ಮಂಗಳವಾರ, ಜುಲೈ 12, 2016

ಚೀನಾದ 'ಇಂಡಿಯಾ ಫೋಬಿಯಾ'

ಶಕ್ತಿ ರಾಜಕೀಯದಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆ, ಅಮೆರಿಕಾ ಭಾರತಕ್ಕೆ ಮತ್ತಷ್ಟು ಹತ್ತಿರವಾಗುತ್ತಿರುವುದು ಈ ಎಲ್ಲಾ ಅಂಶಗಳೂ ಚೀನಾಗೆ ಭಾರತದ ಬಗೆಗೆ ಒಂದು 'ಇಂಡಿಯಾ ಫೋಬಿಯಾ' ಎಂಬ ಅವ್ಯಕ್ತ ಭಯ ಹುಟ್ಟುಹಾಕಿವೆ. ಈ ಕಾರಣದಿಂದಲೇ ಚೀನಿ ನಾಯಕರು ಒಂದು ಕಡೆ ಭಾರತದ ಗೆಳೆತನಕ್ಕೆ ಕೈ ಚಾಚುತ್ತಾ, ಇನ್ನೊಂದೆಡೆ ಸಮಸ್ಯೆಗಳಿಗೆ ತುಪ್ಪ ಸುರಿಯುವ ಇಬ್ಬಂದಿ ನೀತಿ ಅನುಸರಿಸುತ್ತಿದೆ.
- ಕೀರ್ತಿರಾಜ್



ಇತ್ತೀಚೆಗೆ ಭಾರತ ಎನ್ ಎಸ್ ಜಿ ಸದಸ್ಯ ರಾಷ್ಟ್ರವಾಗುವ ಉತ್ಸಾಹದಲ್ಲಿದ್ದಾಗ, ಆ ಪ್ರಯತ್ನಕ್ಕೆ ತಣ್ಣೀರೆರಚಿ ಭಾರತದ ವಿಶ್ವ ಮಟ್ಟದಲ್ಲಿ ಪ್ರಬಲವಾಗುವ ಎಲ್ಲಾ ಪ್ರಯತ್ನಗಳಿಗೂ ತನ್ನ ವಿರೋಧವಿದೆಯೆಂಬ ಸೂಚನೆಯನ್ನು ಚೀನಾ ಸ್ಪಷ್ಟವಾಗಿಯೇ ರವಾನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಸಕ್ರಿಯವಾಗಿ ತನ್ನ ಪ್ರಭಾವ ವೃದ್ಧಿಸಿಕೊಳ್ಳುತ್ತಿರುವುದರಿಂದ, ಭಾರತದ ಪ್ರತಿ ಹೆಜ್ಜೆಯೂ ಚೀನೀ ನಾಯಕರ ಚಿಕ್ಕ ಕಣ್ಣುಗಳನ್ನು ಮತ್ತಷ್ಟು ಕಿರಿದಾಗಿಸಿವೆ. ಭಾರತ ಮತ್ತು ಚೀನಾಗಳ ನಡುವಿನ ಸಂಬಂಧ ವಿಶ್ವ ರಾಜಕೀಯದ ವಿಚಿತ್ರ ದ್ವಿಪಕ್ಷೀಯ ಸಂಬಂಧಗಳಲ್ಲೊಂದು. ಒಂದು ಕ್ಷಣ ಈ ಎರಡು ದೇಶಗಳು ಪರಮ ಮಿತ್ರರಂತೆ ಕಂಡರೂ ಮಿತ್ರರಲ್ಲ, ಪರಮ ಶತ್ರುಗಳಂತೆ ಕಂಡರೂ ಶತ್ರುಗಳಲ್ಲ ಎಂಬಂಥ ದ್ವಂದ್ವ ಈ ರಾಷ್ಟ್ರಗಳ ಸಂಬಂಧಗಳನ್ನು ಕಾಡುತ್ತಿದೆ. ಒಂದು ಕಾಲದಲ್ಲಿ ಚೀನಾ ಅಂತರ್ರಾಷ್ಟ್ರೀಯ ರಾಜಕೀಯದಲ್ಲಿ ಪರದೇಶಿಯಂತಿದ್ದಾಗ ಮೊತ್ತ ಮೊದಲಿಗೆ ಚೀನಾವನ್ನು ಗುರುತಿಸಿ ಮಾನ್ಯ ಮಾಡಿದ ರಾಷ್ಟ್ರಗಳಲ್ಲಿ ಭಾರತವೂ ಒಂದು! ಇನ್ನೊಂದೆಡೆ ಭಾರತದ ಪ್ರತಿ ಅಂತರ್ರಾಷ್ಟ್ರೀಯ ಅಸ್ಮಿತೆಗೂ ಅಡ್ಡಗಾಲು ಹಾಕುತ್ತಿರುವುದು ಇದೇ ಚೀನಾ!

