ಸೋಮವಾರ, ಮಾರ್ಚ್ 21, 2016

ವಿಶ್ವ ಚದುರಂಗದಾಟದಲ್ಲಿ ಬದಲಾದ ರಷ್ಯಾ ನಿಲುವು

ರಷ್ಯಾ ಅಧ್ಯಕ್ಷ ಪುಟಿನ್,ಸೇನಾಪಡೆಗಳ ಹಿಂಪಡೆಯುವಿಕೆಯೊಂದಿಗೆ ಸಿರಿಯಾದಲ್ಲಿ ರಷ್ಯಾದ ಗುರಿ, ಉದ್ದೇಶಗಳ ಸಾಧನೆಯಾಗಿದೆ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಕೀರ್ತಿರಾಜ್ 


ಹೊಸ ನಿರೀಕ್ಷೆ ಹುಟ್ಟಿಸಿದ ಅರಬ್ ಸ್ಪ್ರಿಂಗ್ ವೈಫಲ್ಯದೊಂದಿಗೆ ಇಸ್ಲಾಮಿಕ್ ಸ್ಟೇಟ್, ಮುಸ್ಲಿಂ ಬ್ರದರ್ ಹುಡ್, ನಿರಂಕುಶ ಪ್ರಭುತ್ವಗಳು, ಪ್ರಜಾಪ್ರಭುತ್ವ ಪರ ಹೋರಾಟಗಳ ಜೊತೆಗೆ, ಪಾಶ್ಚಾತ್ಯ ಶಕ್ತಿಗಳ ಹಸ್ತಕ್ಷೇಪವೂ ಸೇರಿದಂತೆ, ಹತ್ತು ಹಲವು ಕಾರಣಗಳಿಂದಾಗಿ ಮಧ್ಯ ಪ್ರಾಚ್ಯ ಗೊಂದಲದ ಗೂಡಾಗಿ ಮಾರ್ಪಾಡಾಯಿತು. ಮಧ್ಯೆ ಸಿರಿಯಾ ಅಂತಃಕಲಹದಲ್ಲಿ ರಷ್ಯಾ ನೇರವಾಗಿ ಮಿಲಿಟರಿ ಹಸ್ತಕ್ಷೇಪ ಮಾಡುವ ಮೂಲಕ ವಿಶ್ವದ ಅಚ್ಚರಿಗೆ ಕಾರಣವಾಯಿತು. ಇದೇ ಮಾರ್ಚ್ 14 ರಂದು ರಷ್ಯಾ ಅಧ್ಯಕ್ಷ ಪುಟಿನ್ ಸಿರಿಯಾದಿಂದ ರಷ್ಯನ್ ಸೇನೆಯನ್ನು ವಾಪಾಸು ಕರೆಸಿಕೊಳ್ಳುತ್ತಿರುವುದಾಗಿ ಘೋಷಿಸಿ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದಾರೆ. ಪುಟಿನ್ ಸೇನಾಪಡೆಗಳ ಹಿಂಪಡೆಯುವಿಕೆಯೊಂದಿಗೆ ಸಿರಿಯಾದಲ್ಲಿ ರಷ್ಯಾದ ಗುರಿ ಉದ್ದೇಶಗಳ ಸಾಧನೆಯಾಗಿದೆ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ. ರಷ್ಯಾದ ಇತ್ತೀಚಿನ ನಡೆ ಅಂತರ್ರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿರಿಯಾದಿಂದ ರಷ್ಯನ್ ಪಡೆಗಳ ನಿರ್ಗಮನ ಪುಟಿನ್ ರಾಜತಾಂತ್ರಿಕ ನಡೆಯೋ ಅಥವಾ ಒತ್ತಡದ ನಿರ್ಧಾರವೋ? ಅಸದ್ ಜೊತೆಗಿನ ಸಮನ್ವಯದ ಕೊರತೆಯೇ ಅಥವಾ ಆರ್ಥಿಕ ಕಾರಣಗಳೇ? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

