ಗುರುವಾರ, ಜೂನ್ 2, 2016

ಭಯೋತ್ಪಾದನೆಯತ್ತ ಪಾಕಿಸ್ತಾನದ ಸಹಿಷ್ಣುತೆ!

ಇಡೀ ವಿಶ್ವದ ಕಣ್ಣಲ್ಲಿ ಪಾಕಿಸ್ತಾನ ಭಯೋತ್ಪಾದಕರ ತೊಟ್ಟಿಲು ಅನ್ನಿಸಿಕೊಂಡರೂ, ಅಲ್ಲಿನ ರಾಜಕೀಯ ಮತ್ತು ಮಿಲಿಟರಿ ನಾಯಕರು ಕ್ಯಾರೇ ಎನ್ನುತ್ತಿಲ್ಲ! ಸ್ವಂತ ಬಲದಲ್ಲಿ ಸಾಧಿಸಲಾಗದ್ದನ್ನು ಉಗ್ರರ ಮರೆಯಲ್ಲಿ ಸಾಧಿಸುವ ಜಿದ್ದಿಗೆ ಬಿದ್ದಂತಿದೆ ಪಾಕಿಸ್ತಾನದ ಪರಿಸ್ಥಿತಿ. 
- ಕೀರ್ತಿರಾಜ್



ತನ್ನ ಹುಟ್ಟಿನೊಂದಿಗೆ ಭಯೋತ್ಪಾದನೆಯನ್ನೂ ಸೃಷ್ಟಿಸಿ, ಉಳಿಸಿ ಬೆಳೆಸಿಕೊಂಡು ಬಂದ ಕುಖ್ಯಾತಿ ನಮ್ಮ ನೆರೆಯ ಸೋದರ(?) ರಾಷ್ಟ್ರ ಪಾಕಿಸ್ತಾನಕ್ಕೆ ಸೇರುತ್ತದೆ. ಭಯೋತ್ಪಾದಕರ ಕಡೆಗೆ ದಶಕಗಳಿಂದ ಪಾಕಿಸ್ತಾನದ ಆಳ್ವಿಕೆ ವ್ಯಕ್ತಪಡಿಸಿದ ಸಹಿಷ್ಣುತೆಗೆ ಕೃತಜ್ಞತಾಪೂರ್ವಕವಾಗಿ ಭಯೋತ್ಪಾದಕರೂ ಭಾರತವನ್ನು ಗೋಳು ಹೊಯ್ದುಕೊಳ್ಳುತ್ತಲೇ ಇದ್ದಾರೆ. 2014ರಲ್ಲಿ ತಾಲಿಬಾನಿ ಉಗ್ರರು ಪಾಕಿಸ್ತಾನದ ಸೈನಿಕ ಶಾಲೆಯೊಂದಕ್ಕೆ ದಾಳಿ ನಡೆಸಿ 140ಕ್ಕೂ ಹೆಚ್ಚು ಮಕ್ಕಳನ್ನು ಕೊಂದುಹಾಕಿದಾಗ, ಮೊದಲ ಬಾರಿಗೆ ಪಾಕಿಸ್ತಾನದ ಈ ಉಗ್ರ ಪ್ರೀತಿಗೆ ಮಾರಣಾಂತಿಕ ಹೊಡೆತ ಬಿದ್ದಿತ್ತು. ಅವರಿವರನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುತ್ತಿದ್ದ ಪಾಕ್ ಸೈನ್ಯಕ್ಕೆ, ತನ್ನದೇ ಮಕ್ಕಳ ರಕ್ತ ಸಿಕ್ತ ದೇಹಗಳನ್ನು ನೋಡಿ ಆ ಕ್ಷಣಕ್ಕೆ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಬೇಕೆನಿಸಿದ್ದು ಸಹಜವೇ. ಪಾಕಿಸ್ತಾನದೊಳಗಿರುವ ಎಲ್ಲಾ ಸ್ಥಳೀಯ ಮತ್ತು ವಿದೇಶಿ ಉಗ್ರರ ನಿರ್ನಾಮಗೊಳಿಸಲು ಪಾಕ್ ಸೇನೆ ಕೊಟ್ಟ ಹೆಸರು  'ಜರ್ಬ್-ಎ-ಅಜ್ಬ್' (Zarb-­e-­Azb) ಕಾರ್ಯಾಚರಣೆ. ಏಷ್ಯಾದ ಬಲಿಷ್ಟ ಸೇನೆಗಳಲ್ಲೊಂದಾದ ಪಾಕ್ ಸೇನೆಯ ಈ ರೌದ್ರಾವತಾರ ಕಂಡು  'ಜರ್ಬ್-ಎ-ಅಜ್ಬ್ ಕಾರ್ಯಾಚರಣೆ' ಉಗ್ರರ ಹುಟ್ಟಡಗಿಸುತ್ತದೆ ಎಂದೆನಿಸಿತ್ತು. ದುರಾದೃಷ್ಟವಶಾತ್ ಅಂದುಕೊಂಡದ್ಯಾವುದೂ ನಡೆಯಲಿಲ್ಲ. ಪಾಕಿಸ್ತಾನದ ರೋಷಾವೇಷಗಳೆಲ್ಲಾ ಅಲ್ಪ ಸಮಯದಲ್ಲಿ ತಣ್ಣಗಾಗಿ ಹೋಗಿತ್ತು!