ಚೀನಾದ ಈ ವಿಲಕ್ಷಣ ನಡೆಗಳು ಮತ್ತು ಭಾರತದ ಕಡೆಗಿನ ಚೀನಿ ನಾಯಕರ ಮನೋಭಾವಗಳಿಗೆ ಪ್ರಸಕ್ತ ವಿದ್ಯಮಾನಗಳು ಕಾರಣವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ಇತಿಹಾಸದ ಮಹತ್ತರ ಪಾತ್ರವನ್ನೂ ಮರೆಯುವಂತಿಲ್ಲ.  ೧೯೪೭ರಲ್ಲಿ ಭಾರತ ಬ್ರಿಟಿಷ್ ವಸಾಹತುಶಾಹಿಯ ಸಂಕೋಲೆಗಳನ್ನು ಬಿಡಿಸಿಕೊಂಡು, ಸ್ವತಂತ್ರಗೊಂಡಾಗ ನೆಹರೂ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧದ ಹೋರಾಟದ ನಾಯಕತ್ವ ತಮ್ಮದೆಂದು ಹಿಗ್ಗಿದ್ದರು. ಅದೇ ವೇಳೆ ಚೀನಾದ ಕಮ್ಯುನಿಸ್ಟ್ ಪಕ್ಷ ಮಾತ್ರ ಸ್ವತಂತ್ರ ಭಾರತವನ್ನು ಯುರೋಪ್ ಮತ್ತು ಅಮೆರಿಕಾಗಳಿಗೆ ತಲೆಬಾಗಿಸುವ ವಸಾಹತು ಎಂದಷ್ಟೇ ಗುರುತಿಸಿತ್ತು. ಚೀನೀ ಕಮ್ಯುನಿಸ್ಟರಿಗೆ ಮಾವೋ ನಾಯಕತ್ವದಲ್ಲಿ ಜಪಾನ್ ಮತ್ತು ಕೌಮಿಂಟಾಂಗ್ ಸೇನೆಗಳನ್ನು ಸೋಲಿಸಿದ್ದಷ್ಟೇ ನಿಜವಾದ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವಾಗಿತ್ತು ಮತ್ತು ಮಾವೋ ನಿಜವಾದ ಸಾಮ್ರಾಜ್ಯಶಾಹಿ ವಿರೋಧಿ ನಾಯಕನೇ ಹೊರತು ನೆಹರೂ ಆಗಿರಲಿಲ್ಲ. ತೃತೀಯ ಜಗತ್ತಿನ ನಾಯಕನಾಗಲು ಹೊರಟಿದ್ದ ನೆಹರೂ ಚೀನಾ ನಾಯಕರ ಪಾಲಿಗೆ ಬ್ರಿಟನ್ ಮತ್ತು ಅಮೆರಿಕಾಗಳ ಕೈಗೊಂಬೆಯಷ್ಟೇ ಆಗಿದ್ದರು.

