ಶನಿವಾರ, ಅಕ್ಟೋಬರ್ 24, 2015

ಜಾಗತಿಕ ರಾಜಕಾರಣದ ಹೊಸ ತಿರುವು


ವಿಶ್ವ ರಾಜಕೀಯದಲ್ಲಿ ಅಮೆರಿಕಾ ಮತ್ತು ರಷ್ಯಾ ತಮ್ಮ ಸಾಂಪ್ರದಾಯಿಕ ವಿದೇಶಾಂಗ ನೀತಿಯಿಂದ ದೂರ ಸರಿದು, ಹೊಸ ಮಿತ್ರರನ್ನು ಜೊತೆಗೆ ಹೊಸ ಶತ್ರುಗಳನ್ನು ಹುಡುಕುವ ಕಾಯಕದಲ್ಲಿ ತೊಡಗಿವೆ.
-     
ಕೀರ್ತಿರಾಜ್


ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮತ್ತು ಶಸ್ತ್ರಾಗಾರದಲ್ಲಿ ರಷ್ಯಾದ ಪಾತ್ರ ಅಪಾರ. ಆದರೆ ಕಳೆದ ನಾಲ್ಕು ವರ್ಷದ ಭಾರತದ ರಕ್ಷಣಾ ವ್ಯವಸ್ಥೆಯ ತಂತ್ರಗಳನ್ನು ನೋಡಿದರೆ ಭಾರತ ನಿಧಾನವಾಗಿ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವತ್ತ ಆಸಕ್ತಿ ತೋರಿಸುತ್ತಿರುವುದು ಗಮನಾರ್ಹ. ಅದೇ ರೀತಿ ಪಾಕಿಸ್ತಾನ ತನ್ನ ಚಾರಿತ್ರಿಕ ವೈರಿ ರಷ್ಯಾದತ್ತ ವಾಲುತ್ತಿರುವುದೂ ಜಾಗತಿಕ ರಾಜಕಾರಣದಲ್ಲಿ ಗಮನಿಸಬೇಕಾದ ವಿಷಯವೇ. ಶಸ್ತ್ರಾಸ್ತ್ರಗಳ ವಿಷಯಗಳಷ್ಟೇ ಅಲ್ಲದೇ ಆರ್ಥಿಕ ಮತ್ತು ಇನ್ನಿತರ ರಾಜಕೀಯ ರಷ್ಯಾ ಮತ್ತು ಪಾಕ್ ಹತ್ತಿರವಾಗಿರುವುದು ಮತ್ತು ಕಮ್ಯುನಿಷ್ಟ್ ಚೈನಾ ಕೂಡ ಮೈತ್ರಿ ಕೂಟವನ್ನು ಸೇರಿಕೊಳ್ಳುವಲ್ಲಿ ಉತ್ಸುಕವಾಗಿರುವುದು ದಕ್ಶಿಣಾ ಏಷ್ಯಾ ಅದರಲ್ಲೂ ಪ್ರಮುಖವಾಗಿ ಭಾರತದ ರಾಜನೀತಿಜ್ಞರ ಪಾಲಿಗೆ ಯೋಚಿಸಬೇಕಾದ ವಿಷಯ.
