ಬುಧವಾರ, ಆಗಸ್ಟ್ 3, 2016

ದಕ್ಷಿಣ ಚೀನಾ ಸಮುದ್ರ: ಚೀನಿ ಡ್ರ್ಯಾಗನ್‌ಗೆ ಫ್ರೆಂಚ್ ಸವಾಲು


"ಫ್ರೆಂಚ್ ನೌಕಾಪಡೆ ದಕ್ಷಿಣ ಚೀನಾ ಸಮುದ್ರದೆಡೆ ಗಮನ ಹರಿಸುವ ಮೂಲಕ ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯುವ ಪ್ರಯತ್ನಗಳು ಉತ್ಸಾಹದಿಂದಲೇ ನಡೆಯುತ್ತಿವೆದಿನೇ ದಿನೇ ಹೆಚ್ಚಾಗುತ್ತಿರುವ ಚೀನೀ ಆಟಗಳಿಗೆ ಕಡಿವಾಣ ಹಾಕಲು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ಭಾರತದ ಸಮರನೀತಿಯ ತಜ್ಞರಿಗೆ ಫ್ರೆಂಚರ  ಹೊಸ ನಡೆ ಅನೇಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ."
- ಕೀರ್ತಿರಾಜ್



ವಿಶ್ವದ ಅತ್ಯಂತ ಹೆಚ್ಚು ವ್ಯಾಪಾರ ಚಟುವಟಿಕೆಯ ಸಮುದ್ರ ಮಾರ್ಗವಾಗಿದ್ದ ದಕ್ಷಿಣ ಚೀನಾ ಸಮುದ್ರ, ಚೀನಾದ ಆಕ್ರಮಣಕಾರಿ ನಿಲುವಿನಿಂದಾಗಿ ವಿಶ್ವದ ಅತೀ ವಿವಾದಾತ್ಮಕ ಪ್ರದೇಶವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಹೊರಬಿದ್ದ ಹೇಗ್ ನ್ಯಾಯಾಧಿಕರಣದ ತೀರ್ಪಿಗೂ ಸಡ್ಡು ಹೊಡೆದು, ಚೀನಾ ಪ್ರದೇಶದ ಮೇಲಿನ ತನ್ನ ಅಕ್ರಮ ಪ್ರಭಾವವನ್ನು ಇನ್ನಷ್ಟು ಬಿಗಿಯಾಗಿಸಿದೆ. ಆಗ್ನೇಯ ಏಷ್ಯಾದ ಸಣ್ಣಪುಟ್ಟ ರಾಷ್ಟ್ರಗಳಾದ ಪಿಲಿಪ್ಪೈನ್ಸ್, ಮಲೇಷಿಯಾ, ವಿಯೆಟ್ನಾಮ್, ತೈವಾನ್ ಮತ್ತು ಬ್ರೂನೈಗಳು ವಿವಾದಿತ ದಕ್ಷಿಣ ಚೀನಾ ಪ್ರದೇಶದಲ್ಲಿ ತಮ್ಮದೇ ಆದ ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿವೆಯಾದರೂ, ಚೀನೀ ದೈತ್ಯನನ್ನು ನೇರವಾಗಿ ಎದುರಿಸಲಾಗದೆ ಹೇಗ್ ನ್ಯಾಯಾಧಿಕರಣದ ಅನುಷ್ಠಾನಕ್ಕಾಗಿ ಕಾಯುತ್ತಿವೆ. 2013ರಲ್ಲಿ ಪಿಲಿಪ್ಪೈನ್ಸ್ ಚೀನಾದ ಪುಂಡಾಟಿಕೆಯ ವಿರುದ್ಧ ಅಂತರ್ರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆಯನ್ನು ಅಂತರ್ರಾಷ್ಟ್ರೀಯ ನ್ಯಾಯಾಲಯ ಹೇಗ್ ನ್ಯಾಯಾಧಿಕರಣಕ್ಕೆ ಒಪ್ಪಿಸಿ, ಕೊನೆಗೆ ಇದೇ ಜುಲೈ 12ರಂದು ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣ ಚೀನಾದ ವಾದಗಳನ್ನು ತಿರಸ್ಕರಿಸಿ ಮಹತ್ವದ ತೀರ್ಪು ನೀಡಿತ್ತು. ದಶಕಗಳಿಂದ 'ನೈನ್ ಡ್ಯಾಶ್ ರೇಖೆ' ಮತ್ತು ಐತಿಹಾಸಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸ್ಥಾಪಿಸಿದ್ದ ಅಧಿಪತ್ಯವನ್ನು ಹೇಗ್ ನ್ಯಾಯಾಧಿಕರಣ ಕಾನೂನುಸಮ್ಮತವಲ್ಲದ, ಅನಧಿಕೃತ ನಡೆ ಎಂದು ತೀರ್ಮಾನಿಸಿಬಿಟ್ಟಿತು.