ಸರಿಸುಮಾರು ಕಾಲು ಶತಮಾನದ ಹಿಂದೆ, ಶೀತಲ ಸಮರದ ಸಮಯದಲ್ಲಿ ಅಮೆರಿಕಾದೊಂದಿಗೆ ಜಿದ್ದಿಗೆ ಬಿದ್ದಂತೆ ಪೈಪೋಟಿ ನಡೆಸಿದ, ಅಮೆರಿಕಾ ಕಾಲಿಟ್ಟಲ್ಲೆಲ್ಲಾ ಪ್ರತೀರೋಧ ತೋರಿಸಿ, ಸೋವಿಯೆತ್ ಒಕ್ಕೂಟದ ಹೆಸರಿನಲ್ಲಿ ಅಮೆರಿಕಾದ ವಿರುದ್ಧದ ಶಕ್ತಿ ಕೇಂದ್ರವನ್ನೇ ಸೃಷ್ಟಿಸಿದ ರಷ್ಯನ್ನರು, ಶೀತಲ ಸಮರದ ಅಂತ್ಯದೊಂದಿಗೆ ಮೌನಕ್ಕೆ ಶರಣಾಗಿಬಿಟ್ಟರು! ಸೋವಿಯೆತ್ ಒಕ್ಕೂಟ ವ್ಯವಸ್ಥೆ ಹಲವಾರು ಸ್ವತಂತ್ರ ದೇಶಗಳಾಗಿ ಹರಿದುಹೋಗಿ, ಅಮೆರಿಕಾ ಏಕಮಾತ್ರ ಅದ್ವಿತೀಯ ಶಕ್ತಿಯಾಗುವುದನ್ನು, ಫ್ರಾನ್ಸಿಸ್ ಫುಕುಯಾಮರ ' ಇತಿಹಾಸದ ಅಂತ್ಯ' ವನ್ನೂ (End of History) ಶೇಷವಾಗುಳಿದ ರಷ್ಯಾ ಮೂಕಪ್ರೇಕ್ಷಕನಂತೆ ನೋಡಬೇಕಾಯ್ತು. ಕಾಲ ಬದಲಾಗಿದೆ, ಪ್ರಸ್ತುತ ಜಾಗತಿಕ ರಾಜಕೀಯ ಹೊಸ ತಿರುವುಗಳತ್ತ ಮುಖ ಮಾಡುತ್ತಿದೆ. ಒಂದೆಡೆ ಚೀನಿ ಪ್ರತಿರೋಧ, ಹೊಸ ಅಣ್ವಸ್ತ್ರ ಶಕ್ತಿಗಳ ಉದಯ, ಇಸ್ಲಾಮಿಕ್ ಸ್ಟೇಟ್ ಮತ್ತಿತರ ಉಗ್ರ ಬೆದರಿಕೆಗಳೊಂದಿಗೆ ಅಮೆರಿಕಾದ ಸಾರ್ವಭೌಮತ್ವ ಪ್ರಶ್ನಾತೀತವಲ್ಲ ಎಂಬುದು ರುಜುವಾತಾಗಿದೆ. ಇವೆಲ್ಲವುಗಳ ಜೊತೆಗೆ 1990ರಿಂದೀಚೆಗೆ ಮೌನವಾಗಿದ್ದ ರಷ್ಯಾ, ಪುಟಿನ್ ನೇತೃತ್ವದಲ್ಲಿ ತನ್ನ ಆಕ್ರಮಣಕಾರಿ ನಿಲುವುಗಳಿಂದ ವಿಶ್ವ ಚದುರಂಗದಲ್ಲಿ ಹೊಸ ಛಾಪು ಮೂಡಿಸುತ್ತಿದೆ.


