮೆರಿಕಾಗೆ ತನ್ನ ಪಕ್ಕದಲ್ಲೇ ಇರುವ ಪುಟ್ಟ ದ್ವೀಪ ರಾಷ್ಟ್ರವೊಂದನ್ನು ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯಿಂದ ಐಸೆನ್ ಹೊವರ್ ಕ್ಯೂಬಾ ವಿರುದ್ದ ರಚಿಸಿದ ಯುದ್ಧ ತಂತ್ರದ ಹೆಸರೇ 'ದ ಬೇ ಆಫ್ ಪಿಗ್ಸ್ ದಾಳಿ'. ಅದರೆ ಐಸೆನ್ ಹೊವರ್ ಅಧ್ಯಕ್ಷತೆಯಲ್ಲಿ ಕಾರಣಾಂತರಗಳಿಂದ ಈ ಯುದ್ಧತಂತ್ರ ಕಾರ್ಯರೂಪಕ್ಕೆ ಇಳಿಯಲಿಲ್ಲ. ಮುಂದೆ 1961ರಲ್ಲಿ ಆಗಿನ ಅಧ್ಯಕ್ಷ ಜಾನ್ ಎಫ್ ಕೆನಡಿ ಈ ಯುದ್ಧತಂತ್ರದಲ್ಲಿ ಹಲವಾರು ನ್ಯೂನ್ಯತೆಗಳಿವೆ ಎಂಬ ಮಿಲಿಟರಿ ತಜರ ಸಲಹೆಗಳನ್ನು ಪರಿಗಣಿಸದೆ ಈ ಕಾರ್ಯಾಚರಣೆ ನಡೆಸುವಲ್ಲಿ ಅತ್ಯಂತ ಉತ್ಸುಕರಾಗಿರುತ್ತಾರೆ.  ಈ ಯೋಜನೆಯ ಪ್ರಕಾರ 1400 ಸೈನಿಕರನ್ನು ಕ್ಯೂಬಾದೊಳಕ್ಕೆ ಕಳುಹಿಸಿ, ಕ್ಯಾಸ್ಟ್ರೊ ವಿರುದ್ಧ ಕಾರ್ಯಾಚರಣೆ ನಡೆಸುವುದು. ನಂತರ ಕ್ಯೂಬಾದ ಜನತೆ ಸ್ವಯಂ ಪ್ರೇರಿತರಾಗಿ ದಂಗೆಕೋರರಿಗೆ ನೆರವು ನೀಡಿ ಕ್ಯಾಸ್ಟ್ರೊ ಆಡಳಿತ ಕೊನೆಗೊಳಿಸಲಾಗುತ್ತದೆ. ಅದರೆ ಈ ದಾಳಿ ಸಂಪೂರ್ಣ ವಿಫಲವಾಗುತ್ತದೆ. ಈ ವಿಫಲ ಯತ್ನದ ನಂತರ ಕೆನಡಿ ಕಾರ್ಯರೂಪಕ್ಕಿಳಿಸಿದ ಇನ್ನೊಂದು ಕಾರ್ಯಾಚರಣೆಯೇ 'ಆಪರೇಷನ್ ಮಂಗೂಸ್' ಈ ಮೂಲಕ ಹಲವಾರು ಕ್ಯಾಸ್ಟ್ರೊ ಬೆಂಬಲಿಗರನ್ನು ಹತ್ಯೆ ಮಾಡಲಾಗುತ್ತದೆ. ಇದಾದ ಮೇಲೆ ಸುಮಾರು 40000 ಅಮೆರಿಕನ್ ಯೋಧರು ಕೆರಿಬಿಯನ್ ನಲ್ಲಿದ್ದ ಒಂದು ಅನಾಮಿಕ ದ್ವೀಪವೊಂದರ ಮೇಲೆ ದಾಳಿ ಮಾಡಿ ಅಲ್ಲಿನ ಸರ್ವಾಧಿಕಾರಿಯನ್ನು ಕಿತ್ತೊಗೆಯುವ ರೀತಿಯಲ್ಲಿ ಒಂದು ಬೃಹತ್ ಮತ್ತು ವಿಶಿಷ್ಟ ಸಮರಾಭ್ಯಾಸವನ್ನು ಮಾಡುತ್ತಾರೆ. ಈ ವಿಚಿತ್ರ ಕಾರ್ಯಾಚರಣೆಗೆ ಕೆನಡಿ ಕೊಟ್ಟ ಹೆಸರು 'ಆಪರೇಶನ್ ಓರ್ಸ್ಟಾಕ್'  (ORTSAC) ಆಂಗ್ಲ ಭಾಷೆಯಲ್ಲಿ ಈ ಹೆಸರನ್ನು ಹಿಂದಿನಿಂದ ಮುಂದಕ್ಕೆ ಓದಿದರೆ ಅದು ಕ್ಯಾಸ್ಟ್ರೊ ಎಂದಾಗುತ್ತದೆ! ಈ ರೀತಿ ಅಮೆರಿಕಾ ತನ್ನ ಸಾಮರ್ಥ್ಯ ಪ್ರದರ್ಶನದೊಂದಿಗೆ, ಕ್ಯಾಸ್ಟ್ರೊನನ್ನು