ಬೆಕ್ಕಿಗೆ ಘಂಟೆ ಕಟ್ಟುವವರ್ಯಾರು ಎಂಬಂತೆ ಹೇಗ್ ನ್ಯಾಯಾಧಿಕರಣ ಚೀನಾದ ವಿರುದ್ಧ ತೀರ್ಪು ಕೊಟ್ಟು ಸುಮ್ಮನಾಗಿದ್ದರೆ, ಇತ್ತ ಕಡೆ ತೀರ್ಪನ್ನು ಅನುಷ್ಠಾನ ಮಾಡುವವರು ಯಾರು ಎಂಬ ಪ್ರಶ್ನೆ ಮೂಡಿದೆ. ನ್ಯಾಯಾಧಿಕರಣದ ತೀರ್ಪು ಹೊರಬೀಳುವುದಕ್ಕೆ ಮೊದಲೇ, ಚೀನೀ ನಾಯಕರು ದಕ್ಷಿಣ ಚೀನಾ ಸಮುದ್ರದ ವಿವಾದ ನ್ಯಾಯಾಧಿಕರಣದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದ್ದರು. ತೀರ್ಪು ಹೊರಬಿದ್ದ ಬಳಿಕವೂ, ವಿಚಾರ ಚೀನಾದ ಸಾರ್ವಭೌಮತ್ವಕ್ಕೆ ಅಡ್ಡಿ ತರುವುದರಿಂದ ಚೀನಾ ಯಾವುದೇ ತೀರ್ಪಿಗೆ ಬದ್ಧವಾಗಿರುವುದಿಲ್ಲ ಮತ್ತು ಒಟ್ಟಾರೆ ತೀರ್ಪು ಅನೂರ್ಜಿತ ಮತ್ತು ಅಕ್ರಮ ಎಂದಿದೆ ಚೀನಿ ಡ್ರ್ಯಾಗನ್! ಅಮೆರಿಕಾ ನಾಯಕತ್ವದಲ್ಲಿ ಮಿತ್ರ ರಾಷ್ಟ್ರಗಳು ಹೇಗ್ ತೀರ್ಪನ್ನು ಜಾರಿಗೊಳಿಸುವಲ್ಲಿ ಉತ್ಸುಕವಾಗಿದ್ದರೂ, ಚೀನಾವನ್ನು ಪ್ರಶ್ನಿಸುವಷ್ಟು ನೈತಿಕತೆಯನ್ನು ಅಮೆರಿಕಾ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಉಳಿಸಿಕೊಂಡಿಲ್ಲ ಎಂಬುದು ಕಹಿಸತ್ಯ. ನೆದರ್ಲ್ಯಾಂಡ್ಸ್ ಪ್ರಕರಣದಲ್ಲಿ ರಷ್ಯಾ ನ್ಯಾಯಾಧಿಕರಣದ ಮಾತನ್ನು ಧಿಕ್ಕರಿಸಿದ್ದರೆ, ಚಾಗೊಸ್ ಪ್ರಕರಣದಲ್ಲಿ ಬ್ರಿಟನ್ ನ್ಯಾಯಾಧಿಕರಣದ ತೀರ್ಪಿಗೆ ಕಿವುಡಾಗಿತ್ತು. ಅಮೆರಿಕಾವಂತೂ ಇನ್ನು ಸಾಗರದ ಕಾನೂನಿಗೆ ಸಂಬಂಧಿಸಿದ ಅಂತರ್ರಾಷ್ಟ್ರೀಯ ಒಪ್ಪಂದವನ್ನು ಅಂಗೀಕರಿಸದೇ, ಕಾನೂನು ಇತರಿರಾಗಿ ಮಾತ್ರ ತನಗಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿದೆ. ಇಷ್ಟಾದ ಮೇಲೂ ಪಿಲಿಪ್ಪೈನ್ಸ್, ಮಲೇಷಿಯಾ, ವಿಯೆಟ್ನಾಮ್, ತೈವಾನ್ ಮತ್ತು ಬ್ರೂನೈಗಳು ಸೇರಿದಂತೆ ವಿಶ್ವದ ಯಾವ ರಾಷ್ಟ್ರ ತಾನೆ ಚೀನಿ ಡ್ರ್ಯಾಗನ್ ಎದುರುಹಾಕಿಕೊಂಡೀತು?