ಅಮೆರಿಕಾ ಮತ್ತು ಸೋವಿಯೆತ್ ಯುನಿಯನ್ (ಇವತ್ತಿನ ರಷ್ಯಾ) ನಡುವಿನ ಶೀತಲ ಸಮರದ ಪ್ರಾರಂಭದಿಂದ ಕೊನೆಯವರೆಗೂ ಪಾಕಿಸ್ತಾನ ಅಮೆರಿಕಾವನ್ನು ಸ್ಪಷ್ಟವಾಗಿ ಬೆಂಬಲಿಸಿತ್ತು. ಅಮೆರಿಕಾ ನೇತೃತ್ವದ ಸೀಟೋ ಮೈತ್ರಿಕೂಟವನ್ನು ಸೇರಿಕೊಂಡ ಪಾಕಿಸ್ತಾನ ಏಷ್ಯಾದಲ್ಲಿ ಅಮೆರಿಕಾದ ಅತ್ಯಂತ ಆಪ್ತ ರಾಷ್ಟ್ರ ಎಂದು ತನ್ನನ್ನು ಬೆನ್ನನ್ನು ತಾನೇ ತಟ್ಟಿಕೊಂಡಿತು. 1965 ಯುದ್ಧದ ನಂತರ ತಾಷ್ಕೆಂಟ್ ಒಪ್ಪಂದದ ಸಂದರ್ಭದಲ್ಲಿ, ಸೋವಿಯೆತ್ ರಷ್ಯಾ ಪಾಕಿಸ್ತಾನ ಪರವಾದ ಒಪ್ಪಂದವೊಂದಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಒತ್ತಾಯಿಸಿದಂಥ ಕೆಲವೊಂದು ಉದಾಹರಣೆಗಳಿದ್ದರೂ ಭಾರತ ಮತ್ತು ಸೋವಿಯೆತ್ ರಷ್ಯಾದ ದೀರ್ಘಕಾಲೀನ ಬಾಂಧವ್ಯಕ್ಕೆ ವಿಷಯಗಳು ಅಡ್ಡಿಯಾಗಲಿಲ್ಲ.
1971 ರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನದ ವಿರುದ್ಧ ದಂಗೆಯೆದ್ದಾಗ ಭಾರತ ಪೂರ್ವ ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡಿ ಬಾಂಗ್ಲಾದೇಶದ ಉದಯಕ್ಕೆ ಕಾರಣಿಭೂತವಾಯಿತು. ಬಾಂಗ್ಲಾದೇಶೀ ವಿಮೋಚನೆಯ ಯುದ್ಧದಲ್ಲಿ ಅಮೆರಿಕಾ ಪಾಕಿಸ್ತಾನಕ್ಕೆ ಸಹಾಯ ಹಸ್ತ ನೀಡಿದ್ದಲ್ಲದೆ, ಬೆಂಬಲದ ಕುರುಹಾಗಿ ಯು .ಎಸ್.ಎಸ್ ಎಂಟರ್ಪ್ರೈಸ್ ಎಂಬ ಬೃಹತ್ ಯುದ್ಧ ನೌಕೆಯನ್ನು ಬಂಗಾಳ ಕೊಲ್ಲಿಗೆ ಕಳುಹಿಸಿಕೊಟ್ಟಿತು. ಸಂಧಿಗ್ಧ ಪರಿಸ್ಥಿತಿಯಲ್ಲಿ ಸೋವಿಯೆತ್ ರಷ್ಯಾ ತನ್ನ ನೌಕಾಬಲವನ್ನು ಭಾರತದ ನೆರವಿಗೆ ಕಳುಹಿಸಿ, ೧೯೭೧ರ ಯುದ್ಧದಲ್ಲಿ ಅಮೆರಿಕಾವನ್ನು ತಟಸ್ಥಗೊಳಿಸಿದ್ದು ಈಗ ಇತಿಹಾಸ. ಇದಕ್ಕೆ ಕಾರಣ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸೋವಿಯೆತ್ ಜೊತೆ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದ.
ಮುಂದೆ 1979ರಲ್ಲಿ ಅಫ್ಘಾನಿಸ್ತಾನವನ್ನು ಸೋವಿಯೆತ್ ಆಕ್ರಮಿಸಿಕೊಂಡ ಸಮಯದಲ್ಲಿ, ಅಮೆರಿಕಾ ಮುಜಾಹಿದ್ದೀನ್ ಗಳನ್ನು ಸೋವಿಯೆತ್ ಪಡೆಗಳ ವಿರುದ್ಧ ಎತ್ತಿಕಟ್ಟಿತ್ತು. ಶೀತಲ ಸಮರದ ಅಧ್ಯಾಯದಲ್ಲಿ ಪಾಕಿಸ್ತಾನ ಸೋವಿಯೆತ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸಿತು. ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವುದರಿಂದ ಹಿಡಿದು, ಮುಜಾಹಿದ್ದೀನ್ ಗಳಿಗೆ ಸೋವಿಯೆತ್ ವಿರುದ್ಧ ನೀಡಿದ ಸಹಾಯ ಪಾಕ್ ಮತ್ತು ಸೋವಿಯೆತ್ ರಷ್ಯಾದ ವೈರತ್ವಕ್ಕೆ ನಿದರ್ಶನ. ಶೀತಲ ಸಮರೋತ್ತರದಲ್ಲಿ, ಸೋವಿಯೆತ್ ಒಡೆದು ಹೋಳಾಗಿ ರಷ್ಯಾ ಮಾತ್ರ ಉಳಿದುಕೊಂಡಿದ್ದರೂ, ಭಾರತದೊಂದಿಗಿನ ಸಂಬಂಧಗಳು ಉತ್ತಮ ರೀತಿಯಲ್ಲೇ ಮುಂದುವರಿದಿದ್ದವು. ಅಮೆರಿಕಾ ಪಾಕಿಸ್ತಾನದ ಪರವಾದರೆ, ರಷ್ಯಾ ಭಾರತದ ಪರ ಎಂಬ ಸಾಮಾನ್ಯ ನಂಬಿಕೆ ಬೇರೂರಿಬಿಟ್ಟಿತ್ತು.
