ಗುರುವಾರ, ಮೇ 19, 2016

ಟ್ರಂಪ್ ವರ್ಸಸ್ ಕ್ಲಿಂಟನ್: ಭಾರತಕ್ಕೆ ಯಾರು ಹಿತವರು ಈ ಇಬ್ಬರೊಳಗೆ?

ಏಷ್ಯಾದಲ್ಲಿ ಅಮೆರಿಕಾದ ರಾಜಕೀಯ ಪ್ರಭಾವ ಶಾಶ್ವತವಾಗಿ ಮರೆಯಾದಂತೆ ಎನ್ನುವ ಕಟು ಸತ್ಯ ಪಕ್ಷಾತೀತವಾಗಿ ಭಾರತದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ.
- ಕೀರ್ತಿರಾಜ್


ಅಮೆರಿಕಾದ ಸ್ಪೀಕರ್ ಪೌಲ್ ರ್‍ಯಾನ್ ಆಹ್ವಾನದ ಮೇರೆಗೆ ಅಮೆರಿಕಾದ ಸಂಸತ್ ಉದ್ದೇಶಿಸಿ ಮಾತನಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾಕ್ಕೆ ಭೇಟಿ ನೀಡಲಿದ್ದಾರೆ. ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮತ್ತು ಮನಮೋಹನ್ ಸಿಂಗ್ ನಂತರ ನರೇಂದ್ರ ಮೋದಿ  ಅಮೆರಿಕಾದ ಸಂಸತ್ ನಲ್ಲಿ ಭಾಷಣ ಮಾಡಿದ ಐದನೇ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಾರಿಯ ಮೋದಿ ಅಮೆರಿಕಾ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದು ಮೋದಿಯವರ ನಾಲ್ಕನೇ ಅಮೆರಿಕಾ ಭೇಟಿಯಾಗಲಿದ್ದು, ಮೋದಿ ಪ್ರಧಾನಿಯಾದ ಬಳಿಕ ಸಾಧಿಸಿದ ವಿದೇಶಾಂಗ ನೀತಿಯ ಯಶಸ್ಸುಗಳಲ್ಲಿ, ಅಮೆರಿಕಾ ಜೊತೆಗಿನ ಸಂಬಂಧಗಳನ್ನು ವಿಸ್ತರಿಸಿ ಭಧ್ರಪಡಿಸಿಕೊಂಡಿರುವುದೂ ಒಂದು. ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧಗಳ ವಿಶ್ವಾಸಾರ್ಹತೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದ ಹೆಗ್ಗಳಿಕೆ ಮೋದಿಯವರಿಗೆ ಸೇರುತ್ತದೆ.  ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರನ್ನು 2015ರ ಗಣರಾಜ್ಯೋತ್ಸ್ವದ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಮೋದಿ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು. ಚೀನಾ ಮತ್ತು ಪಾಕಿಸ್ತಾನಗಳು ನೋಡು ನೋಡುತ್ತಿರುವಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳು ಮತ್ತು ಮಾತುಕತೆಗಳು ಅಮೆರಿಕಾ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿತ್ತು. ದಕ್ಷಿಣ ಚೀನಾ ಸಮುದ್ರದ ಸಾಗರ ಸಂಘರ್ಷವಂತೂ ಅಮೆರಿಕಾ ಏಷ್ಯಾದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಬೇಕಾದಲ್ಲಿ ಭಾರತ ಸಹಕಾರ ಅನಿವಾರ್ಯವೆನ್ನುವ ಮಟ್ಟಿಗೆ ಭಾರತದ ರಾಜತಾಂತ್ರಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಇತ್ತೀಚಿನ ಒಪ್ಪಂದ Logistics support agreement (ಸೈನ್ಯ ಮತ್ತಿತರ ರಕ್ಷಣಾ ಸಾಮಗ್ರಿಗಳ ಸರಬರಾಜು ಮತ್ತು ವ್ಯವಸ್ಥಾಪನೆಯಲ್ಲಿ ಪರಸ್ಪರ ಸಹಕಾರಕ್ಕಾಗಿ ಎರಡೂ ದೇಶಗಳು ಮಾಡಿಕೊಂಡ ಒಪ್ಪಂದ) ಭಾರತ ಮತ್ತು ಅಮೆರಿಕಾದ ರಕ್ಷಣಾ ವಲಯದ ಸಹಕಾರವನ್ನು ಇನ್ನಷ್ಟು ಬಲಪಡಿಸಿದೆ.

