ಶುಕ್ರವಾರ, ನವೆಂಬರ್ 6, 2015

ಉಪಖಂಡದ ದೃಷ್ಟಿ ಕಗ್ಗತ್ತಲ ಖಂಡದತ್ತ.!

ಮುಂಬರುವ ಆಫ್ರಿಕಾ-ಭಾರತ ಶೃಂಗಸಭೆಯು ಕಗ್ಗತ್ತಲ ಖಂಡ ಆಫ್ರಿಕಾ ಮತ್ತು ಭಾರತೀಯ ಉಪಖಂಡದ ಸಂಬಂಧಗಳಲ್ಲಿ ಹೊಸ ಶಕೆಗೆ ಮುನ್ನುಡಿ ಹಾಡುವಂತಿದೆ.
                                                                                                                            -   ಕೀರ್ತಿರಾಜ್
ಭಾರತ ಮತ್ತು ಆಫ್ರಿಕಾ ಖಂಡದ ಸಂಬಂಧ 11ನೇ ಶತಮಾನದಿಂದಲೇ ಬೆಳೆದು ಬಂದಿದೆ. ಭಾರತದಂತೆ ಆಫ್ರಿಕಾದ ಬಹುತೇಕ ರಾಷ್ಟ್ರಗಳು ಯುರೋಪಿಯನ್ ಶಕ್ತಿಗಳ ವಸಾಹತುಗಳಾಗಿದ್ದು, ಸ್ವಾತಂತ್ರ್ಯನಂತರದಲ್ಲೂ ಆರ್ಥಿಕ ಹಾಗೂ ಜೀವನಮಟ್ಟದ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮುಂದುವರಿಸಿದ್ದು, ಭಾರತದೊಂದಿಗೆ ಹಲವಾರು ಸಾಮ್ಯತೆಗಳನ್ನು ಹಂಚಿಕೊಳ್ಳುತ್ತವೆ. ಆಫ್ರಿಕಾದೊಂದಿಗಿನ ಭಾರತದ ರಾಜತಾಂತ್ರಿಕ ಹಾಗೂ ಆರ್ಥಿಕ ಕೊಡುಕೊಳ್ಳುವಿಕೆಗಳು ಬದಲಾಗುತ್ತಿರುವ ಜಾಗತಿಕ ರಾಜಕಾರಣದಲ್ಲಿ ಅತೀವ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಇದೀಗ ಆರಂಭಗೊಂಡಿರುವ ಭಾರತ-ಆಫ್ರಿಕಾ ಶೃಂಗಸಭೆಯಲ್ಲಿ 54 ಆಫ್ರಿಕಾ ಖಂಡದ ದೇಶಗಳು ಭಾಗವಹಿಸಲಿದ್ದು ಈ ವರ್ಷದ ಬೃಹತ್ ರಾಜತಾಂತ್ರಿಕ ನಡೆಯಾಗಿ ಪರಿಗಣಿಸಲ್ಪಟ್ಟಿದೆ.
