ಬುಧವಾರ, ಮಾರ್ಚ್ 30, 2016

ಇಸ್ಲಾಮಿಕ್ ಸ್ಟೇಟ್ ಉಗ್ರ ನಿಗ್ರಹದಲ್ಲಿ ಸಮನ್ವಯ ಕೊರತೆ

ವಿಶ್ವ ರಾಜಕೀಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅಮೆರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ಭಯೋತ್ಪಾದನೆ ಭಾರತದ ಹುಚ್ಚು ದೂರಿನಂತೆ ಕಂಡಿತ್ತು!2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ವಕ್ರ ದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು!
- ಕೀರ್ತಿರಾಜ್


ಸ್ವಾತಂತ್ರ್ಯಾನಂತರದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕರ ಸಮಸ್ಯೆಯ ವಿಚಾರವಾಗಿ ಜಾಗತಿಕ ವೇದಿಕೆಯಲ್ಲಿ ಭಾರತ ಪ್ರತಿ ಬಾರಿಯೂ ಧ್ವನಿ ಎತ್ತುತ್ತಿದ್ದರೂ, ವಿಶ್ವ ಸಂಸ್ಥೆ ಮತ್ತು ವಿಶ್ವ ರಾಜಕೀಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅಮೆರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ಭಯೋತ್ಪಾದನೆ ಭಾರತದ ಹುಚ್ಚು ದೂರಿನಂತೆ ಕಂಡಿತ್ತು! ಭಾರತದ ಅಭಿವೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದ ಭಯೋತ್ಪಾದನೆ ಸೂಪರ್ ಪವರ್ ಗಳಿಗೆ ತಮಾಷೆಯ ವಿಷಯವಾಗಿತ್ತು. 2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ವಕ್ರ ದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು! ಇದಾದ ಮೇಲೆ ಉಗ್ರವಾದವನ್ನು ಹತ್ತಿಕ್ಕಲು ವಿಶ್ವ ಮಟ್ಟದಲ್ಲಿ ಹಲವಾರು ಪ್ರಯತ್ನಗಳು ನಡೆದರೂ, ಭಯೂತ್ಪಾದನೆಯ ನಿರ್ಮೂಲನ ಇವತ್ತಿಗೂ ಸಾಧ್ಯವಾಗಿಲ್ಲ. ಭಯೋತ್ಪಾದಕ ಸಂಘಟನೆಗಳು ಹಲವಾರಿದ್ದರೂ, ಬಹಳ ಚಾಲ್ತಿಯಲ್ಲಿರುವ ಒಂದು ಹೆಸರನ್ನು ಉಗ್ರವಾದದ ಜೊತೆಗೆ ಸಮೀಕರಿಸುವುದು ಸಾಮಾನ್ಯ. ಕೆಲ ವರ್ಷಗಳ ಹಿಂದೆ ಅಲ್ ಖೈದಾ ಇದ್ದಂತೆ , ಸದ್ಯದ ಕುಖ್ಯಾತ ಹೆಸರು ಇಸ್ಲಾಮಿಕ್ ಸ್ಟೇಟ್!

ಕಳೆದ ವಾರ ಇಸ್ಲಾಮಿಕ್ ಸ್ಟೇಟ್ ಉಗ್ರರು ಬ್ರುಸ್ಸೆಲ್ಸ್ ಮೇಲೆ ನಡೆಸಿದ ದಾಳಿ ಮೂವತ್ತಕ್ಕೂ ಹೆಚ್ಚು ಜನರ ಪ್ರಾಣ ಬಲಿ ತೆಗೆದುಕೊಂಡು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಯುರೋಪಿಯನ್ನರಲ್ಲಿ ಮತ್ತೆ ಆತಂಕದ ಕಾರ್ಮೋಡ ಮೂಡಿಸಿದೆ . ಯುರೋಪ್ ಮೇಲಿನ ಭಯೋತ್ಪಾದಕ ದಾಳಿ ಇದೇ ಮೊದಲೇನಲ್ಲ. 2004ರಲ್ಲಿ ಮ್ಯಾಡ್ರಿಡ್ ಮೇಲೆ ನಡೆದ ಬಾಂಬು ದಾಳಿಯಲ್ಲಿ 192 ಜನ, ಜುಲೈ 2005ರಲ್ಲಿ ನಡೆದ ಲಂಡನ್ ದಾಳಿಯಲ್ಲಿ 52 ಮತ್ತು ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಪ್ಯಾರಿಸ್ ದಾಳಿಯಲ್ಲಿ 130 ಜನರ ಪ್ರಾಣ ಹಾನಿಯಾಗಿದೆ. ಯುರೋಪಿನ 28 ರಾಷ್ಟ್ರಗಳನ್ನು ಒಳಗೊಂಡ, ವಿಶ್ವದಲ್ಲೇ ಅತ್ಯಂತ ಯಶಸ್ವೀ ಮತ್ತು ಪರಿಣಾಮಕಾರಿ ಪ್ರಾದೇಶಿಕ ಸಂಘಟನೆ ಎಂದು ಖ್ಯಾತಿ ಗಳಿಸಿದ ಯುರೋಪಿಯನ್ ಯೂನಿಯನ್, ಯುರೋಪನ್ನು ಗಡಿರಹಿತ ಖಂಡವಾಗಿಸಿ, ರಾಷ್ಟ್ರಗಳ ಗಡಿಯನ್ನು ಮೀರಿದ ಯುರೋಪಿಯನ್ ಪ್ರಾದೇಶಿಕತೆಯನ್ನು ಪ್ರತಿಪಾದಿಸುತ್ತಿದೆ. ಯುರೋಪಿನ ಯಾವುದಾದರೊಂದು ರಾಷ್ಟ್ರ ಸೇರಿಕೊಂಡ ಉಗ್ರವಾದಿಗಳೂ ಕೂಡ ಗಡಿಗಳನ್ನು ಮೀರಿ ಯುರೋಪಿನಾದ್ಯಂಥ ವ್ಯಾಪಿಸಿಕೊಂಡು ಬಿಟ್ಟಿದ್ದಾರೆ. ದುರಾದೃಷ್ಟವಶಾತ್  ಯುರೋಪಿನ ಮುಕ್ತ ಗಡಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ವರದಾನವಾಗಿ ಪರಿಣಮಿಸಿದೆ!


ಬ್ರುಸ್ಸೆಲ್ಸ್ ದಾಳಿಯ ನಂತರ ಯುರೋಪ್ ನಲ್ಲಿ ಹಲವಾರು ಬದಲಾವಣೆಗಳಾಗಿವೆ. ಉಗ್ರ ದಾಳಿಯ ಬೆನ್ನಲ್ಲೇ ಫ್ರಾನ್ಸ್ ಪ್ಯಾರಿಸ್ ನಲ್ಲಿ ಅನುಮಾನಸ್ಪದ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಕಳೆದ ಶುಕ್ರವಾರ ಬ್ರುಸ್ಸೆಲ್ಸ್ ದಾಳಿಗೆ ಸಂಬಂಧಿತ ವ್ಯಕ್ತಿಯೊಬ್ಬನನ್ನು ಬೆಲ್ಜಿಯಮ್ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜರ್ಮನ್ ಪೊಲೀಸರೂ ಕೂಡ ಇಬ್ಬರು ವ್ಯಕ್ತಿಗಳನ್ನು ಅವರ ಮೊಬೈಲ್ ಸಂದೇಶಗಳ ಆಧಾರದಲ್ಲಿ ಬಂಧಿಸಿದ್ದಾರೆ. ಮೂರು ದೇಶಗಳಲ್ಲಿ ನಡೆದ ಕ್ಷಿಪ್ರ ಗತಿಯ ಪೋಲಿಸ್ ಕಾರ್ಯಾಚರಣೆಗಳು, ಇಸ್ಲಾಮಿಕ್ ಸ್ಟೇಟ್ ವಿರುದ್ಧದ ರಣ ನೀತಿಯಲ್ಲಿ ಮುಖ್ಯ ಪಾತ್ರ ವಹಿಸಲಿವೆ. ಯುರೋಪಿಯನ್ ಪೊಲೀಸ್ ವ್ಯವಸ್ಥೆಯ ಸಾಮರ್ಥ್ಯದ ಮೇಲೆ ನಂಬಿಕೆಯಿದ್ದರೂ, ಪರಸ್ಪರ ಸಹಕಾರ ಮತ್ತು ಸಮನ್ವಯತೆಯ ಕೊರತೆಗೆ ಕಳೆದ ಹದಿನೈದು ವರ್ಷಗಳಲ್ಲಿ ನಡೆದ ಸಾಲು ಉಗ್ರ ದಾಳಿಗಳೇ ಸಾಕ್ಷಿ.