ಭಾರತದೊಂದಿಗಿನ ಅಮೆರಿಕಾ ಸಂಬಧಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವಂತೆ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಬಹಳ ಹತ್ತಿರಕ್ಕೆ ಬಂದು ನಿಂತಿದೆ. ಅಧ್ಯಕ್ಷೀಯ ಗಾದಿಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಇವರಿಬ್ಬರಲ್ಲಿ ಭಾರತಕ್ಕೆ ಹಿತವರಾರು ಎಂಬ ಬಗ್ಗೆ ಚರ್ಚೆಗಲಿವೆ. ಭಾರತದ ರಾಜಕೀಯ ವಿಶ್ಲೇಷಕರಲ್ಲಿ ಅನೇಕರು ರಿಪಬ್ಲಿಕ್ ಅಭ್ಯರ್ಥಿಯ ಗೆಲುವು ಭಾರತಕ್ಕೆ ಪೂರಕ ಎಂಬ ನಿರೀಕ್ಷೆಯಿಟ್ಟಿದ್ದಾರೆ. ಹಿಂದೊಮ್ಮೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭಾರತೀಯರು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಅಬ್ಬರಿಸಿದ್ದನ್ನು ಮರೆಯುವಂತಿಲ್ಲ. ಆದರೂ ಇತ್ತಿಚೆಗೆ ತನ್ನ ನಿಲುವು ಬದಲಿಸಿ ಕೊಂಡಂತಿರುವ ಟ್ರಂಪ್ ಪಾಕಿಸ್ತಾನವನ್ನು ಸ್ಥಿರಗೊಳಿಸುವಲ್ಲಿ ಭಾರತದ ಸಹಾಯ ಪಡೆದುಕೊಳ್ಳುವ ಮಾತಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ತಾಳುತ್ತಾರೆ ಎನ್ನುವುದು ಭಾರತದಲ್ಲಿರುವ ಕ್ಲಿಂಟನ್ ವಿರೋಧಿಗಳ ಕಳವಳ. ಹೀಗೆ ರಾಜಕೀಯ ವಿಶ್ಲೇಷಕರ ವಲಯದಲ್ಲಿ ರಿಪಬ್ಲಿಕ್ ಪಕ್ಷದ ಟ್ರಂಪ್ ಪರ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರೋಧದ ಅಲೆಗಳಿವೆ.