ಆಶ್ಚರ್ಯಕರ ರೀತಿಯಲ್ಲಿ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಯಾವುದೇ ನೇರ ಸಂಬಂಧವಿಲ್ಲದ ಯುರೋಪಿನ ದೇಶ ಫ್ರಾನ್ಸ್ ಪ್ರದೇಶದ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡುವ ಆಸಕ್ತಿ ತೋರಿಸುತ್ತಿದೆ. ಇತ್ತೀಚೆಗೆ ಸಿಂಗಪೂರ್ ನಲ್ಲಿ ನಡೆದ ಶ್ಯಾಂಗ್ರಿ ಲಾ ಸಮಾವೇಶದಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಜೀನ್ ಡ್ರಿಯಾನ್, ಯುರೋಪಿಯನ್ ಒಕ್ಕೂಟದ ನೌಕಾಬಲಗಳನ್ನು ಸಮನ್ವಯಗೊಳಿಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರದ ಅಡೆತಡೆಗಳನ್ನು ನಿವಾರಿಸುವ ಮಾತುಗಳನ್ನಾಡಿದ್ದಾರೆ. ಜೀನ್ ಡ್ರಿಯಾನ್ ಅವರ ಭಾಷಣದಲ್ಲೆಲ್ಲೂ ಚೀನಾ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲದೇ ಹೋದರೂ, ಆಕ್ರಮಣಕಾರಿ ಚೀನಾ ಪಾಲಿಗೆ ಫ್ರೆಂಚರ ನಡೆ ಎಚ್ಚರಿಕೆಯೇ ಸರಿ. ಆಧುನಿಕ ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿರುವ ಫ್ರಾನ್ಸ್, ಅಂತರ್ರಾಷ್ಟ್ರೀಯ ನ್ಯಾಯಕ್ಕೆ ಬೆನ್ನೆಲುಬಾಗಿ ನಿಂತ ಉದಾಹರಣೆಗಳೂ ಬಹಳಷ್ಟಿವೆ. ಸಮಕಾಲೀನ ವಿಶ್ವದ ಬಲಾಡ್ಯರಿಗೆ ಹೋಲಿಸಿದಲ್ಲಿ ಅಂತರ್ರಾಷ್ಟ್ರೀಯ ಕಾನೂನಿನ ಜಾರಿಗೆ ಫ್ರಾನ್ಸ್ ಕೊಡುಗೆ ಪ್ರಶಂಸನೀಯವೇ ಸರಿ. ಅಮೆರಿಕಾ ನೇತೃತ್ವದ ನ್ಯಾಟೋ ಮಿಲಿಟರಿ ಒಕ್ಕೂಟದ ಭಾಗವಾಗಿದ್ದರೂ ಅಮೆರಿಕಾದ ಇಬ್ಬಂದಿ ನೀತಿಗಳಿಗೆ ಮತ್ತು ದೊಡ್ಡಣ್ಣನೆಂಬ ಅಹಂಕಾರಕ್ಕೆ ಪದೇ ಪದೇ ಹೊಡೆತ ನೀಡಿದ್ದು ಇದೇ ಫ್ರಾನ್ಸ್. ನ್ಯಾಟೋ ಸದಸ್ಯನಾಗಿದ್ದರೂ ಅಮೆರಿಕಾದ ಎಲ್ಲಾ ಮಾತುಗಳಿಗೆ ಸಲಾಮ್ ಹೊಡೆಯದೆ ರೆಬೆಲ್ ಆಗಿ ಗುರುತಿಸಿಕೊಂಡಿದ್ದು ಫ್ರಾನ್ಸ್ ವಿಶೇಷತೆ. ಬ್ರಿಟನ್ ಸೇರಿದಂತೆ ಯುರೋಪಿನ ದೇಶಗಳೆಲ್ಲಾ ದ್ವಿತೀಯ ಸಮರದ ನಂತರ ಅಮೆರಿಕಾದ ಅಡಿಯಾಳುಗಳಂತೆ ವರ್ತಿಸತೊಡಗಿದಾಗ, ಜರ್ಮನಿ ಮನವೊಲಿಸಿ ಯುರೋಪಿಯನ್ ಒಕ್ಕೂಟಕ್ಕೆ ಬುನಾದಿ ಹಾಕಿ ಪರ್ಯಾಯ ನಾಯಕತ್ವ ಸೃಷ್ಟಿಸಿದ ಕೀರ್ತಿಯೂ ಫ್ರಾನ್ಸ್ ಪಾಲಿಗೆ ಸಲ್ಲುತ್ತದೆ. ಎಲ್ಲಾ ಹಿನ್ನೆಲೆಗಳಿಂದ ದಕ್ಷಿಣ ಚೀನಾ ಸಮುದ್ರದತ್ತ ಫ್ರೆಂಚರ ಆಗಮನ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಾಮಾನ್ಯ ದೃಷ್ಟಿಯಲ್ಲಿ ಯುರೋಪಿನ ಮೂಲೆಯಲ್ಲಿರುವ ಫ್ರೆಂಚರಿಗೂ, ದಕ್ಷಿಣ ಚೀನಾ ಸಮುದ್ರಕ್ಕೂ ಎತ್ತಣಿಂದೆತ್ತಣ ಸಂಬಂಧ ಎಂದೆನಿಸಬಹುದು. ವಾಸ್ತವವಾಗಿ ಪ್ರದೇಶಕ್ಕೆ ಫ್ರೆಂಚರು ಹೊಸಬರೇನಲ್ಲ. ಹಿಂದೂ ಮಹಾಸಾಗರದಲ್ಲಿ ಲಾ ರೀಯೂನಿಯನ್, ಮಯೊಟ್ಟೆಗಳೂ ಸೇರಿದಂತೆ ದಕ್ಷಿಣ ಪೆಸಿಫಿಕ್ ನಲ್ಲಿ ಫ್ರೆಂಚ್ ಪಾಲಿನೆಸಿಯ, ನ್ಯೂ ಕ್ಯಾಲೆಡೋನಿಯಾ, ವಾಲ್ಲೀಸ್ ಮತ್ತು ಫುಟುನಾ ದ್ವೀಪಗಳಂಥ ಭೂಪ್ರದೇಶಗಳನ್ನು ಹೊಂದಿರುವ ಫ್ರಾನ್ಸ್ ಕೂಡ ಒಂದು ಏಷ್ಯಾ-ಪೆಸಿಫಿಕ್ ರಾಷ್ಟ್ರ ಎಂಬ ವಿಚಾರ ಮರೆಯಲಾಗದು. ಇಷ್ಟಲ್ಲದೇ ವಿವಿಧ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಲ್ಲಿ 130,000 ಫ್ರೆಂಚರಿದ್ದು, ಸುಮಾರು 1,500,000 ಫ್ರೆಂಚ್ ಪ್ರಜೆಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಎಲ್ಲಾ ಕಾರಣಗಳಿಂದ ಫ್ರೆಂಚ್ ಮಿಲಿಟರಿ ಪಡೆಗಳು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ತಮ್ಮ ಹಿಡಿತ ಬಲಪಡಿಸುತ್ತಿರುವುದು ಅಸಹಜವೇನಲ್ಲ. ಇವಿಷ್ಟೇ ಅಲ್ಲದೆ ಫ್ರಾನ್ಸ್ ಹಲವಾರು ಒಪ್ಪಂದಗಳ ಮೂಲಕ ಭಾರತವೂ ಸೇರಿದಂತೆ ಹಲವು ಏಷ್ಯಾದ ದೇಶಗಳೊಡನೆ ರಕ್ಷಣಾ ಕಾರ್ಯತಂತ್ರದ ಭಾಗವಾಗಿರುವುದು ಕೂಡ ಗಮನಿಸತಕ್ಕದ್ದು.