ಎಚ್ಚರಿಸುವ ಪ್ರಯತ್ನವನ್ನೂ ಮಾಡಿತ್ತು ಮತ್ತು ಈ ಪ್ರಯತ್ನದಲ್ಲಿ ಯಶಸ್ವಿಯೂ ಆಗಿಬಿಟ್ಟಿತ್ತು. ಆದರೆ ಅಮೆರಿಕಾದ ದುರದೃಷ್ಟಕ್ಕೆ ಈ ಕಾರ್ಯಾಚರಣೆ ಕ್ಯಾಸ್ಟ್ರೊನನ್ನು ಮಾತ್ರವಲ್ಲ, ಸೊವಿಯೆತ್ ನಾಯಕ ನಿಕಿತಾ ಕ್ರುಶ್ಚೇವ್ ನನ್ನೂ ಎಚ್ಚರಿಸಿಬಿಟ್ಟಿತ್ತು!

ಕ್ಯೂಬಾವನ್ನು ಇನ್ನೇನು ಅಮೆರಿಕಾ ಆಕ್ರಮಿಸಿಕೊಳ್ಳುತ್ತದೆ, ಕ್ಯಾಸ್ಟ್ರೊ ಆಟ ಮುಂದಕ್ಕೆ ನಡೆಯುವುದಿಲ್ಲ ಎಂದುಕೊಂಡಾಗಲೇ ಆಗಿನ ಕಮ್ಯುನಿಸ್ಟ್ ದೈತ್ಯ ಸೊವಿಯೆತ್ ಒಕ್ಕೂಟ ಕ್ಯೂಬಾ ರಣರಂಗಕ್ಕೆ ಪ್ರವೇಶ ಮಾಡಿತ್ತು! ಅಮೆರಿಕಾದಿಂದ ದಿನೇ ದಿನೇ ಹೆಚ್ಚಾಗುತ್ತಿರುವ ಬೆದರಿಕೆಗಳನ್ನು ಗಮನಿಸಿದ ಕ್ಯಾಸ್ಟ್ರೊ ಅಮೆರಿಕಾಗೆ ಸಡ್ಡು ಹೊಡೆಯುವಂಥ ಒಬ್ಬ ಮಿತ್ರನ ಅವಶ್ಯಕತೆ ಬಹಳಷ್ಟಿತ್ತು. ಈ ಅವಶ್ಯಕತೆ, ಕ್ಯಾಸ್ಟ್ರೊನನ್ನು ಸೊವಿಯೆತ್ ನಾಯಕ ಕ್ರುಶ್ಚೆವ್ ಗೆಳೆತನ ಸಂಪಾದಿಸುವಂತೆ ಮಾಡಿಬಿಟ್ಟಿತು. ಶೀತಲ ಸಮರ ಉತ್ತುಂಗದಲ್ಲಿದ್ದ ಆ ಸಮಯದಲ್ಲಿ ಕ್ರುಶ್ಚೇವ್ ತಲೆಯಲ್ಲಿ ಕ್ಯೂಬಾ ಕುರಿತಾಗಿ ಅವನದ್ದೇ ಆದ ಆಲೋಚನೆಗಳಿದ್ದವು. 1962ರ ಆರಂಭದಲ್ಲಿ ಅಮೆರಿಕಾ ಟರ್ಕಿಯಲ್ಲಿ ತನ್ನ ಜ್ಯೂಪಿಟರ್ ಕ್ಷಿಪಣಿಗಳನ್ನು ಇರಿಸುವುದರ ಮುಖಾಂತರ ಸೊವಿಯೆತ್ ಅನ್ನು ನೇರ ಹೊಡೆತಕ್ಕೆ ಸಿಗುವಂತೆ ವ್ಯವಸ್ಥೆ ರೂಪಿಸಿಕೊಂಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ತನ್ನ ಖಂಡಾಂತರ ಕ್ಷಿಪಣಿಗಳನ್ನು ಕ್ಯೂಬಾದಲ್ಲಿ ನೆಲೆಯಾಗಿಸಿ, ಅಮೆರಿಕಾಕ್ಕೆ ಗುರಿಯಿರಿಸುವುದು ಕ್ರುಶ್ಚೆವ್ ತಂತ್ರವಾಗಿತ್ತು.  ಇದನ್ನು ಕಾರ್ಯರೂಪಕ್ಕಿಳಿಸಲು ಸೊವಿಯೆತ್ ಒಕ್ಕೂಟಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಕ್ಷಿಪ್ರವಾಗಿ ಖಂಡಾಂತರ ಅಣ್ವಸ್ತ್ರ ಕ್ಷಿಪಣಿಗಳನ್ನು ಸ್ಥಾಪಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳೂ ಸೊವಿಯೆತ್ ನಿಂದ ಕ್ಯೂಬಾಗೆ ರವಾನೆಯಾಗತೊಡಗಿತು. ಅಮೆರಿಕಾ ದಾಳಿಯ ಭೀತಿಯಲ್ಲಿದ್ದ ಕ್ಯೂಬಾದಲ್ಲಿ ಅಣ್ವಸ್ತ್ರ ಕ್ಷಿಪಣಿಗಳ ಆಗಮನ ಸಹಜವಾಗಿಯೇ ಕ್ಯಾಸ್ಟ್ರೊನಲ್ಲಿ ಸುರಕ್ಷತಾ ಭಾವ ಮೂಡಿಸಿತ್ತು ಹಾಗಾಗಿ ಸಹಜವಾಗಿಯೇ ಕ್ಯಾಸ್ಟ್ರೊ ಕೂಡ ಸೊವಿಯೆತ್ ಸಿದ್ಧತೆಗಳನ್ನು ಸಂತೋಷದಿಂದಲೇ ಸ್ವಾಗತಿಸುತ್ತಾನೆ. ಕ್ಯೂಬಾದಲ್ಲಿ ನೆಲೆಯಾಗಿಸಿದ ಸೊವಿಯೆತ್ ಕ್ಷಿಪಣಿಗಳನ್ನು ನಿಯಂತ್ರಿಸಲು ಒಬ್ಬ ಸೊವಿಯೆತ್ ಕಮಾಂಡರ್ ನೇಮಕಗೊಳ್ಳುತ್ತಾನೆ. ಒಂದು ವೇಳೆ ಕ್ಯೂಬಾದ ಮೇಲೆ ಅಮೆರಿಕಾ ದಾಳಿ ಮಾಡಿದಲ್ಲಿ ಕ್ಷಿಪಣಿಗಳನ್ನು ಬಳಸುವ ಅಧಿಕಾರವನ್ನು ಸೊವಿಯೆತ್ ಕಮಾಂಡರ್ ವಿವೇಚನೆಗೆ ಬಿಡಲಾಗಿತ್ತು.

ಈ ಯೋಜನೆ ಸಂಪೂರ್ಣವಾಗಿ ಕಾರ್ಯಗತಗೊಳ್ಳುವವರೆಗೆ ಮತ್ತು ಕ್ಷಿಪಣಿಗಳು ಕಾರ್ಯಾಚರಣೆಗೆ ಸಿದ್ಧವಾಗುವವರೆಗೆ ಇದೊಂದು ರಹಸ್ಯ ಯೋಜನೆಯಾಗಿರಬೇಕು ಎನ್ನುವುದು ಸೊವಿಯೆತ್ ತಂತ್ರವಾಗಿತ್ತು. ಅದರೆ ಇಂಥ ಬೃಹತ್ ಯೋಜನೆಯನ್ನೂ ಸಂಪೂರ್ಣ ರಹಸ್ಯವಾಗಿ ಸಾಧಿಸುವುದು ಕಷ್ಟಸಾಧ್ಯವಾದ ಮಾತಾಗಿತ್ತು. 1962ರ ಆಗಸ್ಟ್ ನಲ್ಲಿ ಕ್ಯೂಬಾದಲ್ಲಿ ಸೊವಿಯೆತ್ ಕ್ಷಿಪಣಿಗಳ ಬಗ್ಗೆ ಊಹಾಪೋಹಗಳು ಅಮೆರಿಕನ್ ಮಾಧ್ಯಮಗಳಲ್ಲಿ ಪ್ರಸಾರವಾಗತೊಡಗಿತ್ತು. ಅದರೆ ಸೊವಿಯೆತ್ ರಾಜತಾಂತ್ರಿಕ ಅಧಿಕಾರಿಗಳಿಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಹೋದುದರಿಂದ, ಎಲ್ಲಾ ಊಹಾಪೋಹಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ಆದರೆ 14 ಅಕ್ಟೋಬರ್ 1962ರಲ್ಲಿ ಅಮೆರಿಕಾದ ಯು2 ಗುಪ್ತಚರ ವಿಮಾನಗಳು ಕ್ಯೂಬಾದಲ್ಲಿ ಕ್ಷಿಪಣಿಗಳು ನಿರ್ಮಾಣಗೊಳ್ಳುತ್ತಿರುವುದರ ಕುರಿತಾಗಿ ಬಲವಾದ ಸಾಕ್ಷ್ಯಗಳೊಂದಿಗೆ ಹಿಂದಿರುಗಿದಾಗ ಅಮೆರಿಕಾ ಬೆಚ್ಚಿಬಿದ್ದಿತ್ತು. ಅಮೆರಿಕಾದ ಅಧ್ಯಕ್ಷ ಕೆನಡಿ ಇದನ್ನು ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆ ಎಂದು ಪರಿಗಣಿಸುತ್ತಾರೆ. 