ಭಾರತ- ಅಮೆರಿಕಾ ಸಂಬಂಧಗಳ ಇತಿಹಾಸ ಗಮನಿಸಿದರೆ  ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳೆರಡೂ ಭಾರತದೊಂದಿಗಿನ ಬಾಂಧವ್ಯಕ್ಕೆ ಸಮಾನ ಕೊಡುಗೆ ನೀಡಿವೆ. ರಿಪಬ್ಲಿಕ್ ಪಕ್ಷದ ಜಾರ್ಜ್ ಡಬ್ಲ್ಯು ಬುಶ್ ಆಳ್ವಿಕೆಯಲ್ಲಿ ಭಾರತ ಅಮೆರಿಕಾ ಸಂಬಂಧಗಳು ಉಚ್ಚ್ರಾಯ ಸ್ಥಿತಿಗೇರಿದ್ದು ಎಷ್ಟು ಸತ್ಯವೋ, ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಆಳ್ವಿಕೆಯಲ್ಲಿ ಭಾರತ ಅಮೆರಿಕಾ ಬಾಂಧವ್ಯಕ್ಕೆ ಭಧ್ರ ಅಡಿಪಾಯ ಹಾಕಲಾಗಿತ್ತು ಎಂಬುದು ಅಷ್ಟೇ ಸತ್ಯ. ಪೋಕ್ರಾನ್- II ನಂತರ ಅಮೆರಿಕಾ ಜೊತೆಗಿನ ಭಿನ್ನಾಭಿಪ್ರಯಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ 2000 ಮಾರ್ಚ್ ನಲ್ಲಿ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದರೆ 2000 ಸೆಪ್ಟೆಂಬರ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಮೆರಿಕಾಕ್ಕೆ ಭೇಟಿ ನೀಡಿದರು. ಅದೇ ರೀತಿ ಬರಾಕ್ ಒಬಾಮ ಭಾರತಕ್ಕೆ ಎರಡು ಸಲ ಭೇಟಿ ನೀಡಿದ ಏಕೈಕ ಅಮೆರಿಕಾ ಅಧ್ಯಕ್ಷ. ಭಾರತಕ್ಕೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷರೆಲ್ಲಾ ನಂತರ ಪಾಕಿಸ್ತಾನಕ್ಕೂ ಭೇಟಿ ನೀಡಿ ಓಲೈಸುವುದು ಸಂಪ್ರದಾಯವಾಗಿತ್ತು. ಒಬಾಮ ಭಾರತ ಭೇಟಿಯ ಸಂದರ್ಭದಲ್ಲಿ ಈ ಸಂಪ್ರದಾಯ ಕಡೆಗಣಿಸಿದ್ದು, ಅಮೆರಿಕಾ ಭಾರತಕ್ಕೆ ನೀಡುತ್ತಿರುವ ರಾಜತಾಂತ್ರಿಕ ಮಹತ್ವಕ್ಕೊಂದು ನಿದರ್ಶನ. ಕ್ಲಿಂಟನ್ ಮತ್ತು ಒಬಾಮ ಡೆಮಾಕ್ರಟಿಕ್ ಪಕ್ಷದವರು ಎಂಬುದು ಗಮನಿಸಬೇಕಾದ ಅಂಶ.

ಆರ್ಥಿಕ ಸಂಬಂಧಗಳ ದೃಷ್ಟಿಯಲ್ಲೂ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಯೋಜನೆಗಳಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಅಮೆರಿಕಾ ಚೀನಾದ ವ್ಯಾಪಾರ ಸಂಬಂಧಗಳನ್ನು ಗಮನಿಸಿದರೆ ಅಮೆರಿಕಾದೊಂದಿಗಿನ ಭಾರತದ ಆರ್ಥಿಕ ಸಂಬಂಧಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಡೆಮಾಕ್ರಟಿಕ್ ಒಬಾಮ ಮತ್ತು ರಿಪಬ್ಲಿಕ್ ಟ್ರಂಪ್ ರ ಇತ್ತಿಚಿನ ಭಾಷಣಗಳನ್ನು ಗಮನಿಸಿದರೆ ಅಮೆರಿಕಾದೊಂದಿಗಿನ ಭಾರತದ ಆರ್ಥಿಕ ಸಂಬಂಧಗಳು ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಸುಧಾರಣೆಗಳ ಮೇಲೆ ಅವಲಂಬಿತವಾಗಿದೆಯೇ ಹೊರತು ಅಮೆರಿಕಾದ ರಾಜಕೀಯ ಬದಲಾವಣೆಗಳಿಂದಲ್ಲ ಎಂಬುದು ಸ್ಪಷ್ಟ. ಹೀಗಾಗಿ ರಿಪಬ್ಲಿಕ್ ಅಥವಾ ಡೆಮಾಕ್ರಟ್ ಪಕ್ಷಗಳಲ್ಲಿ ಯಾವುದೇ ಪಕ್ಷ ಗೆಲುವು ಸಾಧಿಸಿದರೂ, ಭಾರತದೊಂದಿಗಿನ ರಾಜತಾಂತ್ರಿಕ ಸಬಂಧಗಳು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಅಮೆರಿಕಾ ಭಾರತವನ್ನು ಕಡೆಗಣಿಸಿದಲ್ಲಿ, ಏಷ್ಯಾದಲ್ಲಿ ಅಮೆರಿಕಾದ ರಾಜಕೀಯ ಪ್ರಭಾವ ಶಾಶ್ವತವಾಗಿ ಮರೆಯಾದಂತೆ ಎನ್ನುವ ಕಟು ಸತ್ಯ ಪಕ್ಷಾತೀತವಾಗಿ ಭಾರತದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದೆ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 16 May 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