ಒಂದೆಡೆ ದಕ್ಷಿಣ ಚೀನಾ ಸಮುದ್ರದಲ್ಲಿ ಫ್ರಾನ್ಸ್ ಹಸ್ತಕ್ಷೇಪ ಧನಾತ್ಮಕವಾಗಿ, ಅಂತರ್ರಾಷ್ಟ್ರೀಯ ಕಾನೂನಿನ ಆಪತ್ಪಾಂಧವನಂತೆ ಕಂಡರೂ, ಇನ್ನೊಂದೆಡೆ ಫ್ರೆಂಚರ ನಡೆಯ ಬಗ್ಗೆ ಕೆಲ ಅಂತರ್ರಾಷ್ಟ್ರೀಯ ವಿಶ್ಲೇಷಕರು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ತಯಾರಿಸುತ್ತಿರುವ ಶಸ್ತ್ರಾಸ್ತ್ರಗಳಿಗೆ ಏಷ್ಯಾದ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಪ್ರದೇಶದಲ್ಲಿ ಕಲಹಗಳಿಗೆ ಕುಮ್ಮಕ್ಕು ಕೊಟ್ಟು ತನ್ನ ಮಾರುಕಟ್ಟೆಯನ್ನೂ ವಿಸ್ತರಿಸುವ ಮಹತ್ವಾಕಾಂಕ್ಷೆ ಫ್ರೆಂಚರ ನಡೆಯ ಹಿಂದಿನ ಅಗೋಚರ ಉದ್ದೇಶ ಎನ್ನುವುದು ಕೆಲ ಚಿಂತಕರ ಅಭಿಪ್ರಾಯ. ಕೇವಲ ತನ್ನ ಮಾರುಕಟ್ಟೆಯ ಸುರಕ್ಷತೆಗಷ್ಟೇ ಫ್ರಾನ್ಸ್ ದಕ್ಷಿಣ ಚೀನಾ ಸಮುದ್ರದತ್ತ ಅತಿಯಾದ ಆಸಕ್ತಿ ತೋರಿಸುತ್ತಿದೆ ಎನ್ನುವುದನ್ನು ಸಂಪೂರ್ಣ ಅಲ್ಲಗೆಳೆಯಲಾಗದಿದ್ದರೂ, ಫ್ರಾನ್ಸ್ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಸ್ವಹಿತಾಸಕ್ತಿಗಿಂತ ಅಂತರ್ರಾಷ್ಟ್ರೀಯ ನ್ಯಾಯಕ್ಕೆ ಆದ್ಯತೆ ನೀಡಿದ್ದು ದಾಖಲಾಗಿದೆ. ಉದಾಹರಣೆಗಾಗಿ 2008ರಲ್ಲಿ ಚೀನಾ ಟಿಬೆಟ್ ನಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಾಗ, ಫ್ರಾನ್ಸ್ ಚೀನಾವನ್ನು ಕಟುವಾಗಿ ವಿರೋಧಿಸಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ವ್ಯಾಪಾರನೀತಿಯ ಮೂಲಕ ಪ್ರತೀಕಾರ ತೀರಿಸಿಕೊಂಡು, ಫ್ರಾನ್ಸ್ ಆರ್ಥಿಕತೆಗೆ ಬಲವಾದ ಪೆಟ್ಟು ಕೊಟ್ಟಿತ್ತು. ಇದೆಲ್ಲಾ ನಡೆದ ಮೇಲೂ ಆರ್ಥಿಕ ಲಾಭಕ್ಕಾಗಿ ಫ್ರೆಂಚರು ಚೀನಾವನ್ನು ಓಲೈಸಲು ಪ್ರಯತ್ನಿಸದೆ, ಮಾನವ ಹಕ್ಕುಗಳ ಪರವಾಗಿ ಧೃಡವಾಗಿ ನಿಂತಿದ್ದು ಭಾರತದ 'ಮುಕ್ತ ಟಿಬೆಟ್' ವಿದೇಶಾಂಗ ನೀತಿಗೂ ಇನ್ನಷ್ಟು ಬಲ ತುಂಬಿತ್ತು. ಫ್ರಾನ್ಸ್ ವಿಶ್ವ ರಾಜಕೀಯದಲ್ಲಿ ಲಾಭ ನಷ್ಟಗಳ ಮುಲಾಜಿಲ್ಲದೆ, ಆದರ್ಶಗಳ ಜೊತೆ ರಾಜಿ ಮಾಡಿಕೊಳ್ಳದೆ ಅಂತರ್ರಾಷ್ಟ್ರೀಯ ಕಾನೂನಿನ ಬೆನ್ನೆಲುಬಾಗಿ ನಿಂತ ಅನೇಕ ಐತಿಹಾಸಿಕ ನಿದರ್ಶನಗಳು ಕಣ್ಣ ಮುಂದಿರುವಾಗ ದಕ್ಷಿಣ ಚೀನಾ ಸಮುದ್ರದಲ್ಲಿ ಫ್ರಾನ್ಸ್ ಹಸ್ತಕ್ಷೇಪವನ್ನು ಧನಾತ್ಮಕ ರೀತಿಯಲ್ಲಿ ಸ್ವೀಕರಿಸುವುದರಲ್ಲಿ ತಪ್ಪೇನಿಲ್ಲ.

ದಕ್ಷಿಣ ಚೀನಾ ಸಮುದ್ರದಲ್ಲಿ ಫ್ರೆಂಚ್ ಪಡೆಗಳ ಆಗಮನದೊಂದಿಗೆ ಚೀನಾದ ಪ್ರಭಾವ ಕಡಿಮೆಯಾದಲ್ಲಿ ಭಾರತದ ಪಾಲಿಗೂ ಅದು ಸಿಹಿ ಸುದ್ದಿಯೇ ಸರಿ. ವಿವಾದಿತ ಪ್ರದೇಶದಲ್ಲಿ ಭಾರತ ಯಾವುದೇ ನೇರ ಸಂಬಂಧ ಹೊಂದಿಲ್ಲವಾದರೂ, ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತವನ್ನು ಪಾಲುದಾರ ಎಂದು ಪರಿಗಣಿಸುವಂತೆ ಮಾಡಿದೆ. ಐತಿಹಾಸಿಕ ದೃಷ್ಟಿಯಿಂದಲೂ ಫ್ರಾನ್ಸ್ ಭಾರತದ ಪಾಲಿಗೆ ಮಿಕ್ಕ ಯುರೋಪಿನ ಭಾಗಗಳಿಗಿಂತ ಹೆಚ್ಚು ಆಪ್ತ ಎಂದೆನಿಸುತ್ತದೆ. ಶೀತಲ ಸಮರದ ಉತ್ತುಂಗದಲ್ಲಿ, ನ್ಯಾಟೋ ಜೊತೆಗಿನ ಭಾರತದ ಸಂಬಂಧಗಳಲ್ಲಿ ಕದಡಿದ್ದರೂ, ತುಲನಾತ್ಮಕವಾಗಿ ಫ್ರಾನ್ಸ್ ಜೊತೆಗಿನ ಬಾಂಧವ್ಯ ಉತ್ತಮವಾಗಿ ಮುಂದುವರೆದಿತ್ತು. 1965 ಭಾರತ-ಪಾಕ್ ಯುದ್ಧದ ನಂತರ ವಿಧಿಸಲಾಗಿದ್ದ ಶಸ್ತ್ರಾಸ್ತ್ರಗಳ ಮಾರಾಟದ ಮೇಲಿನ ನಿಷೇಧವನ್ನು ರದ್ದುಗೊಳಿಸುವ ಬಗೆಗೆ ಮೊದಲ ಬಾರಿ ಯೋಚಿಸಿದ್ದು ಇದೇ ಫ್ರಾನ್ಸ್. 1971 ಯುದ್ಧದಲ್ಲೂ ಭಾರತದ ನಿರ್ಧಾರಗಳನ್ನು ನ್ಯಾಯ ಸಮ್ಮತ ಎಂದು ಒಪ್ಪಿಕೊಂಡ ಏಕೈಕ ಯುರೋಪಿಯನ್ ರಾಷ್ಟ್ರ ಫ್ರಾನ್ಸ್. ಇವೆಲ್ಲವುಗಳಿಗಿಂತ ಮುಖ್ಯವಾಗಿ ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರ ಸಮಯದಲ್ಲಿ ಭಾರತ ಅಧಿತೃತವಾಗಿ ತನ್ನನ್ನು ತಾನು ಪರಮಾಣು