ಬುಧವಾರ, ಆಗಸ್ಟ್ 3, 2016

ಏಷ್ಯಾದ ಹೈಬ್ರಿಡ್ ರಣರಂಗ ಮತ್ತು ಭಾರತದ ಭದ್ರತೆ

"ಚೀನಾ ಸೈಬರ್ ಯುದ್ಧಕ್ಕೆಂದೇ ಪ್ರತ್ಯೇಕ ಇಲಾಖೆಯನ್ನೂ ಸ್ಥಾಪಿಸಿರುವುದು ಹೈಬ್ರಿಡ್ ರಣರಂಗದಲ್ಲಿ ಸೈಬರ್ ತಂತ್ರಗಳ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಏಷ್ಯಾದಲ್ಲಿ ವಿಶ್ಲೇಷಕರು ಗುರುತಿಸಿದ ಹೈಬ್ರಿಡ್ ರಣರಂಗದಲ್ಲಿ ಶತ್ರುಗಳಿಂದ ಸುತ್ತುವರಿದಿರುವ ಭಾರತದ ರಣನೀತಿ ಏಷ್ಯಾ ರಾಜಕೀಯದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ."
- ಕೀರ್ತಿರಾಜ್



ಇತ್ತೀಚೆಗೆ ನಡೆದಿರುವ ಭದ್ರತಾ ಸಂಬಂಧಿ ಸಮ್ಮೇಳನಗಳು ಅಥವಾ ಭದ್ರತೆಗೆ ಸಂಬಂಧಿಸಿದ ಪ್ರಕಟಿತ ಲೇಖನಗಳಲ್ಲಿ 'ಹೈಬ್ರಿಡ್ ಯುದ್ಧ' ಪುನರಾವರ್ತನೆಯಾಗುತ್ತಿರುವ ವಿಷಯ. ಹೈಬ್ರಿಡ್ ಯುದ್ಧದ ಪ್ರಸ್ತಾಪವಾಗುತ್ತಿರುವುದು ಇದೇ ಮೊದಲೇನಲ್ಲ. ಈ ಪರಿಕಲ್ಪನೆಯೂ ಅಂತರ್ರಾಷ್ಟ್ರೀಯ ಕಲಹಗಳಲ್ಲಿ ಈಗಾಗಲೇ ಚರ್ಚಿತವಾಗಿರುವ ಹಳೆಯ ವಿಷಯವೇ ಆಗಿದ್ದರೂ, ಆಧುನಿಕ ತಂತ್ರಜ್ಞಾನದ ಹೈಬ್ರಿಡ್ ಬೆಳವಣಿಗೆಯೊಂದಿಗೆ ಹೈಬ್ರಿಡ್ ಯುದ್ಧವೂ ಜಾಗತಿಕ ರಣರಂಗದಲ್ಲಿ ಸ್ಪಷ್ಟವಾಗಿ ಹೆಜ್ಜೆಯೂರಿದೆ. ಇವತ್ತಿನ ರಣರಂಗ ಸೈನಿಕರು ಮತ್ತು ಅವರ ಕೈಯಲ್ಲಿರುವ ಆಯುಧಗಳಿಗೆ ಸೀಮಿತವಾಗಿಲ್ಲ. ಹೈಬ್ರಿಡ್ ಯುದ್ಧದಲ್ಲಿ ಸಾಂಪ್ರದಾಯಿಕ ಯುದ್ಧತಂತ್ರಗಳು, ಅನಿಯನಮಿತ ಅಕ್ರಮ ಸಮರಗಳು, ಕಾನೂನುಬಾಹಿರ ಸುಲಿಗೆ, ಸೈಬರ್ ದಾಳಿ, ಪರ್ ವಿರೋಧದ ಪ್ರಚಾರಗಳೊಂದಿಗೆ ಅಂತರ್ರಾಷ್ಟ್ರೀಯ ಕಾನೂನನ್ನೂ ಬಳಸಿಕೊಳ್ಳಲಾಗುತ್ತದೆ. ಇವಿಷ್ಟೇ ಅಲ್ಲದೇ ಉಗ್ರ ಸಂಘಟನೆಗಳು, ಗುಪ್ತ ಕಾರ್ಯಾಚರಣೆಗಳು ಹೀಗೆ ಊಹಿಸಲಾಗದ ತಂತ್ರಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಹೈಬ್ರಿಡ್ ರಣರಂಗಗಳು ತೆರೆದಿಟ್ಟಿವೆ. ಜಾಗತಿಕವಾಗಿ ಸುದ್ದಿ ಮಾಡಿದ ಉಕ್ರೈನ್ ನಲ್ಲಿ ರಷ್ಯಾ, ಮತ್ತು ಸಿರಿಯಾ ಬಿಕ್ಕಟ್ಟಿನಲ್ಲಿ ಇಸ್ಲಾಮಿಕ್ ಸ್ಟೇಟ್ ಅನುಸರಿಸಿದ ಯುದ್ಧ ನೀತಿಗಳು ಹೈಬ್ರಿಡ್ ಯುದ್ಧದ ವ್ಯಾವಹಾರಿಕ ನಿದರ್ಶನಗಳು. ಹೈಬ್ರಿಡ್ ರಣರಂಗದಲ್ಲಿ ಹ್ಯಾಕರ್, ಯುದ್ಧ ಪ್ರಚಾರಕ, ಯುದ್ಧ ಸಾಮಗ್ರಿಗಳ ಕಳ್ಳಸಾಗಣೆಗಾರ, ಧರ್ಮ ಗುರುಗಳೆಲ್ಲರೂ ಯುದ್ಧದ ಅವಶ್ಯ ಮತ್ತು ಅನಿವಾರ್ಯ ಪಾಲುದಾರರು!

ಜಗತ್ತಿನ ಅತೀ ದೊಡ್ಡ ಖಂಡ ಏಷ್ಯಾದಲ್ಲಿ ಹೈಬ್ರಿಡ್ ಯುದ್ಧದ ಸಾಧ್ಯತೆಗಳ ಬಗ್ಗೆ ಈಗಾಗಲೇ ಜಾಗತಿಕ ಭದ್ರತಾ ಚಿಂತಕರು ಮತ್ತು ವಿಶ್ಲೇಷಕರು ಎಚರಿಸಿದ್ದಾರೆ. ಕೆಲವೊಂದು ಅಧ್ಯಯನಗಳು ಈಗಾಗಲೇ ಏಷ್ಯಾ ಹೈಬ್ರಿಡ್ ರಣರಂಗವಾಗಿ ಮಾರ್ಪಟ್ಟಿರುವ ಬಗೆಗೆ ಸ್ಪಷ್ಟ ಪುರಾವೆಗಳನ್ನು ಒದಗಿಸಿವೆ. ಏಷ್ಯಾದಲ್ಲಿರುವ ಜನಾಂಗೀಯ ಕಲಹಗಳು, ಗಡಿ ವಿವಾದಗಳು, ಅಸ್ಥಿರ ರೂಲ್ ಆಫ್ ಲಾ ಇನ್ನಿತರ ಸಮಸ್ಯೆಗಳು ಮ್ಯಾನ್ಮಾರ್, ಪಾಕಿಸ್ತಾನ್, ಥ್ಯಾಲ್ಯಾಂಡ್ ಗಳಲ್ಲಿ ಹೈಬ್ರಿಡ್ ರಣರಂಗಗಳನ್ನು ಸೃಷ್ಟಿಸಿ, ಪೋಷಿಸುವಷ್ಟು ಅವಕಾಶಗಳಿವೆ ಎಂದು ಭದ್ರತಾ ವಿಶ್ಲೇಷಕ ಡಾಗ್ಲಾಸ್ ಒಲ್ಲಿವೆಂಟ್ ಅಭಿಪ್ರಾಯ ಪಡುತ್ತಾರೆ. ಅಂತರ್ರಾಷ್ಟ್ರೀಯ ಮಾನ್ಯತೆಯಿರುವ ರಾಷ್ಟ್ರಗಳಿಗಷ್ಟೇ ಸೀಮಿತವಾಗಿದ್ದ ಕೆಲವೊಂದು ಸೀಮಿತ ಮಿಲಿಟರಿ ಸಾಮರ್ಥ್ಯಗಳನ್ನು ಉಗ್ರ ಸಂಘಟನೆಗಳಿಗೆ ನೀಡಿ ತನ್ನ ಉದ್ದೇಶ ಈಡೇರಿಸಿಕೊಳ್ಳುವುದು ಹೈಬ್ರಿಡ್ ಯುದ್ಧದ ಪ್ರಮುಖ ಲಕ್ಷಣಗಳಲ್ಲೊಂದು! ಈವರೆಗೆ, ಅವಿತು ಕುಳಿತು ಕಳ್ಳದಾಳಿ ನಡೆಸುತಿದ್ದ ಉಗ್ರರ ಶಸ್ತ್ರಾಗಾರಕ್ಕೆ ಮುಖ್ಯವಾಹಿನಿ ಮಿಲಿಟರಿ ಸಾಮರ್ಥ್ಯಗಳಾದ ಖಂಡಾಂತರ ಕ್ಷಿಪಣಿಗಳಂಥ ಸೇರ್ಪಡೆ, ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಪಾಲಿಗೆ ಆತಂಕಕಾರಿ.