ಕಳೆದ ವಾರ ಟರ್ಕಿ ಅಧಿಕಾರಿಗಳು ನೀಡಿದ ವಿವರದಂತೆ, ಬ್ರುಸ್ಸೆಲ್ಸ್ ಆತ್ಮಹತ್ಯಾ ಬಾಂಬರ್ ಗಳಲ್ಲಿ ಒಬ್ಬನಾಗಿದ್ದ ಇಬ್ರಾಹಿಮ್ ಎಲ್ ಬಾಕ್ರಾವಿಯನ್ನು ಟರ್ಕಿ ಬಂಧನದಲ್ಲಿಟ್ಟಿತ್ತು ಕೊನೆಗೆ ಗಡೀಪಾರು ಮಾಡಲಾಗಿತ್ತು. ಉಗ್ರ ಇಸ್ಲಾಮಿಕ್ ಸ್ಟೇಟ್ ಸೇರಿಕೊಳ್ಳುವ ವಿವರಗಳನ್ನು ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ಟರ್ಕಿ ಅಧಿಕಾರಿಗಳು ಬೆಲ್ಜಿಯಂ ಪೊಲೀಸರಿಗೆ ರವಾನಿಸಿದ್ದರು. ಆದರೂ ಬೆಲ್ಜಿಯಂ ಪೊಲೀಸರು ವಿವರಗಳನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾದರು. ಯುರೋಪಿಯನ್ ಒಕ್ಕೂಟದ 28 ರಾಷ್ಟ್ರಗಳ ಮಧ್ಯೆ ರಕ್ಷಣಾ ಮಾಹಿತಿ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣಿಸುತ್ತಿದೆ. ದೇಶದ ಒಳಗಡೆಯೂ ಕೂಡ ಪೊಲೀಸ್, ಗುಪ್ತಚರದಳ, ರಕ್ಷಣಾ ವ್ಯವಸ್ಥೆಗಳಲ್ಲಿ ಸಮನ್ವಯತೆಯಿಲ್ಲ ಎನ್ನುವುದು ಬುಸ್ಸೆಲ್ಸ್ ಘಟನೆಯಿಂದ ಸ್ಪಷ್ಟವಾಗಿದೆ. 2001 ಅಲ್ ಖೈದಾ ದಾಳಿಗೆ ಮುಂಚಿತವಾಗಿ ಅಮೆರಿಕದ ಆಂತರಿಕ ಗುಪ್ತದಳ ಎಫ್ ಬಿ ಮತ್ತು ಬಾಹ್ಯ ಗುಪ್ತದಳ ಸಿ ಮಧ್ಯೆ ಇದೇ ಸಮನ್ವಯದ ಕೊರತೆಯಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ತದನಂತರ ಅಮೆರಿಕಾ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು, ಭಯೋತ್ಪಾದನಾ ನಿಗ್ರಹದಲ್ಲಿ ಅಮೆರಿಕಾದ ರಕ್ಷಣಾ ದಳ, ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಜನತೆ ತೋರಿದ ಸಮಗ್ರತೆಯಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ.