ವರ್ಣಾಶ್ರಮದ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಹೋರಾಟವು ಭಾರತ-ಆಫ್ರಿಕಾ ಮಧ್ಯೆ ಭಾವನಾತ್ಮಕ ಬಂಧ ಬೆಳೆಸಿದ್ದು ಸುಳ್ಳಲ್ಲ. ಹೀಗೆ ಭಾರತ ಸ್ವಾತಂತ್ರ್ಯ ಪೂರ್ವದಲ್ಲೇ ಆಫ್ರಿಕಾ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದು, ಸ್ವಾತಂತ್ರ್ಯಾನಂತರದಲ್ಲೂ ಆಫ್ರಿಕನ್ ವಸಾಹತುಗಳ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ವಿಶ್ವಸಂಸ್ಥೆ ಮತ್ತು ಅಲಿಪ್ತ ಚಳುವಳಿಗಳು ಭಾರತ ಮತ್ತು ಆಫ್ರಿಕಾ ಭಾಂಧವ್ಯಕ್ಕೆ ಸಾಕ್ಷಿಗಳಾದವು. ಆದರೆ ಮುಂದಿನ ದಿನಗಳಲ್ಲಿ ಭಾರತದ ವಿದೇಶಾಂಗ ನೀತಿ ಆಫ್ರಿಕಾವನ್ನು ಹಂತ ಹಂತವಾಗಿ ಕಡೆಗಣಿಸಿತು. ಸಹಜವಾಗಿಯೇ ಆಫ್ರಿಕಾ ಕೂಡ ಭಾರತವನ್ನು ತನ್ನ ಆದ್ಯತೆಯ ವಲಯದಿಂದ ಹೊರಗಿಟ್ಟಿತ್ತು. ಒಂದು ರೀತಿ ಭಾರತದ ರಾಜತಾಂತ್ರಿಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಾಗಿತ್ತು ಭಾರತದ ಆಫ್ರಿಕಾ ನೀತಿ!ಬದಲಾವಣೆಯ ಹೊರತಾಗಿ ಯಾವುದೂ ಶಾಶ್ವತವಲ್ಲ. ಇದೇ ರೀತಿ ಭಾರತ ಆಫ್ರಿಕಾದ ಬಾಂಧವ್ಯದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಇಂದು ಆಫ್ರಿಕಾ ಕಗ್ಗತ್ತಲ ಖಂಡವಾಗಿ ಉಳಿದಿಲ್ಲ, ವಿಶ್ವ ರಾಜಕೀಯದಲ್ಲಿ ಸ್ವಂತಿಕೆಯ ಛಾಪು ಮೂಡಿಸುವತ್ತ ಆಫ್ರಿಕಾ ಖಂಡದ ದೇಶಗಳು ಮುನ್ನುಗ್ಗುತ್ತಿವೆ. ಭಾರತವೂ ಕೂಡ ವಿಶ್ವದ ಬೃಹತ್ ಶಕ್ತಿಗಳ ಜೊತೆ ಗುರುತಿಸಿಕೊಳ್ಳುವ ಹಂತ ತಲುಪಿದೆ. ಈಗಾಗಲೇ ಭಾರತ 7.5 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಆಫ್ರಿಕಾದ ವಿವಿಧ ಯೋಜನೆಗಳಿಗಾಗಿ ವ್ಯಯಿಸಿದ್ದಲ್ಲದೇ, ಕೆಲವೊಂದು ಬಡ ಆಫ್ರಿಕನ್ ರಾಷ್ಟ್ರಗಳಿಗೆ ತೆರಿಗೆ ಮುಕ್ತ ವ್ಯಾಪಾರಕ್ಕೂ ಅವಕಾಶ ಕಲ್ಪಿಸಿದೆ. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಭಾರತ - ಆಫ್ರಿಕಾ ವ್ಯಾಪಾರ ಕೇವಲ 70 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಸೀಮಿತವಾಗಿದ್ದು, ಇತರ ರಾಷ್ಟ್ರಗಳ ತುಲನೆಯಲ್ಲಿ ಇದು ಕಡಿಮೆಯೇ.ಇಂದಿನ ಭಾರತ ಆಫ್ರಿಕಾದ ಆವಶ್ಯಕತೆಯನ್ನು ಮನಗಂಡರೂ, ಆಫ್ರಿಕಾದ ರಾಷ್ಟ್ರಗಳನ್ನು ಭಾರತದತ್ತ ಒಲಿಸಿಕೊಳ್ಳುವುದು ಸುಲಭದ ಮಾತಲ್ಲ.