ಬೂದಿ ಮುಚ್ಚಿದ ಕೆಂಡದಂತಿರುವ ಭಾರತ-ಪಾಕಿಸ್ತಾನ, ಭಾರತ-ಚೀನಾ ಸಂಬಂಧಗಳು ಮತ್ತು ಹೈಬ್ರಿಡ್ ರಣರಂಗವಾಗಿ ಮಾರ್ಪಟ್ಟಿರುವ ಏಷ್ಯಾ ಭಾರತ ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು.  ರಷ್ಯಾ ಪ್ರೇರಿತ ಪ್ರತ್ಯೇಕತಾವಾದಿಗಳು, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಗಳು  ರಾಷ್ಟ್ರೀಯ ಸೇನೆಯ ಲಕ್ಷಣಗಳನ್ನು ತೋರ್ಪಡಿಸುತ್ತಿವೆ ಎಂದಾದಲ್ಲಿ, ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನೆಲೆಯಾಗಿರುವ ಉಗ್ರ ಸಂಘಟನೆಗಳು ಅಥವಾ ಚೀನೀ ಪ್ರೇರಿತ ಉಗ್ರರು ಭಾರತದ ಮೇಲೆ ಇದೇ ಮಾದರಿಯ ದಾಳಿ ನಡೆಸುವುದರಲ್ಲಿ ಅನುಮಾನವೇನಿಲ್ಲ. ಭಾರತದ ಈಶಾನ್ಯ ಪ್ರಾಂತ್ಯದಲ್ಲಿ ಚೀನಾ ನೆರವಿನಿಂದ ನಡೆಯುತ್ತಿರುವ ನಕ್ಸಲ್ ದಂಗೆಗಳಲ್ಲೂ ಹೈಬ್ರಿಡ್ ಯುದ್ಧಕ್ಕೆ ಸಂಪೂರ್ಣ ಅವಕಾಶಗಳಿವೆ. ಅದರಲ್ಲೂ ಸೈಬರ್ ಮತ್ತು ರೊಬೊಟಿಕ್ ತಂತ್ರಜ್ಞಾನದಲ್ಲಿ ಚೀನಾ ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿದೆ. ಹೈಬ್ರಿಡ್ ಯುದ್ಧ ಏಷ್ಯಾ ರಾಜಕೀಯಕ್ಕೆ ಸಂಪೂರ್ಣ ಹೊಸತೇನಲ್ಲ  ದಶಕಗಳವರೆಗೆ ಶ್ರೀಲಂಕಾ ಸರಕಾರವನ್ನು ಕಾಡಿದ ಎಲ್ ಟಿ ಟಿ ಇ ಕೂಡ ಒಂದು ರಾಷ್ಟ್ರೀಯ ಸೇನೆಯಂತೆ, ಭೂಸೇನೆ, ನೌಕಾದಳ, ವಾಯುಸೇನೆಗಳ ಜೊತೆ ಅಂತರಾಷ್ಟ್ರೀಯ ಮಾನ್ಯತೆಗೋಸ್ಕರ ಸುಸಜ್ಜಿತ ಪ್ರಚಾರವನ್ನೂ ಕಾರ್ಯರೂಪಕ್ಕಿಳಿಸಿ ಹೈಬ್ರಿಡ್ ಯುದ್ಧಕ್ಕೆ ಆ ಕಾಲದಲ್ಲೇ ನಾಂದಿ ಹಾಡಿತ್ತು.