ಇಸ್ಲಾಮಿಕ್ ಸ್ಟೇಟ್ ಅನ್ನು ಸಿದ್ಧಾಂತವಿಲ್ಲದ, ಯೋಜನೆಗಳಿಲ್ಲದ ಒಂದು ದಂಗೆಕೋರ ಗುಂಪು ಎಂದು ತಿಳಿದುಕೊಳ್ಳುವುದು ತಪ್ಪಾದೀತು. ಸಂಘಟನೆಗೆ ಸ್ಪಷ್ಟವಾದ ಯೋಜನೆಗಳಿವೆ ಮತ್ತು ತನ್ನ ಭವಿಷ್ಯತ್ತಿನ ಸ್ಥಾನಮಾನದ ಬಗೆಗೂ ಸ್ಪಷ್ಟ ಚಿತ್ರಣವಿದೆ. ಹಾಗಿಲ್ಲದೆ ಹೋಗಿದ್ದರೆ ಪ್ರಪಂಚದಾದ್ಯಂತ ತನ್ನ ಪ್ರಭಾವ ವಿಸ್ತರಿಸಿ ಜಗತ್ತಿನ ಮೂಲೆ ಮೂಲೆಗಳಿಂದ ಯುವಕರನ್ನು ಸಂಘಟನೆಯತ್ತ ಸೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹಿಂಸೆಯನ್ನೇ ಬಳಸಿಕೊಂಡು ಅಂತರಾಷ್ಟ್ರೀಯ ರಾಜಕಾರಣದಲ್ಲಿ ಛಾಪು ಮೂಡಿಸುವ ಹಾಗೂ ತಮ್ಮದೇ ಅಸ್ಮಿತೆಯನ್ನು ಸೃಷ್ಟಿಸಿಕೊಳ್ಳುವ ಬಹುದೊಡ್ಡ ಪ್ರಯತ್ನವೊಂದು ಜಾರಿಯಲ್ಲಿದೆ. ಇತ್ತೀಚೆಗೆ ಪ್ರಕಟವಾದ ಜೆಸ್ಸಿಕಾ ಸ್ಟರ್ನ್ ಮತ್ತು ಜೆ ಎಂ ಬರ್ಗರ್ ರವರ 'ISIS: The State of Terror' ಎಂಬ ಪುಸ್ತಕದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಬಕರ್ ಅಲ್-ಬಗ್ದಾದಿಯ ಬಗ್ಗೆ ಕುತೂಹಲಕಾರಿ ವಿವರಗಳಿವೆ. ಪುಸ್ತಕದಲ್ಲಿ ಬಗ್ದಾದಿ ಅಬು ಬಕರ್ ನಾಜಿ ಬರೆದ ಕೃತಿ 'The Management of Savagery'ಯಿಂದ ಬಹಳವಾಗಿ ಪ್ರಭಾವಿತನಾಗಿದ್ದ ಎಂದು ದಾಖಲಿಸಿದ್ದಾರೆ. ನಾಜಿ ತನ್ನ ಪುಸ್ತಕದಲ್ಲಿ ಹಿಂಸೆಯ ನಿರ್ವಹಣೆಯ ಬಗೆಗೆ, ಉಗ್ರ ಹಿಂಸೆ ಮತ್ತು ಕ್ರೌರ್ಯದ ಮೂಲಕ, ಬೆಂಬಲಿಗರು ಮತ್ತು ವಿರೋಧಿಗಳಿಂದ ಗೌರವ ಗಳಿಸುವ ವಿವಿಧ ದಾರಿಗಳನ್ನು ಬಿಚ್ಚಿಟ್ಟಿದ್ದಾನೆ. ಹೀಗೆ ಇಸ್ಲಾಮಿಕ್ ಸ್ಟೇಟ್ ಇತರ ಉಗ್ರ ಸಂಘಟನೆಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವ ಶಕ್ತಿಗಳ ಸಮನ್ವಯದ ಕೊರತೆಯನ್ನು ಇಸ್ಲಾಮಿಕ್ ಸ್ಟೇಟ್ ಬಂಡವಾಳ ಮಾಡಿಕೊಂಡಾಗಿದೆ ಸಾಂಪ್ರದಾಯಿಕ ಭಯೋತ್ಪದನಾ ನಿಗ್ರಹ ತಂತ್ರಗಳು ಇಸ್ಲಾಮಿಕ್ ಸ್ಟೇಟ್ ನಿಯಂತ್ರಿಸುವಲ್ಲಿ ವಿಫಲವಾಗುತ್ತಿರುವುದೂ ಇದೇ ಕಾರಣಕ್ಕಾಗಿ!




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 30 March 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