ಸಿರಿಯದ ಈಗಿನ ಅಧ್ಯಕ್ಷ ಬಶರ್ ಅಲ್ ಅಸದ್ ತಂದೆಯಾದ ಹಫೀಜ್ ಅಲ್ ಅಸದ್ ಜೊತೆಗೆ ರಷ್ಯಾ ಸಂಬಂಧಗಳು ವಿಶೇಷವಾಗಿ ಉತ್ತಮ ಮಟ್ಟದಲ್ಲಿದ್ದವು. ಆದರೆ ಹಫೀಜ್ ನಿಧನದ ನಂತರ ರಷ್ಯಾ ಸಿರಿಯಾ ಸಂಬಂಧಗಳು ಉತ್ತಮವಾಗಿದ್ದರೂ, ಹಳೆಯ ವಿಶೇಷ ಬಾಂಧವ್ಯದ ಕೊರತೆ ಎದ್ದು ಕಾಣುತ್ತಿದೆ. ನಾಲ್ಕು ವರ್ಷಗಳ ಹಿಂದೆಯೇ ಸಿರಿಯಾ ಸಂಘರ್ಷ ಪ್ರಾರಂಭವಾಗಿ, ಬಶರ್ ಅಲ್ ಅಸದ್ ರಷ್ಯಾ ನೆರವಿಗಾಗಿ ಕಾಯುತ್ತಿದ್ದಾಗಲೂ, ಮಿತ್ರ ರಾಷ್ಟ್ರವಾದ ರಷ್ಯಾ ಮೌನವಾಗಿದ್ದುದೇ ಇದಕ್ಕೆ ಸಾಕ್ಷಿ. ಸಿರಿಯಾದ ಈಗಿನ ಅಧ್ಯಕ್ಷ ಅಸದ್ ಗೆ ಪುಟಿನ್ ಕೈ ಕುಲುಕುವ ಅವಕಾಶ ಲಭಿಸಿದ್ದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಎಂಬುದನ್ನು ಮರೆಯುವಂತಿಲ್ಲ! ಇದೀಗ ಕಳೆದೆರಡು ತಿಂಗಳುಗಳಿಂದ ರಷ್ಯಾ ಮತ್ತೆ ಸಿರಿಯಾ ವಿಷಯದಲ್ಲಿ ವಿರಕ್ತಿ ತಾಳುತಿರುವುದು ಸ್ಪಷ್ಟ. ಇದೇ ಸಮಯಕ್ಕೆ ಅಸದ್ ಕೂಡ ರಷ್ಯಾ ಸಲಹೆಗಳನ್ನು ಧಿಕ್ಕರಿಸಿದ್ದು ತನ್ನದೇ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದೂ ರಷ್ಯಾ ಸಿರಿಯಾ ಅಂತರವನ್ನು ಹೆಚ್ಚಿಸಿದೆ. ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳ ಮಧ್ಯೆಯೂ, ಸಿರಿಯಾದಲ್ಲಿ ಅಸದ್ ಹೊರತುಪಡಿಸಿ ಬೇರಾವುದೇ ಪ್ರಭುತ್ವ ಅಧಿಕಾರ ವಹಿಸಿಕೊಂಡರೂ ರಷ್ಯಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಕೊಡಲಿ ಪೆಟ್ಟು ಖಂಡಿತ. ನೆಲೆಗಟ್ಟಿನಲ್ಲಿ ಅಸದ್ ಆಳ್ವಿಕೆ ಮುಂದುವರಿಯುವುದು ರಷ್ಯಾದ ರಾಜತಾಂತ್ರಿಕ ದೃಷ್ಟಿಯಿಂದ ಅವಶ್ಯಕ ಎಂಬ ಸತ್ಯವರಿತ ಪುಟಿನ್ ಸಿರಿಯಾದಲ್ಲಿ ಅಸದ್ ನಾಯಕತ್ವದ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಮುಂದೆಯೂ ಅಸದ್ ಪ್ರಭುತ್ವಕ್ಕೆ ಯಾವುದೇ ಧಕ್ಕೆಯುಂಟಾದಲ್ಲಿ ರಷ್ಯಾ ಸೇನೆ ಮತ್ತೆ ಸಿರಿಯಾಕ್ಕೆ ಧಾವಿಸುವುದರಲ್ಲಿ ಸಂಶಯವೇನಿಲ್ಲಅಸದ್ ನನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕೆಂದುಕೊಂಡಿದ್ದ ಅಮೆರಿಕಾ ಇತ್ತೀಚಿನ ದಿನಗಳಲ್ಲಿ ಸಿರಿಯಾ ಕಡೆಗೆ ನಿರಾಸಕ್ತಿ ತಾಳಿರುವುದರಿಂದ ಸದ್ಯಕ್ಕೆ ಅಸದ್ ಸ್ಥಾನಕ್ಕೇನೂ ಕುತ್ತಿಲ್ಲ. ವಿಶ್ವಾಸವೇ ಸಿರಿಯಾದಿಂದ ಸೇನೆ ಹಿಂಪಡೆದುಕೊಳ್ಳುವಂತೆ ಮಾಡಿದೆ. ಕೆಲವೊಂದು ಮೂಲಗಳ ಪ್ರಕಾರ ರಷ್ಯಾ ಅಫಘಾನಿಸ್ತಾನದಲ್ಲಾದ ಮುಖಭಂಗವನ್ನು ಇನ್ನೂ ಮರೆತಿಲ್ಲ. ಹೀಗಾಗಿ ಸಿರಿಯಾ ರಷ್ಯಾ ಪಾಲಿಗೆ ಇನ್ನೊಂದು ಅಫಘಾನಿಸ್ತಾನವಾಗದಿರಲಿ ಎಂಬುದೇ ಚಾಣಾಕ್ಷ ನಡೆಯ ಹಿಂದಿರುವ ಮರ್ಮ! ಆದರೂ ಪುಟಿನ್ ರಷ್ಯನ್ ಸೇನೆಯ ಒಂದು ಭಾಗವನ್ನಷ್ಟೇ ಹಿಂದಕ್ಕೆ ಕರೆಸಿಕೊಂಡಿದ್ದಾರೆ ಎಂಬುದು ಸತ್ಯ. ರಷ್ಯಾ ಟಾರ್ಟಸ್ ನೌಕಾನೆಲೆ, ಹೈಮಿಮ್ ವೈಮಾನಿಕ ನೆಲೆಗಳೊಂದಿಗೆ ಟರ್ಕಿಗೆ ಎಚ್ಚರಿಕೆಯಾಗಿ S-400 ನಂಥ ಆಧುನಿಕ ರಕ್ಷಣಾ ವ್ಯವಸ್ಥೆಯನ್ನೂ ಕಾಯ್ದುಕೊಂಡಿದೆ.


