ಶನಿವಾರ, ಜುಲೈ 16, 2016

ಅಂತರಾಷ್ಟ್ರೀಯ ಕಾನೂನಿಗೆ ಬೆಲೆ ಕೊಡದ 'ಬಲಿಷ್ಠರು'

ವಿಶ್ವದ ಬಲಿಷ್ಟ ರಾಷ್ಟ್ರಗಳು, ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ನ್ಯಾಯಾಲಯ, ಕಾನೂನುಗಳು ಸ್ವಹಿತಾಸಕ್ತಿಯ ಸಾಧನಗಳಷ್ಟೆ. ನ್ಯಾಯಾಧಿಕರಣದ ತೀರ್ಪುಗಳು ಚಿಕ್ಕ ಪುಟ್ಟ ಬಲಹೀನ ರಾಷ್ಟ್ರಗಳನ್ನು ಬೆದರಿಸಲಷ್ಟೇ ಶಕ್ತ. 

- ಕೀರ್ತಿರಾಜ್



ಇತಿಚೆಗೆ ಹೇಗ್ ನ್ಯಾಯಾಧಿಕರಣ ಚೀನಾ ವಿರುದ್ಧ ನೀಡಿದ ತೀರ್ಪು, ಚೀನಾದ ಪ್ರತಿಕ್ರಿಯೆ ಮತ್ತು ವಿಶ್ವಾದ್ಯಂತ ಈ ಬಗ್ಗೆ ನಡೆದ ಚರ್ಚೆ ಕೇವಲ ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸೀಮಿತವಾಗಿಲ್ಲ. ಈ ಪ್ರಕರಣ ವಿಶ್ವ ಮಟ್ಟದಲ್ಲಿ ನ್ಯಾಯದ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನೆಬ್ಬಿಸಿದೆ. ಹಲವಾರು ವರ್ಷಗಳಿಂದ ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಕಾನೂನು ಬಾಹಿರವಾಗಿ ತನ್ನ ಪ್ರಭಾವ ಬೆಳೆಸಿಕೊಂಡಿದೆ. ಪಿಲಿಪ್ಪೈನ್ಸ್, ಮಲೇಷಿಯಾ, ವಿಯೆಟ್ನಾಮ್, ತೈವಾನ್ ಮತ್ತು ಬ್ರೂನೈ ದೇಶಗಳಿಗೂ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತಮ್ಮದೇ ರಾಷ್ಟ್ರೀಯ ಹಿತಾಸಕ್ತಿಗಳಿದ್ದರೂ, ಚೀನಾ ದೈತ್ಯ ಶಕ್ತಿಗೆ ಎದುರಾಗಿ ನಿಲ್ಲಲಾರದೆ ಚೀನಾ ಪುಂಡಾಟಿಕೆಯನ್ನು ಸಹಿಸಿಕೊಳ್ಳಬೇಕಾಯ್ತು. ಕೊನೆಗೂ 2013ರಲ್ಲಿ ಪಿಲಿಪ್ಪೈನ್ಸ್  ಚೀನಾದ ಈ ಅತಿಕ್ರಮಣಕಾರಿ ನಿಲುವುಗಳ ಬಗ್ಗೆ ಅಂತರ್ರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸಿದ ಅಂತರ್ರಾಷ್ಟ್ರೀಯ ನ್ಯಾಯಾಲಯ ವಿಚಾರಣೆಯನ್ನು ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣಕ್ಕೆ ಒಪ್ಪಿಸಿತ್ತು. ಜುಲೈ 12ರಂದು ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣ ನೀಡಿದ ತೀರ್ಪು ವಿಶ್ವ ರಾಜಕೀಯದಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಅಧಿಪತ್ಯ ಸಾಧಿಸಲು ಚೀನಾ ಮುಂದಿಟ್ಟಿರುವ ವಾದಗಳನ್ನು ಹೇಗ್ ನ್ಯಾಯಾಧಿಕರಣ ಸಾರಾಸಗಟಾಗಿ ತಿರಸ್ಕರಿಸಿದೆ. ಚೀನಾ ಸೃಷ್ಟಿಸಿಕೊಂಡಿರುವ 'ನೈನ್ ಡ್ಯಾಶ್ ರೇಖೆ' ಮತ್ತು ಈ ಪ್ರದೇಶದ ಮೇಲಿನ ಐತಿಹಾಸಿಕ ಹಕ್ಕುಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸುವ ಚೀನಾ ಪ್ರಯತ್ನಕ್ಕೆ ನ್ಯಾಯಾಧಿಕರಣದ ತೀರ್ಪು ಬಲವಾದ ಹಿನ್ನಡೆ ಉಂಟು ಮಾಡಿದೆ. ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಈ ತೀರ್ಪನ್ನು ಜಾರಿಗೊಳಿಸುವ ಉತ್ಸಾಹದಲ್ಲಿದ್ದರೆ, ಕಮ್ಯುನಿಸ್ಟ್ ಚೀನಾ ಕಡೆಯಿಂದ ಬಲವಾದ ವಿರೋಧ ವ್ಯಕ್ತವಾಗಿದೆ. ನ್ಯಾಯಾಧಿಕರಣದ ತೀರ್ಪು ಕೇವಲ ಒಂದು ಕಾಗದದ ತುಂಡು ಎಂದು ಪರಿಗಣಿಸುವ ಮೂಲಕ, ಅಂತರ್ರಾಷ್ಟ್ರೀಯ ಕಾನೂನುಗಳು ಪಾಲಿಸುವುದು ಬಲಿಷ್ಟ ರಾಷ್ಟ್ರಗಳಿಗೆ ಕಡ್ಡಾಯವೇನಲ್ಲ ಎಂಬ ಹಳೆಯ ಸತ್ಯವನ್ನು ಚೀನಾ ಮತ್ತೆ ನೆನಪಿಸಿದೆ.