ಕಮ್ಯುನಿಸ್ಟ್ ಚೀನಾವನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಿದಾಗ ನೆಹರೂ ತಲೆಯಲ್ಲಿ ಚೀನಾ ಭಾರತದ ಮಿತ್ರ ರಾಷ್ಟ್ರವಾಗಬಹುದೆಂಬ ಭ್ರಮೆಯಿತ್ತು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಭಾರತಕ್ಕೆ ಅಮೆರಿಕಾದ ಆಹ್ವಾನ ಬಂದಾಗ, ಚಿನ್ನದಂಥ ಅವಕಾಶವನ್ನು ಚೀನಾಕ್ಕೆ ತ್ಯಾಗ ಮಾಡಿದ ನೆಹರೂ, ಈಜಿಪ್ಟ್ ನ ನಾಸೆರ್, ಇಂಡೋನೇಷಿಯಾದ ಸುಕಾರ್ನೊವ್ ರಂತೆ ಮಾವೋ ಕೂಡ ಭಾರತ ತೃತೀಯ ಜಗತ್ತಿನ ನಾಯಕನಾಗಲು ಹೆಗಲು ನೀಡುತ್ತಾರೆ ಎಂದು ಭಾವಿಸಿದ್ದರು. ಸರ್ದಾರ್ ಪಟೇಲರ ವಿರೋಧವನ್ನು ಲೆಕ್ಕಿಸದೆ, ಟಿಬೆಟ್ ಮೇಲೆ ಭಾರತಕ್ಕಿದ್ದ ಮುಕ್ತ ಪ್ರವೇಶವನ್ನೂ ಒಳಗೊಂಡಂತೆ ಎಲ್ಲಾ ನಿಯಂತ್ರಣವನ್ನೂ ಚೀನಾಕ್ಕೆ ದಾನ ಮಾಡಿಬಿಟ್ಟರು ನಮ್ಮ ಚಾಚಾ ನೆಹರೂ! 'ಹಿಂದಿ-ಚೀನಿ ಭಾಯಿ ಭಾಯಿ' ಎಂಬ ಭ್ರಮೆಯಲ್ಲಿ ಇಷ್ಟೆಲ್ಲಾ ತ್ಯಾಗ ಮಾಡಿದ ನೆಹರೂ, ಈ ಎಲ್ಲಾ ಸಹಕಾರಗಳಿಗೆ ಬದಲಾಗಿ ಚೀನಾದಿಂದ ಪ್ರತ್ಯುಪಕಾರವನ್ನೂ ನಿರೀಕ್ಷಿಸಿದ್ದರು. ಅದರೆ 'ಕೊಟ್ಟವ ಕೋಡಂಗಿ, ಈಸ್ಕೊಂಡವ ವೀರಭದ್ರ' ಎಂಬಂತೆ ನೆಹರೂ ದಾನ ಮಾಡಿದ್ದನ್ನೆಲ್ಲಾ ಯಾವ ಸಂಕೋಚವೂ ಇಲ್ಲದೆ ಜೇಬಿಗಿಳಿಸಿಕೊಂಡಿದ್ದ ಮಾವೊ ಪಂಚಶೀಲ ತತ್ವವನ್ನು ಕನಿಷ್ಠ ಐದು ನಿಮಿಷವೂ ನೆನಪಿಟ್ಟುಕೊಂಡಿರಲಿಲ್ಲ! ಅಂದು ಅಪಾತ್ರರಿಗೆ ನೆಹರೂ ಮಾಡಿದ ದಾನ ಇಂದಿಗೂ ಭಾರತವನ್ನು ದುಃಸ್ವಪ್ನವಾಗಿ ಕಾಡುತ್ತಿದೆ.

೧೯೫೫ರಲ್ಲಿ ಇಂಡೋನೇಷಿಯಾದಲ್ಲಿ ನಡೆದ ಬಾಂಡುಂಗ್ ಸಮ್ಮೇಳನದಲ್ಲಿ ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳು ಒಟ್ಟುಗೂಡಿದಾಗ, ನೆಹರೂ ತಮ್ಮನ್ನು ತಾವು ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಉದಯಿಸುತ್ತಿರುವ ಶಕ್ತಿಗಳ ನಾಯಕನಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಅದೇ ಸಮ್ಮೇಳನದಲ್ಲಿ ಭಾಗವಹಿಸಿದ್ದ ಚೀನಾದ ಪ್ರೀಮಿಯರ್ ಚೌ ಎನ್ ಲಾಯ್ ಗೆ ಭಾರತದ ಅಧಿಕಾರಿಗಳು ಕೊಟ್ಟ ಗೌರವವೂ ಕೃತಕ ಎಂದೆನಿಸಿತ್ತು. ಭಾರತೀಯರು ಚೀನಾ ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬ ಅಭಿಪ್ರಾಯವನ್ನು ತಲೆಯಲ್ಲಿ ತುಂಬಿಕೊಂಡು ಅಸಮಧಾನದಿಂದಲೇ ಬೀಜಿಂಗ್ ಗೆ ಮರಳಿದ್ದ ಚೌ ಎನ್ ಲಾಯ್. ಮುಂದಿನ ವರ್ಷ ೧೯೫೬ರಲ್ಲಿ ಚೌ ಎನ್ ಲಾಯ್ ಭಾರತಕ್ಕೆ ಭೇಟಿ ನೀಡಿ, ದಲಾಯಿ ಲಾಮಾ ಅವರಿಗೆ ಭಾರತ ಆಶ್ರಯ ನೀಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದ. ಇದೇ ಸಂದರ್ಭದಲ್ಲಿ ಮ್ಯಾಕ್ ಮೊಹನ್ ಗಡಿ ರೇಖೆಯನ್ನು ಆಧರಿಸಿ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಕಡೆಗೆ ಚೀನಾ ಒಲವು ತೋರಿಸಿತ್ತು. ಆದರೆ ನೆಹರೂ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

ಇವೆಲ್ಲದರ ಮಧ್ಯೆ, ಕೊರಿಯನ್ ಯುದ್ಧದಲ್ಲಿ ಉತ್ತರ ಕೊರಿಯಾದ ಬೆನ್ನಿಗೆ ನಿಂತು ವಿಶ್ವದ ಪ್ರಮುಖ ಶಕ್ತಿಗಳಿಗೆ ಸವಾಲು ಹಾಕಿದ್ದ ಚೀನಾಗೆ ಒಳಗಿಂದೊಳಗೆ ಅಮೆರಿಕಾ ಮತ್ತು ಬ್ರಿಟನ್ ಭಾರತವನ್ನು ಉಪಯೋಗಿಸಿಕೊಂಡು ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭೀತಿಯಿತ್ತು. ಇವಿಷ್ಟೇ ಅಲ್ಲದೇ ಏಷ್ಯಾದಲ್ಲಿ ಚೀನಿಯರಿಗೆ ಮುಳ್ಳಾಗಬಲ್ಲ ಒಂದೇ ಒಂದು ದೇಶವಿದ್ದಲ್ಲಿ ಅದು ಭಾರತ ಮಾತ್ರ ಎಂದು ಚೀನಾ ತೀರ್ಮಾನಿಸಿಬಿಟ್ಟಿತ್ತು. ಹೀಗಾಗಿ ಭಾರತದ ಪ್ರತಿಯೊಂದು ಬೆಳವಣಿಗೆಯೂ ಚೀನಾದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದರಲ್ಲಿ ಅಚ್ಚರಿಯೇನಿಲ್ಲ, ಚೀನಾ ಬೆದರಿಕೆಯ ಹೊರತಾಗಿಯೂ ೧೯೫೯ರಲ್ಲಿ ಭಾರತ ದಲಾಯಿ ಲಾಮರವರಿಗೆ ಆಶ್ರಯ ನೀಡಿದಾಗಲಂತೂ, ಭಾರತ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾವೋ ಬಾಲ ತುಳಿದ ಹಾವಿನಂತಾಗಿದ್ದ. ಮುಂದೆ ನೆಹರೂ ಧರ್ಮಶಾಲಾದಲ್ಲಿ ಗಡೀಪಾರಾಗಿದ್ದ ಟಿಬೆನ್ನಿಯನ್ನರ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟರು. ನೆಹರೂ ನಂತರದ ಸರಕಾರಗಳೂ ಈ 'ಮುಕ್ತ ಟಿಬೆಟ್' ನೀತಿಗೆ ಪ್ರಾಶಸ್ತ್ಯ ನೀಡಿದಾಗ ಚೀನಾ ಇನ್ನಷ್ಟು ವ್ಯಗ್ರವಾಗಿತ್ತು. ಭಾರತದ ಈ ಟಿಬೆಟ್ ಪರ ನೀತಿಗೆ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಗಳಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದರೂ, ಇವತ್ತಿನ ವರೆಗೂ ದಲಾಯಿ ಲಾಮ ಮತ್ತು ಅನುಯಾಯಿಗಳ ಬಗ್ಗೆ ಅವರ್ಯಾರೂ ತಲೆ ಕೆಡಿಸಿಕೊಂಡಿಲ್ಲ ಎನ್ನುವುದಕ್ಕೆ ಚರಿತ್ರೆಯೇ ಸಾಕ್ಷಿ. ತನ್ನ ಸಮಸ್ಯೆಗಳೇ ಹಲವಾರಿದ್ದರೂ ಕೊನೆಗೂ ಭಾರತವೇ ಇಲ್ಲೂ ತಲೆದಂಡ ತೆರಬೇಕಾಯಿತೇ ವಿನಃ ಬೇರಾವ ಮುಂದುವರಿದ ರಾಷ್ಟ್ರವೂ ಅಲ್ಲ.

ಸ್ವಾತಂತ್ರ್ಯಾ ನಂತರದ ಆರಂಭಿಕ ವರ್ಷಗಳಲ್ಲಿ ಭಾರತದ ಗುಪ್ತಚರ ದಳ, ತನ್ನ ಸಮಯ ಸಾಮರ್ಥ್ಯವನ್ನೆಲ್ಲಾ ಅಧಿಕಾರದಲ್ಲಿರುವವರ ರಾಜಕೀಯ ಆತಂಕಗಳನ್ನು ನಿವಾರಿಸುವುದಕ್ಕಾಗಿ ಮೀಸಲಿಡಬೇಕಾಯ್ತು. ಹೀಗಾಗಿ ೧೯೫೮ರವರೆಗೆ ಚೀನಾ ಕ್ಸಿಯಾನ್ಜಿಯಾಂಗ್ ಪ್ರಾಂತ್ಯದಿದ ಟಿಬೆಟ್ ಗೆ ರಸ್ತೆ ನಿರ್ಮಿಸಿದ ವಿಚಾರ ಗುಪ್ತಚರ ದಳದ ಕಣ್ಣಿಗೆ ಬೀಳಲಿಲ್ಲ. ಚೀನಾ ನಿರ್ಮಿಸಿದ ಈ ರಸ್ತೆ ಕಾಶ್ಮೀರದ ಅಕ್ಸಾಯ್ ಚಿನ್ ಮುಖಾಂತರ ಹಾದುಹೋಗುತ್ತಿತ್ತು. ಇಷ್ಟೆಲ್ಲಾ ಆದ ಮೇಲೆ ಕೊನೆಗೆ, ಕಾಶ್ಮೀರದ ಈ ಪ್ರದೇಶವನ್ನೂ ಚೀನಾ ತನ್ನದೆಂದು ವಾದಿಸತೊಡಗಿದಾಗ, ನೆಹರೂ ಅವರಿಗೆ ಸಮಸ್ಯೆಯ ತೀವ್ರತೆ ಅರ್ಥವಾಗಿತ್ತು. ತಕ್ಷಣವೇ ನೆಹರೂ ಸಾಧ್ಯವಾದಷ್ಟು ಭೂಭಾಗವನ್ನು ವಶಪಡಿಸಿಕೊಳ್ಳುವಂತೆ ಸೈನ್ಯಕ್ಕೆ ಆದೇಶ ಹೊರಡಿಸಿದ್ದರು. ಆ ಹೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಚೀನಿ ಸೈನ್ಯ ಭಾರತದ ಗಡಿ ದಾಟಿ ಮುಂದೊತ್ತಿ ಬಂದಿತ್ತು. ದುರದೃಷ್ಟಕರ ವಿಷಯವೆಂದರೆ ೧೯೫೦ರ ದಶಕದ ಅಂತ್ಯದಲ್ಲಿ ಚೀನಾ ವಶಪಡಿಸಿಕೊಂಡ ಭಾರತದ ಪ್ರದೇಶಗಳಲ್ಲು ಭಾರತೀಯ ಸೈನ್ಯ ನಿಯೋಜನೆಯಾಗಿರಲೇ ಇಲ್ಲ. ಅಂದರೆ ಒಬ್ಬ ಸೈನಿಕನ ವಿರೋಧವನ್ನೂ ಎದುರಿಸದೆ ನಿರಾಯಾಸವಾಗಿ ಚೀನಿ ಸೈನಿಕರು ಗಡಿ ದಾಟಿ ಬಂದಿದ್ದರು!

