ಭಾನುವಾರ, ಮೇ 1, 2016

ಚೀನಾ ಆಚರಿಸದ ಕ್ರಾಂತಿಯ ಅರ್ಧ ಶತಮಾನೋತ್ಸವ!

1960 ದಶಕದಲ್ಲಿ ಕಮ್ಯುನಿಸ್ಟ್ ಚೀನಾದ ನಾಯಕ ಮಾವೊ ಶತ್ರುದಮನಕ್ಕೆ ಬಳಸಿದ ಆಯುಧವೇ ಸಾಂಸ್ಕೃತಿಕ ಕ್ರಾಂತಿ! ಚೀನಾ ಜನತೆಯ ಅದರಲ್ಲೂ ಯುವ ಜನತೆಯ ಸಾಮೂಹಿಕ ಉನ್ಮಾದವನ್ನು ಬಳಸಿಕೊಂಡ ಮಾವೊ ತನ್ನ ವಿರೋಧಿಗಳ ಕಗ್ಗೊಲೆ ಮಾಡಿಸಿದ ರೀತಿ ವಿಶ್ವದ ಕಲ್ಲೆದೆಯ ಸರ್ವಾಧಿಕಾರಿಗಳೂ ಕಣ್ ಕಣ್ ಬಿಡುವಂತೆ ಮಾಡಿತ್ತು.
- ಕೀರ್ತಿರಾಜ್


ಕಮ್ಯುನಿಸ್ಟ್ ಚೀನಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವವರು ವಾರ್ಷಿಕೋತ್ಸವಗಳನ್ನು ಆಚರಿಸುವುದರಲ್ಲಿ ಎತ್ತಿದ ಕೈ. ಕಮ್ಯುನಿಸ್ಟ್ ಚೀನಾದ ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು, ಕಮ್ಯುನಿಸ್ಟ್ ಚೀನಾದಲ್ಲಿ ನಡೆಸ ಯಾವುದೇ ಚಾರಿತ್ರಿಕ ಘಟನೆಗಳನ್ನು ಆಚರಿಸುವ ಅವಕಾಶ ಕೈ ಬಿಟ್ಟವರಲ್ಲ! 2021ರಲ್ಲಿ ಚೀನಾದ ಕಮ್ಯುನಿಸ್ಟ್ ಪಾರ್ಟಿಗೆ ನೂರು ವರ್ಷಗಳು ತುಂಬಿ ಶತಮಾನೋತ್ಸವ ಆಚರಣೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿರುವುದು ಚೀನಿಯರ ಆಚರಣಾ್ಪ್ರಿಯತೆಗೆ ಒಂದು ನಿದರ್ಶನವಷ್ಟೇ. ಐದು ವರ್ಷ ನಂತರದ ಆಚರಣೆಗೆ ಸಿದ್ಧತೆಯಲ್ಲಿರುವ ಚೀನಾ ವರ್ಷ ನೆನಪಿಸಿಕೊಳ್ಳಬೇಕಾದ್ದನ್ನು ಮರೆತುಹೋಗಿದೆ! ಹೌದು, ಐದು ದಶಕಗಳ ಹಿಂದೆ ಚೀನಾ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆಯುಳ್ಳ, ಮಾವೊ ತ್ಸೆ ತುಂಗ್ ನಡೆಸಿದ ಸಾಂಸ್ಕೃತಿಕ ಕ್ರಾಂತಿಗೆ (Cultural Revolution) ವರ್ಷ 2016ಕ್ಕೆ ಸರಿಯಾಗಿ 50 ವರ್ಷ ತುಂಬುತ್ತದೆಚೀನಿ ನಾಯಕರು ಮರೆತಿದ್ದಾರೆ! ಸ್ವತಃ ಮಾವೊ ತ್ಸೆ ತುಂಗ್ ಜಪಾನೀಯರನ್ನು ಮತ್ತು ಕೌಮಿಂಟಾಂಗ್ ಸೇನೆಯನ್ನು ಸೋಲಿಸಿದ ಬಳಿಕ ಸಾಂಸ್ಕೃತಿಕ ಕ್ರಾಂತಿ  ತನ್ನ ಜೀವಮಾನದ ಶ್ರೇಷ್ಟ ಸಾಧನೆ ಎಂದು ಪರಿಗಣಿಸಿದ್ದಷ್ಟೇ ಅಲ್ಲದೇ ಸಾಂಸ್ಕೃತಿಕ ಕ್ರಾಂತಿಗಳು ಚೀನಾ ಸಮಾಜದಲ್ಲಿ ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾನೆ. ಮಾವೊ ತ್ಸೆ ತುಂಗ್ ಚೀನಾದ ಸಾರ್ವಕಾಲಿಕ ಶ್ರೇಷ್ಟ ನಾಯಕ ಎಂಬುದನ್ನು ಒಪ್ಪಿಕೊಳ್ಳುವ ಪ್ರಸಕ್ತ ಚೀನಿ ನಾಯಕರು, ಮಾವೋ ಐತಿಹಾಸಿಕ ಪರಂಪರೆ ಎಂದು ಪರಿಗಣಿಸಿದ್ದ ಸಾಂಸ್ಕೃತಿಕ ಕ್ರಾಂತಿಯನ್ನು  ಮರೆತಿರುವುದು ಅಥವಾ ಮರೆತಂತೆ ನಟಿಸುತ್ತಿರುವುದು ಕಮ್ಯುನಿಸ್ಟ್ ಚೀನಾದ ದ್ವಂದ್ವಗಳಲ್ಲೊಂದು!