ಹೇಗ್ ನ್ಯಾಯಾಧಿಕರಣದ ತೀರ್ಪಿಗೆ ಚೀನಾ ಬದ್ಧವಾಗಿರಬೇಕು ಎಂಬ ಅಭಿಪ್ರಾಯ ವಿಶ್ವದ ಹಲವು ರಾಷ್ಟ್ರಗಳಿಂದ ವ್ಯಕ್ತವಾದರೂ, ಚೀನಾದ ಪ್ರತಿಕ್ರಿಯೆ ನಕಾರಾತ್ಮಕವಾಗಿಯೇ ಇದೆ. ಅಮೆರಿಕಾ ಮತ್ತಿತರ ರಾಷ್ಟ್ರಗಳೂ ಚೀನಾದ ಮನವೊಪ್ಪಿಸುವಷ್ಟು ನೈತಿಕತೆ ಉಳಿಸಿಕೊಂಡಿಲ್ಲ. ವಿಶ್ವಸಂಸ್ಥೆ ಮತ್ತು ಅಂತರ್ರಾಷ್ಟ್ರೀಯ ಕಾನೂನುಗಳನ್ನು ಜಾರಿ ಮಾಡುವಂಥ ಜವಾಬ್ದಾರಿ ಹೊತ್ತಿರುವ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟಗಳು ಕಾನೂನು ಪಾಲಿಸಿದ ಉದಾಹರಣೆಗಿಂತ ಉಲ್ಲಂಘಿಸಿದ ಪ್ರಕರಣಗಳೇ ಹೆಚಾಗಿವೆ. ಅಮೆರಿಕಾ, ಬ್ರಿಟನ್, ಫ್ರಾನ್ಸ್, ರಷ್ಯಾ ಮತ್ತು ಚೀನಾಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಅಂತರ್ರಾಷ್ಟ್ರೀಯ ಕಾನೂನನ್ನು ಮುಲಾಜಿಲ್ಲದೆ ತಿರಸ್ಕರಿಸಿವೆ. ಹೀಗಿರುವಾಗ ಬಲಿಷ್ಟ ರಾಷ್ಟ್ರಗಳೆಲ್ಲಾ ಕಾನೂನು ಮುರಿಯುವುದನ್ನು ಸಂಪ್ರದಾಯವಾಗಿಸಿಕೊಂಡಿರುವಾಗ, ಚೀನಾ ಹೇಗ್ ಅಂತರ್ರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪನ್ನು ಧಿಕ್ಕರಿಸಿದ್ದು ಅನಿರೀಕ್ಷಿತ ನಡೆಯಾಗಿರಲಿಲ್ಲ. ಶಕ್ತಿ ರಾಜಕೀಯದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮುಂದೆ ಕಾನೂನು, ನಿಯಮಗಳು ಇದ್ದೂ ಇಲ್ಲದಂತೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆ.