'ಜರ್ಬ್-ಎ-ಅಜ್ಬ್ ಕಾರ್ಯಾಚರಣೆ'ಯಲ್ಲೂ ಪಾಕಿಸ್ತಾನದ ಇಬ್ಬಂದಿ ನೀತಿಯಿಂದಾಗಿ ಹಕ್ಕಾನಿ ಗುಂಪಿನಂಥ ಪ್ರಮುಖ ಉಗ್ರರು ತಪ್ಪಿಸಿಕೊಳ್ಳುವಂತಾಯಿತು. ಹಕ್ಕಾನಿ ಉಗ್ರರು ಡ್ಯುರಾಂಡ್ ರೇಖೆ ದಾಟಿ ಅಫ್ಘಾನಿಸ್ತಾನ ಸೇರಿಕೊಂಡು ತಮ್ಮ ನೆಲೆಯನ್ನು ಮತ್ತಷ್ಟು ಭದ್ರಗೊಳಿಸಿದ್ದಾರೆ. 64 ಜನರ ಸಾವಿಗೆ ಕಾರಣವಾದ ಕಾಬೂಲ್ ಬಾಂಬ್ ಸ್ಪೋಟದಲ್ಲಿ ಹಕ್ಕಾನಿ ಗುಂಪಿನ ಕೈಚಳಕವಿತ್ತು. ಇತ್ತಿಚೆಗೆ ಹಕ್ಕಾನಿ ಗುಂಪು ಆಯೋಜಿಸಿದ್ದ ದಾಳಿಯನ್ನು ಅಫ಼್ಘನ್ ಸೇನಾಪಡೆಗಳು ವಿಫಲಗೊಳಿಸಿದ್ದು, ಹಕ್ಕಾನಿ ಗುಂಪು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಎಷ್ಟೊಂದು ಸಕ್ರಿಯವಾಗಿವೆ ಎಂಬುದಕ್ಕೆ ಸಾಕ್ಷಿ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆ ಉಗ್ರರನ್ನು ಅಫ್ಘನ್ ಗಡಿ ದಾಟಿಸಲು ಒಂದು ನೆಪವಾಗಿ ಮಾರ್ಪಟ್ಟಿತು. ಎಲ್ಲೋ ತಲೆ ಮರೆಸಿಕೊಂಡಿದ್ದ ಕೆಲ ಮರಿ ಉಗ್ರರರನ್ನು ಬಲಿ ಕೊಟ್ಟು, ಮಹತ್ಕಾರ್ಯ ಸಾಧಿಸಿದಂತೆ ಎದೆಯುಬ್ಬಿಸಿತ್ತು ಪಾಕ್ ಸೈನ್ಯ. ಪಾಕಿಸ್ತಾನ ದಶಕಗಳಿಂದ ಹಕ್ಕಾನಿ ಉಗ್ರರಿಗೆ ನೀಡುತ್ತಿರುವ ಬೆಂಬಲದಲ್ಲಿ ರವೆಯಷ್ಟು ಕಡಿಮೆಯಾಗಿಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ. ಅದೇನೆ ಇರಲಿ ಇಸ್ಲಾಮಿಕ್ ರಾಷ್ಟ್ರಗಳ ನಾಯಕನಾಗುವ ಹುಚ್ಚು ಭ್ರಮೆಯಲ್ಲಿರುವ ಪಾಕಿಸ್ತಾನದ ಮುಂದೆ ಕಿನ್ನರಿ ಬಾರಿಸುವುದೂ ಅಸಂಬದ್ಧವೇ ಸರಿ.