ಸಾಂಸ್ಕೃತಿಕ ಕ್ರಾಂತಿ ಇವತ್ತಿಗೂ ಹೊರಜಗತ್ತಿನ ಪಾಲಿಗೆ ಕುತೂಹಲಕಾರಿ ಮತ್ತು ನಿಗೂಢವಾಗಿಯೇ ಉಳಿದುಬಿಟ್ಟಿದೆ. ಹಿಟ್ಲರ್, ಸ್ಟಾಲಿನ್ ಗಳಿಂದ ಹಿಡಿದು ಇವತ್ತಿನ ಸರ್ವಾಧಿಕಾರಿಗಳವರೆಗೆ ಪ್ರತಿಯೊಬ್ಬರಿಗೂ ಆಂತರಿಕ ಶತ್ರುಗಳಿದ್ದರು ಮತ್ತು ಆಂತರಿಕ ಶತ್ರುದಮನಕ್ಕೆ ಸರ್ವಾಧಿಕಾರಿಗಳು ಬಳಸಿದ ಮಾರ್ಗ, ಅದರಲ್ಲಿ ಸೇರಿ ಹೋಗಿರುವ ಕ್ರೌರ್ಯ ಚರಿತ್ರೆ ಸೇರಿವೆ. 1960 ದಶಕದಲ್ಲಿ ಕಮ್ಯುನಿಸ್ಟ್ ಚೀನಾದ ನಾಯಕ ಮಾವೊ ಶತ್ರುದಮನಕ್ಕೆ ಬಳಸಿದ ಆಯುಧವೇ ಸಾಂಸ್ಕೃತಿಕ ಕ್ರಾಂತಿ! ಚೀನಾ ಜನತೆಯ ಅದರಲ್ಲೂ ಯುವ ಜನತೆಯ ಸಾಮೂಹಿಕ ಉನ್ಮಾದವನ್ನು ಬಳಸಿಕೊಂಡ ಮಾವೊ ತನ್ನ ವಿರೋಧಿಗಳ ಕಗ್ಗೊಲೆ ಮಾಡಿಸಿದ ರೀತಿ ವಿಶ್ವದ ಕಲ್ಲೆದೆಯ ಸರ್ವಾಧಿಕಾರಿಗಳೂ ಕಣ್ ಕಣ್ ಬಿಡುವಂತೆ ಮಾಡಿತ್ತು. ಭೀಕರ ರಕ್ತಪಾತದೊಂದಿಗೆ, ಹಲವಾರು ಕಮ್ಯುನಿಸ್ಟ್ ನಾಯಕರೂ ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋಗುತ್ತಾರೆ. ಮುಂದಿನ ಹಲವಾರು ವರ್ಷಗಳ ಕಾಲ, ಮಾವೊ ಮರಣದವರೆಗೂ ಸಾಂಸ್ಕೃತಿಕ ಕ್ರಾಂತಿಯ ಹೆಸರಿನಲ್ಲಿ ಮುಂದುವರಿದಿತ್ತು ಮಾರಣ ಹೋಮ.