ಆದರೆ 2011ರಿಂದೀಚೆಗೆ ಜಾಗತಿಕ ರಾಜಕಾರಣ ತನ್ನ ದೀರ್ಘಕಾಲಿಕ ಏಕತಾನೀಯ ದಿಕ್ಕು ಬದಲಿಸಿ, ಹೊಸ ದಿಕ್ಕಿನತ್ತ ಸಾಗಲಾರಂಭಿಸಿದೆ. 2011ರಲ್ಲಿ ಪಾಕಿಸ್ತಾನದ ಪೂರ್ವಾನುಮತಿ ಇಲ್ಲದೇ ಅಮೆರಿಕನ್ ಯೋಧರು ಅಬಟ್ಟಬಾದ್ ಗೆ ನುಗ್ಗಿ ಲಾದನ್ ಹತ್ಯೆ ಮಾಡಿದರು. ಇದಾದ ನಂತರ ಪ್ರಾರಂಭವಾದ ಮಾಧ್ಯಮ ಸಮರದಲ್ಲಿ, ಅಮೆರಿಕನ್ ಮಾಧ್ಯಮಗಳಾದ ನ್ಯೂಯಾರ್ಕ್ ಟೈಮ್ಸ್, ಅಟ್ಲಾಂಟಿಕ್ ಪಾಕ್ ಮಾನವ ಹಕ್ಕುಗಳ ಉಲ್ಲಂಘನೆ, ಉಗ್ರರಿಗೆ ನೆರವು ನೀಡಿದ ಕೃತ್ಯಗಳ ಬಗೆಗೆ ಬೆಳಕು ಹರಿಸಿದ್ದವು. ಇಂಥ ಘಟನೆಗಳು ಅಮೆರಿಕಾ ಪಾಕ್ ಸಂಬಂಧ ಹದಗೆಡಿಸಿದ್ದು ನಿಜವಾದರೂ ನಂತರ ಪಾಕ್ ಅಮೆರಿಕಾ ಸಂಬಂಧಗಳನ್ನು ಯಥಾಸ್ಥಿತಿಗೆ ತರುವ ಪ್ರಯತ್ನಗಳೂ ನಡೆದವು.