ಇಡೀ ವಿಶ್ವದ ಕಣ್ಣಲ್ಲಿ ಪಾಕಿಸ್ತಾನ ಭಯೋತ್ಪಾದಕರ ತೊಟ್ಟಿಲು ಅನ್ನಿಸಿಕೊಂಡರೂ, ಅಲ್ಲಿನ ರಾಜಕೀಯ ಮತ್ತು ಮಿಲಿಟರಿ ನಾಯಕರು ಕ್ಯಾರೇ ಎನ್ನುತ್ತಿಲ್ಲ! ಸ್ವಂತ ಬಲದಲ್ಲಿ ಸಾಧಿಸಲಾಗದ್ದನ್ನು ಉಗ್ರರ ಮರೆಯಲ್ಲಿ ಸಾಧಿಸುವ ಜಿದ್ದಿಗೆ ಬಿದ್ದಂತಿದೆ ಪಾಕಿಸ್ತಾನದ ಪರಿಸ್ಥಿತಿ. ಅಫ್ಘಾನಿಸ್ತಾನದಲ್ಲಿ ಭಾರತಕ್ಕೆ ನಿರೀಕ್ಷೆಗೂ ಮೀರಿದ ಸಾರ್ವಜನಿಕ ಬೆಂಬಲ ವ್ಯಕ್ತವಾಗುತ್ತಿರುವುದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಅಫ್ಘನ್ನರ ಬೆಂಬಲ ಪಡೆದಿರುವ ಭಾರತ ನಿಧಾನವಾಗಿಯಾದರೂ ಭದ್ರವಾಗಿಯೇ ಅಫ್ಘನ್ ನೆಲದಲ್ಲಿ ತನ್ನ ಕಾಲೂರಿದೆ. ಸಮಸ್ಯೆಗಳ ಕೂಪವಾಗಿದ್ದ ಅಫ್ಘನ್ನರಿಗೂ ಭಾರತದ ಸ್ನೇಹದಿಂದ ಆನೆಬಲ ಬಂದಂತಾಗಿದೆ. ಭಾರತದ ಈ ರಾಜಕೀಯ ಪ್ರಭಾವ ಮತ್ತು ಇತ್ತೀಚಿನ ರಾಜತಾಂತ್ರಿಕ ನಡೆಗಳು ಪಾಕಿಸ್ತಾನದ ಸ್ಥಾಪಿತ ಹಿತಾಸಕ್ತಿಗಳಿಗೆ ಹಿನ್ನಡೆಯುಂಟು ಮಾಡಿವೆ. ಇದೇ ಕಾರಣಕ್ಕಾಗಿ ರಾಜಮಾರ್ಗದಲ್ಲಿ ಸಾಧಿಸಲಾಗದ್ದನ್ನು ವಾಮಮಾರ್ಗದಲ್ಲಿ ದಕ್ಕಿಸಿಕೊಳ್ಳುವ ಪಾಕಿಸ್ತಾನದ ಹತಾಶ ಪ್ರಯತ್ನವೇ ಭಯೋತ್ಪಾದನೆಯ ಪೋಷಣೆ. ಪಾಕಿಸ್ತಾನದ ಆಂತರಿಕ ಭದ್ರತೆ ಬುಡಮೇಲಾಗಿದ್ದರೂ, ಉಗ್ರರನ್ನು ಬೆಂಬಲಿಸುವುದನ್ನು ಗಮನಿಸಿದರೆ, ತನ್ನನ್ನೂ ಸುಟ್ಟುಕೊಂಡು ಇತರರನ್ನೂ ಬದುಕಲು ಬಿಡದ ವಿಕ್ಷಿಪ್ತ ಮನೋಭಾವದ ವಿಚಿತ್ರ ದೇಶ ಎಂದರೆ ತಪ್ಪಾಗಲಾರದು. ಹೀಗೆ ಮುಂದುವರಿದಲ್ಲಿ ಟರ್ಕಿಯನ್ನು ಯುರೋಪಿನ ರೋಗಿಷ್ಟ ಎಂದಂತೆ ಪಾಕಿಸ್ತಾನ ಏಷ್ಯಾದ ಆತ್ಮಹತ್ಯಾ ಬಾಂಬರ್ ಆಗುವ ದಿನಗಳು ದೂರವಿಲ್ಲ!