ಇತಿಹಾಸದ ಪ್ರತಿ ಘಟನೆಯನ್ನು ಸ್ಮರಿಸಿಕೊಂಡು ಆಚರಿಸುವ ಚೀನಿಯರಿಗೆ, ಕಮ್ಯುನಿಸ್ಟ್ ಚರಿತ್ರೆಯಲ್ಲಿ ಕಡುಗೆಂಪು ಬಣ್ಣದ ರಕ್ತಸಿಕ್ತ ಛಾಪು ಮೂಡಿಸಿದ ಸಾಂಸ್ಕೃತಿಕ ಕ್ರಾಂತಿಯೇಕೆ ಮರೆತು ಹೋಯ್ತು? ಜಾಣ ಮರೆವಿಗೆ ಕಾರಣವೂ ಇಲ್ಲದ್ದಿಲ್ಲ. ಚೀನಿ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚೀನಿ ನಾಯಕರು ಚೀನಾದಲ್ಲಿ ನಡೆದ ಪ್ರತಿ ದುರಂತಕ್ಕೂ ಹೊರ ಜಗತ್ತನ್ನೂ ಅಥವಾ ಇತರೆ ರಾಷ್ಟ್ರಗಳನ್ನು ಹೊಣೆಗಾರರನ್ನಾಗಿ ಮಾಡುವುದು ಸಾಮಾನ್ಯ. ಚೀನಿ ಕಮ್ಯುನಿಸ್ಟರು ಕೆಲವೊಮ್ಮೆ ಜಪಾನೀಯರನ್ನು ದೂರಿದರೆ ಇನ್ನೂ ಕೆಲವೊಮ್ಮೆ ಅಮೆರಿಕನ್ನರನ್ನೋ, ರಷ್ಯನ್ನರನ್ನು ಚೀನಾದ ಆಂತರಿಕ ಸಮಸ್ಯೆಗಳಿಗೆ ಹೊಣೆಗಾರರು ಎಂದು ಸಾಧಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. 1981ರಲ್ಲಿ ಚೀನಾದಲ್ಲಿ ನಡೆದ ದಂಗೆ ಅಮೆರಿಕಾದ ಪ್ರಚೋದನೆ ಎಂದರೆ ಇನ್ನಿತರ ಕೆಲವು ದುರಂತಗಳು ಸೊವಿಯೆತ್ ರಷ್ಯಾದ ಕೈವಾಡ ಎಂದು ಚೀನಿ ನಾಯಕರು ಕೈತೊಳೆದುಕೊಂಡು ಬಿಟ್ಟಿದ್ದಾರೆ. ಚೀನಿ ಕಮ್ಯುನಿಸ್ಟರು ಹೇಳುತ್ತಿರುವುದೆಲ್ಲಾ ಸುಳ್ಳು ಎನ್ನಲಾಗದು. ಒಂದು ಕಾಲದಲ್ಲಿ ಜಪಾನ್ ಸೇರಿದಂತೆ ಸಾಮ್ರಾಜ್ಯಶಾಹಿ ಶಕ್ತಿಗಳು ಚೀನಾವನ್ನು ಕಾಡಿದ್ದು ನಿಜವೇ ಆದರೂ ಚರಿತ್ರೆಯ ಗರ್ಭ ಸೇರಿ ಹೋದ ವಿಷಯಗಳು ಪ್ರತಿ ಬಾರಿ ಚೀನಿ ನಾಯಕರ ಬೇಜವಾಬ್ದಾರಿಗೆ ಉತ್ತರವಾಗಲಾರದು. ಸಮಯಾನಂತರ ಕಮ್ಯುನಿಸ್ಟ್ ಪಕ್ಷವೇ ಸಾಂಸ್ಕೃತಿಕ ಕ್ರಾಂತಿಯನ್ನು ಚೀನಿ ಇತಿಹಾಸದ ಪ್ರಮುಖ ದುರಂತ ಎಂದು ಒಪ್ಪಿಕೊಡ ಬಳಿಕ ಅದರ ಕಾರಣಗಳನ್ನೂ, ಪರಿಣಾಮಗಳನ್ನು ಬೇರೊಬ್ಬರ ಮೇಲೆ ಹೊರಿಸುವ ಅವಕಾಶವನ್ನೂ ಕಳೆದುಕೊಂಡು ಬಿಟ್ಟಿದೆ.