ಅಂತರ್ರಾಷ್ಟ್ರೀಯ ಕಾನೂನಿನ ಪ್ರಕಾರ ಯಾವುದೇ ದೇಶ ತನ್ನ ಗಡಿ ದಾಟಿ, ಇನ್ನೊಂದು ಸಾರ್ವಭೌಮ ದೇಶದ ಗಡಿಯೊಳಗೆ ದಾಳಿ ಮಾಡಿದಲ್ಲಿ ಮಾತ್ರ ಆ ಪರಿಸ್ಥಿತಿಯನ್ನು ಯುದ್ಧ ಎಂದು ಪರಿಗಣಿಸಲಾಗುತ್ತದೆ. ಯಾವುದೇ ದೇಶವನ್ನು ತಪ್ಪಿತಸ್ಥ ಎಂದು ಪರಿಗಣಿಸಬೇಕಾದಲ್ಲೂ ಯುದ್ಧದ ಇದೇ ವ್ಯಾಖ್ಯಾನ ಅನ್ವಯವಾಗುತ್ತದೆ. ಹೀಗಾಗಿ ಇನ್ನೊಂದು ದೇಶದ ಗಡಿ ದಾಟದೆ, ತನ್ನ ಉದ್ದೇಶ ಸಾಧಿಸಿಕೊಂಡು ಅಂತರ್ರಾಷ್ಟ್ರೀಯ ಕಾನೂನಿನ ಕಣ್ಣಿಗೆ ಮಣ್ಣೆರಚುವಲ್ಲಿ ಹೈಬ್ರಿಡ್ ಯುದ್ಧ ತಂತ್ರಗಳು ಯಶಸ್ವಿಯಾಗಿವೆ. ಉದಾಹರಣೆಗಾಗಿ, ದಕ್ಷಿಣ ಚೀನಾ ಸಮುದ್ರದಲ್ಲಿ ಬಹಳಷ್ಟು ಸಮಯದಲ್ಲಿ ಕಡಲ್ಗಳ್ಳರ ಹಾವಳಿ ಇದೆ. ಕಡಲ್ಗಳ್ಳರ ಸಮಸ್ಯೆ ಇವತ್ತಿಗೆ ರಾಜಕೀಯೇತರ ಸಮಸ್ಯೆಯಾಗಿ ಉಳಿದಿಲ್ಲ. ಒಂದು ವೇಳೆ ಚೀನಾ ಗುಟ್ಟಾಗಿ ಕಡಲ್ಗಳ್ಳರನ್ನು ತರಬೇತುಗೊಳಿಸಿ, ಶಸ್ತ್ರಾಸ್ತ್ರಗಳನ್ನು ಪೂರೈಸಿ, ಆಗ್ನೇಯ ಏಷ್ಯಾದ ಸಣ್ಣಪುಟ್ಟ ರಾಷ್ಟ್ರಗಳ ಹಡಗುಗಳ ಮೇಲೆ ಛೂ ಬಿಟ್ಟು, ಕೊನೆಗೆ ಇದೇ ಆಧಾರದ ಮೇಲೆ ಕಡಲ್ಗಳ್ಳರ ನಿಯಂತ್ರಣಕ್ಕಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ನೌಕಾಬಲವನ್ನು ವೃದ್ಧಿಸಿಕೊಳ್ಳಬಹುದು! ಚೀನಾದ ಈ ಆಕ್ರಮಣಕಾರಿ ನಡೆ ಏಷ್ಯಾದಲ್ಲಿ ಮಿಲಿಟರಿ ಪ್ರಕ್ಷುಬ್ದತೆಗೆ ಕಾರಣವಾದರೂ ಅಂತರ್ರಾಷ್ಟ್ರೀಯ ಕಾನೂನಿನ ವ್ಯಾಖ್ಯಾನದ ಪ್ರಕಾರ ತಪ್ಪಲ್ಲ! ಸೈಬರ್ ಸಮರತಂತ್ರಗಳಲ್ಲೂ ಚೀನಾ ತೋರಿಸಿರುವ ಆಸಕ್ತಿ ಮತ್ತು ಸಾಧಿಸಿರುವಂಥ ಪ್ರಗತಿಯನ್ನು ಇನ್ನಾವ ದೇಶವೂ ಸಾಧಿಸಿಲ್ಲ ಎನ್ನುಚವುದೂ ಸತ್ಯ. ಕೆಲ ತಿಂಗಳುಗಳ ಹಿಂದೆ ಚೀನಾ ಸೈಬರ್ ಯುದ್ಧಕ್ಕೆಂದೇ ಪ್ರತ್ಯೇಕ ಇಲಾಖೆಯನ್ನೂ ಸ್ಥಾಪಿಸಿರುವುದು ಹೈಬ್ರಿಡ್ ರಣರಂಗದಲ್ಲಿ ಸೈಬರ್ ತಂತ್ರಗಳ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಸದ್ಯ ವಿಶ್ವಾದ್ಯಂತ ಹ್ಯಾಕರ್ ಗಳು ಅತಿಯಾಗಿ ಗುರಿಯಾಗಿಸಲ್ಪಟ್ಟ ಪ್ರದೇಶ 'ದಕ್ಷಿಣ ಚೀನಾ ಸಮುದ್ರ' ಎನ್ನುವುದೂ ಎಚ್ಚರಿಕೆಯ ಘಂಟೆಯೇ ಸರಿ!