ಪಿಲಿಪ್ಪೈನ್ಸ್ 2013ರಲ್ಲಿ ನ್ಯಾಯಕ್ಕಾಗಿ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದಾಗಿನಿಂದಲೂ, ಇದು ಚೀನಾದ ಸಾರ್ವಭೌಮತ್ವದ ಪ್ರಶ್ನೆಯಾಗುವುದರಿಂದ ಈ ಪ್ರಕರಣದ ವಿಚಾರಣೆ ನ್ಯಾಯಾಧಿಕರಣಕ್ಕೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕಮ್ಯುನಿಸ್ಟ್ ಚೀನಾ ವಾದಿಸಿತ್ತು. ನ್ಯಾಯಾಧಿಕರಣ ಚೀನಾದ ಈ ವಾದವನ್ನು ತಿರಸ್ಕರಿಸಿ ವಿಚಾರಣೆ ಮುಂದುವರಿಸಿದಾಗ, ನ್ಯಾಯಾಧಿಕರಣದ ಯಾವುದೇ ಪ್ರಕ್ರಿಯೆಗೂ ಹಾಜರಾಗದೆ ತನ್ನ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕಾವೂ ಒಳಗೊಂಡಂತೆ ಭದ್ರತಾ ಮಂಡಳಿಯ ಇತರ ಖಾಯಂ ಸದಸ್ಯ ರಾಷ್ಟ್ರಗಳು ಚೀನಾದ ಈ ನಿಲುವನ್ನು ವಿರೋಧಿಸಿದರೂ, ಇಂಥ ಸಂದರ್ಭಗಳು ಆಯಾ ರಾಷ್ಟ್ರಗಳಿಗೆ ಬಂದಾಗ ಆ ರಾಷ್ಟ್ರಗಳು ಇಂದು ಚೀನಾ ನಡೆದುಕೊಂಡ ರೀತಿಯಲ್ಲೇ ನಡೆದುಕೊಂಡಿದ್ದರು. ಇದು ಚೀನಾಗೆ ತಿಳಿಯದ ಸಂಗತಿಯೇನಲ್ಲ.

2013ರಲ್ಲಿ ರಷ್ಯಾದ ನೌಕಾ ಸೇನೆ ನೆದರ್ಲ್ಯಾಂಡ್ಸ್ ನ ಹಡಗೊಂದನ್ನು ತಮ್ಮದಲ್ಲದ ಜಲಪ್ರದೇಶವೊಂದರಲ್ಲಿ ಕಾನೂನು ಬಾಹಿರವಾಗಿ ವಶಪಡಿಸಿಕೊಂಡು ಹಡಗಿನಲ್ಲಿದ್ದ ಡಚ್ ಸಿಬ್ಬಂದಿಯನ್ನು ಬಂಧಿಸಿತ್ತು. ಈ ವಿಚಾರವಾಗಿ ನೆದರ್ಲ್ಯಾಂಡ್ಸ್ ರಷ್ಯಾದ ವಿರುದ್ಧ ಮೊಕದ್ದಮೆ ಹೂಡಿದಾಗ ಈ ಪ್ರಕರಣ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ಕೊಟ್ಟು ರಷ್ಯಾ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಂಧನಕ್ಕೊಳಗಾಗಿದ್ದ ಡಚ್ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಧಿಕರಣ ಆದೇಶ ನೀಡಿದರೂ ರಷ್ಯಾ ಕಿವಿಗೆ ಹಾಕಿಕೊಳ್ಳಲಿಲ್ಲ! ಕೊನೆಗೆ ವಿಚಾರಣೆಯೆಲ್ಲಾ ಮುಗಿದು ರಷ್ಯಾ ನೆದರ್ಲ್ಯಾಂಡ್ಸ್ ಗೆ ಪರಿಹಾರ ನೀಡಬೇಕೆಂದು ತೀರ್ಪು ನೀಡಿದಾಗಲೂ ಕ್ಯಾರೇ ಎನ್ನಲಿಲ್ಲ!