ಸಂಸ್ಕೃತ ಪಂಡಿತ ಜಿ ಕ್ಸಿಯಾನ್ಲಿನ್ ಬರೆದಿರುವ ಇತ್ತೀಚೆಗೆ ಪ್ರಕಟವಾಗಿರುವ ಪುಸ್ತಕ 'The Cowshed: Memories of the Chinese Cultural Revolution' ಕಮ್ಯುನಿಸ್ಟ್ ಚೀನಾದ ಮತ್ತೊಂದು ಮುಖವನ್ನು ಸಾಕ್ಷಿ ಸಮೇತ ನೆನಪಿಸುವ ಕೆಲಸ ಮಾಡಿದೆ. 2016ರಲ್ಲಿ ಸಾಂಸ್ಕೃತಿ ಕ್ರಾಂತಿಯ ಅರ್ಧ ಶತಮಾನೋತ್ಸವ ಆಚರಿಸಬೇಕಿದ್ದ ಚೀನಾ ಮೌನವಾಗಿದೆಯೆಂದರೆ ಅದರರ್ಥ ಕಮ್ಯುನಿಸ್ಟರಿಗೆ ಘಟನೆಯ ಬಗ್ಗೆ ಪಶ್ಚಾತ್ತಾಪವಿದೆಯೆಂದಲ್ಲ. ಕಮ್ಯುನಿಸ್ಟ್ ಚೀನಾದ ಇತಿಹಾಸದಲ್ಲಿ ಸಾಂಸ್ಕೃತಿಕ ಕ್ರಾಂತಿಯ ಘಟನೆ ಕಮ್ಯುನಿಸ್ಟ್ ನಾಯಕರಿಗೆ ಸಹಿಸಲಾಗದ ಮುಖಭಂಗ. ಬೇರೆ ಯಾವುದೇ ದೇಶವನ್ನೂ ಹೊಣೆ ಮಾಡುವ ಅವಕಾಶಗಳು ಇಲ್ಲದ ಕಾರಣ, ಚೀನಾದ ಕಮ್ಯುನಿಸ್ಟ್ ಸರಕಾರ ಘಟನೆ ಮರೆತುಹೋಗುವಂತೆ ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ಹೀಗಾಗಿಯೇ ಸಾಂಸ್ಕೃತಿಕ ಕ್ರಾಂತಿಯ ಅರ್ಧ ಶತಮಾನವನ್ನು ಆಚರಿಸುವುದಿರಲೀ, ಅದರ ಸ್ಮರಣೆಗೂ ಅವಕಾಶ ಕೊಡದೆ ಕಮ್ಯುನಿಸ್ಟರು ತಮ್ಮ ಆಚರಣಾಪ್ರಿಯತೆಗೆ ಸ್ವಯಂ ಕಡಿವಾಣ ಹಾಕಿಕೊಂಡಿದ್ದಾರೆ!




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 19 April 2016)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