'ಬೇ ಆಫ್ ಪಿಗ್ಸ್ ದಾಳಿ'ಯಲ್ಲಿ ಮುಖಭಂಗ ಅನುಭವಿಸಿದ್ದ ಕೆನಡಿ ಈ ಬಾರಿ ಎಚ್ಚರಿಕೆಯ ನಡೆ ಇಡುತ್ತಾರೆ. ಈ ಬಗ್ಗೆ ಸಲಹೆ ನೀಡಲು 'ಎಕ್ಸ್ ಕಾಮ್' ಎಂಬ ವಿಶೇಷ ಸಲಹಾಗಾರರ ಗುಂಪೊಂದನ್ನು ರಚಿಸಲಾಗುತ್ತದೆ. ವಿಶೇಷ ಸಲಹಾಗಾರರ ಗುಂಪು ಎರಡು ಬಣಗಳಾಗಿ ಒಡೆದುಹೋಗಿತ್ತು. 'ಹಾಕ್ಸ್' ಎಂಬ ಗುಂಪು ತಕ್ಷಣವೇ ಯುದ್ಧ ಘೋಷಿಸಲು ಸಲಹೆ ನೀಡಿದರೆ, ಇನ್ನೊಂದು ಗುಂಪು 'ಡವ್ಸ್' ನೇರ ಸಂಘರ್ಷವನ್ನು ತಪ್ಪಿಸುವಂತೆ ಸಲಹೆ ನೀಡಿದ್ದವು. ಈ ಚರ್ಚೆ ಸುಮಾರು 13 ದಿನಗಳ ಕಾಲ ಮುಂದುವರಿಯುತ್ತದೆ. ಕೊನೆಯದಾಗಿ ಕೆನಡಿ ನೇರ ಯುದ್ಧವೂ ಅಲ್ಲದ ತಟಸ್ಥವೂ ಆಗಿಲ್ಲದ ಯುದ್ಧ ನೀತಿಯೊಂದನ್ನು ರೂಪಿಸಬೇಕಾಯ್ತು. ಇದರಂತೆ ಕೆನಡಿ ಸೊವಿಯೆತ್ ನಿಂದ ಕ್ಯೂಬಾಗೆ ಸಾಗಾಟವಾಗುತ್ತಿದ್ದ ಅಣ್ವಸ್ತ್ರದ ಉಪಕರಣಗಳನ್ನು ಸಾಗರ ಮಧ್ಯದಲ್ಲಿಯೇ ತಡೆಹಿಡಿಯುವಂತಹ ನೌಕಾ ದಿಗ್ಭಂಧನ ಹಾಕುವ ನಿರ್ಧಾರ ಕೈಗೊಂಡರು. 22ನೇ ಅಕ್ಟೊಬರ್ 1962ರಲ್ಲಿ ಸೊವಿಯೆತ್ ಕ್ಷಿಪಣಿಗಳ ವಿಚಾರ ಮತ್ತು ಅಮೆರಿಕಾದ ಪ್ರತಿತಂತ್ರಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಗಾದವು. ಕೆನಡಿ ಮತು ಕ್ರುಶ್ಚೇವ್ ತಮ್ಮ ತಮ್ಮ ಸ್ವಪ್ರತಿಷ್ಟೆಗಳಿಗೆ, ವಿಶ್ವವನ್ನು ಅಣ್ವಸ್ತ್ರ ಯುದ್ಧದತ್ತ ಕೊಂಡೊಯ್ದಿದ್ದರು. 23ನೇ ಅಕ್ಟೋಬರ್ 27 ಸೊವಿಯೆತ್ ಹಡಗುಗಳು ಅಮೆರಿಕಾದ ನೌಕಾ ದಿಗ್ಬಂಧನದತ್ತ ಸಾಗುತ್ತಿದ್ದಂತೆ, ವಿಶ್ವ ಅಣ್ವಸ್ತ್ರ ವಿಧ್ವಂಸದ ಕರಿ ನೆರಳಿನಲ್ಲಿ ನರಳತೊಡಗಿತ್ತು. ಸೊವಿಯೆತ್ ಹಿಂದಕ್ಕೆ ಸರಿಯುತ್ತದೆ ಎಂಬ ವಿಶ್ವಾಸದಲ್ಲಿ ನೌಕಾ ದಿಗ್ಬಂಧನ ಮಾಡಿದ್ದ ಕೆನಡಿಗೆ ಮುಂದೇನು ಮಾಡಬೇಕು ಎಂದು ತೋಚದಾಗಿತ್ತು. ಎರಡು ಅಣ್ವಸ್ತ್ರ ಶಕ್ತಿಗಳು ನೋಡ ನೋಡುತ್ತಿದ್ದಂತೆ ಅಣ್ವಸ್ತ್ರಗಳನ್ನು ಬಳಸಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದ್ದವು. ಈ ಬಿಕ್ಕಟ್ಟಿಗೆ ಇತಿಹಾಸ ನೀಡಿದ ಹೆಸರೇ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು!