ಇವೆಲ್ಲವುಗಳ ಮಧ್ಯೆ ಪಾಕಿಸ್ತಾನಿ ರಾಜಕಾರಣಿಗಳು, ಅಮೆರಿಕಾದ ಅತಿಯಾದ ಅವಲಂಬನೆಯನ್ನು ತೊರೆದು ಇನ್ನಿತರ ಶಕ್ತಿಶಾಲಿ ಮಿತ್ರರ ಅವಶ್ಯಕತೆಯ ಬಗೆಗೆ ಯೋಚಿಸುವಂತಾಗಿತ್ತು. ಅತ್ತ ರಷ್ಯಾ ಕೂಡ ಇಂಥದ್ದೊಂದು ಅವಕಾಶದ ನಿರೀಕ್ಷೆಯಲ್ಲಿತ್ತು. ರಷ್ಯಾ ಉಕ್ರೇನ್ ಆಕ್ರಮಿಸಿದ ನಂತರ ಅಂತರಾಷ್ಟ್ರೀಯ ದಿಗ್ಬಂಧನಕ್ಕೊಳಗಾದ ಮೇಲಂತೂ ರಷ್ಯಾ ತನ್ನ ಆರ್ಥಿಕ ಚಟುವಟಿಕೆಗಳಿಗೆ ಹಾಗೂ ಮಾರುಕಟ್ಟೆಗಳಿಗೆ ಏಷ್ಯಾದತ್ತ ಮುಖ ಮಾಡಿತು. ಭಾರತದ ತೀವ್ರ ವಿರೋಧದ ನಡುವೆಯೂ, ತನ್ನ ಶಸ್ತ್ರಾಸ್ತ್ರಗಳ ಮಾರುಕಟ್ಟೆಯನ್ನು ಪಾಕಿಸ್ತಾನಕ್ಕೂ ವಿಸ್ತರಿಸಿತು. ಮಿ-35 ಹೆಲಿಕಾಪ್ಟರ್ ಗಳಿಂದ ಸುಕೋಯ್ ಸು-35 ಫೈಟರ್ ಜೆಟ್ ಮತ್ತು ಯಾಕ್-130 ಕಾಂಬ್ಯಾಟ್ ಟ್ರೈನರ್ ಏರ್ ಕ್ರಾಫ್ಟ್ ಗಳಂಥ ಶಕ್ತಿಶಾಲಿ ತಂತ್ರಜ್ಞಾನಗಳನ್ನು ಪಾಕಿಸ್ತಾನಕ್ಕೆ ಒದಗಿಸಲು ರಷ್ಯಾ ಕಡೆಯಿಂದ ಮಾತುಕತೆಗಳು ನಡೆದಿವೆ ಎಂಬುದು ಭಾರತದ ಪಾಲಿಗೆ ಎಚ್ಚರಿಕೆಯ ಘಂಟೆಯೇ ಸರಿ.
ಎಲ್ಲಾ ಬೆಳವಣಿಗೆಗಳ ಪರಿಣಾಮವಾಗಿ ಭಾರತದ ರಕ್ಷಣಾವಲಯದಲ್ಲಿ ಇರಿಸು ಮುರಿಸು ಉಂಟಾಗಿದ್ದು ನಿಜವೇ ಆದರೂ, ಇಂಡೋ-ರಷ್ಯಾ ಸಂಬಂಧಗಳು ಉತ್ತಮವಾಗಿಯೇ ಮುಂದುವರಿಯುತ್ತಿದೆ. ಪಾಕಿಸ್ತಾನದೊಂದಿಗಿನ ರಷ್ಯಾದ ಹೊಸ ನಡೆಯನ್ನು ಭಾರತ ಯಾವ ರೀತಿ ಸ್ವೀಕರಿಸುತ್ತದೆ ಎಂಬುವುದರ ಮೇಲೆ ಮುಂದಿನ ವಿದೇಶಾಂಗ ನೀತಿ ನಿರ್ಧರಿತವಾಗುತ್ತದೆ. ರಷ್ಯಾ-ಚೈನಾ-ಪಾಕ್ ಮೈತ್ರಿಯ ದಟ್ಟ ಸಾಧ್ಯತೆಯ ಬಗೆಗೂ ಚರ್ಚೆಗಳಿವೆ. ಇನ್ನೊಂದು ದಿಕ್ಕಿನಲ್ಲಿ ಭಾರತಕ್ಕೆ ಹತ್ತಿರವಾಗುತ್ತಿರುವ ಅಮೆರಿಕಾ ಮತ್ತಿತರ ರಾಷ್ಟ್ರಗಳು ಹೊಸ ಶಕ್ತಿ ಕೇಂದ್ರಕ್ಕೆ ಅಡಿಪಾಯ ಹಾಕಿದಂತಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಮುಂದಿನ ಡಿಸೆಂಬರ್ ನಲ್ಲಿ ನರೇಂದ್ರ ಮೋದಿಯವರ ರಷ್ಯಾ ಭೇಟಿ ಕುತೂಹಲಭರಿತ ಪ್ರಾಮುಖ್ಯತೆ ಪಡೆದುಕೊಂಡಿದೆ.






 
  
 KEERTHIRAJ  (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Digantha newspaper on 20 October 2015)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