"ಕಾದಾಡಕ್ಕಿಳಿಯದೇ ಶತ್ರುವನ್ನು ನಿಗ್ರಹಿಸುವುದು ಅತ್ಯಂತ ಶ್ರೇಷ್ಟ ಯುದ್ಧಕಲೆ" ಸಾರ್ವಕಾಲಿಕ ಶ್ರೇಷ್ಟ ಮಿಲಿಟರಿ ತಜ್ಞ ಸನ್ ತ್ಸು ಮಾತುಗಳು ಇವತ್ತಿನ ಹೈಬ್ರಿಡ್ ರಣರಂಗದಲ್ಲಿ ಬಹಳಷ್ಟು ಪ್ರಸ್ತುತ. ಏಷ್ಯಾದಲ್ಲಿ ವಿಶ್ಲೇಷಕರು ಗುರುತಿಸಿದ ಹೈಬ್ರಿಡ್ ರಣರಂಗದಲ್ಲಿ ಶತ್ರುಗಳಿಂದ ಸುತ್ತುವರಿದಿರುವ ಭಾರತದ ರಣನೀತಿ ಏಷ್ಯಾ ರಾಜಕೀಯದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ. ದಶಕಗಳಿಂದ ವಿಭಿನ್ನ ಸವಾಲುಗಳನ್ನೆದುರಿಸಿದ ಭಾರತದ ಭದ್ರತಾ ವ್ಯವಸ್ಥೆ, ನೇರ ಕಾದಾಟವಿಲ್ಲದ ಈ ಛಾಯಾ ಯುದ್ಧಕ್ಕೆ (Proxy War) ಯಾವ ರೀತಿ ಪ್ರತ್ಯುತ್ತರ ಕೊಡುತ್ತದೆ ಎಂಬುದು ಜಾಗತಿಕ ಭದ್ರತಾ ವಿಶ್ಲೇಷಕರ ಸದ್ಯದ ಕುತೂಹಲ.


 KEERTHIRAJ (keerthiraj886@gmail.com)

·   Currently serving as an Assistant Professor for International Relations and Political Science at Alliance University, Bangalore. 
      (This article was published in Hosa Diganta newspaper on 29 July 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