ಕೊನೆಯದಾಗಿ ಸೊವಿಯೆತ್ ಹಡಗುಗಳನ್ನು ಹಿಂದಕ್ಕೆ ಕಳುಹಿಸಲಾಯಿತು ಎಂಬ ಸುದ್ಧಿ ಕೇಳಿ ಕೆನಡಿ ನಿಟ್ಟುಸಿರು ಬಿಟ್ಟಿದ್ದರು. ಸೊವಿಯೆತ್ ಹಡಗುಗಳು ಹಿಂದಿರುಗಿದಾಕ್ಷಣ ಸಮಸ್ಯೆಯೇನೂ ಪರಿಹಾರವಾಗಿರಲಿಲ್ಲ. ಕ್ಯಾಸ್ಟ್ರೊ ಸತತವಾಗಿ, ಅಣ್ವಸ್ತ್ರ ಕ್ಷಿಪಣಿಗಳನ್ನು ಅಮೆರಿಕಾದ ಮೇಲೆ ಪ್ರಯೋಗಿಸುವಂತೆ ಸೊವಿಯೆತ್ ಕಮಾಂದರ್ ಮೆಲೆ ಒತ್ತಡ ಹೇರಿದ್ದ. ಆದರೆ ಕ್ರುಶ್ಚೇವ್ ಮಾತ್ರ, ಸೊವಿಯೆತ್ ನಿಂದ ಆಧಿಕೃತ ಸಂದೇಶ ರವಾನೆಯಾಗುವ ತನಕ ಅಂಥ ಯಾವುದೇ ಹುಚ್ಚಾಟಕ್ಕೆ ಕೈಹಾಕಬೇಡಿ ಎಂದು ಸ್ಪಷ್ಟವಾಗಿ ತನ್ನ ಕಮಾಂಡರ್ ಗೆ ನಿರ್ದೇಶನ ನೀಡಿದ್ದ. ಸೊವಿಯೆತ್ ಹಡಗುಗಳನ್ನು ಹಿಂದಿರುಗಿಸಿದ ಬಳಿಕ, ಕ್ಯೂಬಾದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಸೊವಿಯೆತ್ ಅಣ್ವಸ್ತ್ರ ಕ್ಷಿಪಣಿಗಳನ್ನು ತೆರವು ಮಾಡುವತ್ತ ಅಮೆರಿಕಾ ಯೋಚಿಸತೊಡಗಿತು. ಆ ಹೊತ್ತಿಗಾಗಲೇ ಟರ್ಕಿಯಿಂದ ಅಮೆರಿಕಾ ಕ್ಷಿಪಣಿಗಳನ್ನು ತೆರವುಗೊಳಿಸಿದಲ್ಲಿ, ಕ್ಯೂಬಾದಲ್ಲಿರುವ ಕ್ಷಿಪಣಿಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಸಿದ್ಧ ಎಂಬ ಸಂದೇಶ ಕ್ರುಶ್ಚೇವ್ ಕಡೆಯಿಂದ ಬಂದಿತ್ತು. ಜೊತೆ ಜೊತೆಯಲ್ಲೇ ಕ್ಯೂಬಾ ಮೇಲೆ ಇನ್ನು ಮುಂದಕ್ಕೆ ಯಾವುದೇ ಆಕ್ರಮಣ ಮಾಡುವುದಿಲ್ಲ ಎಂಬ ಷರತ್ತಿಗೂ ಅಮೆರಿಕನ್ನರು ಒಪ್ಪಿಕೊಳ್ಳಬೇಕಾಯ್ತು. ಸೂಪರ್ ಪವರ್ ಗಳ ಹೊಡೆದಾಟಗಳೇನೇ ಇರಲಿ ಕ್ಯೂಬಾವನ್ನು ಅಮೆರಿಕಾದ ಆಕ್ರಮಣ ಮತ್ತು ಪ್ರಭಾವಗಳಿಂದ ಮುಕ್ತಗೊಳಿಸಿದ್ದ. ಮುಂದಿನ ಸುಮಾರು ಅರ್ಧ ಶತಮಾನ ಅಮೆರಿಕಾದ ಬಗಲಲ್ಲೇ ಅಮೆರಿಕಾ ಅಂಕೆಗೆ ಸಿಗದಂತೆ ಕ್ಯೂಬಾವನ್ನು ಆಳಿದ್ದ ಕಿಲಾಡಿ ಫಿಡೆಲ್ ಕ್ಯಾಸ್ಟ್ರೊ!

ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ವಿಶ್ವಕ್ಕೊಂದು ಪಾಠ ಕಲಿಸಿತ್ತು. ಅಮೆರಿಕಾ ಮತ್ತು ಸೊವಿಯೆತ್ ಗಳಿಗೂ ಶೀತಲ ಸಮರದ ಈ ಒಂದು ನೇರ ಮುಖಾಮುಖಿ, ಅಣ್ವಸ್ತ್ರ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಅರಿವಾಗಿತ್ತು. ಮುಂದಿನ ದಿನಗಳಲ್ಲಿ ಎರಡೂ ದೈತ್ಯ ರಾಷ್ಟ್ರಗಳು ಇಂಥ ಸನ್ನಿವೇಶ ಮರುಕಳಿಸದಂತೆ ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. 1962ರಿಂದ ಇವತ್ತಿನ ವರೆಗೆ ವಿಶ್ವದ ಯಾವುದೇ ಮೂಲೆಯಲ್ಲೂ ಎರಡು ಅಣ್ವಸ್ತ್ರ ಶಕ್ತಿಗಳು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಂಥ ಪರಿಸ್ಥಿತಿಗೆ ಎಡೆಮಾಡಿಕೊಟ್ಟಿಲ್ಲ. ಅಣ್ವಸ್ತ್ರ ಯುದ್ಧದ ವಿಧ್ವಂಸಕತೆಯ ಬಗ್ಗೆ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ಅರಿವು ಮೂಡಿಸಿದಷ್ಟು ಸ್ಪಷ್ಟವಾಗಿ ಯಾವ ಪ್ರವಾದಿಯೂ ವಿವರಿಸಲಾರ. ಇಂಥ ಒಂದು ಐತಿಹಾಸಿಕ ಬಿಕ್ಕಟ್ಟಿಗೆ ಇತ್ತೀಚಿನವರೆಗೂ ಜೀವಂತ ಸಾಕ್ಷಿಯಾಗಿ, ಆ ಬಿಕ್ಕಟ್ಟಿನ ಅವಿಭಾಜ್ಯ ಅಂಗವೇ ಆಗಿದ್ದ  ಫಿಡೆಲ್ ಕ್ಯಾಸ್ಟ್ರೊ ಮರಣ ಅಣ್ವಸ್ತ್ರ ಶಕ್ತಿಗಳು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟನ್ನು ನೆನಪಿಸಿಕೊಂಡು ತಮ್ಮ ನೈತಿಕ ಜವಾಬ್ದಾರಿಯನ್ನು ಪುನರ್ಮನನ ಮಾಡಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ.

(This article was published in Hosa Digantha newspaper on 29 November 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