ಈವರೆಗಿನ ಘಟನೆಗಳನ್ನು ಗಮನಿಸಿದರೆ, ರಷ್ಯಾದ ರಾಜತಾಂತ್ರಿಕತೆ, ರಷ್ಯಾವನ್ನು ಪ್ರಾದೇಶಿಕವಾಗಿ ಒಂದು ಪ್ರಮುಖ ಶಕ್ತಿಯಾಗಿ ಮಾಡಿದೆ ಎಂದರೆ ತಪ್ಪೇನಿಲ್ಲ. ಸಿರಿಯಾದ ಗೊಂದಲ ಬಗೆಹರಿಸಲು ಇಪ್ಪತ್ತು ರಾಷ್ಟ್ರಗಳು ಸೇರಿ ಮಾಡಿಕೊಂಡಿರುವ ಅಂತರ್ರಾಷ್ಟ್ರೀಯ ಸಿರಿಯಾ ಬೆಂಬಲ ಗುಂಪು (ISSG) ಜಾಗತಿಕ ರಾಜಕೀಯದಲ್ಲಿ ರಷ್ಯಾದ ವರ್ಚಸ್ಸನ್ನು ಮತ್ತಷ್ಟು ಬಲಪಡಿಸಿದೆ. ಎರಡು ವರ್ಷಗಳ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ನಿಂದ ಕ್ರಿಮಿಯಾವನ್ನು ವಶಪಡಿಸಿಕೊಂಡು, ಪಾಶ್ಚಾತ್ಯ ಶಕ್ತಿಗಳ ವಿರೋಧವನ್ನು, ನಿಬಂಧನೆಗಳನ್ನೂ ಕಾಲ ಕಸವನ್ನಾಗಿ ಮಾಡಿದಾಗಲೇ ರಷ್ಯಾದ ವಿದೇಶಾಂಗ ನೀತಿ ಹೊಸ ದಿಕ್ಕಿನತ್ತ ಹೊರಳಿತ್ತು. ಹಲವಾರು ವರ್ಷಗಳಿಂದ ಮೌನವಾಗಿದ್ದ ರಷ್ಯಾದ ದೈತ್ಯ ಶಕ್ತಿ, ಚರಿತ್ರೆಯಲ್ಲಿ ಕಳೆದು ಹೋದ ತನ್ನ ಗತವೈಭವದ ಹುಡುಕಾಟದಲ್ಲಿದೆ! ವಿಶ್ವ ಚದುರಂಗದ ಇನ್ನೊಂದು ದಿಕ್ಕಿನಲ್ಲಿ ಹೊಸ ಹೆಜ್ಜೆ ಇಡುತ್ತಿರುವ ಭಾರತಕ್ಕೂ ಬೆಳವಣಿಗೆಗಳ ಪರಿಣಾಮ ಇದ್ದೇ ಇದೆ. ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಿ ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳುವುದು ನಮ್ಮ ರಾಜನೀತಿಜ್ಞರ ಮುಂದಿರುವ ಸವಾಲು.






  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 21 March 2016)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