ಈ ಮೊದಲೇ ಹೇಳಿದಂತೆ ಕಗ್ಗತ್ತಲ ಖಂಡದತ್ತ ಬೆಳಕು ಹರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಮುಖ ರಾಷ್ಟ್ರಗಳು ತುದಿಗಾಲಲ್ಲಿ ನಿಂತಿವೆ. ಆಫ್ರಿಕಾದ ವಿಶ್ವಾಸ ಗಳಿಸಿಕೊಳ್ಳುವ ಭಾರತದ ಹಾದಿಯಲ್ಲಿ ದೈತ್ಯ ಚೈನಾದೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ. ಆಫ್ರಿಕನ್ ಮಾರುಕಟ್ಟೆಯಲ್ಲಿ ಚೈನಾ ತೋರಿಸುತ್ತಿರುವ ನೈಪುಣ್ಯತೆ ಮತ್ತು ಚೈನಾ ಆಫ್ರಿಕಾದ ಸಂಪನ್ಮೂಲಗಳನ್ನು ಬಳಸುತ್ತಿರುವ ಚಾಕಚಕ್ಯತೆಯನ್ನು ಗಮನಿಸಿದರೆ, ಭಾರತದ ಆಫ್ರಿಕಾ ನೀತಿಯಲ್ಲಿ ತುರ್ತು ಬದಲಾವಣೆಗಳ ಆವಶ್ಯಕತೆ ಬಹಳ ಇದೆ.ಆಫ್ರಿಕಾದ ತೈಲ ಸಂಪನ್ಮೂಲಗಳು ಮತ್ತಿತರ ವ್ಯೂಹಾತ್ಮಕ ಕಾರಣ ಗಳಿಂದ ಅಮೆರಿಕಾ, ಚೈನಾ, ಜಪಾನ್ ಅಷ್ಟೇ ಅಲ್ಲದೇ ಹಲವಾರು ಯುರೋಪಿಯನ್ ರಾಷ್ಟ್ರಗಳೂ ಕೂಡ ಆಫ್ರಿಕಾದಲ್ಲಿ ಬಂಡವಾಳ ಹೂಡಲು ಜಿದ್ದಿಗೆ ಬಿದ್ದಿವೆ!
ಭಾರತ ಕೂಡ ಈ ಒಂದು ಅವಕಾಶದ ಸದುಪಯೋಗಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಖಾಸಗಿ ಕ್ಷೇತ್ರಗಳಾದ ಟಾಟಾ, ಬಜಾಜ್, ಮಹೀಂದ್ರಾ ಮತ್ತು ಏರ್‌ಟೆಲ್‌ನಂಥ ಕಂಪನಿಗಳು ಆಫ್ರಿಕಾದಲ್ಲಿ ಬಂಡವಾಳ ಹೂಡಿವೆ. ಕೇವಲ ಸಂಪನ್ಮೂಲಗಳಷ್ಟೇ ಅಲ್ಲದೆ, ಭಾರತದ ಪಾಲಿಗೆ ಆಫ್ರಿಕಾ ಒಂದು ಉತ್ತಮ ಮಾರುಕಟ್ಟೆಯನ್ನೂ ಒದಗಿಸಬಲ್ಲುದು. ಈ ನಿಟ್ಟಿನಲ್ಲಿ ಭಾರತ ಇಲ್ಲಿಯವರೆಗೆ ಅನುಸರಿಸಿದ ಗತಕಾಲದ ವಿದೇಶಾಂಗ ನೀತಿಯಿಂದ ಹೊರಬಂದು ಹೊಸ ಆಫ್ರಿಕಾ ನೀತಿಯತ್ತ ಗಮನ ಹರಿಸಬೇಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಬದಲಾದ ವಿದೇಶಾಂಗ ನೀತಿ ಆಫ್ರಿಕಾದಲ್ಲಿ ಯಾವ ರೀತಿ ಮೋಡಿ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.ಭಾರತ - ಆಫ್ರಿಕಾದ ಸಂಬಂಧಗಳ ಜರೂರತ್ತು ಕೇವಲ ಆರ್ಥಿಕ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ. ಇದು ಮೋದಿ ಮತ್ತು ಭಾರತದ ರಾಜತಾಂತ್ರಿಕ ನೈಪುಣ್ಯದ ಪರೀಕ್ಷೆಯೂ ಹೌದು. ನೈಜೀರಿಯಾದ ಉಗ್ರಗಾಮಿ ಸಂಘಟನೆ ಬೋಕೋ ಹರಾಮ್‌ನಿಂದ ಹಿಡಿದು ಆಫ್ರಿಕಾದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಸ್ಟೇಟ್ ಪ್ರಭಾವ ಆಫ್ರಿಕಾದ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಸವಾಲಾಗಿದೆ.
ಉಗ್ರವಾದದ ಬಗೆಗೆ ಕಠಿಣ ನಿಲುವು ತಳೆದಿರುವ ಭಾರತಕ್ಕೆ, ಉಗ್ರರ ವಿರುದ್ಧದ ಹೋರಾಟವೂ ಆಫ್ರಿಕಾ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಿಂದೂ ಮಹಾಸಾಗರದ ತೀರ ಹಂಚಿಕೊಂಡಿರುವ ಆಫ್ರಿಕಾದ ದೇಶಗಳೊಂದಿಗೆ ಸಾಗರ ರಕ್ಷಣೆಯಲ್ಲೂ ಭಾರತ ಕೈ ಜೋಡಿಸುತ್ತಿದೆ. ವಿಶ್ವ ಸಂಸ್ಥೆಯ ಭದ್ರತಾ ಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವಕ್ಕೋಸ್ಕರ ಪ್ರಯತ್ನಿಸುತ್ತಿರುವ ಭಾರತಕ್ಕೆ ಆಫ್ರಿಕಾ ಖಂಡದ ದೇಶಗಳ ಬೆಂಬಲದ ದೃಷ್ಟಿಯಿಂದಲೂ ಭಾರತದ ಆಫ್ರಿಕಾ ಜೊತೆಗಿನ ವಿದೇಶಾಂಗ ನೀತಿ ಮಹತ್ವ ಪಡೆದುಕೊಳ್ಳುತ್ತದೆ.ಭಾರತ ತೃತೀಯ ಜಗತ್ತಿನ ನೇತೃತ್ವ ವಹಿಸಲು, ಶೀತಲ ಸಮರದ ‘ಸೂಪರ್ ಪವರ್’ಗಳ ಮಧ್ಯೆ ನೈತಿಕ ಶಕ್ತಿಯಾಗಿ ಗುರುತಿಸಿಕೊಳ್ಳಲು ಹೀಗೆ ವಿಶ್ವ ರಾಜಕೀಯದಲ್ಲಿ ಭಾರತದ ಪ್ರತಿಯೊಂದು ಹೆಜ್ಜೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಫ್ರಿಕಾ ನಂಟಿದೆ.ಇದೀಗ ಆರಂಭಗೊಂಡಿರುವ ಭಾರತ -ಆಫ್ರಿಕಾ ಶೃಂಗ ಸಭೆ, ಕಗ್ಗತ್ತಲ ಖಂಡ ಆಫ್ರಿಕಾ ಮತ್ತು ಭಾರತೀಯ ಉಪಖಂಡದ ಸಂಬಂಧಗಳಲ್ಲಿ ಹೊಸ ಶಕೆಗೆ ಮುನ್ನುಡಿ ಹಾಡುವಂತಿದೆ. ಶೃಂಗಸಭೆಯ ನೆಪದಲ್ಲಿ 54 ಆಫ್ರಿಕನ್ ದೇಶಗಳ ಪ್ರತಿನಿಧಿಗಳ ಭಾರತ ಭೇಟಿಯನ್ನು ಭಾರತದ ವಿದೇಶಾಂಗ ನೀತಿಗೆ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವ ಜವಾಬ್ದಾರಿಯು ಮೋದಿ ಚಾಣಾಕ್ಷತೆ ಮತ್ತು ಭಾರತೀಯ ರಾಜತಾಂತ್ರಿಕ ನೈಪುಣ್ಯವನ್ನು ಒರೆಗೆ ಹಚ್ಚಲಿದೆ.


 
  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 27th October 2015)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