ಉಗ್ರರ ಕಡೆಗೆ ಪಾಕಿಸ್ತಾನದ ತೋರಿಸುತ್ತಿರುವ ಒಲವು ಅಫ್ಘಾನಿಸ್ತಾನದ ಪಾಲಿಗೆ ಸಹಿಸಲಾಗದ ತಲೆನೋವಾಗಿದೆ. ಕಲಹಗಳಿಂದ ಬಳಲಿ ಬೆಂಡಾಗಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಮೆರಿಕಾ, ಚೀನಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಶೃಂಗಸಭೆಯಲ್ಲಿ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ, ನೇರವಾಗಿ ಪಾಕಿಸ್ತಾನದ ನಗರಗಳಲ್ಲಿ ಆಶ್ರಯ ಪಡೆದ ತಾಲಿಬಾನ್ ತಲೆಗಳತ್ತ ಬೊಟ್ಟು ಮಾಡಿದ್ದು, ಭಯೋತ್ಪಾದಕರ ಅಟ್ಟಹಾಸದಲ್ಲಿ ಪಾಕ್ ಪಾತ್ರವನ್ನು ಸೂಚ್ಯವಾಗಿ ತಿಳಿಸಿಕೊಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಆತ್ಮಹತ್ಯಾ ಬಾಂಬ್ ದಾಳಿಗಳು, ಪಾಕ್ ಬೆಂಬಲಿತ ಉಗ್ರರ ಕೃತ್ಯ ಎಂಬುದನ್ನು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ ಇತ್ತಿಚೆಗೆ ವಿವರ್ಗೀಕರಿಸಿದ ದಾಖಲೆಗಳು ರುಜುವಾತುಪಡಿಸುತ್ತವೆ. 2014ರ ದಾಳಿಯ ನಂತರ ಪಾಕಿಸ್ತಾನ ಉಗ್ರವಿರೋಧಿಯಾಗಿ ಬದಲಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಇರಲಾರದೆ ಇರುವೆ ಬಿಟ್ಟುಕೊಂಡಂತೆ, ಪಾಕಿಸ್ತಾನ ಹೋದ ಕಡೆಯೆಲ್ಲಾ ಮುಖಭಂಗ ಅನುಭವಿಸಿ, ಇರಲಾರದೆ ಭಯೋತ್ಪಾದಕರನ್ನು ಬಿಟ್ಟುಕೊಂಡಿದ್ದಾರಷ್ಟೇ. ಭಯೋತ್ಪಾದನೆ ಮತ್ತು ಪಾಕಿಸ್ತಾನದ ನಡುವಿನ ಅವಿನಾಭಾವ ನಂಟನ್ನು ಅರ್ಥ ಮಾಡಿಕೊಳ್ಳುವವರೆಗೂ, ಅಮೆರಿಕಾದಿಂದ ಹಿಡಿದು ಅಫ್ಘಾನಿಸ್ತಾನದವರೆಗೆ ಭಯೋತ್ಪಾದನಾ ನಿರ್ಮೂಲನೆ ಕನಸಿನ ಮಾತೇ ಸರಿ.




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 2 June 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