೧೯೬೨ರ ಯುದ್ಧದ ಅಂತ್ಯದೊಂದಿಗೆ ಭಾರತ ಮತ್ತು ಚೀನಾದ ಎಲ್ ಒ ಸಿ ( Line of Actual Control )ಗಡಿಗಳನ್ನು ಗುರುತಿಸಲಾಯಿತು. ಆದರೆ ಐದು ದಶಕಗಳು ಕಳೆದರೂ ಚೀನಾ ತನ್ನ ಭೂಪಟಗಳಲ್ಲಿ ಈ ಗಡಿರೇಖೆಗಳನ್ನು ಮಾನ್ಯ ಮಾಡಿಲ್ಲ. ಎರಡು ಕಾರಣಗಳಿಂದಾಗಿ ಚೀನಾ ಗಡಿ ಸಮಸ್ಯೆ ಬಗೆಹರಿಸುವಲ್ಲಿ ಹಿಂದೇಟು ಹಾಕುತ್ತಿದೆ. ಮೊದಲನೆಯದಾಗಿ ಈ ಗಡಿ ಸಮಸ್ಯೆ ಪರಿಹಾರವಾಗುವುದು ಚೀನಾದ ಆಪ್ತ ಮಿತ್ರ ಪಾಕಿಸ್ತಾನಕ್ಕೆ ಇಷ್ಟವಿಲ್ಲ. ಯಾಕೆಂದರೆ ಚೀನಾ-ಭಾರತ ಗಡಿ ಸಮಸ್ಯೆ ಇತ್ಯರ್ಥವಾದಲ್ಲಿ ಭಾರತದ ಬಹುಪಾಲು ಸೈನ್ಯ ಇಂಡೋ ಪಾಕ್ ಗಡಿಯಲ್ಲಿ ತನ್ನ ಕಾರ್ಯ ನಿರ್ವಹಿಸುವಂತಾಗಿ, ಪಾಕಿಸ್ತಾನದ ಬಲ ಉಡುಗುತ್ತದೆ. ಎರಡನೆಯದಾಗಿ ಭಾರತ ಟಿಬೆಟಿಯನ್ನರಿಗೆ ಬೆಂಬಲ ನೀಡುತ್ತಿರುವಷ್ಟು ಕಾಲ ಚೀನಿ ಕಮ್ಯುನಿಸ್ಟರಿಗೆ ಗಡಿ ಸಮಸ್ಯೆಗೆ ಪರಿಹಾರ ಬೇಕಿಲ್ಲ. ಇವಿಷ್ಟೇ ಅಲ್ಲದೇ ಶಕ್ತಿ ರಾಜಕೀಯದಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆ, ಅಮೆರಿಕಾ ಭಾರತಕ್ಕೆ ಮತ್ತಷ್ಟು ಹತ್ತಿರವಾಗುತ್ತಿರುವುದು ಈ ಎಲ್ಲಾ ಅಂಶಗಳೂ ಚೀನಾಗೆ ಭಾರತದ ಬಗೆಗೆ ಒಂದು 'ಇಂಡಿಯಾ ಫೋಬಿಯಾ' ಎಂಬ ಅವ್ಯಕ್ತ ಭಯ ಹುಟ್ಟುಹಾಕಿವೆ. ಈ ಕಾರಣದಿಂದಲೇ ಚೀನಿ ನಾಯಕರು ಒಂದು ಕಡೆ ಭಾರತದ ಗೆಳೆತನಕ್ಕೆ ಕೈ ಚಾಚುತ್ತಾ, ಇನ್ನೊಂದೆಡೆ ಸಮಸ್ಯೆಗಳಿಗೆ ತುಪ್ಪ ಸುರಿಯುವ ಇಬ್ಬಂದಿ ನೀತಿ ಅನುಸರಿಸುತ್ತಿದೆ. ಎನ್ ಎಸ್ ಜಿ ಅಥವಾ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಅಥವಾ ಇನ್ಯಾವುದರಿಂದಲೋ ಭಾರತವನ್ನು ದೂರವಿಡಲು ಪ್ರಯತ್ನಿಸುತ್ತಿರಲು ಕಾರಣ ಇದೇ 'ಇಂಡಿಯಾ ಫೋಬಿಯಾ'. ಭಾರತ ಚೀನಾ ದ್ವಿಪಕ್ಷೀಯ ಸಂಬಂಧಗಳ ಸಮಸ್ಯೆಗಳನ್ನು ಕೆದಕಿದಾಗಲೆಲ್ಲಾ ಚೀನಾದ ಈ ಪೂರ್ವಾಗ್ರಹ ಪೀಡಿತ ದೃಷ್ಟಿಗೆ ನೆಹರೂ ಕಾಲದ ವಿದೇಶಾಂಗ ನೀತಿಯೇ ಕಾರಣವಾಯ್ತೇ? ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ.



 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 12 July 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