ಶಕ್ತಿಯೆಂಂದು ವಿಶ್ವಕ್ಕೆ ಸಾರಿದಾಗ, ಅಮೆರಿಕಾ ನೇತೃತ್ವದಲ್ಲಿ ಬಹುತೇಕ ರಾಷ್ಟ್ರಗಳೂ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪಾಲಿಗೆ ಆಪ್ತ ಮಿತ್ರನಾಗಿ, ವಿಶ್ವದ ದೊಡ್ಡಣ್ಣ ಅಮೆರಿಕಾದ ನಿರ್ಧಾರವನ್ನೇ ಪ್ರಶ್ನಿಸುವ ದಿಟ್ಟತನ ತೋರಿದ್ದು ಫ್ರೆಂಚರು ಮಾತ್ರ! ಹೀಗೆ ಹತ್ತು ಹಲವು ವಿಧಗಳಲ್ಲಿ ಭಾರತದ ದೃಷ್ಟಿಯಲ್ಲಿ ಫ್ರಾನ್ಸ್ ಯುರೋಪಿನ ಇತರ ರಾಷ್ಟಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.

2016 ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಆಹ್ವಾನಿಸಿ ಫ್ರಾನ್ಸ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಫ್ರಾನ್ಸ್ ಸೈನ್ಯ ತುಕಡಿಯೊಂದು ರಾಜ್ ಪಥ್ ನಲ್ಲಿ ಪಥಸಂಚಲನ ನಡೆಸಿ ಭಾರತ ವಿರೋಧಿ ಪಾಳೆಯದಲ್ಲಿ ಸಣ್ಣ ನಡುಕ ಮೂಡಿಸಿಬಿಟ್ಟಿದೆ. ಫ್ರಾನ್ಸ್ ಜೊತೆಗೆ ಭಾರತದ ಸಂಬಂಧಗಳು ಗಟ್ಟಿಯಾಗುತ್ತಿರುವಾಗಲೇ, ಫ್ರೆಂಚ್ ನೌಕಾಪಡೆ ದಕ್ಷಿಣ ಚೀನಾ ಸಮುದ್ರದೆಡೆ ಗಮನ ಹರಿಸುವ ಮೂಲಕ ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯುವ ಪ್ರಯತ್ನಗಳು ಉತ್ಸಾಹದಿಂದಲೇ ನಡೆಯುತ್ತಿವೆ. ದಿನೇ ದಿನೇ ಹೆಚ್ಚಾಗುತ್ತಿರುವ ಚೀನೀ ಆಟಗಳಿಗೆ ಕಡಿವಾಣ ಹಾಕಲು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ಭಾರತದ ಸಮರನೀತಿಯ ತಜ್ಞರಿಗೆ ಫ್ರೆಂಚರ ಹೊಸ ನಡೆ ಅನೇಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.





 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Vishwavani newspaper on 3 August 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