ಇತ್ತೀಚೆಗೆ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಗ್ ನ್ಯಾಯಾಧಿಕರಣದ ತೀರ್ಪಿನ ಕುರಿತಂತೆ ಒಂದು ನೀಡಿದ್ದ ಹೇಳಿಕೆ ಹೀಗಿತ್ತು, "ಚೀನಾ ವಿಶ್ವ ಸಮುದಾಯದ ನಿಯಮಗಳ ಅನುಸಾರ ನಡೆಯಬೇಕು ಎನ್ನುವುದು ನಮ್ಮ ಆಶಯ. ವಿಶ್ವದ ಎಲ್ಲಾ ರಾಷ್ಟ್ರಗಳು ಅಂತರ್ರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಬೇಕು." ವಿಪರ್ಯಾಸವೆಂದರೆ ಇಂಥ ಆದರ್ಶ ಹೇಳಿಕೆ ನೀಡಿದ್ದ ಬ್ರಿಟನ್, ಕಳೆದ ವರ್ಷ ಸಾಗರದ ಕಾನೂನನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಚಾಗೊಸ್ ದ್ವೀಪಸಮೂಹದ ಮೇಲೆ ಅಧಿಪತ್ಯ ಸಾಧಿಸಿದೆ ಎಂದು ನ್ಯಾಯಾಧಿಕರಣ ನೀಡಿದ ತೀರ್ಪನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಇವತ್ತಿಗೂ ಚಾಗೊಸ್ ಪ್ರಕರಣದಲ್ಲಿ ಬ್ರಿಟನ್ ನ್ಯಾಯಾಧಿಕರಣದ ತೀರ್ಪು ಒಪ್ಪಿಕೊಳ್ಳಲು ತಯಾರಿಲ್ಲ!

ಇನ್ನು ಅಮೆರಿಕಾಕ್ಕೆ ಸಾಗರದ ಕಾನೂನಿಗೆ ಸಂಬಂಧಿಸಿದಂತೆ ಅಂತರ್ರಾಷ್ಟ್ರೀಯ ಒಪ್ಪಂದವನ್ನು ಇನ್ನೂ ಅಂಗೀಕರಿಸಿಲ್ಲ. ಹೀಗಾಗಿ ಅಮೆರಿಕಾ ಯಾವುದೇ ಸಾಗರ ಸಂಬಂಧಿತ ಅಂತರ್ರಾಷ್ಟ್ರೀಯ ನಿಯಮಗಳಿಗೆ ಒಳಪಡುವುದಿಲ್ಲ. 1980ರಲ್ಲಿ ನಿಕರಾಗುವಾದ ಬಂದರುಗಳಲ್ಲಿ ಅನಧಿಕೃತ ಗಣಿಗಾರಿಕೆ ನಡೆಸಿದಾಗ ಅಮೆರಿಕಾವನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನವನ್ನು ನಿಕರಾಗುವಾ ಮಾಡಿತ್ತು. ಈ ಪ್ರಕರಣವೂ ಅಂತರ್ರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದದ್ದಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅಮೆರಿಕಾ ಒಳಗೊಂಡಿರುವ ಯಾವುದೇ ಪ್ರಕರಣ ಅಂತರ್ರಾಷ್ಟ್ರೀಯ ನ್ಯಾಯಾಲದ ವ್ಯಾಪ್ತಿಗೆ ಬರುವುದಿಲ್ಲ ಎಂದುಬಿಟ್ಟಿತು. ಅಮೆರಿಕಾ ತಾನಾಗಿ ನ್ಯಾಯಾಲಯದ ಕದ ತಟ್ಟುವವರೆಗೆ ಅಥವಾ ಅಮೆರಿಕಾದ ಸಮ್ಮತಿಯಿಲ್ಲದೆ ಅಮೆರಿಕಾ ಸಂಬಂಧಿತ ಪ್ರಕರಣಗಳಲ್ಲಿ ತಲೆ ಹಾಕಬೇಡಿ ಎಂಬ ಅಧಿಕಾರಯುತ ಆದೇಶವನ್ನೇ ಹೊರಡಿಸಿತ್ತು! ನ್ಯಾಯಾಲಯ ಅಮೆರಿಕಾಕ್ಕೆ ವಿರುದ್ಧವಾಗಿ ನಿಕರಾಗುವ ಪರವಾಗಿ ನೀಡಿದ ತೀರ್ಪನ್ನು ಜಾರಿಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ಆರು ರೆಸಲ್ಯೂಶನ್ ಗಳನ್ನು ಅಮೆರಿಕಾ ತನ್ನ ವಿಟೊ ಪವರ್ ಮೂಲಕ ತಿರಸ್ಕರಿಸಿಬಿಟ್ಟಿತ್ತು. ದಕ್ಷಿಣ ಚೀನಾ ಸಮುದ್ರದ ವಿವಾದದಿಂದಾಗಿ ಅಂತರ್ರಾಷ್ಟ್ರೀಯ ಒಪ್ಪಂದಕ್ಕೆ ಈಗಾಗಲೇ ಸಹಿ ಮಾಡಿ ಅಂಗೀಕರಿಸಿರುವ ಚೀನಾ ಕೂಡ ಒಪ್ಪಂದದಿಂದ ಹೊರಬಂದು ಅಮೆರಿಕನ್ನರಂತೆ ಅಂತರ್ರಾಷ್ಟ್ರೀಯ ನಿಬಂಧನೆಗಳಿಂದ ಮುಕ್ತವಾಗುವಂತಿದೆ.

ವಿಶ್ವದ ಬಲಿಷ್ಟ ರಾಷ್ಟ್ರಗಳು, ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ನ್ಯಾಯಾಲಯ, ಕಾನೂನುಗಳು ಸ್ವಹಿತಾಸಕ್ತಿಯ ಸಾಧನಗಳಷ್ಟೆ. ನ್ಯಾಯಾಧಿಕರಣದ ತೀರ್ಪುಗಳು ಚಿಕ್ಕ ಪುಟ್ಟ ಬಲಹೀನ ರಾಷ್ಟ್ರಗಳನ್ನು ಬೆದರಿಸಲಷ್ಟೇ ಶಕ್ತ. ಅಷ್ಟಕ್ಕೂ ಅಂತರ್ರಾಷ್ಟ್ರೀಯ ನ್ಯಾಯಾಲಯದ ಕಾನೂನುಗಳನ್ನು ಜಾರಿಗೊಳಿಸುವುದಾದರೂ ಹೇಗೆ? ಭದ್ರತಾ ಮಂಡಳಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಭದ್ರತಾ ಮಂಡಳಿ ಯಾವುದೇ ತೀರ್ಮಾನ ಕೈಗೊಳ್ಳಲು ಐದು ಖಾಯಂ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಅತ್ಯಗತ್ಯ. ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾಗಳಲ್ಲಿ ಒಂದು ರಾಷ್ಟ್ರ ಭದ್ರತಾ ಮಂಡಳಿಯ ತೀರ್ಮಾನಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರೂ ಆ ಮತ ವಿಟೊ ಆಗಿ ಆ ತೀರ್ಮಾನವನ್ನು ಶಾಶ್ವತವಾಗಿ ತಡೆಹಿಡಿಯುತ್ತದೆ. ಹೀಗಿರುವಾಗ ಭದ್ರತಾ ಮಂಡಳಿ ದಕ್ಷಿಣ ಚೀನಾ ಸಮುದ್ರ ಪ್ರಕರಣದಲ್ಲಿ ಚೀನಾ ವಿರುದ್ಧ ಕ್ರಮ ಜರುಗಿಸಲು ಪ್ರಯತ್ನಪಟ್ಟಲ್ಲಿ ಸಹಜವಾಗಿಯೇ ಚೀನಾ ತನ್ನ ವಿಟೊ ಅಧಿಕಾರ ಉಪಯೋಗಿಸಿ ಉಳಿದ ರಾಷ್ಟ್ರಗಳನ್ನು ತಣ್ಣಗಾಗಿಸುತ್ತದೆ. ಇಷ್ಟಾದ ಮೇಲೆ ಹೇಗ್ ನ್ಯಾಯಾಧಿಕರಣವಾಗಲೀ, ಅಥವಾ ಪಿಲಿಪ್ಪೈನ್ಸ್ ಆಗಲೀ ಏನು ಮಾಡಲು ಸಾಧ್ಯ?




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 16 July 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